ಆಳಂದ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ರಾಜಕೀಯ ಕೇವಲ ಅಧಿಕಾರವಾಗಿರದೇ ಸಾಮಾಜಿಕ ಸೇವಾ ಕ್ಷೇತ್ರಕ್ಕೂ ವ್ಯಾಪಿಸಿದ ವಿಷಯವಾಗಿದೆ ಎಂದು ಕಲಬುರಗಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಅಭಿಪ್ರಾಯಪಟ್ಟರು.
ಶುಕ್ರವಾರ ಆಳಂದ ಪಟ್ಟಣದಲ್ಲಿ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ ರಕ್ತದಾನ ಶಿಬಿರಕ್ಕೆ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಚಾಲನೆ ನೀಡಿದರು.
ಭಾರತೀಯ ಜನತಾ ಪಕ್ಷವು ಇತರೆ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದ್ದು ತನ್ನ ಸಿದ್ಧಾಂತ ಮತ್ತು ತತ್ವಗಳಿಂದ ಮುಖಂಡರಿಂದ ಕಾರ್ಯಕರ್ತರವರೆಗೆ ಸಾಮಾಜಿಕ ಸೇವೆಯಲ್ಲಿ ತೊಡಗುವಂತೆ ಪ್ರೇರಣೆ ನೀಡುತ್ತದೆ ಅಲ್ಲದೇ ಅಧಿಕಾರ ಇರಲಿ ಇಲ್ಲದಿರಲಿ ಯಾವುದೇ ಕಾರಣಕ್ಕೂ ಸೈದ್ಧಾಂತಿಕ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನ ಸೆ.17ರಿಂದ ಮತ್ತು ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ದಿನ ಅಕ್ಟೋಬರ್ 7ರ ವರೆಗೆ ಭಾರತೀಯ ಜನತಾ ಪಕ್ಷ ದೇಶಾದ್ಯಂತ ಸೇವೆ ಮತ್ತು ಸಮರ್ಪಣೆ ಅಭಿಯಾನ ಹಮ್ಮಿಕೊಂಡಿದೆ ಸಸಿ ನೆಡುವುದು, ರಕ್ತದಾನ, ಕಲ್ಯಾಣಿ ಸ್ವಚ್ಛತೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ ತಪಾಸಣಾ ಶಿಬಿರ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ, ದಾನಗಳಲ್ಲಿ ರಕ್ತದಾನವು ಅತೀ ಮಹತ್ವದ ದಾನವಾಗಿದೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಅದಲ್ಲದೇ ಶರೀರವು ಸದಾಕಾಲ ಚಟುವಟಿಕೆಯಿಂದ ಕೂಡಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ, ಸಂಜಯ ಮಿಸ್ಕಿನ್, ಹಣಮಂತರಾವ ಮಲಾಜಿ, ಶ್ರೀಮಂತ ನಾಮಣೆ, ಮಲ್ಲಿಕಾರ್ಜುನ ಕಂದಗೂಳೆ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಮೀರು ಶೇಖ್, ಸಂತೋಷ ಹಾದಿಮನಿ, ತಾಲೂಕಾ ಆರೋಗ್ಯ ಅಧಿಕಾರಿ, ಪಶು ಸಂಗೋಪನಾ ಅಧಿಕಾರಿ ಸೇರಿದಂತೆ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾಕಾರಿಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.