ಕಲಬುರಗಿ: ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಶಾಸನ ಮಂಜೂರು ಮಾಡಿ, ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯತನ ಮತ್ತು ತೀವ್ರ ತೆರನಾದ ಕರ್ತವ್ಯ ಲೋಪವೆಸಗಿರುವ ಹಿನ್ನೆಲೆಯಲ್ಲಿ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ನಾಡ ಕಚೇರಿಯ ಉಪ ತಹಶೀಲ್ದಾರ ಪ್ರೇಮದಾಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋದ ಯಾಧವ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ರ ನಿಯಮ 10(1) (ಡಿ) ರಡಿಯಲ್ಲಿ ಇವರನ್ನು ಇಲಾಖಾ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಸದರಿ ನೌಕರರು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 98ರ ಪ್ರಕಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಸಕ್ಷಮ ಪ್ರಾಧಿಕಾರದ ಪರವಾನಿಗೆ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಚುನಾವಣಾ ಪ್ರಕ್ರಿಯೇಗಳು ಮುಗಿಯುವವರೆಗೆ ಅರ್ಜಿಗಳನ್ನು ಸ್ವೀಕರಿಸುವುದು, ಸಂಸ್ಕರಿಸುವುದು ಹಾಗೂ ಮಂಜೂರಾತಿ ನೀಡಬಾರದೆಂಬ ಸೂಚನೆಗಳು ನೀಡಲಾಗಿದ್ದರೂ ಕೂಡಾ ಸಹ ಕಂದಾಯ ಇಲಾಖೆಯ ಸದರಿ ಉಪ ತಹಶೀಲ್ದಾರರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ವೃದ್ಯಾಪ್ಯ ವೇತನ ಮಾಸಾಶನಗಳನ್ನು ಮಂಜೂರು ಮಾಡಿರುತ್ತಾರೆ.