ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಯುವಕರಲ್ಲಿ ಸದೃಢತೆ ಹಾಗೂ ಕ್ರೀಡಾ ಚಟುವಟಿಕೆ ಹೆಚ್ಚಿಸುವ ನಿಟ್ಟಿನಲ್ಲಿ 50 ಎಕರೆ ವಿಸ್ತೀರ್ಣದ ಜಾಗದಲ್ಲಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಸ್ಥಾಪಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರು ಹೇಳಿದರು.
ಮಂಗಳವಾರ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಟಾಟಾ ಟೆಕ್ನೋಲಾಜಿಯವರ ಟೆಕ್ ಲ್ಯಾಬ್ ಕಟ್ಟಡದ ಅಡಿಗಲ್ಲು ಹಾಗೂ ಬಟ್ಟೆ ತಯಾರಕ ವೃತ್ತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಕೈಗಾರಿಕಾ ವಿಶ್ವವಿದ್ಯಾಲಯ ಪ್ರಾರಂಭಿಸಿ ಈ ಭಾಗದ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಿ, ವಲಸೆ ಹೋಗದಂತೆ ತಡೆಯಲು ಚಿಂತನೆ ನಡೆದಿದೆ. ಟಾಟಾ ಟೆಕ್ನಾಲಜಿಯವರು ಈ ಪ್ರದೇಶದ ಕೌಶಲ್ಯ ಅಭಿವೃದ್ಧಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಪ್ರಶಂಸನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ಸ್‍ಟಿಟ್ಯೂಟ್ ಮ್ಯಾನೇಜಮೆಂಟ್ ಕಮಿಟಿ ಸದಸ್ಯ ಅರುಣಕುಮಾರ ಲೋಯಾ ಅವರು ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ರುಬೀನಾ ಪರ್ವೀನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರುಗಳಾದ ನಾಗುಬಾಯಿ ಸೂರ್ಯವಂಶಿ, ಕಲ್ಪನಾ ಜಿ, ಶರಣಗೌಡ ಪಾಟೀಲ್, ಗಣಪತಿ, ರಾಚಪ್ಪ ಹಾಗೂ ಅರುಣಕುಮಾರ ಉಪಸ್ಥಿತರಿದ್ದರು. ಮುರಳೀಧರ ರತ್ನಾಗಿರಿ ಸ್ವಾಗತಿಸಿದರು, ಭೋಜರಾಜ ವಂದಿಸಿದರು, ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.