ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕೋನದಾಸಪುರದಲ್ಲಿ ಸುಸಜ್ಜಿತವಾದ ಬಹುಪಯೋಗಿ ಟೌನ್ ಶಿಪ್ ಅನ್ನು ನಿರ್ಮಾಣ ಮಾಡಲು ಬಿಡಿಎ ನಿರ್ಧರಿಸಿದೆ.
ಸೋಮವಾರ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಯೋಜನೆಯ ಕಾರ್ಯಗತಕ್ಕೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯ ನಂತರ ಈ ಬಗ್ಗೆ ವಿವರಣೆ ನೀಡಿದ ವಿಶ್ವನಾಥ್ ಅವರು, ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಟೌನ್ ಶಿಪ್ ಅನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
4 ಬೆಡ್ ರೂಂಗಳ ಅಪಾರ್ಟ್ ಮೆಂಟ್ ಗಳು, ವಾಣಿಜ್ಯ ಸಂಕೀರ್ಣಗಳು ಮನೋರಂಜನಾ ಸಂಕೀರ್ಣ, ಜಿಮ್ ಸೇರಿದಂತೆ ಇನ್ನಿತರೆ ಜನೋಪಯೋಗಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸರ್ಕಾರದಿಂದ ಅನುಮೋದನೆ ಬಂದ ತಕ್ಷಣ ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು ಯೋಜನೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದ ಅವರು, ಖಾಸಗಿ ಟೌನ್ ಶಿಪ್ ಗೆ ಸರಿ ಸಮನಾದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ಬಿಡಿಎ 2021-22 ನೇ ಸಾಲಿನಲ್ಲಿ 2252 ಕೋಟಿ ರೂಪಾಯಿಗಳ ಬಜೆಟ್ ಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಹರಾಜು ಮೂಲಕ ನಿವೇಶನ ಮಾರಾಟ ಬಿಡಿಎ ರಚಿಸಿರುವ 64 ಬಡಾವಣೆಗಳ ಕುರಿತು ಇತ್ತೀಚೆಗೆ ಲ್ಯಾಂಡ್ ಆಡಿಟ್ ನಡೆಸಲಾಗಿದ್ದು, ಇದರಲ್ಲಿ 357 ಎಕರೆಯಷ್ಟು ಜಮೀನು ಹಂಚಿಕೆಯಾಗದೇ ಉಳಿದಿರುವುದು ಕಂಡು ಬಂದಿದೆ. ಈ ಭೂಮಿಯನ್ನು ಹರಾಜು ಮೂಲಕ ಮಾರಾಟ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು ಎಂದರು.
ಪೆರಿಫರೆಲ್ ರಿಂಗ್ ರಸ್ತೆ ಯೋಜನೆಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪತ್ರ ಬಹುನಿರೀಕ್ಷಿತ ಬೆಂಗಳೂರು ಪೆರಿಫರೆಲ್ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡಲು ಬಿಡಿಎ ನೀಲನಕ್ಷೆಯನ್ನು ರೂಪಿಸಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ದೇಶ ವಿದೇಶಗಳ ಹಲವು ಕಂಪನಿಗಳು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್ ಕರೆಯಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಬಿಡಿಎ ರಚಿಸಿರುವ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ಬನಶಂಕರಿ ಬಡಾವಣೆಯಲ್ಲಿರುವ 100 ಮತ್ತು 80 ಅಡಿ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ವಿದ್ಯುತ್ ಬೀದಿ ದೀಪ ಕಂಬಗಳನ್ನು ಮಧ್ಯಭಾಗಕ್ಕೆ ಸ್ಥಳಾಂತರ ಮಾಡಿ ಹೊಸದಾಗಿ ಎಲ್ಇಡಿ ದೀಪಗಳನ್ನು ಅಳವಡಿಸುವುದು ಮತ್ತು ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ಕಂಬ ಮತ್ತು ದೀಪಗಳನ್ನು ಅಳವಡಿಸಲು 2.75 ಕೋಟಿ ರೂಪಾಯಿಯ ಕಾಮಗಾರಿಯನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬೆಂಗಳೂರು ಉತ್ತರ ತಾಲೂಕಿನ ಆಲೂರು ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ 1-ಬಿಎಚ್ ಕೆ ವಸತಿ ಸಮುಚ್ಚಯದ ಸುತ್ತಮುತ್ತ ಕಾಂಪೌಂಡ್ ನಿರ್ಮಾಣ ಮತ್ತು ಹತ್ತಿರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ಮಂಜೂರು ಮಾಡಲು ಸಭೆ ಒಪ್ಪಿಗೆ ನೀಡಿತು ಎಂದು ಅವರು ತಿಳಿಸಿದರು.
ಪ್ರಾಧಿಕಾರದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲು ನಿರ್ಧರಿಸಲಾಗಿದ್ದು, ಖಾಲಿ ಇರುವ ಹುದ್ದೆಗಳನ್ನು ಕೋವಿಡ್-19 ತಹಬದಿಗೆ ಬಂದ ನಂತರ ನೇಮಕಾತಿ ಮಾಡಿಕೊಳ್ಳಲು ಸಭೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿತು ಎಂದು ಹೇಳಿದರು.
ಈ ವರ್ಚುವಲ್ ಸಭೆಯಲ್ಲಿ ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್, ಉಪ ಆಯುಕ್ತರಾದ ಡಾ.ಸೌಜನ್ಯ ಸೇರಿದಂತೆ ಇನ್ನಿತರೆ ಹಿರಿಯ ಅಧಿಕಾರಿಗಳು ಇದ್ದರು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…