ಬಿಸಿ ಬಿಸಿ ಸುದ್ದಿ

ಚಿತ್ರಕಲೆಯಲ್ಲಿ ಕಾಯಕದ ಶರಣರು

ಕರ್ನಾಟಕದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಚನ ಸಾಹಿತ್ಯದ ಕಾಲವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದಾಗಿದೆ. ವಚನಕಾರರು ಮತ್ತು ಅವರು ರಚಿಸಿದ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ಚಿಂತನೆಗೆ ಒಳಪಡಿಸುವ ವಿಷಯವೇ ಆಗಿದ್ದು, ೧೨ನೇ ಶತಮಾನದಿಂದ ಇಂದಿನವರೆಗೆ ಕರ್ನಾಟಕದ ಸಾಂಸ್ಕೃತಿಕ ಲೋಕದಲ್ಲಿ ಜೀವನ್ಮುಖಿಯಾಗಿ ಹರಿದು ಬರುವ ಮೂಲಕ ಅದು ತನ್ನ ಇರುವಿಕೆಯನ್ನು ಸಾಬೀತುಪಡಿಸಿದೆ ಎಂದು ಹೇಳಬಹುದು. ಕನ್ನಡ ಸಾಹಿತ್ಯದಲ್ಲಿ ಹಳೆಗನ್ನಡ ಕಾಲದ ಸುವರ್ಣಯುಗ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಮೂಗು ಮುರಿಯುತ್ತಿದ್ದ ಅನೇಕರಿಗೆ ಕನ್ನಡದಲ್ಲಿ ಏನಿಲ್ಲ? ಯಾಕಿಲ್ಲ? ಎಲ್ಲವೂ ಇದೆ ಎಂದು ಸಮರ್ಥ ಉತ್ತರ ಒದಗಿಸಿದ ವಚನ ಸಾಹಿತ್ಯ ನಡೆ-ನುಡಿ ಸಾಹಿತ್ಯವಾಗಿರುವುದರಿಂದ ಅದು ನಮ್ಮ ಬದುಕಿನ ಎಲ್ಲ ಸಾಧ್ಯತೆಗಳನ್ನು ಒಳಗೊಳ್ಳುವ ಮೂಲಕ ತನ್ನ ಅಸ್ತಿತ್ವವನ್ನು ಇದುವರೆಗೂ ಕಾಪಾಡಿಕೊಂಡು ಬಂದಿದೆ.

ಇಂತಹ ಕಾಮಧೇನು ಕಲ್ಪವೃಕ್ಷವಾಗಿರುವ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಲು ನಾವು ಅನೇಕ ಮಾಧ್ಯಗಳನ್ನು ಬಳಸಿಕೊಳ್ಳಲೇಬೇಕಾಗುತ್ತದೆ. ಅಂತಹ ಪರಿಣಾಮಕಾರಿ ಮಾಧ್ಯಮಗಳಲ್ಲಿ ದೃಶ್ಯ (ಚಿತ್ರಕಲೆ)ಮಾಧ್ಯಮವೂ ಒಂದು. ವಚನಕಾರರ ಬಗ್ಗೆ ಬರೆದಿರುವ ವ್ಯಕ್ತಿಚಿತ್ರಗಳನ್ನು ಹಾಗೂ ಅವರು ರಚಿಸಿರುವ ವಚನಗಳನ್ನು ನೂರು ಬಾರಿ ಓದುವುದು ಒಂದೇ! ಅದಕ್ಕೆ ಸಂವಾದಿಯಾಗಿ ಕಲಾವಿದರು ಬಿಡಿಸಿದ ಒಂದು ಚಿತ್ರವನ್ನು ನೋಡುವುದೂ ಒಂದೇ ಆಗಿದೆ!! ವಚನಕಾರರ ವಚನಗಳನ್ನು ಓದಿ ಆ ಚಿತ್ರಗಳನ್ನು ನೋಡಿದರೆ ಅವುಗಳು ನಮ್ಮ ಮನದಾಳದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತವೆ. ಹೀಗಾಗಿಯೇ ಅಂದಿನ ಕಾಯಕ ಶರಣರ ಮುಖ ಹಾಗೂ ಅವರು ಮಾಡುತ್ತಿದ್ದ ಕಾಯಕಗಳು ನಮ್ಮ ಮನಸ್ಸಿನಲ್ಲಿ ಇನ್ನೂ ಚಿರಸ್ಥಾಯಿಯಾಗಿವೆ.

೧೨ನೇ ಶತಮಾನದ ವಚನಕಾರರು ಹಾಗೂ ಅವರ ರಚನೆಯ ವಚನಗಳಿಗೆ ಚಿತ್ರ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ನಿರಂಜನ ಸ್ವರೂಪಿಗಳಾಗಿರುವ ವಚನಕಾರರು ಹಾಗೂ ನಿರಾಕಾರವಾಗಿರುವ ಅವರ ಸಾಹಿತ್ಯವನ್ನು ಶಾಬ್ದಿಕ ರೂಪದಲ್ಲಿಯೇ ಹಿಡಿದಿಡುವುದು ಕಷ್ಟವಾಗಿರುವಾಗ ಅಂತಹ ಶಾಬ್ದಿಕ ವಿನ್ಯಾಸ ಸಕಾರ (ದೃಶ್ಯರೂಪ)ಗೊಳಿಸಬೇಕಾದರೆ ಅದಕ್ಕೆ ಕಲ್ಪನಾಶಕ್ತಿ, ಸೂಕ್ಷ್ಮ ಅಭಿಜ್ಞತೆಗಳಿರಬೇಖಾಗುತ್ತದೆ. ಬುದ್ಧಿ, ಭಾವದಂತಹ ಬೌದ್ಧಿಕ, ಮಾನಸಿಕ ಶಕ್ತಿ-ಸಾಮರ್ಥ್ಯ ಇರಲೇಬಾಕಾಗುತ್ತದೆ.

ವಚನಕಾರರನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುವುದು ಮತ್ತು ಅವರು ಮಾಡುತ್ತಿದ್ದ ಕಾಯಕ, ಅವರು ಬೆಳೆದು ಬಂದ ಪರಿಸರ ಇತ್ಯಾದಿಗಳ ಜೊತೆಗೆ ಅವರ ವಚನಗಳ ಭಾವಾರ್ಥ, ಲಕ್ಷಾರ್ಥ, ವಾಚ್ಯಾರ್ಥ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಇವೆಲ್ಲದರ ಅಧ್ಯಯನದ ನಂತರ ಅದನ್ನು ದೃಶ್ಯರೂಪಕ್ಕೆ ಹೇಗೆ ಅಳವಡಿಸಬೇಕು ಎಂಬುದನ್ನು ಚಿಂತಿಸಬೇಕಾಗುತ್ತದೆ. ಇದು ಅತ್ಯಂತ ಸವಾಲು ಹಾಗೂ ಜವಾಬ್ದಾರಿಯ ಕೆಲಸವಾಗಿದ್ದು, ವಚನಕಾರರು ವೈಚಾರಿಕ ವ್ಯಕ್ತಿಗಳಾಗಿದ್ದರಿಂದ ಆ ವೈಚಾರಿಕ ತಾಕತ್ತನ್ನು ಸಹ ಕಲಾವಿದರು ತಮ್ಮ ಕಲೆಯಲ್ಲಿ ಪ್ರದರ್ಶಿಸಬೇಕಾಗುತ್ತದೆ.

ವಚನ ಚಿತ್ರ ಕಲಾವಿದರು:
ವಚನಕ್ಕೆ ಚಿತ್ರರೂಪ ಕೊಟ್ಟ ಎಂ. ವೀರಪ್ಪನವರು ಬಸವಣ್ಣನವರ ಜೀವನ ಸಾಧನೆ ಕುರಿತಂತೆ ಹಾಗೂ ವಚನಗಳಿಗೆ ಕೆಲವು ಚಿತ್ರಗಳನ್ನು ಬರೆದ ಮೊದಲಿಗರಾಗಿದ್ದಾರೆ. ಇವರು ರಚಿಸಿದ ಹಲವು ಚಿತ್ರಗಳು ನೈಜತೆಯ ಪ್ರತಿರೂಪದಂತಿದ್ದು, ದೃಶ್ಯ ಕಾವ್ಯಗಳೇ ಆಗಿವೆ.

ಸಾಕ್ಷಾತ್ ಶರಣ ಜೀವನ ನಡೆಸಿದ ಅಥಣಿಯ ಎಂ.ಎ. ಚೆಟ್ಟಿ ಎಂಬುವವರು ಕೂಡ ಸುಮಾರು ೧೦ ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದು, ಇವು ಅತ್ಯಂತ ರಿಯಾಲಿಸ್ಟಿಕ್ ಆಗಿರುವುದನ್ನು ಗುರುತಿಸಬಹುದಾಗಿದೆ. ಅದರಂತೆ ವಚನ ವಿಜ್ಞಾನ ಸಂಶೋಧಕ ಎಂದು ಖ್ಯಾತರಾಗಿದ್ದ ದೇವರ ಹಿಪ್ಪರಗಿಯ ಮಣ್ಣೂರ ಗುರಪ್ಪನವರು ವಚನಗಳಿಗೆ ಚಿತ್ರ ಬಿಡಿಸುವಾಗ ಬೆಳಕಿನ ಪ್ರಭಾವ ತೋರಿದ ಸಂಶೋಧಕ ಕಲಾವಿದರು. ಯಾವುದೇ ಒಬ್ಬ ಕಲಾವಿದ ವಚನದ ಒಂದು ಮುಖವನ್ನು ಚಿತ್ರಿಸಬಹುದು. ಆದರೆ ಇನ್ನೊಂದು ಮುಖವನ್ನು ಅದೇ ಚಿತ್ರದಲ್ಲಿ ಬಿಡಿಸಲು ಆಗುವುದಿಲ್ಲ. ಅವರೆಡನ್ನೂ ಬೇರೆ ಬೇರೆಯಾಗಿ ಚಿತ್ರಿಸಬೇಕಾಗುತ್ತದೆ. ಆದರೆ ಇಂತಹ ಕಷ್ಟಸಾಧ್ಯದ ಕೆಲಸವನ್ನು ಕೈಗೆತ್ತಿಕೊಂಡ ಇವರು ಅದರಲ್ಲಿ ಯಶಸ್ಸು ಕಾಣುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ನೀನೊಲಿದರೆ ಕೊರಡು ಕೊನರುವುದಯ್ಯ… ಎಂಬ ಅಣ್ಣನವರ ವಚನಕ್ಕೆ ಒಂದೇ ಫ್ರೇಮ್‌ನಲ್ಲೇ ಹಲವು ಭಾವಗಳನ್ನು ತುಂಬಿದ್ದಾರೆ.

ವಚನ ಸಾಹಿತ್ಯವನ್ನು ಜನಮನಕ್ಕೆ ಮುಟ್ಟಿಸುವುದಕ್ಕಾಗಿ ವಚನಗಳಿಗೆ ಚಿತ್ರರೂಪ ನೀಡಿದ ಶಿವಲಿಂಗಪ್ಪ ಎಂಬ ಕಲಾವಿದರು ಸ್ವತಃ ತಾವೇ ವಚನಗಳಿಗೆ ವ್ಯಾಖ್ಯಾನ ಬರೆದು ಪುಸ್ತಕ ಪ್ರಕಟಿಸಿದ ಮೊದಲಿಗರಾಗಿದ್ದಾರೆ. ಕೊಟ್ಟ ಕುದುರೆಯನು ಏರಲರಿಯದವ ವೀರನೂ ಅಲ್ಲ, ಧೀರನೂ ಅಲ್ಲ ಎಂಬ ಅಲ್ಲಮನ ವಚನಕ್ಕೆ ಇವರು ಚಿತ್ರಿಸಿದ ವಚನ ಚಿತ್ರ ಅತ್ಯಂತ ಅರ್ಥಪೂರ್ಣವಾಗಿದೆ. ವಚನಕಾರರ ಕೆಲವು ವಚನಗಳಿಗೆ ಚಿತ್ರ ಬಿಡಿಸುವುದು ಸಾಧ್ಯವಿಲ್ಲ. ಅವರು ಏರಿದ ಮಟ್ಟಕ್ಕೆ ನಾವು ಏರಲು ಸಾಧ್ಯವಿಲ್ಲ. ಅವರ ನಿಲುವು ನಮಗೆ ಅರ್ಥವಾಗುವುದಿಲ್ಲ. ಇವುಗಳಲ್ಲಿ ಮತ್ತೊಂದು ಬೇರೆಯದ್ದೆ ಆದ ನಿಲವು ಇರಬೇಕು ಎಂದು ಹೇಳುತ್ತಿದ್ದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಡಾ. ಡಿ.ಎ. ಉಪಾಧ್ಯ ಅವರು ಕೆಲವು ವಚನ, ವ್ಯಕ್ತಿಗಳಿಗೆ ಉತ್ತಮ ಚೌಕಟ್ಟು ಒದಗಿಸಿದ್ದಾರೆ.

ವಿಜಯಪುರ ಜಿಲ್ಲೆಯ ಕೊಟ್ಯಾಳ ಗ್ರಾಮದ ಭೀಮಣ್ಣ ರತ್ನಪ್ಪ ಕುಂಬಾರ ಅವರು ತಮ್ಮ ಕಲಾ ಕುಂಚದಲ್ಲಿ ವಚನಕಾರರನ್ನು ಹಲವು ಬಗೆಯಾಗಿ ಚಿತ್ರಿಸಿದ್ದಾರೆ. ಹೈದರಾಬಾದಿನ ಸಿ.ವಿ. ಅಂಬಾಜಿ ಬಿಡಿಸಿದ ಬಸವಣ್ಣನವರ ಚಿತ್ರವನ್ನು ಚಿತ್ರದುರ್ಗದ ಬೃಹನ್ಮಠದವರು ಒಂದು ಬಾರಿ ಕ್ಯಾಲೆಂಡರ್ ಮಾಡಿಸಿದ್ದರು. ಬಸವನ ಬಾಗೇವಾಡಿಯ ಕೆ. ಗಂಗಾಧರ ಅದರಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಬೀದರ್ ಜಿಲ್ಲೆಯ ಬಸವರಾಜ ಮುಗಳಿ, ಚಂದ್ರಶೇಖರ ಸೋಮಶೆಟ್ಟಿ, ಎಸ್.ಎಸ್. ಸಿಂಪಿ, ಕಲಬುರಗಿಯ ನಾಡೋಜ ಡಾ. ಜೆ.ಎಸ್. ಖಂಡೇರಾವ, ಪ್ರೊ. ವಿ.ಜಿ. ಅಂದಾನಿ, ಚೈತನ್ಯಮಯಿ ಆರ್ಟ್ ಗ್ಯಾಲರಿಯ ಡಾ. ಎ.ಎಸ್. ಪಾಟೀಲ, ಮಾನ್ವಿಯ ಶಂಕರಗೌಡ ಬೆಟ್ಟದೂರ, ಗಜೇಂದ್ರಗಡದ ರೇಖಾಚಿತ್ರಗಳ ರಾಜ ಪುಂಡಲೀಕ ಕಲ್ಲಿಗನೂರ, ಕಪ್ಪಳದ ಬಸವರಾಜ ಗವಿಮಠ, ದೋರನಹಳ್ಳಿಯ ಸಂಗಣ್ಣ ಮಲಗೊಂಡ, ವಿ.ಬಿ. ಬಿರಾದಾರ. ವಿಜಯಕುಮಾರ ಕೊಪ್ಪಳದ, ಡಾ. ಎಸ್.ಎಂ. ನೀಲ ಸೇರಿದಂತೆ ಇನ್ನೂ ಅನೇಕ ಕಲಾವಿದರು ವಚನಕಾರರು ಹಾಗೂ ಅವರ ಸಾಹಿತ್ಯವನ್ನು ತಮ್ಮ ಚಿತ್ರದಲ್ಲಿ ಸೆರೆ ಹಿಡಿದಿದ್ದಾರೆ. ಎಲ್. ಶಿವಲಿಂಗಪ್ಪನವರು ಶಿಲ್ಪಕಲೆಯಲ್ಲಿ ಶರಣರನ್ನು ಚಿತ್ರಿಸಿದ್ದಾರೆ. ಬೀದರ್‌ನ ವೀರಶೆಟ್ಟಿ ಪಾಟೀಲ ಎಂಬುವವರು ಕಲಾವಿದರು ರಚಿಸಿದ ಶರಣರ ಬಹುತೇಕ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕಲಾವಿದರ ಕುಂಚದಲ್ಲಿ ಅರಳಿದ ಪರಿಣಾಮದಿಂದಾಗಿಯೇ ಶರಣರ ವ್ಯಕ್ತಿ-ವ್ಯಕ್ತಿತ್ವ ಹಾಗೂ ಅವರ ಸಾಹಿತ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಲು ನಮಗೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಬಸವಪರ ಸಂಘಟನೆಗಳು ಕಲಾವಿದರಿಗೆ ಇನ್ನೂ ಹೆಚ್ಚಿನ ಸಹಾಯ, ಸಹಕಾರ, ಪ್ರೋತ್ಸಾಹ ಒದಗಿಸಬೇಕಾಗಿದೆ.

emedialine

View Comments

  • ಬದುಕು ಭಾವನೆಗಳು ಕವಿ ಚಿತ್ರಕಲಾವಿದರು ಚಿತ್ರಕ್ಕೆಜೀವ ತುಂಬಿ ಹೃದಯಭಾಷೆ ಬರದಿರುವದು ಸ್ವಾಗತ

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago