ಕರ್ಮಠತನ ಆಚರಿಸದೆ ಕಲ್ಯಾಣ ಮಹೋತ್ಸವ

0
250

ಜೂನ್ 18 ಬಂತೆಂದರೆ ನನಗೆಲ್ಲ ಉತ್ಸಾಹವೋ ಉತ್ಸಾಹ. ಏಕೆಂದರೆ ಅಂದು ಸತ್ಯಂಪೇಟೆಯಲ್ಲಿ ಶರಣ ಹಕ್ಕಿಗಳ ಕಲರವ. ನಾನಾ ಮೂಲೆ ಮೊಡಕಿನಿಂದ ಎದ್ದು ಬಂದ ಶರಣ ಹಕ್ಕಿಗಳ ಇಂಚರ ಕೇಳುವುದೆ ಒಂದು ಸೊಗಸು. ನಾನಾ ನಮೂನೆಯ, ನಾನಾ ವಿಚಾರಧಾರೆಯ ಆ ಹಕ್ಕಿಗಳ ಕಲರವದ ಒಟ್ಟು ಮೊತ್ತ ಶರಣ ಸಾಹಿತ್ಯ. ಅಂದು ಲಿಂಗಣ್ಣ ಸತ್ಯಂಪೇಟೆಯವರಿಗೆ ಹಬ್ಬವೋ ಹಬ್ಬ. ಆ ದಿನ ಮದುಮಗನಂತೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಅವರ ಚೈತನ್ಯ ನನಗೆ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಇಂದಿಗೆ ಸರಿಯಾಗಿ 22 ವರ್ಷಗಳ ಹಿಂದೆ ಮುಂಜಾನೆ ಸತ್ಯಂಪೇಟೆಯ ಯಜಮಾನ ಮನೆಯ ಮುಂದುಗಡೆ ಬಸವ ಧ್ವಜ ಹಾರಿಸಲ್ಪಟ್ಟಿತು. ಬಸವ ಧ್ವಜಗೀತೆಯನ್ನು ವಿ.ಸಿದ್ಧರಾಮಣ್ಣ ಎಂಬ ಶರಣರ ಕಂಚಿಕಕಂಠದಲ್ಲಿ ಮೊಳಗಿತು. ಅವರು ಏರುತಿದೆ ಹಾರುತಿದೆ, ಷಟಸ್ಥಲ ಧ್ವಜವು ಮೆರೆಯುತಿದೆ ಎಂಬ ನುಡಿಗಳು ನನ್ನೊಳಗೆ ರೋಮಾಂಚನ ಉಂಟು ಮಾಡಿದವು.

Contact Your\'s Advertisement; 9902492681

ಇಳಕಲ್ಲಿನ ಡಾ. ವಿಜಯಮಹಾಂತಸ್ವಾಮೀಜಿಗಳು, ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು, ಗಂಗಾವತಿಯ ಸಿ.ಎಚ್.ನಾರಿನಾಳ, ಮಾನ್ವಿಯ ಡಾ.ಬಸವಪ್ರಭು ಬೆಟ್ಟದೂರ, ಬೆಂಗಳೂರು ನಿವಾಸಿಯಾದ ಡಾ. ಹೆಚ್. ಚಂದ್ರಶೇಖರ, ಡಾ, ತೋಟೇಂದ್ರ ಶಿವಾಚಾರ್ಯರು ನಾಲವಾರ, ಅಂದಿನ ಮಂತ್ರಿಯಾದ  ಶರಣೆ ಲೀಲಾದೇವಿ ಆರ್. ಪ್ರಸಾದ ಮುಂತಾದವರಿಂದ ವೇದಿಕೆ ಕಿಕ್ಕಿರಿದು ತುಂಬಿತ್ತು. ಲಿಂಗಣ್ಣ ಸತ್ಯಂಪೇಟೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಣ್ಣನವರ ಮಾತುಗಳೆಂದರೆ ಅದು ಹಸಿ ಗೋಡೆಗೆ ಹರಳು ಒಡೆದಂತೆ. ಒಂದೊಂದು ಮಾತು ಅಂತಃಕರಣ ಮಾತುಗಳಂತೆ ಅವರಿಂದ ಹೊರಬರುತ್ತಿದ್ದವು.

ಮಾತಿನ ನಡುವೆಯೇ : ಇಂದು ನನ್ನ ತಂದೆ ಗುರಪ್ಪ ಯಜಮಾನರ ಸ್ಮರಣೋತ್ಸವದ ನಿಮಿತ್ಯ ಬಸವ ತತ್ವ ಸಮಾವೇಶ , ಈ ಸಂದರ್ಭದಲ್ಲಿಯೆ ನನ್ನ ಮೊದಲ ಮಗ ವಿಶ್ವಾರಾಧ್ಯನ ಕಲ್ಯಾಣೋತ್ಸವವೂ ನಡೆಯುತ್ತದೆ ಎಂದಾಗ ನಮಗೆಲ್ಲ ಅಚ್ಚರಿ. ಹಿರಿಯರ ಸ್ಮರಣೋತ್ಸವದ ದಿನ ಕಲ್ಯಾಣ ಮಹೋತ್ಸವ ಅದು ಹೇಗೆ ಜರುಗುತ್ತದೆ ? ಅಷ್ಟರಲ್ಲಾಗಲೆ ಮದುವೆಯ ಸೀಜನ್ ಮುಗಿದು ಹೋಗಿದ್ದವು. ಯಾವ ಮುಹೂರ್ತಗಳೂ ಇರಲಿಲ್ಲ. ಇಂಥ ದಿನ ಅದು ಹಿರಿಯರು ಲಿಂಗೈಕ್ಯವಾದ ದಿನ ಅಂದೇ ಕಲ್ಯಾಣ ಮಹೋತ್ಸವ ನೆರವೇರಿಸುವುದು ನನ್ನಂಥವರಿಗೆ ಅಜ್ಜರಿ ತಂದಿತ್ತು.

ಲಿಂಗಣ್ಣನವರು ಮನೆತನದವರು ಮೊದಲಿಂದಲೂ ಬಸವಾದಿ ಶರಣರ ಹೆಸರು ಹೇಳುತ್ತ ಬಂದವರು. ಇವರಿಗೆ ಯಾವ ಗಳಿಗೆ ಮುಹೂರ್ತ ಇಲ್ಲ. ಆದರೆ ಆ ಕಡೆ ಭಾಲ್ಕಿಯ ಅರ್ಬನ್ ಕೋ. ಆಪ್ ಬ್ಯಾಂಕ್ ಸಂಸ್ಥಾಪಕ ಲಿಂ.ಸಿದ್ಧಲಿಂಗಪ್ಪ ಕಾಕನಾಳೆ ಅವರ ಶರಾವತಿಯ ಅಕ್ಕನ ಕುಟುಂಬದ ಸದಸ್ಯರು ಒಪ್ಪುವುದಾದರೂ ಹೇಗೆ ? ಎಂಬ ಸಂಶಯ ನನ್ನ ಕಾಡುತ್ತಿತ್ತು. ಆದರೆ ಅದಾವುದಕ್ಕೂ ಅಡೆ ತಡೆ ಇಲ್ಲದಂತೆ ಸಾಂಗವಾಗಿ ಕಾರ್ಯಕ್ರಮ ಜರುಗಿತು. ಹಂದರ ಹಾಕಿರಲಿಲ್ಲ. ಸುಲಿಗೆ ಸುತ್ತಲಿಲ್ಲ. ಹಸಿ ಮಣೆಯ ಮೇಲೆ ಕುಳಿತು ಮುತ್ತೈದೆಯರು ನೀರು ಹಾಕಲಿಲ್ಲ. ಬಾಸಿಂಗ ಕಟ್ಟಲಿಲ್ಲ. ವಾಲಗ ಊದಲಿಲ್ಲ. ಪೂಜಾರಿ ಪುರೋಹಿತ ಇಲ್ಲ. ಮಾಂಗಲ್ಯಂ ತಂತುನಾನೇನ ಎಂಬ ಮಂತ್ರದ ಸುಳಿವಿಲ್ಲ. ಇದೇತರ ಮದುವೆ ? ಎಂದು ನನ್ನೊಂದಿಗೆ ಬಂದವರು ಮಾತಾಡಿಕೊಳ್ಳುತ್ತಿದ್ದರು.

ಮೊದಲೇ ಮನೆಯಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟಿದ ವಧು- ವರನನ್ನು ಕರಕೊಂಡು ಬಂದರು. ಪರಸ್ಪರರಿಂದ ಪ್ರತಿಜ್ಞಾವಿಧಿ ಬೋಧಿಸಿದರು. ವಧುವಿಗೆ ವರ ತಾಳಿ ಕಟ್ಟಿದರೆ, ವರನಿಗೂ ವಧು ರುದ್ರಾಕ್ಷಿ ಮಾಲೆ ಹಾಕಿದಳು. ನಾವೆಲ್ಲ ಸೇರಿದ ಜನರೊಂದಿಗೆ ಹೂವನ್ನು ಹಾಕಿ ಸಂತೋಷ ಪಟ್ಟೆವು. ದಾಂಪತ್ಯ ಜೀವನಕ್ಕೆ ಕಾಲಿರಿಸಿಲಿದ್ದ ಸಹೋದರ ವಿಶ್ವಾರಾಧ್ಯ ಮತ್ತು ಶರಾವತಿ ಅಕ್ಕಳಿಗೆ ತಲೆಯ ಮೇಲೆ ಅಕ್ಕಿ ಹಾಕಲಿಲ್ಲ. ನನ್ನೊಂದಿಗಿದ್ದ ಕೆಲವರು ಅಕ್ಕಿ ಕಾಳು ಹಾಕದಿದ್ದರೆ ಇದೆಂತಹ ಮದುವೆ ? ಎಂದು ಮೂಗು ಮುರಿದರು.

ಈ ಮಾತುಗಳು ವೇದಿಕೆಯ ಮೇಲೆ ಇದ್ದವರಿಗೆ ಕೇಳಿಸಿದಂತೆ ಅದೇ ಕಾಲಕ್ಕೆ ಇಳಕಲ್ಲಿನ ಡಾ. ವಿಜಯ ಮಹಾಂತ ಸ್ವಾಮೀಜಿಗಳು: ಅಕ್ಕಿ ಕಾಳು ಶಿವನು ಕೊಟ್ಟ ಅಪ್ಯಾಯನ ಪ್ರಸಾದ. ಅದನ್ನು ಕೆಡಿಸುವ ಹಕ್ಕು ಯಾರಿಗೂ ಇಲ್ಲ. ನಾವೆಲ್ಲ ಮದುವೆಯ ನೆಪದಲ್ಲಿ ಕ್ವಿಂಟಾಲ ಗಟ್ಟಲೆ ಅಕ್ಕಿ ಕಾಳು ಚೆಲ್ಲಿ ಕಾಲಲ್ಲಿ ಉದ್ಧಟತನದಿಂದ ತುಳಿಯುತ್ತೇವೆ. ಒಂದೇ ಒಂದು ಅಕ್ಕಿ ಕಾಳನ್ನು ಸೃಜಿಸಲಾಗದ ನಾವುಗಳು , ಅದನ್ನು ಹಾಳು ಮಾಡುವ ಹಕ್ಕು ಕೊಟ್ಟವರು ಯಾರು ? ಎಂದು ಪ್ರಶ್ನಿಸಿದಾಗ ನಾವೆಲ್ಲ ಹೌದೌದೆಂದು ತಲೆಹಾಕಬೇಕಾಯಿತು.

ಲಿಂಗಣ್ಣ ಸತ್ಯಂಪೇಟೆಯವರು ತಮ್ಮ ಜೀವನದ ಉದ್ದಕ್ಕೂ ಯಾವುದನ್ನು ನುಡಿದರೋ ಅದನ್ನು ತಮ್ಮ ನಡೆಯಲ್ಲಿ ತಂದುಕೊಂಡಿದ್ದರು. ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ ಎಂಬ ಅಪ್ಪ ಬಸವಣ್ಣನವರ ವಚನ ಹೇಳುತ್ತಲೆ ಎಮ್ಮವರು ಬೆಸರಗೊಂಡರೆ ಶುಭಲಗ್ನವೆನ್ನಿರರಯ್ಯಾ ಎಂದು ಹೇಳಿ ಅದರಂತೆ ನಡೆದುಕೊಂಡರು. 1997 ರಲ್ಲಿ ಜರುಗಿದ ಸಹೋದರ ವಿಶ್ವಾರಾಧ್ಯ  ಅಕ್ಕ ಶರಾವತಿಯ ಮದುವೆ ಇಂದಿಗೆ 22 ವರ್ಷ ಕಳೆದು 23 ನೇ ವರ್ಷಕ್ಕೆ ಕಾಲಿಕ್ಕುತ್ತಿದೆ. ಯಾವ ಕರ್ಮಠ ಆಚರಣೆಗಳಿಲ್ಲದೆ ನಡೆದ ಕಲ್ಯಾಣ ಮಹೋತ್ಸವ ಇಡೀ ಸಮಾಜಕ್ಕೆ ಒಂದು ಮಾದರಿಯಾಗಿದೆ.

ಅವರ  ಇನ್ನೋರ್ವ ಮಗ ಸಂತೋಷ ಹಾಗೂ ಪಲ್ಲವಿಯ ಕಲ್ಯಾಣ ಮಹೋತ್ಸವವನ್ನೂ ಸಹ 10 ವರ್ಷಗಳ ಹಿಂದೆ ಸತ್ಯಂಪೇಟೆಯ ಇದೆ ಸ್ಮರಣೋತ್ಸವದಲ್ಲಿ ಮಾಡುವ ಮೂಲಕ ಕರ್ಮಠರ ಎದೆಯೊಳಗೆ ಅಚ್ಚರಿ ಹುಟ್ಟಿಸಿದರು. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಆ ಎರಡೂ ಜೋಡಿಗಳು ಜೀವನ ಸವೆಸುತ್ತಿವೆ.

ಅವರ ಮೇಲೆ ಬಸವಾದಿ ಶರಣರ ಕೃಪೆ ಇರಲೆಂದು ಈ ಮೂಲಕ ಆಶಿಸುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here