ಬಿಸಿ ಬಿಸಿ ಸುದ್ದಿ

ಯಾನಾಗುಂದಿ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಹಳ್ಳಿಯ ಯಾನಾಗುಂದಿ ಮಾಣಿಕಮ್ಮನ ಆರೋಗ್ಯಕ್ಕಾಗಿ ಕೋರ್ಟ ನಿರ್ದೇಶನದಂತೆ ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳು ನಿಗಾವಹಿಸುತ್ತಿದ್ದಾರೆ. ಇದೆಲ್ಲ ಒಂದು ರೀತಿ ಸರಿ ಇರಬಹುದು. ಆದರೆ ಈ ಮಾಣಿಕಮ್ಮ ಊಟ ಉಪಚಾರವನ್ನೆ ಮಾಡದೆ ಇಲ್ಲಿಯವರೆಗೂ ಹಾಗೆಯೇ ಜೀವಿಸುತ್ತಿದ್ದಾಳೆ ಎಂಬ ಸಂಗತಿ ತುಂಬಾ ಮಹತ್ವದ್ದು. ಈ ಪವಾಡದ ಘಟನೆಗಾಗಿಯೆ ಕರ್ನಾಟಕ, ಆಂದ್ರ ಹಾಗೂ ಮಹಾರಾಷ್ಟ್ರದಾದ್ಯಂತ ಈಕೆಗೆ ಭಕ್ತರು ಹುಟ್ಟಿಕೊಂಡರು. ಮುಸುರೆಗೆ ನೊಣ ಮುತ್ತಿಕೊಂಡಂತೆ ರಾಜಕಾರಣಿಗಳೂ ಸಹ ಜನ ಸಾಮಾನ್ಯರು ಸೇರುವ ಕಡೆಗೆ ಅವರೂ ಸೇರಿ ಯಾನಾಗುಂದಿಯನ್ನು ನೋಡ ನೋಡುತ್ತಲೆ ಯಾತ್ರಾಕ್ಷೇತ್ರವಾಗಿ ಪರಿವರ್ತನೆಗೊಳಿಸಿದ್ದಾರೆ.

ವರ್ಷಕ್ಕೆ ಒಂದೆ ಒಂದು ಬಾರಿ ಅಂದರೆ ಶಿವರಾತ್ರಿಯ ದಿನ ಮಾಣಿಕೇಶ್ವರಿ ತನ್ನ ಭಕ್ತಾದಿಗಳಿಗೆ ದರ್ಶನ ಭಾಗ್ಯ ಕರುಣಿಸಿ ಮತ್ತೆ ವರ್ಷದುದ್ದಕ್ಕೂ ತನ್ನ ನೆಲ ಮಹಡಿಯನ್ನು ಸೇರಿ ಬಿಡುತ್ತಾಳೆ. ಮಾಣಿಕಮ್ಮ ಮಾಣಿಕೇಶ್ವರಿ ಆಗುವುದಕ್ಕಿಂತ ಪೂರ್ವದಲ್ಲಿ ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬುಗ್ಗಮ್ಮ ಆಶಪ್ಪ ದಂಪತಿಗಳ ನಾಲ್ಕನೆಯ ಮಗಳು. ಬಡತನಕ್ಕೆ ಕಷ್ಟಗಳು ಜಾಸ್ತಿ ಎನ್ನುವಂತೆ ಅನ್ನ ನೀರಿಲ್ಲದೆ ಬಳಲಿಕೆಯಿಂದ ಮಾಣಿಕಮ್ಮ ಪವಾಡಗಳನ್ನು ಮಾಡುತ್ತಲೆ ಬಂದಳು. ಚಿಕ್ಕಂದಿನಲ್ಲಿ ಈಕೆ ಯಾರೊಂದಿಗೂ ಬೆರೆಯದೆ, ಮಾತಾಡದೆ, ಅರಳಿಯ ಮರದ ಟೊಂಗೆ ಏರಿ ಕುಳಿತುಕೊಳ್ಳುವಳು. ಇದನ್ನು ಕಂಡು ಕಂಗಾಲಾದ ತಂದೆ ತಾಯಿಗಳು ದೇವರಿಗೆ ಹರಕೆ ಹೊತ್ತಿದ್ದಾರೆ. ಸಾಲದೆಂಬಂತೆ ದೆವ್ವ ಬಿಡಿಸುವವರ ಮನೆಗೂ ಎಡತಾಕಿದ್ದಾರೆ. ಕೊನೆಗೆ ಯಾರ ಮಾತೋ ಕೇಳಿ ಮಾಣಿಕಮ್ಮಳಿಗೆ ಹತ್ತನೆ ವರ್ಷದಲ್ಲಿಯೆ ಬಾಲ್ಯ ವಿವಾಹವನ್ನೂ ಮಾಡಿದರು. ಆದರೂ ಆಕೆ ಸರಿ ಹೋಗಲಿಲ್ಲ.

ಗುರುಮಿಠಕಲ್ ಮಠದ ಹಿಂದಿನ ಪೀಠಾಧಿಪತಿಗಳು ತಮ್ಮ ಮಠದಲ್ಲಿಯೆ ಈಕೆಯನ್ನು ಇಟ್ಟುಕೊಂಡು ಔಷದೋಪಚಾರ ಮಾಡಿದ್ದಾರೆ. ಆದರೂ ಅದು ಸರಿ ಹೋಗದೆ ಇದ್ದಾಗ ಮಾಣಿಕಮ್ಮನಿಗೆ ಕಾವಿ ಧರಿಸಿ ಸನ್ಯಾಸಿ ಮಾಡಿದರು ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ತನ್ನಷ್ಟಕ್ಕೆ ತಾನು ಇರುವ ಹರೆಯದ ಹುಡುಕಿ, ಶೂನ್ಯದಲ್ಲಿ ಏನನ್ನೋ ನೋಡುತ್ತ ಕುಳಿತ ಮಾಣಿಕಮ್ಮ ಮೌಢ್ಯ ಭಕ್ತರ ಕಣ್ಣಲ್ಲಿ ಪವಾಡ ಪುರುಷಳಾಗಿ ಗೋಚರವಾಗಿದ್ದಾಳೆ. ಕೆಲವು ಐನಾತಿಗಳಿಗೆ ಇಂಥದ್ದನ್ನು ಕಂಡರೆ ರಸಗವಳ. ಮಾಣಿಕಮ್ಮನನ್ನೆ ಬಂಡವಾಳ ಮಾಡಿಕೊಂಡ ಜನರು ಆಕೆಗಾಗಿ ಯಾನಾಗುಂದಿಯಲ್ಲಿ ಭರ್ಜರಿ ಕಟ್ಟಡವೊಂದನ್ನು ಕಟ್ಟಿ ನೆಲ ಮಹಡಿಯಲ್ಲಿಟ್ಟರು. ಹೇಳಿ ಕೇಳಿ ಆಂದ್ರದ ಜನ ಭಾವನಾತ್ಮಕವಾಗಿ ಇರುವವರು.

ಮಾಣಿಕಮ್ಮ ಊಟವನ್ನೇ ಮಾಡದೆ ಜೀವಿಸಿದ್ದಾಳೆ ಎಂಬ ಹರಿಬಿಟ್ಟ ಸಂಗತಿ ಕಿವಿಯಿಂದ ಕಿವಿಗೆ ತಲುಪಿ, ಯಾನಾಗುಂದಿಯಲ್ಲಿ ಜನ ಜಂಗುಳಿಯೆ ಕೂಡಲು ಆರಂಭವಾಯಿತು. ಸಣ್ಣಗೆ ಆರಂಭವಾದ ಧಾರ್ಮಿಕ ವ್ಯಾಪಾರ ಇಂದು ಭರ್ಜರಿಯಾಗಿ ನಡೆಯುತ್ತಿವೆ. ಕಾಯಿ, ಕರ್ಪೂರ, ಹಾರ, ತುರಾಯಿ, ಪ್ರಸಾದ, ದಾಸೋಹ ಸೇವೆ ಕೈಂಕರ್ಯಗಳು ಅವ್ಯಾಹತವಾಗಿ ನಡೆದಿವೆ. ಕುರಿಗಳು ಸಾರ್ ನಾವು ಕುರಿಗಳು ಎಂಬ ಹಾಡಿನಂತೆ ಯೋಚಿಸುವ ಶಕ್ತಿಯನ್ನು ಕಳಕೊಂಡ ಜನತೆ ನಾ ಮುಂದೆ ತಾ ಮುಂದೆ ಎನ್ನುತ್ತಾ ದೌಡಾಯಿಸಿ ಯಾನಾಗುಂದಿಗೆ ಹೋಗಿ ಮಾಣಿಕಮ್ಮನ ದರ್ಶನ ಪಡೆದು ಬಂದರು.

ಆದರೆ ಇದುವರೆಗೂ ಯಾರೊಬ್ಬರೂ ಮಾಣಿಕಮ್ಮ ಊಟ ಮಾಡದೆ, ನೀರು ಕುಡಿಯದೆ ಹೇಗೆ ಜೀವಿಸಬಲ್ಲಳು ? ಎಂಬುದು ಯಾರೂ ಪ್ರಶ್ನಿಸಿಲ್ಲ. ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸುವುದು ಅಂದರೆ ಬತ್ತಲೆ ಇದ್ದವರ ರಾಜ್ಯದಲ್ಲಿ ಬಟ್ಟೆ ಉಟ್ಟವನ ಸ್ಥಿತಿಯಂತೆ. ಪುಂಡ ಪುರೋಹಿತರು, ಆಡಳಿತ ವರ್ಗದವರು ಹಬ್ಬಿಸಿದ ಗಾಳಿ ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡಿದ ಪರಿಣಾಮ ಯಾನಾಗುಂದಿ ಸುಕ್ಷೇತ್ರವಾಯಿತು, ಸುಪ್ರಸಿದ್ಧವಾಯಿತು.


ಜಗತ್ತಿನಾದ್ಯಂತ ಆಹಾರಕ್ಕಾಗಿ ನಡೆದ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ಮನುಷ್ಯನ ಮೋಸ, ತಟವಟ, ವಂಚನೆ, ಭ್ರಷ್ಟಾಚಾರಕ್ಕೆಲ್ಲ ಮೂಲ ಕಾರಣ ಹಸಿವು. ಆ ಹಸಿವಿಗಾಗಿಯೆ ಆತ ಏನೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಲಾದರೂ ಮಾತೆ ಮಾಣಿಕಮ್ಮ ಊಟ ಮಾಡದೆ , ನೀರು ಕುಡಿಯದೆ ಬದುಕಲು ಹೇಗೆ ಸಾಧ್ಯ ? ಎಂಬ ಸೂತ್ರವನ್ನು ಜಗತ್ತಿಗೆ ನೀಡಿದರೆ ಈ ಜಗತ್ತು ಆಕೆಯನ್ನು ಕೃತಜ್ಞತೆಯಿಂದ ನೆನೆಯುತ್ತದೆ. ಆಹಾರ ಮತ್ತು ನೀರಿಗಾಗಿ ಜಗತ್ತಿನಲ್ಲಿ ನಡೆದಿರುವ ಅಂತಃಕಲಹ ತಪ್ಪುತ್ತದೆ. ಮದ್ದು ಗುಂಡುಗಳು ಸೈನಿಕರು ಯುದ್ದ ವಿಮಾನಗಳು ಅರ್ಥಕಳೆದುಕೊಳ್ಳುತ್ತವೆ.


ವೈಜ್ಞಾನಿಕ ಮನೋಭಾವ ಇರುವ ಕೋರ್ಟ, ಸರಕಾರ ಆಕೆಯ ಆರೋಗ್ಯದ ಜೊತೆ ಜೊತೆಗೆ ಆಹಾರದ ಗುಟ್ಟನ್ನು ಬಯಲು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕಿದೆ. ಇದೆಲ್ಲ ಇಂದು ಸಾಧ್ಯವೆ ?

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago