‘ಬಿ.ಎಂ.ರಶೀದ್’ ಎಂಬ ‘ಭೋದಿಲೇರನ ಭಕ್ತ’ನೂ..! ಮತ್ತು ಧಗಧಗಿಸಿ ಉರಿದು ಬೂದಿಯಾದ ಲೇಖಕನೂ.!!

0
94

ಏಕೋ ಏನೋ ಇಂದು ‘ಭೋದಿಲೇರ’ನ ಭಕ್ತ’ ಬಿ.ಎಂ.ರಶೀದ್ ಎಂಬ ಲೇಖಕ, ಬರಹಗಾರ, ಪತ್ರಕರ್ತ ಇನ್ನೂ ಏನೇನೋ ಪ್ರತಿಭೆಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದ್ದ ಬಿ.ಎಂ.ರಶೀದ್ ಎಂಬ ಗೆಳೆಯ, ಅವರು ಬಹಳ ನೆನಪಾಗಿ ನನ್ನನ್ನು ಕಾಡಿದರು. ಅವರ ಬಗೆಗೆ ಒಂದಿಷ್ಟು ಏನೇನೋ ಬರೆಯಬೇಕೆಂದು ಕೂತೆನು. ಬಿ.ಎಂ.ರಶೀದ್ ಅವರ ಬಗ್ಗೆ ಬರೆಯಲು ತಡಕಾಡತೊಡಗಿದೆ.

ಆಗ ನನೆಗೆ ಒಮ್ಮೆಲೇ ಡಾ.ರಹಮತ್ ತರೀಕೇರೆ ಅವರು ಬಿ.ಎಂ.ರಶೀದ್ ಬಗ್ಗೆ ಈ ಹಿಂದೆ ‘ಲಂಕೇಶ್’ ಪತ್ರಿಕೆಯಲ್ಲಿ ಬರೆದ ಈ ಲೇಖನ ನೆನಪಾಯಿತು. ಆಗ ಡಾ.ರಹಮತ್ ತರಿಕೇರೆ ಅವರೇ ಬಿ.ಎಂ.ರಶೀದ್ ಬಗ್ಗೆ ಬರೆಯಲು ಸೂಕ್ತ ಎಂದುಕೊಂಡು ಡಾ.ರಹಮತ್ ತರಿಕೇರೆ ಅವರ ಬರಹವನ್ನೇ ಯಥಾವತ್ತಾಗಿ ಹೀಗೆ ಉರುಹೊಡೆದೆನು.

Contact Your\'s Advertisement; 9902492681

ಬಿ.ಎಂ.ರಶೀದ್ ಈ ಹಿಂದೆ ‘ಲಂಕೇಶ್’ ಪತ್ರಿಕೆಗೆ ದಕ್ಷಿಣ ಕನ್ನಡದ ವರದಿಗಾರರಾಗಿದ್ದರು. ಆಗ ಲಂಕೇಶ್ ಪತ್ರಿಕೆಯಲ್ಲಿ ದಕ್ಷಿಣ ಕನ್ನಡದ ಅಷ್ಟೂ ಭ್ರಷ್ಟಾಚಾರ ಮತ್ತು ಅಷ್ಟೂ ಈ ‘ಮನು’ವಾದವನ್ನು, ಅಲ್ಲದೇ ಹಿಂದೂ-ಮುಸ್ಲೀಮ್ ತಾರತಮ್ಯವನ್ನು, ಕೋಮು ಹಿಂಸಾಚಾರವನ್ನು ‘ಲಂಕೇಶ್’ ಪತ್ರಿಕೆಯಲ್ಲಿ ಬರೆತೊಡಗಿದ್ದರು. ಇವನ ಈ ಬರಹಗಾರಿಕೆಗೆ ‘ಲಂಕೇಶ್’ ಮೇಷ್ಟ್ರು ಬಹಳ ಖುಷಿಗೊಂಡಿದ್ದರು.

ಅಲ್ಲದೇ ಮುಖ್ಯವಾಗಿ ಒಂದು ವಿಚಾರವನ್ನು ಹಂಚಿಕೊಳ್ಳಬೇಕು. ಹೀಗೆಯೇ ಬಿ.ಎಂ.ರಶೀದ್ ಬರೆಯುತ್ತಿರುವಾಗ ಇವನ ‘ಮಾನವೀಯ’ ಬರಹಗಾರಿಕೆ ಬಗೆಗೆ ದಕ್ಷಿಣ ಕನ್ನಡದ ‘ಮನುವಾದಿ’ಗಳಿಗೆ ನಡುಕ ಶುರುವಾಗಿತ್ತು. ಆಗ ಈ ‘ಮನುವಾದಿ’ಗಳು ಮತ್ತು ಕೋಮು ಹಿಂಸಾಚಾರಿಗಳಿಗೆ ಒಂದು ರೀತಿಯ ಕಸವಿಸಿ ಇತ್ತು.

ಹೇಗಾದರೂ ಮಾಡಿ ಈ ಬಿ.ಎಂ.ರಶೀದ್ ನನ್ನು ಮಟ್ಟಹಾಕಲು ನೋಡುತ್ತಿದ್ದರು ಈ ಕೋಮು ಹಿಂಸಾಚಾರಗಳು.

ಅದೇ ಸಂದರ್ಭದಲ್ಲಿ ಬಿ.ಎಂ.ರಶೀದ್ ನ ಸಹೋದರಿಯ ಮದುವೆ ಹತ್ತಿರವಿತ್ತು. ಆ ಸಂದರ್ಭದಲ್ಲಿ ಈ ಬಿ.ಎಂ.ರಶೀದ್ ಬಗೆಗೆ ಕೆಟ್ಟದಾಗಿ ಸುಳ್ಳು ವರದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪತ್ರಿಕೆವೊಂದರಲ್ಲಿ ಬರೆಸಿದರು ಈ ಕೋಮು ಹಿಂಸಾಚಾರಿಗಳು. ಆ ಪತ್ರಿಕೆಯೂ ಕೋಮು ಹಿಂಸಾಚಾರವನ್ನೇ ಉಂಡುಟ್ಟ ಪತ್ರಿಕೆಯಾಗಿತ್ತು.

ಇದು ಅಲ್ಲದೇ ಈ ಬಿ.ಎಂ.ರಶೀದ್ ಬಗೆಗೆ ಕರಪತ್ರವೊಂದನ್ನು ಕೆಟ್ಟದಾಗಿ ಮುದ್ರಿಸಿ ಹಂಚಿದರು ಈ ಕೋಮು ಹಿಂಸಾಚಾರಿಗಳು. ಇದರಿಂದ ‘ಮನನೊಂದ’ ಈ ಬಿ.ಎಂ.ರಶೀದ್ ಅದೇನು ವಿಚಾರಿಸಿದನೋ ಏನೋ ಅದೇ ದಕ್ಷಿಣ ಕನ್ನಡದ ವಸತಿಗೃಹವೊಂದರಲ್ಲಿ ನೇಣು ಹಾಕಿಕೊಂಡು ‘ಪ್ರಾಣಹಾನಿ’ ಮಾಡಿಕೊಂಡನು. ಅಂತೂ ಈ ‘ಮನು’ವಿನ ಮಕ್ಕಳಿಗೆ ಖುಷಿಯಂತೂ ಆಯಿತು. ಈ ಕೋಮು ಹಿಂಸಾಚಾರಿಗಳಿಗೆ ಎಲ್ಲಿಲ್ಲದ ಖುಷಿ ಅಂತೂ ಆಯಿತು.

ಹೀಗೆಯೇ ಪ್ರಣಹಾನಿ ಮಾಡಿಕೊಂಡ ಬಿ.ಎಂ.ರಶೀದ್. ವಿನಾಕಾರಣ ಪ್ರಾಣಹಾನಿ ಮಾಡಿಕೊಂಡು ದಕ್ಷಿಣ ಕನ್ನಡದ ಕೋಮು ಹಿಂಸಾಚಾರಿಗಳಿಗೆ ಮತ್ತಷ್ಟು ಕೋಮು ಹಿಂಸಾಚಾರವನ್ನು ಮೆರೆಯಲು ಬಿಟ್ಟನು ಬಿ.ಎಂ.ರಶೀದ್.
ಆದರೆ ಬಿ.ಎಂ.ರಶೀದ್ ಇರದಿದ್ದರೂ ಅವರ ತಮ್ಮನನ್ನು ಬಿಟ್ಟು ಹೋಗಿದ್ದಾನೆ ಈ ಕೋಮು ಹಿಂಚಾಚಾರಿಗಳಿಗೆ ಬರಹದ ಮೂಲಕ ಪಾಠ ಕಲಿಸಲು.

ಈ ಬಿ.ಎಂ.ರಶೀದ್. ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದ ಕಟ್ಟಕೊನೆಯ ಲೇಖನವೆಂದರೆ ಅದು ಕ್ರೈಸ್ತ ಮಿಷನರಿಗಳ ಒಂದು ವೃದ್ಧರ ಬಗೆಗಿನ ಆರೈಕೆಯ ಮತ್ತು ನಿರಾಶ್ರಿತರ ತಾಣದ ಬಗೆಗಿನ ಬರಹವಾಗಿತ್ತು. ಹೀಗೆಯೇ ಬಿ.ಎಂ.ರಶೀದ್ ತೀರುವ ಕೊನೆಯ ಕ್ಷಣದ ವರೆಗೂ ‘ಮಾನವತೆ’ಗೆ ಮಿಡಿಯುವ ಜೀವವಾಗಿತ್ತು ಬಿ.ಎಂ.ರಶೀದ್ ನದು.

ಇನ್ನೂ ಮುಂದೆ ಓದಿ ಡಾ.ರಹಮತ್ ತರಿಕೇರಿ ಅವರ ಬರಹವನ್ನು…ಚಿಕ್ಕವಯಸ್ಸಿನಲ್ಲೆ ಕಣ್ಮರೆಯಾದ ಹೊಸತಲೆಮಾರಿನ ಲೇಖಕರಾದ ವಿಭಾ ತಿರುಕಪಡಿ, ಬಿ.ಎಂ. ರಶೀದ್, ಎನ್.ಕೆ. ಹನುಮಂತಯ್ಯ ಮುಂತಾದವರ ಸಾವು ಸದಾ ಕಾಡುತ್ತದೆ. ಎಲ್ಲರೂ ಅಸಾಧಾರಣ ಪ್ರತಿಭಾವಂತರು. ಜೀವನ ಪ್ರೀತಿಯುಳ್ಳವರು; ಮಾನವೀಯ ಲೋಕದೃಷ್ಟಿಯಿದ್ದವರು. ವಿಭಾ ತನ್ನ ತಾಳ್ಮೆ ಮತ್ತು ಕೆಚ್ಚಿನ ಮೂಲಕ ಲೋಕದೃಷ್ಟಿಯೊಂದನ್ನು ರೂಪಿಸಿಕೊಳ್ಳುತ್ತಿದ್ದ ಲೇಖಕಿ. ರಶೀದ್ ಧಗಧಗಿಸಿ ಉರಿದು ಬೂದಿಯಾದ ಲೇಖಕನಾದರೆ,. ಹನುಮಂತಯ್ಯ ತನ್ನ ಒಡಲಿಗೆ ತಾನೇ ಕಿಚ್ಚಿಟ್ಟುಕೊಂಡು ಒಳಗೇ ಬೇಯುತ್ತ ಸುಟ್ಟುಹೋದವರು.ಕೊನೆಯ ಇಬ್ಬರೂ ಮೃತ್ಯುಚಿಂತನೆಯ ಲೇಖಕರಾಗಿದ್ದವರು; ತಮ್ಮನ್ನು ತಾವೇ ಮೃತ್ಯುವಶವಾಗಿಸಿಕೊಂಡವರು.

ಹೊಸತಲೆಮಾರಿನ ಪ್ರತಿಭಾವಂತರನ್ನು ಗುರುತಿಸುವ, ಮೆಚ್ಚುವ ಮತ್ತು ಟೀಕೆಯ ಮೂಲಕ ರೂಪಿಸುವ ತಾಯ್ತನದ ಗುಣ ಲಂಕೇಶ್ ಅವರಿಗಿತ್ತು. ಅವರಿಂದ ಪ್ರೀತಿ-ವಿಮರ್ಶೆ ಪಡೆದು ಬೆಳೆದ ಲೇಖಕರಲ್ಲಿ ಹಲವು ಸಮುದಾಯಕ್ಕೆ ಸೇರಿದ, ಹಲವು ಪ್ರದೇಶಗಳಿಂದ ಬಂದವರಿದ್ದರು. ವೈದೇಹಿ, ಲಲಿತಾನಾಯಕ, ಬಿ.ಚಂದ್ರೇಗೌಡ, ನಟರಾಜ ಹುಳಿಯಾರ್-ಇವರೆಲ್ಲ ಮೊದಲ ಘಟ್ಟದಲ್ಲಿ ಹೀಗೇ ರೂಪುಗೊಂಡವರು. ಅತಿ ಚಿಕ್ಕವಯಸ್ಸಿನಲ್ಲೇ ಲಂಕೇಶರ ಪ್ರೀತಿಯನ್ನು ಸೆಳೆದುಕೊಂಡು ಬರೆದವರಲ್ಲಿ ರಶೀದ್ ಒಬ್ಬರು. ರಶೀದ್ ಬರೆದ `ಗರ್ಭ’ ಎಂಬ ಪುಟ್ಟಕತೆಯನ್ನು ಲಂಕೇಶ್ ಅದನ್ನು ಎಷ್ಟು ಮೆಚ್ಚಿಕೊಂಡರೆಂದರೆ, ನನಗೂ ಇಂತಹದೊಂದು ಕತೆ ಬರೆಯಲು ಆಗುವುದಿಲ್ಲವಲ್ಲ ಎಂದು ತಮ್ಮ ಅಸೂಯೆ ಹೇಳಿಕೊಳ್ಳುವಷ್ಟು.

ಬಿ.ಎಂ. ರಶೀದ್ ಉಪ್ಪಿನಂಗಡಿ ಸಮೀಪದ ಮಠ ಎಂಬ ಊರಿನವರು; ಅವರು `ಲಂಕೇಶ್ ಪತ್ರಿಕೆ’ಗೆ ಕೆಲವು ಕಾಲ, ವರದಿಗಾರನಾಗಿಯೂ ಕೆಲಸ ಮಾಡಿದರು. ಐದಾರು ವರ್ಷಗಳ ಕಾಲದಲ್ಲಿ ಕೆಲವು ಕತೆ, ಕವನ ಮತ್ತು ಲೇಖನಗಳನ್ನು ಬರೆದರು. ಅವೆಲ್ಲವನ್ನು ಒಟ್ಟುಗೂಡಿಸಿ `ಪರುಷಮಣಿ’ ಎಂಬ ಹೆಸರಲ್ಲಿ ಪುಸ್ತಕ ಪ್ರಕಟವಾಯಿತು. ರಶೀದ್ ಬರೆಹದ ವಿಶಿಷ್ಟತೆಗಳೆಂದರೆ, ಯೌವನ ಸಹಜವಾಗಿದ್ದ ತೀವ್ರತೆ ಮತ್ತು ಭಾವನಾತ್ಮಕತೆ. ಬಹುತೇಕ ಕವನ ಕತೆಗಳ ವಸ್ತು ಗಂಡು ಹೆಣ್ಣುಗಳಿಬ್ಬರ ಸಂಬಂಧ ಕುರಿತಾಗಿದ್ದು, ಈ ತೀವ್ರತೆಯೆನ್ನುವುದು ಒಳವಿದ್ಯುತ್ತಿನಂತೆ ಅಲ್ಲಿ ಪ್ರವಹಿಸುತ್ತದೆ. ಅದಕ್ಕೆ ಕತೆಯೊಂದರ ಸಾಲನ್ನು ಉಲ್ಲೇಖಿಸಬಹುದು: “ಯೇಟ್ಸ್ ಕವಿಯಂತೆ ಈ ಬಡವ ತನ್ನ ಕನಸುಗಳನ್ನೆಲ್ಲ ಅವಳ ಬುಡಕ್ಕೆ ಸುರಿದ. ಅವಳು ಆರಾಮಾಗಿ ಅವನ್ನು ತುಳಿಯುತ್ತ ನಡೆದಳು. ಐರನ್‍ಲೇಡಿ”.

ಗಾಢವಾದ ದುರಂತ ಪ್ರಜ್ಞೆ. ಬರೆಹದಲ್ಲಿ ಸುಡುವ ಆತ್ಮವೊಂದು ಹರಿದುಕೊಂಡು ಬಿದ್ದಂತೆ ಕಾಣುವ, ದುಗುಡ ತುಂಬಿಕೊಂಡು ತೊಳಲಾಡುವ ಮನಸ್ಸು. ಚಿಕ್ಕವಯಸ್ಸಿಗೇ ಯಾಕೀ ಪರಿಯ ಚಡಪಡಿಕೆ ಮತ್ತು ವಿಷಾದಪ್ರಜ್ಞೆ? ವೈಯಕ್ತಿಕ ಬಾಳಿನ ವೇದನೆಗಳೊ ಅಥವಾ ತನ್ನ ಅತಿಸೂಕ್ಷ್ಮ ಸ್ವಭಾವದಿಂದಲೇ ಪ್ರಕ್ಷುಬ್ಧಗೊಳ್ಳುವ ಮನಸ್ಸೊ? ಬಹುಶಃ ಎರಡನೆಯದೇ ದಿಟವಿರಬಹುದು. ಬದುಕಿನ ಬಗೆಗಿನ ತೀವ್ರ ವ್ಯಾಮೋಹಿಗಳಾದ ಕೆಲವರು ಲೋಕ ತನ್ನಿಚ್ಛೆಯಂತೆ ವರ್ತಿಸಬೇಕೆಂದು ಹಟ ಮಾಡುತ್ತಾರೆ. ಜೀವನದ ಬಗ್ಗೆ ಸುಂದರ ಕಲ್ಪನೆಯುಳ್ಳ ಇವರು ಕನಸುಗಾರರು; ಮಹತ್ವಾಕಾಂಕ್ಷಿಗಳು; ಕೊಂಚ ಅವಸರಿಗಳು ಕೂಡ. ಲೋಕ ತಮ್ಮಂತೆ ವರ್ತಿಸುವುದಿಲ್ಲವೆಂಬ ವಾಸ್ತವ ಡಿಕ್ಕಿ ಹೊಡೆದಾಗ ಕಳವಳಿಸಲಾರಂಭಿಸುತ್ತಾರೆ. ಅಸಹಾಯಕತೆ ಆಕ್ರೋಶಗಳು ಅವರನ್ನು ಆವರಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ, ರಶೀದ್ ಬರೆಹದಲ್ಲಿ ಲೋಕದ ಜತೆ ತೊಡಿಕೊಳ್ಳುವಷ್ಟೇ ತೀವ್ರವಾಗಿ, ಸಂಬಂಧ ಮುರಿದುಕೊಳ್ಳಲು ಎಳಸುವ ಮನಸ್ಸೊಂದು ಕೆಲಸ ಮಾಡಿರುವುದನ್ನು ನೋಡಬಹುದು. ಅವರ ಕತೆ ಕವಿತೆಗಳಲ್ಲಿ `ಈ ಬದುಕನ್ನು ಫುಟ್‍ಬಾಲಿನಂತೆ ಒದೀಬೇಕು’ ಎಂದು ಆಕ್ರೋಶಿಸುವ ನಾಯಕರು ಮತ್ತೆಮತ್ತೆ ಕಾಣಿಸುತ್ತಾರೆ. ಅವರ ಒಂದು ಕವನದ ನಾಯಕನೊಬ್ಬನು ತನ್ನ ಪ್ರೇಯಸಿಗೆ `ಸಾವು ಮಾತ್ರ ಬದುಕಿಗೆ ರುಜುವಾತು’ ಎಂದು ಹಿತವಚಿಸುತ್ತಾನೆ; ಮತ್ತೊಬ್ಬನಿಗೆ ಈ ಜಗತ್ತು `ವಧಿಸಲ್ಪಡುವ ಕೈದಿಯ ಕೊನೆಯ ಊಟದಂತೆ’ ಕಾಣುತ್ತದೆ; ಮಗದೊಬ್ಬನಿಗೆ ಎದುರಿನ ಕಡಲು `ಜೀಕುವ ತಳಮುರಿದ ಹಡಗುಗಳೆಲ್ಲವ ನುಂಗಿ ನೊಣೆ’ಯುವ ನೀರಿನಂತೆ ಕಾಣುತ್ತದೆ; `ವಿಷಾದಪರ್ವ’ ಕವಿತೆಯಲ್ಲಿ ಈ ಸಾಲಿದೆ: “ನೀನೊಬ್ಬಳಿದ್ದೀಯೆಂದು ನಮಗೆ ನೆನಪಾಗುವುದು ನೀನಿಲ್ಲದಾಗ. ಕರುಣಾಳು ಸಾವಿಗೆ ನಮಿಸು”. ಸಾವು `ಕರುಣಾಳು’ ಆಗಿ ಕಾಣುವುದೇ ಒಂದು ವಿಚಿತ್ರ ಮನಸ್ಥಿತಿ.

ಇಂತಹ ವಿಕ್ಷಿಪ್ತವೆನಿಸುವ ಕಾರಣದಿಂದಲೊ ಏನೊ, ರಶೀದ್ ಬರೆಹದಲ್ಲಿ ಒಂದು ಬಗೆಯ ದಾರ್ಶನಿಕ ಆಳವಿದೆ; ಅವರ ಬರೆಹದಲ್ಲಿ ಶೃತಿಯಂತೆ ಮೃತ್ಯುಪ್ರಜ್ಞೆಯು ಅಂತರ್ಗತವಾಗಿ ಮಿಡಿಯುತ್ತದೆ. ಹನುಮಂತಯ್ಯನವರ ಕಾವ್ಯದಲ್ಲೂ ಇದಿತ್ತು. ಸುಡುನೆತ್ತರು ಪ್ರವಹಿಸುವ ತರುಣರ ಬರೆಹದಲ್ಲಿ ಕುದಿತ, ತೀಕ್ಷ್ಣತೆ ಬಂಡುಕೋರತನ ಇರುವುದು ಸೋಜಿಗವಲ್ಲ. ಆದರೆ ಮರಣ ಪ್ರಜ್ಞೆ? ನಮಗೆ ಹೀಗೆ ಹಿಡಿದು ಕಾಡಿಸುವ ಮೃತ್ಯುಪ್ರಜ್ಞೆ ಎದುರಾಗುವುದು ಗಂಗಾಧರ ಚಿತ್ತಾಲರ ಕವಿತೆಗಳಲ್ಲಿ. ಖಚಿತಗೊಂಡಿದ್ದ ಮೃತ್ಯುವನ್ನು ಮುಖಾಮುಖಿ ಮಾಡುತ್ತ ಚಿತ್ತಾಲರು ಕರುಳು ಹಿಂಡುವ ಆರ್ತಕಾವ್ಯ ಬರೆದರು. ಆದರೆ ಇನ್ನೂ ಜೀವನಕ್ಕೆ ತೆರೆದುಕೊಳ್ಳುತ್ತಿದ್ದ ಈ ತರುಣರ ಬರೆಹದಲ್ಲಿ ಗೀಳಿನಂತೆ ಆವರಿಸಿಕೊಂಡಿದ್ದ ಮೃತ್ಯುಚಿಂತನೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಗಾಯಕ ಮುಖೇಶ್ ಬಗ್ಗೆ ರಶೀದ್ ಬರೆದಿರುವ ಅಪೂರ್ವವಾದ ಲೇಖನವಿದೆ. ಹಳೇ ಹಿಂದಿಹಾಡುಗಳ ವ್ಯಸನಿಯಾದ ನನಗದು ಬಹಳ ಹಿಡಿಸಿತ್ತು. ಆ ಲೇಖನದ ತುಂಬ ಸಾವಿನ ಧ್ಯಾನವಿದೆ; ಸತ್ತ ಗಾಯಕನೊಂದಿಗೆ ಸಂವಾದಗೆಯ್ಯುವ ಧಾಟಿಯಲ್ಲಿರುವ ಇದರಲ್ಲಿ ಮುಖೇಶನ “ತೇರಿ ದುನಿಯಾಮೆ ದಿಲ್ ಲಗತಾನಹೀ, ವಾಪಸ್ ಬುಲಾಲೆ” ಮುಂತಾದ ವಿಷಾದ ಗೀತೆಗಳ ತೀವ್ರವಾದ ಚರ್ಚೆಯಿದೆ. ಹರಿಹರನ ರಗಳೆಗಳ ಶಾಪಗ್ರಸ್ತರಾಗಿ ಭೂಲೋಕಕ್ಕೆ ಬರುವ ಶಿವಗಣಗಳು ಕೈಲಾಸಕ್ಕೆ ಹೊರಳಿ ಹೋಗಲು ಶಿವನನ್ನು ಬೇಡುವ ಆರ್ತತೆಯನ್ನು ಇವು ನೆನಪಿಸುತ್ತವೆ.
ಒಂದು ಕೆಟ್ಟದಿನ, ರಶೀದ್ ಸ್ವಹತ್ಯೆ ಮಾಡಿಕೊಂಡರು. ತಮ್ಮನ್ನು ಯಾರೊ ಹಿಂಬಾಲಿಸುತ್ತಿದ್ದಾರೆ ಎಂಬ ಪರ್ಸಿಕ್ಯೂಟಿವ್ ಸಿಂಡ್ರೋಮಿನಿಂದ ನರಳುತ್ತಿದ್ದ ನಾಟಕಕಾರ ಸಂಸರು ಸಹ ಸ್ವಹತ್ಯೆ ಮಾಡಿಕೊಂಡವರೇ. ಹನುಮಂತಯ್ಯನವರು ಇದೇ ದಾರಿ ಹಿಡಿದುಬಿಟ್ಟರು. ಇಂತಹವರನ್ನು `ಜೀವನ ಎದುರಿಸಲಾರದೆ ಹೋದ ಪಲಾಯನವಾದಿ’ ಎಂದು ಕರೆವುದು ಸುಲಭ; ಆದರೆ ಹೈಪರ್ ಸೆನ್ಸಿಟಿವಿಟಿ ಹಾಗೂ ಅರಾಜಕೀಯ ಎನ್ನಬಹುದಾದ ಅತಾರ್ಕಿಕತೆಯುಳ್ಳ ಇಂತಹವರ ಬರೆಹದ ಸಂಕೀರ್ಣತೆ ಮತ್ತು ಲೋಕಗ್ರಹಿಕೆ ಅರ್ಥಮಾಡಿಕೊಳ್ಳುವುದು ದೊಡ್ಡ ಸವಾಲು. `ಜಗತ್ತು ತನ್ನನ್ನು ಹುಚ್ಚನೆನ್ನುತ್ತಿದೆ. ನಿಜವೇನೆಂದರೆ ಈ ಜಗತ್ತಿಗೇ ಹುಚ್ಚು ಹಿಡಿದಿದೆ’ ಎಂದು ಮುಖೇಶನ ಹಾಡಿನ ಸಾಲನ್ನು ರಶೀದ್ ಸಮರ್ಥಿಸುವುದು ಗಮನಾರ್ಹ. ಇದಕ್ಕೆ ತಕ್ಕಂತೆ ರಶೀದ್ ಮೇಲೆ ಪ್ರಭಾವಬೀರಿದ ಬಹುತೇಕ ಲೇಖಕರು- ಲಂಕೇಶ್, ಸಾದತ್‍ಹಸನ್ ಮಂಟೊ, ಅಮೃತಾಪ್ರೀತಂ, ಬೋದಿಲೇರ್-ವಿಕ್ಷಿಪ್ತರೇ. ದೇಶವಿಭಜನೆಯ ಚಾರಿತ್ರಿಕ ದುರಂತಗಳ ನಡುವೆ ಬದುಕಿದ ಮಂಟೂ ಮತ್ತು ಅಮೃತಾ, ತಮ್ಮ ಅಸಹಾಯಕ ನೋಟಗಳ ಅಭಿವ್ಯಕ್ತಿಗಾಗಿಯೇ ತೀಕ್ಷ್ಣವ್ಯಂಗ್ಯದ ಭಾಷೆಯನ್ನೂ ವಿಹ್ವಲತೆಯ ನೋಟವನ್ನೂ ಕಂಡುಕೊಂಡಿದ್ದವರು. ಆದರೂ ಅವರು ಈ ಲೋಕದ ಜತೆ ಏಗುತ್ತ ಬದುಕಿದರು ಮತ್ತು ಬರೆದರು. ಆದರೆ ವಿಕ್ಷಿಪ್ತತೆಯನ್ನು ಹೆಚ್ಚಾಗಿಯೆ ಆವಾಹಿಸಿಕೊಂಡಂತಿದ್ದ ರಶೀದ್ ಮಾತ್ರ ಬಹಳ ಕಾಲ ಏಗಲಿಲ್ಲ.

ರಶೀದ್ ಕತೆ ಮತ್ತು ಕವಿತೆಗಳು ಬಾಳಿನ ಬಗ್ಗೆ ತನಗಿದ್ದ ಅಪೇಕ್ಷೆ ಆಕ್ಷೇಪಗಳೆಲ್ಲವನ್ನೂ ಲೇಖಕನೊಬ್ಬನು ತೋಡಿಕೊಳ್ಳುವ ಖಾಸಾ ಅಭಿವ್ಯಕ್ತಿ ಮಾಧ್ಯಮದಂತಿವೆ. ಅಲ್ಲಿ ಅತೃಪ್ತ ಜೀವಗಳ ತೊಳಲಾಟವಿದೆ; ಆದರೆ ಅವರ ಪತ್ರಿಕಾ ಲೇಖನಗಳಲ್ಲಿ ತಾರ್ಕಿಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಗುಣವಿದೆ. ವ್ಯವಸ್ಥೆಯನ್ನು ಒಪ್ಪದ ಬಂಡುಕೋರತನವಿದೆ; ಸಾಮಾಜಿಕ ವಿಷಮತೆ ಮತ್ತು ವೈರುಧ್ಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಜರೂರಿಯಿದೆ; ಇದಕ್ಕೆ ಸಾಕ್ಷಿ- ಉಪೇಂದ್ರರ ಸಿನಿಮಾ, ಬೀದಿಗೆ ಬಿದ್ದ ಜನರನ್ನು ಎತ್ತಿತಂದು ಸಾಕುವ ಕ್ರೈಸ್ತದಂಪತಿಗಳ ಆಶ್ರಮ ಹಾಗೂ ನೆರಿಯಾ ಎಂಬ ಕಾಡುಪ್ರದೇಶದ ಬಡವರನ್ನು ಕುರಿತ ಲೇಖನಗಳು.

ಕರಾವಳಿಯ ಬ್ಯಾರಿ ಮುಸ್ಲಿಂ ಹಿನ್ನೆಲೆಯಿಂದ ಹಲವಾರು ಲೇಖಕರು ಬಂದರು. ಅವರಲ್ಲಿ ಬಿ.ಎಂ.ರಶೀದ್ ತನ್ನ ರಕ್ತ ಮಜ್ಜೆಗಳನ್ನೇ ಕರಗಿಸಿ ಶಾಯಿಮಾಡಿಕೊಂಡಂತೆ ಬರೆಯುತ್ತಿದ್ದ ಲೇಖಕ. ರಶೀದ್ ಬರೆಹದ ವಿಶಿಷ್ಟತೆಯೆಂದರೆ ಉದ್ದುದ್ದ ವಾಕ್ಯಗಳು. ಉದ್ದವಾದರೂ ಲಯಗೆಡದ; ಜಿಜ್ಞಾಸೆ ತುಂಬಿಕೊಂಡಿದ್ದರೂ ಕ್ಲಿಷ್ಟಗೊಳ್ಳದ ವಾಕ್ಯಗಳು ಅವು. `ಪರುಷಮಣಿ’ ಕೃತಿಯನ್ನು ಅದರಲ್ಲಿರುವ ಝಳಕ್ಕಾಗಿಯಲ್ಲದೆ, ರಶೀದ್ ಬರೆಹದ ಪಾರದರ್ಶಕವೂ ಜೀವಂತವೂ ಆದ ಭಾಷೆಗಾಗಿಯೂ ಓದಬಹುದು. ಪಾತ್ರಗಳ ಮನಸ್ಸಿನೊಳಗೆ ಹೊಕ್ಕು ಅದರೊಳಗಿನ ಹೊಯ್ದಾಟಗಳನ್ನು ಮೂರ್ತವಾದ ಚಿತ್ರಗಳ ಮೂಲಕ ಹಿಡಿಯುವುದರಿಂದ ಭಾಷೆಗೆ ಈ ಮೂರ್ತತೆ ಬಂದಿತು ಅನಿಸುತ್ತದೆ. ಮುಟ್ಟಿದ ಲೋಹವನ್ನು ಚಿನ್ನವನ್ನಾಗಿಸುವ ಪರುಷಮಣಿ, ವಸ್ತುವನ್ನು ರೂಪಾಂತರಿಸುವ ಮಾಂತ್ರಿಕ ಗುಣವುಳ್ಳದ್ದು. ಪ್ರತಿಭಾಶಾಲಿ ಲೇಖಕನ ಸ್ಪರ್ಶಕ್ಕೆ ಸಿಕ್ಕ ಭಾಷೆಯೂ ಹೀಗೆ ಮರುಹುಟ್ಟು ಪಡೆಯುತ್ತದೆ. ಮರುಹುಟ್ಟು ಕೊಡುವ ಮಣಿ ತಾನು ಮಣ್ಣಾಗುವುದು ಮಾತ್ರ ದುರಂತ.

ತರುಣ ಲೇಖಕರ ತಲ್ಲಣ ಆದರ್ಶ ಜಾಣ್ಮೆ ಉದ್ವೇಗಗಳನ್ನು ಅರ್ಥಮಾಡಿಕೊಂಡು, ಅವರನ್ನು ಬಾಳಗೊಡದಂತೆ ನಮ್ಮ ಸಮಾಜ ತನ್ನ ಸ್ಪೇಸನ್ನೇ ಕಿರಿದುಗೊಳಿಸಿಕೊಂಡಿದೆಯೊ ಅಥವಾ ತಮ್ಮ ಅತಿಸೂಕ್ಷ್ಮತೆ ವಿಕ್ಷಿಪ್ತತೆಗಳಿಂದ ತತ್ತರಿಸುವ ಇಂತಹ ತರುಣರು ದುಡುಕಿನಿಂದ ಜೀವಕಳೆದುಕೊಂಡರೊ? ಇಂತಹದೊಂದು ಕಂಗೆಡುವ ಪ್ರಶ್ನೆಯನ್ನು ರಶೀದ್ ಹಾಗೂ ಹನುಮಂತಯ್ಯ ಅವರ ಬರೆಹ ಮತ್ತು ಬಾಳು ನಮ್ಮ ಮುಂದಿಟ್ಟು ನಿರುಮ್ಮಳವಾಗಿ ನಿರ್ಗಮಿಸಿವೆ.

# ಡಾ.ರಹಮತ್ ತರಿಕೇರೆ

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here