ಸುರಪುರ: ತಾಲೂಕಿನ ಹೆಸರಾಂತ ಪ್ರವಾಸಿ ತಾಣ ಹಾಗು ದಕ್ಷಿಣ ಭಾರತದಲ್ಲಿಯೆ ಎರಡನೇ ದೊಡ್ಡ ಕೇರೆ ಮತ್ತು ಪಕ್ಷಿಧಾಮ ಎನಿಸಿಕೊಂಡಿರುವ ಬೋನಾಳ ಪಕ್ಷಿಧಾಮದ ಅಭಿವೃಧ್ಧಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಮತ್ತು ನಿವೃತ್ತ ಶಿಕ್ಷಕರು ಹಾಗು ಪರಿಸರ ಪ್ರೇಮಿಗಳಾದ ಭೀಮಣ್ಣ ಬೋನಾಳ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಹಿಂದೆ ಆಳ್ವಿಕೆ ನಡೆಸಿದ ಸುರಪುರ ಅರಸರು ಬೋನಾಳ ಕೆರೆಯನ್ನು ಕಟ್ಟಿಸಿ ಇತಿಹಾಸ ಪ್ರಸಿದ್ಧರಾಗಿ ಹೋದರು.ಆದರೆ ಅದರ ಅಭಿವೃಧ್ಧಿಯನ್ನು ನಿರ್ಲಕ್ಷಿಸಿರುವ ಸರಕಾರ ಮತ್ತು ಜನಪ್ರತಿನಿಧಿಗಳ ನಡೆ ಬೆಸರ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.ಸರಕಾರ ಬೋನಾಳ ಪಕ್ಷಿಧಾಮವನ್ನು ರಾಜ್ಯದ ಅತಿದೊಡ್ಡ ಪಕ್ಷಿಧಾಮವೆಂದು ಘೋಷಣೆ ಮಾಡಿದೆ.
ಆದರೆ ಈ ಪಕ್ಷಿಧಾಮ ನಿರ್ಲಕ್ಷದಿಂದಾಗಿ ಅಭಿವೃಧ್ಧಿ ಕಾಣದೆ ನಿರ್ಗತಿಕವಾಗಿದೆ,ಇಲ್ಲಿಗೆ ಬರುವ ದೇಶ ವಿದೇಶಗಳ ಹಕ್ಕಿಗಳು ಕೆರೆಯಲ್ಲಿನ ಮೀನನ್ನು ಮಾತ್ರ ಆಶ್ರಯಿಸಿವೆ.ಯಾದಗಿರಿ ಪ್ರವಾಸೋದ್ಯಮ ಇಲಾಖೆ,ಅರಣ್ಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಪಕ್ಷಿಧಾಮ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.ಪಕ್ಷಿಧಾಮ ವೀಕ್ಷಿಸಲು ಬರುವವರಿಗೆ ಇಲ್ಲಿ ನಿರಾಸೆ ಕಾದಿರುತ್ತದೆ.ಸರಿಯಾದ ರಸ್ತೆಯಿಲ್ಲ,ರಸ್ತೆ ಬದಿಗಳಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ,ಇನ್ನು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಯಾವೊಂದು ವ್ಯವಸ್ಥೆಯೂ ಕಾಣಸಿಗುವುದಿಲ್ಲ.
ಆದ್ದರಿಂದ ಕೂಡಲೇ ಸರಕಾರ ಎಚ್ಚೆತ್ತು ಬೋನಾಳ ಪಕ್ಷಿಧಾಮದ ಅಭಿವೃಧ್ಧಿಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಬೋನಾಳ ಗ್ರಾಮದ ಜೊತೆಗೆ ಸುಮಾರು ೧೫ ಗ್ರಾಮಗಳ ಜನರ ಜೊತೆಗೆ ಸುರಪುರ ನಗರದ ಬೀದರ ಬೆಂಗಳೂರು ಹೆದ್ದಾರಿ ಹೊಂದಿರುವ ಕುಂಬಾರಪೇಟೆ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಗುವುದು ಅಲ್ಲದೆ ನಗರದ ಸರ್ದಾರ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಹಿರಿಯ ಸಾಹಿತಿಗಳೊಂದಿಗೆ ಧರಣಿ ನಡೆಸಲಾಗುವುದು ಎಂದು ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ನಿವೃತ್ತ ಶಿಕ್ಷಕ ಭೀಮಣ್ಣ ಬೋನಾಳ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.