ಶಹಾಪುರ: 2019 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಯಾದಗಿರಿ ಜಿಲ್ಲೆಯ ಶಹಾಪುರದ ಖ್ಯಾತ ಮಕ್ಕಳ ಸಾಹಿತಿಗಳಾದ ಚಂದ್ರಕಾಂತ ಕರದಳಿ ಅವರು ಆಯ್ಕೆಯಾಗಿದ್ದಾರೆ.
ಹೈದರಾಬಾದ್ ಕರ್ನಾಟಕದ ಸಾಹಿತಿಗಳಲ್ಲಿ ಪ್ರಮುಖರಾದ ಶ್ರೀ ಚಂದ್ರಕಾಂತ ಕರದಳ್ಳಿ ಯವರು ಸುಮಾರು ೩೦ ವರ್ಷಗಳಿಂದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಬರಹಗಳ ಮೂಲಕ ಕರ್ನಾಟಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ.
ಚಂದ್ರಕಾಂತ ಕರದಳ್ಳಿ ಅವರ ಮಕ್ಕಳ ಕಾದಂಬರಿಯಾದ “ಕಾಡು ಕನಸಿನ ಬೀಡಿಗೆ” ಎಂಬ ಕೃತಿಗೆ ಈ ಪ್ರಶಸ್ತಿ ಲಭಿಸಿದೆ ಹೈದರಾಬಾದ್ ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಮೊಟ್ಟ ಮೊದಲ ಬಂದಿರುವ ಪ್ರಶಸ್ತಿ ಇದಾಗಿದೆ ಎಂದು ಅತೀವ ಸಂತೋಷ ವ್ಯಕ್ತಪಡಿಸಿದರು.
ಈಗಾಗಲೇ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸರುವದು ಅತ್ಯಂತ ಸಂತೋಷದ ವಿಷಯ.
ಸುರಪುರದಲ್ಲಿ ಜರುಗಿದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಯಾದಗಿರಿ ಜಿಲ್ಲೆಯ ದ್ವಿತೀಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.