ವದೆಹಲಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ನ ಯುದ್ಧೋತ್ಸಾಹಕ್ಕೆ ಕಡಿವಾಣ ಹಾಕಲು ತಕ್ಷಣ ಮಧ್ಯಪ್ರವೇಶಿಸಿ ಯುದ್ಧದ ಪರಿಸ್ಥಿತಿಯನ್ನು ಶಮನಗೊಳಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಎಸ್‌ಡಿಪಿಐ, ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯವರಿಗೆ ಹಾಗೂ ಇಸ್ಲಾಮಿಕ್ ಸಹಕಾರ ಸಂಘಟನೆ-ಒಐಸಿಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇಸ್ರೇಲ್ ಪೊಲೀಸರ ಸಹಾಯದಿಂದ ಅಕ್ರಮ ವಸಾಹತುಗಾರರು ಜೆರುಸಲೆಮ್ ನ ಶೇಖ್ ಜರ್ರಾದಲ್ಲಿರುವ ಫೆಲೆಸ್ತೀನ್ ನಿವಾಸಿಗಳನ್ನು ಹೊರಹಾಕಲು ಪ್ರಯತ್ನಿಸಿದ ಪರಿಣಾಮ ಈ ಪ್ರದೇಶದಲ್ಲಿ ಪ್ರಸ್ತುತ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಫೆಲೆಸ್ತೀನ್ ಜನರನ್ನು ಅವರ ನಿವಾಸಗಳಿಂದ ಹೊರದಬ್ಬುವ ಕೃತ್ಯವು “ಯುದ್ಧಾಪರಾಧ” ಎಂದು ಸ್ವತಃ ವಿಶ್ವಸಂಸ್ಥೆ ಕೂಡ ಎಚ್ಚರಿಸಿದೆ. ದೌರ್ಜನ್ಯದ ಮುಂದುವರಿದ ಭಾಗವಾಗಿ, ಇಸ್ರೇಲ್ ಪೊಲೀಸರು ಪವಿತ್ರ ರಮಝಾನ್ ತಿಂಗಳ ಕೊನೆಯ ಶುಕ್ರವಾರದಂದು ಅಕ್ಸಾ ಮಸೀದಿಯಲ್ಲಿ ನೆರೆದಿದ್ದ ಫೆಲೆಸ್ತೀನಿಯನ್ನರ ಮೇಲೆ ರಬ್ಬರ್ ಗುಂಡಿನ ದಾಳಿ ನಡೆಸಿದ್ದಾರೆ.
ಈ ಹಿಂಸಾಚಾರಕ್ಕೆ ಹಮಾಸ್ ಕೂಡ ಪ್ರತೀಕಾರ ತೀರಿಸಿಕೊಂಡಿದೆ. ಈ ವೇಳೆ ಇಸ್ರೇಲ್ ಗಾಝಾ ಮೇಲೆ ಬಾಂಬ್ ಗಳ ಸುರಿಮಳೆಗೈಯ್ಯಲು ಪ್ರಾರಂಭಿಸಿದೆ. ಪರಿಣಾಮ ನೂರಾರು ಫೆಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ನ ಹತ್ಯಾಕಾಂಡವನ್ನು ಕೊನೆಗೊಳಿಸಲು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಎಸ್‌ಡಿಪಿಐ ಮನವಿ ಮಾಡಿದೆ.
“ಇಸ್ರೇಲ್ ನ ನಿರಂತರ ದೌರ್ಜನ್ಯದಲ್ಲಿ ಅನೇಕ ಜೀವಹಾನಿಯಾಗಿದೆ ಮತ್ತು ಅಂತಾರಾಷ್ಟ್ರೀಯ ಸಮುದಾಯವು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸದಿದ್ದರೆ ಇಸ್ರೇಲ್ ಎಂದಿಗೂ ತನ್ನ ಜನಾಂಗೀಯ ನೀತಿಗಳನ್ನು ಕೊನೆಗೊಳಿಸುವುದಿಲ್ಲ. ಈ ನೀತಿಗೆ ಕಡಿವಾಣ ಹಾಕಬೇಕು ಮತ್ತು ಫೆಲೆಸ್ತೀನ್ ಜನರಿಗೆ ನ್ಯಾಯ ಮತ್ತು ಶಾಂತಿ ಸಿಗುವಂತೆ ಖಾತರಿಪಡಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.