ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೂನ್ ೨೨ರಂದು ಹೇರೂರ್(ಬಿ)ಯಲ್ಲಿ ಗ್ರಾಮ ವಾಸ್ತವ್ಯವನ್ನು ರಾಜಕೀಯಕ್ಕೆ ಸೀಮಿತಗೊಳಿಸದೇ ಕ್ಷೇತ್ರದ ವ್ಯಾಪ್ತಿಯಲ್ಲಿನ ೧೩ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ಇಲ್ಲಿ ಒತ್ತಾಯಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇರೂರ್(ಬಿ) ಕುಗ್ರಾಮವಾಗಿದ್ದು, ಆ ಗ್ರಾಮಕ್ಕೆ ಕುಡಿಯುವ ನೀರು, ಆಸ್ಪತ್ರೆ, ಶೌಚಾಲಯ, ಸಮರ್ಪಕ ವಿದ್ಯುತ್, ಪೋಲಿಸ್ ಠಾಣೆ, ಕಾಲೇಜು ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಫರತಾಬಾದ್‌ನಲ್ಲಿ ಸರ್ಕಾರಿ ಪದವಿ ಕಾಲೇಜು ಇದ್ದು, ವಿಚಿತ್ರವೆಂದರೆ ಪದವಿ ಪೂರ್ವ ಕಾಲೇಜು ಇಲ್ಲ. ಕಾಲೇಜು ಮಂಜೂರಾಗಿ ಕಟ್ಟಡಕ್ಕಾಗಿ ಹಣ ಬಿಡುಗಡೆಯಾದರೂ ಸಹ ಕಾಲೇಜು ಆರಂಭಿಸಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಫರತಾಬಾದ್ ಇಲ್ಲವೇ ಕೌಲಗಾ(ಬಿ) ಕ್ರಾಸ್‌ನಲ್ಲಿ ಸರ್ಕಾರಿ ಕಿರಿಯ ಮಹಾವಿದ್ಯಾಲಯ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. ಆದ್ದರಿಂದ ಹೇರೂರ್(ಬಿ)- ಹರವಾಳ್ ಗ್ರಾಮದ ಭೀಮಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವಂತೆ, ಫರತಾಬಾಧ್‌ನಿಂದ ಹೇರೂರ್‌ವರೆಗೆ ಹಾಗೂ ಫರತಾಬಾದ್‌ದಿಂದ ಚಿನಮಳ್ಳಿಯವರೆಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ, ಹೇರೂರ್ ಗ್ರಾಮಕ್ಕೆ ದಿನಾಲೂ ಮೂರು ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ, ಗ್ರಾಮದಲ್ಲಿ ಪಶು ಆಸ್ಪತ್ರೆ ಸ್ಥಾಪಿಸುವಂತೆ, ಕೌಲಗಾ ಕ್ರಾಸ್ ಹತ್ತಿರ ವೃತ್ತಿ ನಿರತ ಸರ್ಕಾರಿ ಕೌಶಲ್ಯ ತರಬೇತಿ (ಐಟಿಐ) ಕೇಂದ್ರ ಸ್ಥಾಪಿಸುವಂತೆ ಅವರು ಆಗ್ರಹಿಸಿದರು.
ಫರತಾಬಾದ್ ವಲಯದ ಭೀಮಾ ನದಿಯಿಂದ ಅಕ್ರಮ ಮರುಳುಗಾರಿಕೆಯನ್ನು ತಡಯಬೇಕು. ಮಹಾರಾಷ್ಟ್ರ ಮೂಲದವರೆಗೆ ಗುತ್ತಿಗೆ ಕೊಟ್ಟು ಲೂಟಿ ಮಾಡಲಾಗುತ್ತಿದೆ. ಅಕ್ರಮದಲ್ಲಿ ಶಾಸಕರೂ ಸಹ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು, ಜನಸಾಮಾನ್ಯರಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಆಗಲು ಮರಳು ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ್ ನಾಕೇದಾರ್, ಸಂತೋಷ್ ಕೋಲಿ (ತಳವಾರ್), ವಿಶ್ವನಾಥ್ ರೇವೂರ್, ವಿಜಯಕುಮಾರ್ ದೇಸಾಯಿ, ಪ್ರೇಮಕುಮಾರ್ ರಾಠೋಡ್, ಬಸವರಾಜ್ ಸಪ್ಪಣ್ಣಗೋಳ್, ಸಿದ್ಧರಾಮ್ ಸಾಲಿಮನಿ ಮುಂತಾದವರು ಉಪಸ್ಥಿತರಿದ್ದರು.