ಬೊಮ್ಮಾಯಿ ಎಂದರೆ ರಾಜ್ಯಕ್ಕೆ ಹಿತ, ಬಿಜೆಪಿಗೆ ಹಿತಮಿತ, ಕಾಂಗ್ರೆಸ್ ಗೆ ಅಹಿತ

ರಾಜ್ಯದ ಹಿತದೃಷ್ಟಿಯಿಂದ ಮಾತ್ರವಲ್ಲ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಒಳ್ಳೆಯ ಆಯ್ಕೆ. ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಪ್ರಹ್ಲಾದ ಜೋಷಿ, ಬಿ.ಎಲ್.ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲವೇ ಯಾರಾದರೂ ಲಿಂಗಾಯತೇತರ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ಒಳ್ಳೆಯ ಆಯ್ಕೆಯಾಗಿರುತ್ತಿತ್ತು, ಬಸವರಾಜ ಬೊಮ್ಮಾಯಿ ಅಲ್ಲ.

ರಾಜ್ಯಕ್ಕೆ ಒಳ್ಳೆಯದು ಮಾಡಬೇಕೆಂಬ ಸದ್ಬುದ್ದಿಯಿಂದ ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರಲಾರದು. ಅನಿವಾರ್ಯವಾಗಿ ಬಿ.ಎಸ್.ಯಡಿಯೂರಪ್ಪನವರ ಬಿಗಿಪಟ್ಟಿಗೆ 56 ಇಂಚಿನ ಎದೆ ಬಾಗಿದೆ ಅಷ್ಟೆ.

ಜೋಷಿ, ಹೆಗಡೆ, ಸಂತೋಷ್ ಮೊದಲಾದ ಬ್ರಾಹ್ಮಣ ನಾಯಕರು, ತಪ್ಪಿದರೆ ಸಂಘ ಪರಿವಾರದಿಂದ ಬಂದ ಲಿಂಗಾಯತೇತರ ನಾಯಕರು ಅದೂ ತಪ್ಪಿದರೆ ಯಡಿಯೂರಪ್ಪನವರಿಗೆ ಆತ್ಮೀಯರಲ್ಲದ ಲಿಂಗಾಯತರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಕೇಶವಕೃಪಾದ ಪಾರುಪತ್ತೆಗಾರರು ಖಂಡಿತ ಬಯಸಿರುತ್ತಾರೆ. ಆದರೆ ಭವಿಷ್ಯದಲ್ಲಿ ಅದರಿಂದಾಗುವ ಪರಿಣಾಮದ ಬಗ್ಗೆ ಯೋಚಿಸಿ ಹಿಂದಡಿ ಇಟ್ಟಿದ್ದಾರೆ. ಈ ಮೂರು ಗುಂಪುಗಳಲ್ಲಿ ಯಾರನ್ನೂ ಮಾಡಿದ್ದರೂ ಯಡಿಯೂರಪ್ಪನವರು ಸುಮ್ಮನೆ ಕೂರುತ್ತಿರಲಿಲ್ಲ.

ಒಂದೊಮ್ಮೆ ಜೋಷಿ,ಹೆಗಡೆ,ಸಂತೋಷ್ ಮೊದಲಾದವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಿದ್ದರೆ ಈ ಸರ್ಕಾರ ಬಹಳ ದಿನ ಬಾಳುತ್ತಿರಲಿಲ್ಲ, ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಸಂಖ್ಯಾಬಲ ಇಲ್ಲದ ಬ್ರಾಹ್ಮಣ ನಾಯಕರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿದರೆ ಪರಿಣಾಮ ಏನಾಗಬಹುದೆಂದು ಊಹಿಸಲಾಗದಷ್ಟು ಸಂಘ ಪರಿವಾರದ ನಾಯಕರು ದಡ್ಡರಲ್ಲ. ಅವರೇನು ನಮ್ಮ ಟಿವಿ ಚಾನೆಲ್ ಗಳ ರಂಗ,ಪೆಂಗರೇ? ಈ ಕಾರಣದಿಂದಾಗಿ ಈ ತ್ರಿಮೂರ್ತಿಗಳ ಹೆಸರು ಹೈಕಮಾಂಡ್ ಪಟ್ಟಿಯಿಂದ ಎಂದೋ ಡಿಲೀಟ್ ಆಗಿತ್ತು.

ಪ್ರಾರಂಭದಲ್ಲಿ ಯಡಿಯೂರಪ್ಪನವರು ಪ್ರಹ್ಲಾದ ಜೋಷಿ ಅವರ ಹೆಸರನ್ನೂ ಸೂಚಿಸಿದ್ದರಂತೆ. ಇತ್ತೀಚಿನ ದಿನಗಳಲ್ಲಿ ಸೀರಿಯಸ್ಸಾಗಿ ಸೋಷಿಯಲ್ ಎಂಜನಿಯರಿಂಗ್ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಎಲ್ಲಿಯೂ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಬಾರದೆಂದು ತೀರ್ಮಾನಿಸಿದೆಯಂತೆ. ಆದ್ದರಿಂದ ಈ ಹೆಸರುಗಳು ನಮ್ಮ ಮಾಧ್ಯಮ ಮಾಲೀಕರು ಮತ್ತು ಸಂಪಾದಕರ ಗುಪ್ತ ಆಶಯದಂತೆ ಟಿವಿ ಪರದೆಗಳಲ್ಲಿ, ಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸಿದೆ ಅಷ್ಟೆ.

ಬಿಜೆಪಿ ಹೈಕಮಾಂಡ್ ಗೆ ಇದ್ದ ಎರಡನೇ ಆಯ್ಕೆ ಲಿಂಗಾಯತೇತರ ಅಂದರೆ ಒಕ್ಕಲಿಗ, ಹಿಂದುಳಿದ ಜಾತಿ ಇಲ್ಲವೇ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದು. ಆದರೆ ಯಡಿಯೂರಪ್ಪನವರ ಪರವಾಗಿ ಎದ್ದುನಿಂತ ಲಿಂಗಾಯತ ಸ್ವಾಮಿಗಳ ಕೂಗು, ಯಡಿಯೂರಪ್ಪನವರ ಕಣ್ಣೀರಿಗೆ ಹರಿದ ಅನುಕಂಪದ ಹೊಳೆ, ಮಾಧ್ಯಮಗಳಲ್ಲಿಯೂ ಪ್ರಕಟ/ಪ್ರಸಾರವಾದ ಯಡಿಯೂರಪ್ಪನವರ ಪರವಾದ ವರದಿಗಳನ್ನು ನೋಡಿ ಬಿಜೆಪಿ ಹೈಕಮಾಂಡ್ ಈ ಆಯ್ಕೆಯನ್ನೂ ಕೈಬಿಟ್ಟಿದೆ.

ಕೊನೆಯ ಆಯ್ಕೆಯಾಗಿ ಕೊನೆಕ್ಷಣದ ವರೆಗೆ ಯಡಿಯೂರಪ್ಪನವರ ಆತ್ಮೀಯ ವಲಯದಲ್ಲಿ ಇಲ್ಲದ ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ಪ್ರಯತ್ನ ಮಾಡಿದೆ. ಸಂಭಾವ್ಯ ಲಿಂಗಾಯತ ಅಭ್ಯರ್ಥಿಗಳ ಪಟ್ಟಿಯಲ್ಲಿ ಬೊಮ್ಮಾಯಿಯೊಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಲಿಂಗಾಯತ ನಾಯಕರು (ಯತ್ನಾಳ್, ಬೆಲ್ಲದ, ನಿರಾಣಿ,ಮಾಧುಸ್ವಾಮಿ), ಒಂದಲ್ಲ ಒಂದು ಸಂದರ್ಭದಲ್ಲಿ ಯಡಿಯೂರಪ್ಪನವರ ವಿರುದ್ದ ದನಿ ಎತ್ತಿ ಎದುರು ಹಾಕಿಕೊಂಡವರು.

ಬಸವರಾಜ ಬೊಮ್ಮಾಯಿ ಮಾತ್ರ ಪ್ರಾರಂಭದಿಂದಲೂ ಯಡಿಯೂರಪ್ಪನವರ ನಿಷ್ಠಾವಂತ ಅನುಯಾಯಿಯಾಗಿ ನಡೆದುಕೊಂಡವರು. ಹೀಗಾಗಿ ಲಿಂಗಾಯತರನ್ನು ಮುಖ್ಯಮಂತ್ರಿಯಾಗಿ ಮಾಡುವುದನ್ನು ವಿರೋಧಿಸಿದ್ದ ಯಡಿಯೂರಪ್ಪನವರು ಕೊನೆಗೆ ಬೊಮ್ಮಾಯಿ ಹೆಸರಿಗೆ ರಾಜಿಯಾಗಿದ್ದಾರೆ.

ಇದನ್ನು ಒಪ್ಪಿಕೊಳ್ಳದೆ ಬಿಜೆಪಿ ಹೈಕಮಾಂಡ್ ಗೆ ಬೇರೆ ದಾರಿ ಇರಲಿಲ್ಲ. ಸಂಘ ಪರಿವಾರದಿಂದ ಬಂದವರಲ್ಲ ಎನ್ನುವುದಷ್ಟೇ ಬೊಮ್ಮಾಯಿ ಬಗ್ಗೆ ಇರುವ ಏಕೈಕ ಆಕ್ಷೇಪವಾಗಿತ್ತು . ಅಷ್ಟಕ್ಕೆ ಬಿಜೆಪಿ ಹೈಕಮಾಂಡ್ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಯಿತು. ವಾಸ್ತವದಲ್ಲಿ ಲಿಂಗಾಯತ ಸ್ವಾಮಿಗಳ ಪ್ರತಿರೋಧದ ನಿಜವಾದ ಫಲಾನುಭವಿ ಬಸವರಾಜ ಬೊಮ್ಮಾಯಿ.

ಬಿ.ಎಸ್.ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವಿನ ಹಗ್ಗ ಜಗ್ಗಾಟದಲ್ಲಿ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಬಸವರಾಜ ಬೊಮ್ಮಾಯಿ ಅವರಿಗೆ ಒಳ್ಳೆಯ ಆಡಳಿತ ನೀಡುವ ಬುದ್ದಿಶಕ್ತಿ ಮತ್ತು ಅನುಭವ ಇದೆ. ವಿಧಾನಮಂಡಲದಲ್ಲಿ ವಿರೋಧ ಪಕ್ಷದ ಮುಖ್ಯವಾಗಿ ಸಿದ್ದರಾಮಯ್ಯನವರ ವಾಗ್ದಾಳಿಯನ್ನು ಅನೇಕಬಾರಿ ಅವರದೇ ರೀತಿಯಲ್ಲಿ ಬೊಮ್ಮಾಯಿಯವರು ಅಂಕಿಅಂಶಗಳನ್ನು ಮುಂದೊಡ್ಡಿ ತರ್ಕದ ಪಟ್ಟು ಹಾಕಿ ಸಮರ್ಥವಾಗಿ ಎದುರಿಸಿದ್ದಾರೆ.

ಹಣಕಾಸು ಸಚಿವರಲ್ಲದೆ ಇದ್ದರೂ ಜಿಎಸ್ ಟಿ ಕೌನ್ಸಿಲ್ ನಲ್ಲಿ ಅವರೇ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಸದ್ಯ ಕಳಂಕಗಳ ಕಪ್ಪು ಚುಕ್ಕೆಗಳಿಲ್ಲ, ನಡವಳಿಕೆಯಲ್ಲಿ ಘನತೆ ಇದೆ. ಹೇಳಲೇ ಬೇಕಾದ ಕೊನೆಯ ಮಾತೆಂದರೆ ಬಿಜೆಪಿಯಲ್ಲಿದ್ದರೂ ಇಲ್ಲಿಯ ವರೆಗೆ ಕೋಮುವಾದಿ ಅಲ್ಲವಾದರೂ ಮತಾಂತರಿಗಳು ಹೆಚ್ಚು ಮತನಿಷ್ಟರಾಗಿರುವುದನ್ನು ಅನುಭವ ಹೇಳುತ್ತಿದೆ.

(ಕಳೆದ ನಾಲ್ಕೈದು ದಿನಗಳಲ್ಲಿ ಮುಖ್ಯಮಂತ್ರಿ ಯಾರಾಗಬಹುದೆಂಬ ಗೆಳೆಯರ ಪ್ರಶ್ನೆಗೆ ಖಾಸಗಿಯಾಗಿ ನಾನು ಹೇಳಿದ್ದ ಹೆಸರು ಬಸವರಾಜ ಬೊಮ್ಮಾಯಿ. ನಾನು ಇದನ್ನು ಬರೆಯಲು ಹೋಗಿರಲಿಲ್ಲ. ನನಗೆ ಯಾರೂ ಈ ಹೆಸರನ್ನು ಕಿವಿಯಲ್ಲಿ ಬಂದು ಹೇಳಿರಲಿಲ್ಲ. ಮತ್ತೆ ಹೇಗೆ ಆ ಹೆಸರು ಎಂದು ಕೇಳಿದರೆ ಅವರಿಗೆ ಮೇಲಿನ ಬರಹ ಓದಿರಿ ಎಂದಷ್ಟೇ ಹೇಳಬಲ್ಲೆ. )

ದಿನೇಶ್ ಅಮೀನ್ ಮಟ್ಟು
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420