ಪ್ರಾತಃಸ್ಮರಣೀಯತೆ ಅನ್ನುವ ಪದಪುಂಜ ಮರೆಯಲಾಗದ ವ್ಯಕ್ತಿತ್ವಗಳ ಕುರಿತು ಬಳಸುವಂತಹದ್ದು. ಅಂತಹ ಪ್ರಾತಃಸ್ಮರಣೀಯ ಆರೋಗ್ಯ ಸಹಾಯಕರೊಬ್ಬರು ನನ್ನ ನೆನಪಿನ ಪುಟದಲ್ಲಿ ಚಿರಸ್ಮರಣೀಯ ಸ್ಥಾನ ಗಳಿಸಿದ್ದಾರೆ. ಪ್ರಸ್ತುತ ನಮ್ಮ ನಡುವೆ ಇರದ ವಿಚಾರ ಸಂವಾದದ ಆ ಗೆಳೆಯನ ಹೆಸರು ಬಸವರಾಜ ಸಗರ. ಆತನ ಹುಟ್ಟೂರು, ಇಂದಿನ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಸಗರ ಎಂಬ ಹಳ್ಳಿ. ಸಗರ ಚಕ್ರವರ್ತಿ ಆಳಿದ ನಾಡಿದು. ಆ ಪ್ರದೇಶವನ್ನು ಸಗರನಾಡೆಂದು ಕರೆಯುತ್ತಾರೆ. ಭೀಮಕವಿಯು ಬಾಳಿ ಬದುಕಿದ ನೆಲದ ಗೆಳೆಯ ಬಸವರಾಜ ಸಗರ.
ಬಸವರಾಜ ಸಗರ, BHW ಆಗಿ ಕೆಲಸಕ್ಕೆ ಸೇರಿದ್ದು ಅಂದಿನ ಮೈಸೂರು ಜಿಲ್ಲೆ ಕೊಳ್ಳೇಗಾಲ ತಾಲೂಕಿನ ರಾಮಾಪುರ ಎಂಬ ಪ್ರಾ. ಆ. ಕೇಂದ್ರದಲ್ಲಿ. ಹೈ.ಕ. ನೆಲದ ಉರ್ದು ಪ್ರದೇಶದ ಬಸವರಾಜಗೆ ಆ ಭಾಗದ ಭಾಷೆ ಸಹಜವಾಗಿ ತೊಡಕೆನಿಸಿತು. ಸವಾಲಿನಂತೆ ಅಲ್ಲಿನ ಸಮುದಾಯದ ಒಡನಾಡಿಯಾಗಿ ನಾಕೈದು ವರುಷ ಕರ್ತವ್ಯ ನಿರ್ವಹಿಸಿದರು. ಅಷ್ಟು ಮಾತ್ರವಲ್ಲ, ಮೈಸೂರು ಮುಕ್ತ ವಿ.ವಿ. ಯ ಕನ್ನಡ ಎಂ.ಎ. ಪ್ರಥಮ ದರ್ಜೆಯಲ್ಲಿ ಪಾಸು ಮಾಡುತ್ತಾರೆ. ಆಗ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದಲ್ಲಿ ಡಾ. ಎಂ.ಟಿ. ಅಯ್ಯಪ್ಪ ಎಂಬ ಮಿಲ್ಟ್ರೀ ಅಧಿಕಾರಿಯದು ಮನಾಮನಿ ಹೆಸರು . ಇಲಾಖೆಯಲ್ಲಿ ಅವರ ಶಿಸ್ತು, ಕಟ್ಟುನಿಟ್ಟುತನಕೆ ಎಲ್ಲರೂ ಸಹಜವಾಗಿ ಹೆದರುತ್ತಿದ್ದರು. ಅಂತಹ ಅಧಿಕಾರಿಯ ಪ್ರೀತಿಗೆ ಬಸವರಾಜ ಪಾತ್ರರಾಗಿದ್ದರು.
ಅಲ್ಲಿಂದ ಬೀದರ ಜಿಲ್ಲೆ, ತದ ನಂತರ ಕಲಬುರ್ಗಿಗೆ ವರ್ಗಾವಣೆ. ಆರೇಳು ವರುಷ ಕಾಲ ಹಿರಿಯ ಆರೋಗ್ಯ ಸಹಾಯಕನಾಗಿ ಸೇವಾ ಕೈಂಕರ್ಯ. ಸರಳತೆ, ಸಜ್ಜನಿಕೆ, ಸುಸಂಸ್ಕೃತಿ, ಪ್ರಾಮಾಣಿಕತೆ, ಮಿತ ಮಾತು, ಕರ್ತವ್ಯ ನಿಷ್ಠೆ ಎಂಬುದಕೆಲ್ಲ ದೊಡ್ಡ ನಿದರ್ಶನವೆಂದರೆ ಬಸವರಾಜ ಎಂದು ಯಾರಾದರೂ ಎಗ್ಗಿಲ್ಲದೇ ಹೇಳುವಂತಿದ್ದರು.
ಆತ ಅದೆಷ್ಟು ಸರಳರೆಂದರೆ ತನ್ನ ಮದುವೆಗಾಗಿ ಕೇವಲ ನಲವತ್ತು ರುಪಾಯಿ ಮಾತ್ರ ಖರ್ಚು ಮಾಡಿ ಮದುವೆ ಮಾಡಿಕೊಂಡಿದ್ದರು. ಪತ್ನಿ ಸಾವಿತ್ರಿಬಾಯಿ ಬಿಲ್ವಪತ್ರಿ ಸ್ನಾತಕೋತ್ತರ ಪದವೀಧರೆ. ಸಾವಿತ್ರಕ್ಕ ನಮ್ಮ ಬಸಣ್ಣನಿಗಿಂತಲೂ ಸರಳಾತಿ ಸರಳರು. ಸತಿ ಪತಿಗಳೊಂದಾದ ಭಕುತಿ ಹಿತವಪ್ಪುದು ಶಿವಂಗೆ ಅಂತಾರಲ್ಲ ಹಂಗೇ. ಅವರಿಗೆ ಮಕ್ಕಳಿರಲಿಲ್ಲ. ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ…. ನಾವಿಬ್ಬರು ನಮಗಿಬ್ಬರು….. ಹೀಗೆ ಕುಟುಂಬ ಯೋಜನೆ, ನಂತರದ ಕುಟುಂಬ ಕಲ್ಯಾಣ ಇಲಾಖೆಯ ಘೋಷಣೆಗಳನ್ನು ಅನುಸರಿಸಿ ಅವರೊಂದು ಘೋಷಣೆ ಸೃಷ್ಟಿಸಿದ್ದರು. ಅದೆಂದರೆ ” ನಾವಿಬ್ಬರು – ನಾವಿಬ್ಬರೇ.” ಹೀಗೆ ಇರುವ ಬದುಕನ್ನೇ ಅನನ್ಯ ಗೊಳಿಸಿಕೊಳ್ಳುವುದು ಹೇಗೆಂಬುದನ್ನು ಇವರಿಂದ ಕಲಿಯಬೇಕಿತ್ತು. ಜಗದ ಮಕ್ಕಳೆಲ್ಲ ತಮ್ಮ ಮಕ್ಕಳೆಂಬ ಕಕ್ಕುಲತೆ ಈ ದಂಪತಿಗೆ.
ಇಲಾಖೆಯ ಆರೋಗ್ಯ ಸಹಾಯಕರ ಸಂಘಟನೆಯಲ್ಲಿ ಯಾವುದೇ ಪದಾಧಿಕಾರಿ ಆಗಿರಲಿಲ್ಲವಾದರೂ ಸಂಘಟನೆ ಬಗ್ಗೆ ತೀವ್ರವಾದ ಪ್ರೀತಿ ಉಳ್ಳವರಾಗಿದ್ದರು. ಅವರ ಕಾಲದ ರಾಜ್ಯ ಸಂಘಟನೆಯ ರೂವಾರಿಯಾಗಿದ್ದ ತುಮಕೂರಿನ ಶ್ರೀ ದಸ್ತಗೀರ ಸಾಹೇಬ ಅವರ ಪ್ರೀತಿಯ ಗೆಳೆಯರಾಗಿದ್ದರು. ಅಂತೆಯೇ ಸಂಘಟನೆಯ ಮುಖಂಡರಿಗೆಲ್ಲ ಇವರ ಬಗ್ಗೆ ಅಪಾರ ಗೌರವ. ಅನೇಕ ಸಂದರ್ಭಗಳಲ್ಲಿ ಇವರ ಸಲಹೆಗಾಗಿ ಪದಾಧಿಕಾರಿಗಳು ಕಾತುರರಾಗಿರ್ತಿದ್ದರು.
ಒಂದು ಸಂಘಟನೆ ತನ್ನ ವರ್ಗ ಸಂಘಟನೆಯ ಹೋರಾಟದಷ್ಟೇ ಸಮಾನವಾದ ಹೋರಾಟವೊಂದನ್ನು ಬಸವರಾಜ ವ್ಯಕ್ತಿಯಾಗಿ ಮಾಡಿದರು. ಅದೆಂದರೆ ” ಆರೋಗ್ಯ ಕಾರ್ಯಕರ್ತ ” ಎಂಬ ಹೆಸರಿನ ಮಾಸ ಪತ್ರಿಕೆ ( ಸಾವಿತ್ರಕ್ಕ ಸಂಪಾದಕಿ ) ನಡೆಸುತ್ತಿದ್ದುದು. ಆ ಮೂಲಕ ಗ್ರಾಮೀಣ ಆರೋಗ್ಯ ಸೇವೆ ನೀಡುವ ವರ್ಗಕ್ಕೆಲ್ಲ ನ್ಯಾಯ ಒದಗಿಸುವಲ್ಲಿ ಪತ್ರಿಕೆ ಪ್ರತಿಭಟನೆಯ ಆಯುಧವಾಗಿ ಕೆಲಸ ಮಾಡಿದ ಘಟನಾವಳಿಗಳನ್ನು ಮುಂದಿನ ಸಂಚಿಕೆಯಲಿ….
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…