ಅಧಿಕಾರಕ್ಕೇರಿ ಧಿಕ್ಕರಿಸದಿರಿ ಗ್ರಾಮಾಭಿವೃದ್ಧಿ: ಮಾನಪ್ಪ: ಗ್ರಾಪಂ ಎಸ್‌ಟಿ ಸದಸ್ಯರಿಗೆ ಪುಸ್ತಕ ನೀಡಿ ಸನ್ಮಾನ

0
74

ವಾಡಿ: ಚುನಾವಣೆ ಎದುರಿಸುವಾಗ ಮಾತ್ರ ಪರಸ್ಪರ ಎದುರಾಳಿಗಳು. ಚುನಾವಣೆ ಮುಗಿದ ಬಳಿಕ ನಾವೆಲ್ಲ ಒಂದೇ ಊರಿನ ಕುಟುಂಬ ಸದಸ್ಯರು ಎಂಬ ಭಾವದಿಂದ ನಡೆದುಕೊಳ್ಳಬೇಕು. ಅಧಿಕಾರದ ಗದ್ದುಗೆ ಏರಿದವರು ಗ್ರಾಮದ ಅಭಿವೃದ್ಧಿ ಮಾತ್ರ ಮರೆಯಬಾರದು ಎಂದು ಪರಿಶಿಷ್ಟ ಪಂಗಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾನಪ್ಪ ನಾಯಕ ಹೇಳಿದರು.

ಪಟ್ಟಣದ ಧನಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಆವರಣದಲ್ಲಿ ಚಿತ್ತಾಪುರ ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರಗಳಿಂದ ಚುನಾಯಿತರಾದ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳ ನೂತನ ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಜನಾಂಗದ ಬದುಕು ಕಷ್ಟಕರವಾಗಿದೆ. ಅನೇಕ ಕಡೆ ಬೇಡ ಸಮುದಾಯದ ಕುಟುಂಬಗಳು ಗುಡಿಸಲು ಮತ್ತು ಗುಡಿಗಳಲ್ಲಿ ವಾಸಮಾಡುತ್ತಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರಗಳಿಂದ ಗೆದ್ದಿರುವವರು ಗ್ರಾಮದ ಅಭಿವೃದ್ಧಿಯ ಜತೆಗೆ ಸಮುದಾಯದ ಪ್ರಗತಿಗೂ ಶ್ರಮಿಸಬೇಕು. ಮೀಸಲಾತಿಗೆ ಜೋತುಬೀಳದೆ, ಎಲ್ಲಾ ಜಾತಿ ಜನಾಂಗದ ಬಂಧುಗಳ ಮನಗೆದ್ದು ಸಾಮಾನ್ಯ ಕ್ಷೇತ್ರಗಳಿಂದರೂ ಚುನಾಯಿತರಾಗುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ಬಿ.ದೊರೆ ಮಾತನಾಡಿ, ಚುನಾವಣೆ ಎದುರಿಸಿ ಗ್ರಾಪಂ ಸದಸ್ಯರಾಗುವುದಷ್ಟೇ ಸಾಧನೆಯಲ್ಲ. ಸದಸ್ಯರನ್ನು ಧಿಕ್ಕು ತಪ್ಪಿಸುವ ಗ್ರಾಪಂ ಪಿಡಿಒಗಳ ಕುತಂತ್ರ ಬಯಲಿಗೆಳೆದು ಊರಿನ ಅಭಿವೃದ್ಧಿಗೆ ಅನುದಾನ ಮೀಸಲಿಡುವುದು ಮುಖ್ಯವಾಗಿದೆ. ಪಂಚಾಯಿತಿ ನಿಯಮಗಳನ್ನು ಅರ್ಥ ಮಾಡಿಕೊಂಡು ಜನರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಒಗ್ಗಟ್ಟಿನಿಂದ ಮಾತ್ರ ವಾಲ್ಮೀಕಿ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದು ಹೇಳಿದರು.

ಎಸ್‌ಟಿ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಸಂಗಪ್ಪ ಸೇದಿಮನಿ, ಸಾಬಣ್ಣ ಮುಸ್ಲಾ ಲಾಡ್ಲಾಪುರ, ಹುಸನಪ್ಪ ಮಗದಂಪುರ ಮಾತನಾಡಿದರು. ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿಬಾಯಿ ಫುಲೆ ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷೆ ಸುಮಿತ್ರಾ ಬಿ.ದೊರೆ, ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮಾಲಗತ್ತಿ, ಪೊಲೀಸ್ ಅಧಿಕಾರಿ ಮಹಾಮನಿ ನಾಯಕ, ಸುಭಾಷ ಚಾಮನೂರ, ಮುಖಂಡರಾದ ರವಿ ನಾಯಕ, ನಾಗೇಶ ಜಮಾದಾರ, ಭಾಗಣ್ಣ ದೊರೆ, ಜಗದೇವ ಸುಬೇದಾರ, ಹಣಮಂತ ದೊರೆ ಪಾಲ್ಗೊಂಡಿದ್ದರು. ಶಕುಂತಲಾ ಪೊದ್ದಾರ ಸ್ವಾಗತಿಸಿದರು. ದೇವಿಂದ್ರ ನಾಯಕ ನಿರೂಪಿಸಿದರು. ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಒಟ್ಟು ೨೦ ಜನ ಚುನಾಯಿತ ಎಸ್‌ಟಿ ಸದಸ್ಯರಿಗೆ ಪಂಚಾಯತಿ ಅಧಿನಿಯಮ-೧೯೯೩ ಪುಸ್ತಕ ನೀಡಿ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here