ಸುರಪುರ: ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರಕಾರ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದಾಗಿ ಎಲ್ಲಾ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ತೀವ್ರ ಸಂಕಷ್ಟಕ್ಕೀಡಾದಂತಾಗಿದೆ.ಅಂದೇ ದುಡಿದು ಬದುಕುವ ಕಾರ್ಮಿಕರಿಗೆ ಈಗ ಸಂಕಷ್ಟದ ಕಾಲ ಎದುರಾಗಿದ್ದು ಪ್ರತಿ ಕಾರ್ಮಿಕನು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ.
ಆದ್ದರಿಂದ ಸರಕಾರ ಹಾಗು ಜಿಲ್ಲಾಡಳಿತ ಕೂಡಲೆ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸಿ ಎಲ್ಲಾ ಕಾರ್ಮಿಕರಿಗೆ ಪರಿಹಾರ ಧನವನ್ನು ನೀಡಬೇಕು ಇಲ್ಲವಾದಲ್ಲಿ ಕಾರ್ಮಿಕರು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶಪ್ಪ ಹೆಮನೂರು ತಾಲೂಕು ಘಟಕದ ತಿಪ್ಪಣ್ಣ ಪಾಟೀಲ್ ಮುರಳಿ ರಂಗಂಪೇಟೆ ಹರಿಶ್ಚಂದ್ರ ಶಾಂತು ತಳವಾರಗೇರಾ ಗೌಸ್ ಇತರರಿದ್ದರು.