ಯಾವುದೇ ಹಬ್ಬ — ಹುಣ್ಣುಮೆಗೆ ನಮ್ಮ ಮನೆಯ ಒಕ್ಕಲು ಅಂದರೆ ನಮ್ಮ ಮನೆಯ ಮಾದಗಿತ್ತಿ ಮರಿಯವ್ವ ನಮ್ಮ ಮನೆಯಲ್ಲಿ ಎಂಥದೇ ಹಬ್ಬ–ಹರಿದಿನವಿರಲಿ, ನಮ್ಮ ಮನೆಗೆ ಬಂದು ನಾವು ಮಾಡಿದ ಅಡುಗೆಯನ್ನು ನೀಡಿಸಿಕೊಂಡು ಹೋಗುವುದು ವಾಡಿಕೆ. ಅದು ಈಗಿನ ಮಾತಲ್ಲ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ. ಈ ಪದ್ದತಿ ನಮ್ಮ ಮನೆಯಲ್ಲೇಷ್ಟೇ ಇರುವ ಪದ್ದತಿ ಅಲ್ಲ. ಬಹುತೇಕ ಹಳ್ಳಿಗಳಲ್ಲಿ ಇರುವ ಪದ್ದತಿ.
ಆದರೆ ಈ ಪದ್ದತಿ ತುಸು ತಕಾರಿನಿಂದ ಕೂಡಿದೆ. ಅದು ಸಂಜೆ ವೇಳೆಯಲ್ಲಿ ಅಂದರೆ ಮನೆಯರು ಉಂಡು ಉಳಿದ ಅಡುಗೆಯನ್ನು ಇಂತಹ ಮಾದಗಿತ್ತಿಯರು ನೀಡಿಸಿಕೊಂಡು ಹೋಗುತ್ತಾರೆ. ಬಹುತೇಕವಾಗಿ ಎಲ್ಲಾ ಹಳಿಗಳಲ್ಲೂ ಅವರ ಮನೆಯ ಮಾದಗಿತ್ತಿಯವರು ನೀಡಿಸಿಕೊಂಡು ಮತ್ತು ಆ ಮನೆಯ ಯಜಮಾನರಿಂದ ಅದು — ಇದು ಬೇಡಿ, ಇಸಿದುಕೊಂಡು ಹೋಗುವುದು ಪದ್ದತಿ.
ಈ ಪದ್ದತಿಗೆ ನನ್ನ ತಕಾರೇನೂ ಇಲ್ಲ. ಆದರೆ ನನ್ನ ತಕರಾರು ಇರುವುದು ಅದು ಅಳಿದುಳಿದ ಅಡುಗೆಯನ್ನು ನೀಡಿಸಿಕೊಂಡು ಹೋಗುತ್ತಿರುವುದಕ್ಕೇ ನನ್ನ ತಕರಾರು ಇರುವುದು. ಹಾಗಾಗಿಯೇ ನನ್ನ ಮನೆಯ ಮಾದಗಿತ್ತಿಗೆ ಹೇಳಿದೆನು. ಅದೆಷ್ಟೋ ಹೇಳಿದರೂ ಮಾದರ ಮರಿಯವ್ವ ಬದಲಾಗುತ್ತಲೇ ಇಲ್ಲ.
ಮಾದರ ಮರಿಯಪ್ಪನ ಹೆಂಡತಿ ಮರಿಯವ್ವನಿಗೆ ನಾನು ಅದೆಷ್ಟೋ ಬಾರಿ ಹೇಳಿದ್ದೇನೆ, ನೋಡುವ ಮರಿಯವ್ವ, ನೀಡಿಸಿಕೊಂಡು ಹೋಗಲು ಬರುವುದಾದರೆ, ನಮ್ಮ ಮನೆಗೆ ಮುಂಜಾನೆ ನಾವು ಅಡುಗೆ ಮಾಡಿ, ನಾವು ಅಂದರೆ ನಮ್ಮ ಮನೆಯೆಯರೆಲ್ಲಾ ಊಟ ಮಾಡುವ ಹೊತ್ತಿನಲ್ಲಿ ಬಾ. ಬಂದು ನೀನು ನೀಡಿಸಿಕೊಂಡು ಹೋಗು. ಬರುವುವದಾರೆ ಮುಂಜಾನೆಯೇ ಬಿಸಿ ಅಡುಗೆ ಮಾಡಿದಾಗ ಬಾ ಎಂದು.
ಆದರೂ ಆಕೆ ಮರಿಯವ್ವ, ನಾವೆಲ್ಲರೂ ಮನೆಯರು ಊಟ ಮಾಡಿ, ಮುಗಿಸಿದ ಅಂದರೆ ಸಂಜೆಯ ವೇಳೆಯಲ್ಲಿ ಆಕೆ ಅಂದರೆ ಮರಿಯವ್ವ ನಮ್ಮ ಮನೆಯಲ್ಲಿ ಸಂಜೆ ವೇಳೆಯಲ್ಲಿಯೇ ಬಂದು ನೀಡಿಸಿಕೊಂಡು ಹೋಗಲು ಬರುತ್ತಾಳೆ. ಈ ಪದ್ದತಿ ಮಾತ್ರ ಬದಲಾಗುತ್ತಲೇ ಇಲ್ಲ. ಅದಕ್ಕಾಗಿ ಮೊನ್ನೆ ಅಂದರೆ ದೀಪಾವಳಿ ಹಬ್ಬದ ವೇಳೆಯಲ್ಲಿ ನನಗೆ ತೀರಾ ಸಿಟ್ಟು ಬಂದಿತು. ಆಗ ನಾನು ಮಾದರ ಮರಿಯವ್ವನನ್ನು ತೀರಾ ಗದರಿಸಿ ಹೇಳಿದೆ. ಅಲ್ಲವ್ವ ಮರಿಯವ್ವ, ನಿನಗೆ ಅದೆಷ್ಟು ಬಾರಿ ಹೇಳಲಿ. ನೀನು ನಮ್ಮ ಮನೆಗೆ ನೀಡಿಸಿಕೊಂಡು ಹೋಗಲು ಬರುದಾದರೆ, ನಾವು ಊಟ ಮಾಡುವ ಹೊತ್ತಿನಲ್ಲೇ ಬರಬೇಕೆಂದು ಈ ತುಸು ಕಾರವಾಗಿಯೇ ಗದರಿದೆ.
ಆಗ ಮರಿಯವ್ವ, ಇಲ್ಲ ಸಾಮೇರ ಇದು ನಮ್ಮ ಪದ್ದತಿ. ಇದು ಇಂದು — ನಿನ್ನೆಯದಲ್ಲ. ಬಹುತೇಕ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ. ಅದಕ್ಕಾಗಿಯೇ ನಾನು ಸಂಜೆ ವೇಳೆಯಲ್ಲೇ ಬಂದು ನೀಡಿಸಿಕೊಂಡು ಹೋಗುವುದು, ಅಂದಳು ಮರಿಯವ್ವ. ಅಯ್ಯೋ ಅನಿಸಿದ್ದು ನನಗೆ ಇಂದು — ನಿನ್ನೆಯಲ್ಲ. ಬಹುತೇಕ ಬಾರಿ ಅಂದರೆ ಬಹು ಹಿಂದಿನಿಂದಲೂ ಅನ್ನಿಸಿದೆ.
ಈ ಪದ್ದತಿ ಹುಟ್ಟು ಹಾಕಿದ್ದು ಯಾರು. ಅದೇ ನಮ್ಮ ಸವರ್ಣೀಯ ಸಮಾಜವಲ್ಲವೇ.ಇದು ಒಂದು ವಿಷಯವಾತು. ಹಳ್ಳಿಗಳಲ್ಲಿ ಈಗಲೂ ಅವರ್ಣೀಯ ಮತ್ತು ಸವರ್ಣೀಯ ಪದ್ದತಿ ಅನೇಕಾನೇಕ ಶತ ಶತಮಾನದಿಂದ ಬಂದ ಪದ್ದತಿಯಲ್ಲವೇ..?
ಈಗಲೂ ಹಳ್ಳಿಗಳಲ್ಲಿ ಈ ಅವರ್ಣೀಯ ಎಂಬ ಮಾತಿಗೆ ಈ ಮಾದರ ಜನರು ಹೊಂದಿಕೊಂಡಿದ್ದಾರೆ. ಈಗಲೂ ಎಲ್ಲಾ ಹಳ್ಳಿಗಳಲ್ಲೂ ಕೂಡ ಚಹಾದಂಗಡಿಗಳಲ್ಲಿ, ಅಷ್ಟೇ ಅಲ್ಲ ಎಲ್ಲದರಲ್ಲೂ ಈ ಅಸ್ಪುರ್ಷತೆ ಇದೆ. ಚಹಾದಂಗಡಿಗಳಲ್ಲಿ ಈಗಲೂ ಈ ಜನರು ತಾವು ಚಹಾ ಕುಡದ ಕಪ್ಪನ್ನು ಅವರೇ ತೊಳೆದು, ಅವರೇ ತಮ್ಮ ಜಾಗದಲ್ಲಿ ಅಂದರೆ ಚಹಾಕಪ್ಪು ಇಡುವ ಜಾಗದಲ್ಲಿ ಇಟ್ಟು ಹೋಗಬೇಕು. ಮತ್ತೇ ಬಂದರೆ, ಅದೇ ರೀತಿಯಿಂದ ಮಾಡಬೇಕು. ಇದು ನಮ್ಮ ಸಮಾಜದ ಪದ್ದತಿ. ಅಯ್ಯೋ ಪದ್ದತಿಯೇ..?!
ಅಂದರೆ ಈಗಲೂ ಕೂಡ ಈ ಅಸ್ಪುರ್ಷತೆ ಹೋಗಿಲ್ಲ. ಅದಕ್ಕಾಗಿಯೇ ಅಲ್ಲವೇ ನಮ್ಮ ಈ ಬುದ್ದ, ಬಸವಣ್ಣ, ಅಲ್ಲದೇ ಅಂಬೇಡ್ಕರ್ ಗಳು ಶತಮಾನದ ಹಿಂದೆಯೇ ಹೋರಾಡಿದ್ದಲ್ಲವೇ.?!
ಈ ಮಹಾತ್ಮ ಗಾಂಧಿಯವರು ಕರೆದ ಹರಿಜನ ಪದವೇ ಒಂದು ಕಳೆಯಾಗಿದೆ, ಈಗ ಆ ಕುರಿತು ಈ ಒಂದು ಲೇಖನ ನೋಡೋಣ ಮತ್ತು ತಿಳಿದುಕೊಂಡು ನಾವು ಸಮಾಜವನ್ನು ತಿದ್ದುವ ಒಂದು ಅತಿಸಣ್ಣ ಪ್ರಯತ್ನವನ್ನು ಮಾಡೋಣ ಎಂಬ ಅಭಿಪ್ರಾಯ ನನ್ನದು. ಆದರೂ ಹೊಸ ಹುಡುಗರಲ್ಲಾದರೂ, ಅದರಲ್ಲೂ ಕೆಲವರಲ್ಲಾದರೂ ತಮ್ಮ ಇರುವುವಿಕೆಯ ಬಗೆಗೆ ಒಂದಿಷ್ಟು ತಿಳುವಳಿಕೆ ಬಂದಿದೆ ಈಗ. ಈ ಅಸ್ಪುರ್ಷುತೆಯ ಬಗೆಗೆ ನೋಡೋಣ.
ಅಂದು ಆಗಲೇ ಮಹಾತ್ಮ ಗಾಂಧಿ ಅವರು ಜನಪ್ರಿಯಗೊಳಿಸಿದ ‘ಹರಿಜನ’ ಎಂಬ ಪದ ತಮ್ಮನ್ನು ಅಪಹಾಸ್ಯ ಮಾಡುವಂತಿದೆ ಎಂದು ದಲಿತರು ಭಾವಿಸಿದ್ದಾರೆ ಎಂಬ ಬಗ್ಗೆ ಮಾನವಶಾಸ್ತ್ರಜ್ಞ ಆರ್.ಎಸ್.ಖಾರೆ ಅವರು 1984ರಲ್ಲೇ ಬಿಡುಗಡೆಯಾದ ತಮ್ಮ ‘ದ ಅನ್‌ಟಚಬಲ್ ಆ್ಯಸ್ ಹಿಮ್‌ಸೆಲ್ಫ್’ ಪುಸ್ತಕದಲ್ಲಿ ವಿವರಿಸುತ್ತಾರೆ.
ಲಖನೌದ ಚಮ್ಮಾರ ಸಮುದಾಯದ ಸುಧಾರಕರೊಬ್ಬರು ಈ ಬಗ್ಗೆ ತಮ್ಮಲ್ಲಿ ಹೇಳಿದ್ದನ್ನು ಖಾರೆ ಹೀಗೆ ಉಲ್ಲೇಖಿಸುತ್ತಾರೆ– ‘ನಾವು ಯಾವತ್ತೂ ಹಿಂದೂ ಆಗಲು ಅವಕಾಶ ನೀಡಲಾಗುವುದಿಲ್ಲ ಎಂಬುದನ್ನು ಹರಿಜನ ಎಂಬ ಪದ ಧ್ವನಿಸುತ್ತದೆ. ನಮಗೆ ಅಂತಹ ಅವಕಾಶ ಬೇಕಾಗಿಯೂ ಇಲ್ಲ. ಗಾಂಧಿ ತಮ್ಮಲ್ಲಿನ ತಪ್ಪಿತಸ್ಥ ಭಾವದಿಂದ ತಪ್ಪಿಸಿಕೊಳ್ಳಲು ಕಂಡುಕೊಂಡ ಮೇಲ್ಮೈಯ ದಾರಿ ಇದು’.
ಗಾಂಧಿ ಅವರು ‘ದಲಿತ’ ಎಂಬ ಪದವನ್ನು ಯಾವತ್ತೂ ಬಳಸಲೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಬಿ.ಆರ್.ಅಂಬೇಡ್ಕರ್ ಅವರು ಕೂಡ ಈ ಪದವನ್ನು (ಕನಿಷ್ಠ ಪಕ್ಷ ತಮ್ಮ ಇಂಗ್ಲಿಷ್ ಲೇಖನಗಳು ಮತ್ತು ಭಾಷಣಗಳಲ್ಲಿ) ಬಳಸಿಲ್ಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅವರೂ ‘ಅಸ್ಪೃಶ್ಯರು’ ಅಥವಾ ‘ಶೋಷಿತ ವರ್ಗ’ ಎಂದು ಕರೆಯುತ್ತಿದ್ದರು.
ಶೋಷಿತ ವರ್ಗ ಎಂಬುದು ಬ್ರಿಟಿಷ್ ಆಡಳಿತದ ಭಾರತದಲ್ಲಿ ಇದ್ದ ಕಾನೂನುಬದ್ಧ ವರ್ಗೀಕರಣವಾಗಿತ್ತು. ಶೋಷಿತ ಎಂಬ ಅರ್ಥವನ್ನೇ ಕೊಡುವ ‘ದಲಿತ’ ಎಂಬ ಪದ 19 ನೇ ಶತಮಾನದ ಕೊನೆಯಲ್ಲಿ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಬಳಕೆಯಲ್ಲಿತ್ತು. ಮಹಾರಾಷ್ಟ್ರದ ಒಂದು ತೀವ್ರಗಾಮಿ ಹೋರಾಟಗಾರರ ಗುಂಪು ತಮ್ಮನ್ನು ದಲಿತ ಪ್ಯಾಂಥರ್ಸ್ ಎಂದು ಕರೆದುಕೊಂಡ ಬಳಿಕ 1970 ರ ದಶಕದಲ್ಲಿ ದಲಿತ ಪದದ ಬಳಕೆ ಹೆಚ್ಚಾಯಿತು. ಈಗ ಭಾರತದಾದ್ಯಂತ ದಲಿತರು ಮತ್ತು ದಲಿತರಲ್ಲದವರು ಈ ಪದವನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಹಾಗೆಯೇ ಗಾಂಧಿ ರೂಪಿಸಿದ ಹರಿಜನ ಎಂಬ ಪದ (ಬಹುಶಃ ಅರ್ಹವಾಗಿಯೇ) ಬಳಕೆಯಿಂದ ಹೋಗಿಬಿಟ್ಟಿತು.
1920 ರಲ್ಲಿ ಅಸ್ಪೃಶ್ಯತೆಯ ವಿರುದ್ಧ ಗಾಂಧಿ ತೀವ್ರವಾದ ಚಳವಳಿ ಆರಂಭಿಸಿದಾಗ ಅವರು ‘ಹರಿಜನ’ ಎಂದು ಕರೆದದ್ದು ಹಿಂದೂ ಸಮಾಜದ ಕಟ್ಟಕಡೆಯಲ್ಲಿ ಇದ್ದವರನ್ನು ಅಲ್ಲ. ತಳಸ್ತರದ ಸಮೂಹವನ್ನು ಅವರು ‘ಅಂತ್ಯಜ’ ಎಂದು ಕರೆದರು. ಇವರ ಬಗ್ಗೆ ಇಂಗ್ಲಿಷ್‌ನಲ್ಲಿ ಲೇಖನಗಳನ್ನು ಬರೆಯುವಾಗ ಮತ್ತು ಭಾಷಣಗಳನ್ನು ಮಾಡುವಾಗ ಅವರನ್ನು ‘ಶೋಷಿತ ವರ್ಗ’ ಎಂದೇ ಉಲ್ಲೇಖಿಸುತ್ತಿದ್ದರು.
ಶೋಷಿತ ವರ್ಗಕ್ಕೆ ಪ್ರತ್ಯೇಕ ಮತಕ್ಷೇತ್ರ ನಿರ್ಮಾಣವನ್ನು ವಿರೋಧಿಸಿ 1932 ರ ಸೆಪ್ಟೆಂಬರ್ ನಲ್ಲಿ ಪುಣೆಯ ಯೆರವಡಾ ಸೆರೆಮನೆಯಲ್ಲಿ ಗಾಂಧಿ ಉಪವಾಸ ಸತ್ಯಾಗ್ರಹ ನಡೆಸಿದರು (ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಸೃಷ್ಟಿಗೆ ಅಂಬೇಡ್ಕರ್ ಅವರ ಬೆಂಬಲ ಇತ್ತು ಕೂಡ). ಗಾಂಧಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ಅಂಬೇಡ್ಕರ್ ಅವರು ಮಣಿಯಬೇಕಾಯಿತು.
ರಾಜಿ ಒಪ್ಪಂದದ ಪ್ರಕಾರ, ಶೋಷಿತ ವರ್ಗಕ್ಕೆ ಶಾಸಕಾಂಗದಲ್ಲಿ ಇದ್ದ ಮೀಸಲು ಸ್ಥಾನಗಳ ಸಂಖ್ಯೆ ಹೆಚ್ಚಿಸಲಾಯಿತು. ಆದರೆ ಹಿಂದೂಗಳಿಗೆ ಜಾತಿ ಅಥವಾ ವರ್ಗದ ಆಧಾರದಲ್ಲಿ ಪ್ರತ್ಯೇಕ ಮತಕ್ಷೇತ್ರಗಳ ಯೋಜನೆ ಕೈಬಿಡಲಾಯಿತು. ಈ ಪೂನಾ ಒಪ್ಪಂದಕ್ಕೆ ಸಹಿ ಹಾಕಿದ ನಂತರದ ದಿನಗಳಲ್ಲಿ ಗಾಂಧಿ ಅವರು ಹರಿಜನ ಪದ ಬಳಕೆಯನ್ನು ಹೆಚ್ಚಿಸಿದರು.
‘ಅಸ್ಪೃಶ್ಯರು’ ಎಂಬುದಕ್ಕಿಂತ ಇದು ಕಡಿಮೆ ನಿಕೃಷ್ಟಾರ್ಥಕ, ವಸಾಹತು ಆಡಳಿತ ರೂಪಿಸಿದ ‘ಶೋಷಿತ ವರ್ಗ’ ಎಂಬುದಕ್ಕಿಂತ ಕಡಿಮೆ ವಿನೀತವಾದುದು ಮತ್ತು ತಾವೇ ರೂಪಿಸಿದ ‘ದಮನಕ್ಕೆ ಒಳಗಾದವರು’ ಎಂಬುದಕ್ಕಿಂತ ಹೆಚ್ಚು ದೇಶೀಯವಾದುದು ಎಂದು ಗಾಂಧಿ ಭಾವಿಸಿದ್ದರು.
ಸಂತ ಕವಿ ನರಸಿಂಹ ಮೆಹ್ತಾ ಅವರು ಮಧ್ಯಯುಗದಲ್ಲಿಯೇ ಹರಿಜನ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದ್ದರು. ಗಾಂಧಿಗೆ ಮೆಹ್ತಾ ಬಗ್ಗೆ ಭಾರಿ ಆದರ ಇತ್ತು (ಗಾಂಧಿ ಆಗಾಗ ಹಾಡುತ್ತಿದ್ದ ‘ವೈಷ್ಣವ ಜನ ತೊ’ ಹಾಡನ್ನು ಬರೆದವರು ಮೆಹ್ತಾ). ಅಸ್ಪೃಶ್ಯ ಪದದ ಬದಲಿಗೆ ಹರಿಜನ ಎಂಬ ಪದ ಬಳಕೆಯ ಬಗ್ಗೆ ಗಾಂಧಿ ಹೀಗೆ ಹೇಳಿದ್ದರು– ‘ಹೆಸರು ಬದಲಾಯಿಸುವುದರಿಂದ ಸ್ಥಾನಮಾನದಲ್ಲಿ ಬದಲಾವಣೆ ಆಗುತ್ತದೆ ಎಂದಲ್ಲ. ಕನಿಷ್ಠಪಕ್ಷ ನಿಂದನಾತ್ಮಕವಾದ ಪದ ಬಳಕೆಯಿಂದಲಾದರೂ ಅವರಿಗೆ ವಿನಾಯಿತಿ ಸಿಗಲಿ ಎಂಬುದು ಇದರ ಉದ್ದೇಶ’.
‘ಯಂಗ್ ಇಂಡಿಯಾ’ ಎಂಬ ವಾರಪತ್ರಿಕೆಗೆ ಗಾಂಧಿ ಸಂಪಾದಕರಾಗಿದ್ದರು. 1933 ರಲ್ಲಿ ಈ ಪತ್ರಿಕೆಯ ಹೆಸರನ್ನು ಅವರು ‘ಹರಿಜನ’ ಎಂದು ಬದಲಾಯಿಸಿದರು. ಅಸ್ಪೃಶ್ಯತೆ ನಿವಾರಿಸುವ ಅಭಿಯಾನವು ರಾಜಕೀಯ ಸ್ವಾತಂತ್ರ್ಯ ಪಡೆದುಕೊಳ್ಳುವಷ್ಟೇ ಮಹತ್ವದ್ದು ಎಂದು ಗಾಂಧಿ ನಂಬಿದ್ದು ಇದೇ ಕಾರಣಕ್ಕೆ.
ಭಾರತದ ಯುವಕರು ಮತ್ತು ಹಿರಿಯರು, ಈಗ ಇರುವವರು ಮತ್ತು ಮುಂದಿನ ತಲೆಮಾರಿನವರು ಈ ಪವಿತ್ರ ಧ್ಯೇಯಕ್ಕೆ ಬದ್ಧರಾಗಿರಬೇಕು ಎಂದು ಗಾಂಧಿ ಬಯಸಿದ್ದರು. ಹಿಂದೂ ಮಧ್ಯಮ ವರ್ಗಗಳು ಮತ್ತು ರಾಷ್ಟ್ರೀಯವಾದಿ ಮಾಧ್ಯಮಗಳಲ್ಲಿ ಈ ಹೆಸರು ಚಲಾವಣೆಗೆ ಬಂತು. ಅಸ್ಪೃಶ್ಯರನ್ನು ಹರಿಜನರು ಎಂದು ಕರೆಯುವುದು ಸಾಮಾನ್ಯವಾಯಿತು. ಆದರೆ ಈ ಪದವನ್ನು ಅಂಬೇಡ್ಕರ್ ತಿರಸ್ಕರಿಸಿದರು. ತಮ್ಮ ಸಮುದಾಯವನ್ನು ಬಣ್ಣಿಸಲು ಅವರು ಈ ಪದವನ್ನು ಬಳಸಲೇ ಇಲ್ಲ.
1932 ರ ಸೆಪ್ಟೆಂಬರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಕ್ಕೆ ಮೊದಲು ಗಾಂಧಿ ಅವರು ಅಸ್ಪೃಶ್ಯತೆ ವಿರೋಧಿ ಗುಂಪೊಂದನ್ನು ರಚಿಸಿದ್ದರು. ಅದರ ಜವಾಬ್ದಾರಿಯನ್ನು ತಮ್ಮಿಬ್ಬರು ಆಪ್ತರಾದ ಉದ್ಯಮಿ ಜಿ.ಡಿ.ಬಿರ್ಲಾ ಮತ್ತು ಸಮಾಜ ಸೇವಕ ಎ.ವಿ.ಥಕ್ಕರ್ ಅವರಿಗೆ ವಹಿಸಿದ್ದರು. ಉಪವಾಸ ಕೊನೆಗೊಳಿಸಿ ಪೂನಾ ಒಪ್ಪಂದ ಆದ ನಂತರ ಈ ಗುಂಪಿನ ಹೆಸರನ್ನು ಹರಿಜನ ಸೇವಕ ಸಂಘ ಎಂದು ಬದಲಿಸಲಾಯಿತು.
ಸುದೀರ್ಘ ಕಾಲದಿಂದ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಹೋರಾಡುತ್ತಿದ್ದ ಗಾಂಧಿಯ ಸಹವರ್ತಿ ಸಿ.ರಾಜಗೋಪಾಲಾಚಾರಿ (ರಾಜಾಜಿ) ಅವರಿಗೆ ಈ ಹೆಸರು ಬದಲಾವಣೆ ಇಷ್ಟವಾಗಲಿಲ್ಲ. ಹರಿಜನ ಸೇವಕ ಸಂಘ ಎಂಬ ಒಂದು ಸಂಘಟನೆ ಇದೆ ಎಂದಾದರೆ ಅಸ್ಪೃಶ್ಯತೆ ಇದೆ ಎಂಬುದನ್ನು ಒಪ್ಪಿಕೊಂಡಂತೆ ಎಂದು ಅವರು ಹೇಳಿದ್ದರು.
ಅಸ್ಪೃಶ್ಯತೆ ನಿರ್ಮೂಲನೆ ಸಂಘ (ಅನ್‌ಟಚಬಿಲಿಟಿ ಅಬಾಲಿಷನ್ ಲೀಗ್) ಎಂದು ಇದಕ್ಕೆ ಹೆಸರು ಇರಿಸಬೇಕು ಎಂಬುದು ಅವರ ಸಲಹೆಯಾಗಿತ್ತು. ಗುಲಾಮಿ ಪದ್ಧತಿಯ ನಿರ್ಮೂಲನೆಯೇ ಈ ಸಂಘಟನೆಯ ಉದ್ದೇಶವಾಗಿರುವುದರಿಂದ ಆ ಹೆಸರೇ ಹೆಚ್ಚು ಹೊಂದಿಕೆಯಾಗುತ್ತದೆ ಎಂದು ಅವರು ವಾದಿಸಿದ್ದರು. ಒಂದು ಗುಂಪಿನ ಜನರಿಗೆ ಸೇವೆ ಒದಗಿಸುವುದು ಸಂಘಟನೆ ಉದ್ದೇಶ ಅಲ್ಲ ಎಂದು ಅವರು ಹೇಳಿದ್ದರು.
ಹರಿಜನ ಸೇವಕ ಸಂಘದ ಅಧ್ಯಕ್ಷರಾಗಿದ್ದ ಬಿರ್ಲಾ ಮತ್ತು ಕಾರ್ಯದರ್ಶಿ ಥಕ್ಕರ್ ಅವರಿಗೆ ಈ ಬಗ್ಗೆ ರಾಜಾಜಿ ಪತ್ರ ಬರೆದಿದ್ದರು. ಥಕ್ಕರ್ ಅವರು ‘ಸರ್ವೆಂಟ್ಸ್ ಆಫ್ ಅನ್‌ಟಚಬಲ್ಸ್ ಸೊಸೈಟಿ’ ಎಂಬ ಸಂಘಟನೆಯಲ್ಲಿ ದೀರ್ಘ ಕಾಲದಿಂದ ಸದಸ್ಯರಾಗಿದ್ದರು. ಭಿಲ್ ಸೇವಾ ಸಂಘ ಎಂಬ ಸಂಘಟನೆಯನ್ನು ಅವರು ಸ್ಥಾಪಿಸಿದ್ದರು. ಭಾರತ ಎಂಬುದು ಒಂದು ದೇಶ ಮತ್ತು ಭಿಲ್ ಎಂಬುದು ಒಂದು ಬುಡಕಟ್ಟು.
ಈ ಎರಡಕ್ಕೂ ಯಾರಾದರೂ ಸೇವೆ ಸಲ್ಲಿಸಿದರೂ ಸಲ್ಲಿಸದೇ ಇದ್ದರೂ ಅವು ಉಳಿಯುತ್ತವೆ. ಹಾಗಾಗಿ ಈ ಎರಡೂ ಹೆಸರು ಸಮರ್ಪಕ ಎಂಬುದು ರಾಜಾಜಿ ಅವರ ವಾದವಾಗಿತ್ತು. ಆದರೆ ಹರಿಜನ ಸೇವಕ ಸಂಘದ ಉದ್ದೇಶ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವುದು. ಹಾಗಾಗಿ ಅಸ್ಪೃಶ್ಯತೆ ನಿರ್ಮೂಲನೆ ಸಂಘ ಎಂದೇ ಹೆಸರು ಕೊಡಬೇಕು. ಹೆಸರಿನಲ್ಲಿ ನಿರ್ಮೂಲನೆ ಎಂಬುದು ಎದ್ದು ಕಾಣುವಂತಿರಬೇಕು ಎಂದು ಅವರು ಹೇಳಿದ್ದರು.
ರಾಜಾಜಿಯವರ ವಾದ ಗಾಂಧಿಯ ಮನಸ್ಸಿಗೆ ಇಳಿಯಲೇ ಇಲ್ಲ. ‘ಹೆಸರಿನ ಕಾರಣಕ್ಕಾಗಿ ಸಂಘಕ್ಕೆ ಯಶಸ್ಸು ಅಥವಾ ವೈಫಲ್ಯ ಉಂಟಾಗದು. ಅದರ ಕೆಲಸಗಳ ಮೇಲೆಯೇ ಜನರು ಅದನ್ನು ಅಳೆಯುತ್ತಾರೆ’ ಎಂದು ಗಾಂಧಿ ಬರೆದರು.
ಹಾಗಿದ್ದರೂ ತಾವು ಅಪಾರವಾಗಿ ಗೌರವಿಸುತ್ತಿದ್ದ ರಾಜಾಜಿ ಅವರಿಂದ ಈ ಸಲಹೆ ಬಂತು ಎಂಬ ಕಾರಣಕ್ಕೆ ಈ ಬಗ್ಗೆ ಚಿಂತನೆ ನಡೆಸುವಂತೆ ಬಿರ್ಲಾ ಮತ್ತು ಥಕ್ಕರ್ ಅವರಿಗೆ ಸೂಚಿಸಿದರು. ಪುಣೆಯ ಸಮಾಜಸೇವಕ ವಿ.ಆರ್. ಶಿಂಧೆ ಎಂಬುವರು ‘ಆ್ಯಂಟಿ ಅನ್‌ಟಚಬಿಲಿಟಿ ಲೀಗ್’ ಎಂಬ ಸಂಘಟನೆಯನ್ನು ನಡೆಸುತ್ತಿದ್ದರು. ಹಾಗಾಗಿ ಗಾಂಧಿ ಸ್ಥಾಪಿಸಿದ್ದ ‘ಆ್ಯಂಟಿ ಅನ್‌ಟಚಬಿಲಿಟಿ ಲೀಗ್’ನ ಹೆಸರನ್ನು ‘ಸರ್ವೆಂಟ್ಸ್ ಆಫ್ ಅನ್‌ಟಚಬಿಲಿಟಿ ಸೊಸೈಟಿ’ ಎಂದು ಆಗಷ್ಟೇ ಬದಲಾಯಿಸಲಾಗಿತ್ತು. ಆಗಾಗ ಹೆಸರು ಬದಲಾವಣೆ ಬೇಡ ಎಂಬ ಕಾರಣಕ್ಕೆ ಬಿರ್ಲಾ ಮತ್ತು ಥಕ್ಕರ್ ಅವರು ರಾಜಾಜಿ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು.
ರಾಜಾಜಿ ಅವರಿಗೆ ಥಕ್ಕರ್ ಅವರು ಈ ಬಗ್ಗೆ ಪತ್ರ ಬರೆದು, ‘ಹೆಸರು ಬದಲಾವಣೆಗೆ ಸಂಘಟನೆಯ ಮಂಡಳಿ ಒಪ್ಪಿಗೆ ನೀಡಿದೆ. ಈ ಮಾಹಿತಿಯನ್ನು ಪತ್ರಿಕೆಗಳಿಗೂ ನೀಡಲಾಗಿದೆ. ಅದೇ ಹೆಸರಿನಲ್ಲಿ ಲೇಖನ ಸಾಮಗ್ರಿ ಮುದ್ರಿಸಲಾಗಿದೆ. ಜತೆಗೆ ಜನರೂ ಬದಲಾದ ಹೆಸರಿಗೆ ಹೊಂದಿಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ಮತ್ತೆ ಹೆಸರು ಬದಲಾವಣೆಗೆ ನಿಮ್ಮ ಸಲಹೆ ಬಂದಿದೆ. ಬಾಪು ಅವರೂ ಅದನ್ನು ಒಪ್ಪಿದ್ದಾರೆ. ಆದರೆ ಮತ್ತೆ ಹೆಸರು ಬದಲಾವಣೆ ಮಾಡುವುದು ಸ್ವಲ್ಪ ಕಷ್ಟ’ ಎಂದು ಹೇಳಿದ್ದರು.
ಅಸ್ಪೃಶ್ಯರನ್ನು ಅಸ್ಪೃಶ್ಯರಾಗಿಯೇ ಉಳಿಸಿಕೊಳ್ಳುವುದು ಸಂಘಟನೆಯ ಉದ್ದೇಶ ಅಲ್ಲದಿರುವುದರಿಂದ ರಾಜಾಜಿ ಅವರ ಸಲಹೆ ಸಾಕಷ್ಟು ತಾರ್ಕಿಕವಾಗಿದೆ ಎಂಬುದನ್ನು ಥಕ್ಕರ್ ಒಪ್ಪಿಕೊಂಡಿದ್ದರು. ಆದರೆ ಮತ್ತೆ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ಅವರು ಹೀಗೆ ವಿವರಿಸಿದ್ದರು: ‘ಈಗ ಮತ್ತೊಮ್ಮೆ ಹೆಸರು ಬದಲಾವಣೆಯನ್ನು ನಾವು ಮಂಡಳಿಯ ಮುಂದಿಟ್ಟರೆ ಅಲ್ಲಿರುವವರು ನಮ್ಮನ್ನು ಗೇಲಿ ಮಾಡಬಹುದು ಮತ್ತು ಹೆಸರು ಬದಲಾವಣೆಗೆ ಒಪ್ಪದಿರಬಹುದು. ಅವರು ಮಾತ್ರವಲ್ಲ, ಜನರು ಮತ್ತು ಮಾಧ್ಯಮದವರು ಕೂಡ ನಮ್ಮನ್ನು ಗೇಲಿ ಮಾಡಬಹುದು. ಹಾಗೆ ಅವರು ಗೇಲಿ ಮಾಡುವುದಕ್ಕೆ ಸಮರ್ಥನೆಯೂ ಇದೆ’ ಎಂದು ಅವರು ಹೇಳಿದ್ದರು. ಹೆಸರು ಬದಲಾವಣೆ ಸರಿಯಾದ ಕ್ರಮ ಆದರೂ ಈಗ ಅದನ್ನು ಜಾರಿಗೆ ತರುವುದು ಉಚಿತವಲ್ಲ ಎಂಬುದು ಥಕ್ಕರ್ ಅವರ ಅಭಿಪ್ರಾಯವಾಗಿತ್ತು.
ಇದು ಭಾರತಕ್ಕೇ ವಿಶಿಷ್ಟವಾದ ಸನ್ನಿವೇಶ. ತರ್ಕ ಮತ್ತು ವಿವೇಚನೆಯ ಮೇಲೆ ಅಧಿಕಾರಶಾಹಿಯ ಜಡತ್ವಕ್ಕೆ ಜಯವಾಗಿತ್ತು. ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗಬಹುದು, ಲೇಖನ ಸಾಮಗ್ರಿಯನ್ನು ಮತ್ತೆ ಮುದ್ರಿಸಬೇಕು ಎಂಬ ಕಿರಿಕಿರಿಯಿಂದಾಗಿ ಯಥಾಸ್ಥಿತಿ ಮುಂದುವರಿಯಿತು. ಹಾಗಾಗಿ ಪರ್ಯಾಯ ಹೆಸರು ಹೆಚ್ಚು ಸಮರ್ಪಕ ಮತ್ತು ನೇರವಾಗಿದ್ದರೂ ಹರಿಜನ ಸೇವಕ ಸಂಘ ಎಂಬ ಹೆಸರೇ ಉಳಿಯಿತು.
ಕಳೆದ ಕೆಲವು ದಶಕಗಳಿಂದ ದಲಿತ ಚಿಂತಕರು ಮತ್ತು ಹೋರಾಟಗಾರರು ತಮ್ಮನ್ನು ‘ಹರಿಜನ’ ಎಂದು ಕರೆದುಕೊಳ್ಳುವುದನ್ನು ತಿರಸ್ಕರಿಸಿದ್ದಾರೆ.
ಆರ್.ಎಸ್. ಖಾರೆ ಅವರು ಉಲ್ಲೇಖಿಸಿದ ಸುಧಾರಕನ ಹೇಳಿಕೆ ಸಂಪೂರ್ಣವಾಗಿ ಪ್ರಾತಿನಿಧಿಕ. ಗಾಂಧಿ ಅವರು ಜೀವಿಸಿದ್ದಾಗಲೇ ಕೆಲವು ಜನರು ‘ಹರಿಜನ’ ಪದ ಕರುಣಾಜನಕ ಎಂದು ಭಾವಿಸಿದ್ದರು. ‘ಈ ಪದ ಎಷ್ಟು ಪವಿತ್ರವಾಗಿದ್ದರೂ ಅದನ್ನು ಯಾರಿಗೆ ಅನ್ವಯಿಸಲಾಗುತ್ತದೆಯೋ ಅವರ ಮನಸ್ಸಿನಲ್ಲಿ ಕೀಳರಿಮೆ ಮೂಡಿಸುತ್ತದೆ’ ಎಂದು 1944ರ ಏಪ್ರಿಲ್‌ನಲ್ಲಿ ಪತ್ರಕರ್ತರೊಬ್ಬರು ಗಾಂಧಿಗೆ ಹೇಳಿದ್ದರು.
ಹರಿಜನ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಈ ಹೆಸರನ್ನು ತಮಗೆ ಸೂಚಿಸಿದ್ದರು ಎಂದು ಗಾಂಧಿ ಉತ್ತರಿಸಿದ್ದರು. ‘ಕೀಳರಿಮೆಯ ಭಾವನೆ ಹೋಗಲೇಬೇಕು. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ಪ್ರತಿ ಹಿಂದೂ ತನ್ನಲ್ಲಿರುವ ಮೇಲರಿಮೆಯನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಹರಿಜನರ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು… ಆಗ ಹರಿಜನ ಹೆಸರಿನ ಅರ್ಥದ ಹಾಗೆಯೇ ನಾವು ದೇವರ ಮಕ್ಕಳಾಗಿಬಿಡುತ್ತೇವೆ’ ಎಂದು ಗಾಂಧಿ ಹೇಳಿದ್ದರು.
ಗಾಂಧಿಯ ಸಮರ್ಥನೆ ದುರ್ಬಲವಾಗಿತ್ತು ಮತ್ತು ಮನವರಿಕೆ ಆಗುವಂಥದ್ದಾಗಿರಲಿಲ್ಲ. ಗಾಂಧಿಯೇ ಹಿಂದೆ ರೂಪಿಸಿದ್ದ ‘ಶೋಷಿತ ವರ್ಗ’ ಎಂಬ ಹೆಸರು ಸಾಮಾಜಿಕ ತಾರತಮ್ಯವನ್ನು ಸ್ಪಷ್ಟವಾಗಿ ಗುರಿಯಾಗಿಸಿದ್ದರೆ ‘ಹರಿಜನ’ ಪದ ಅದನ್ನು ಸೌಮ್ಯವಾಗಿಸಿತು. ಹಾಗೆಯೇ, ‘ಆ್ಯಂಟಿ ಅನ್‌ಟಚಬಿಲಿಟಿ ಲೀಗ್’ ಎಂಬ ಹೆಸರು ನಂತರ ಬದಲಾಯಿಸಲಾದ ‘ಹರಿಜನ ಸೇವಕ ಸಂಘ’ಕ್ಕಿಂತ ಹೆಚ್ಚು ನೇರವಾಗಿತ್ತು.
ಈಗ ವಿಶ್ಲೇಷಿಸುವುದಾದರೆ, ಹರಿಜನ ಸೇವಕ ಸಂಘ ಎಂಬ ಹೆಸರನ್ನು ಅನ್‌ಟಚಬಿಲಿಟಿ ಅಬಾಲಿಷನ್ ಲೀಗ್ ಎಂದು ಬದಲಾಯಿಸುವಂತೆ ರಾಜಾಜಿ ಅವರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳದೆ ಗಾಂಧಿ ತಪ್ಪು ಮಾಡಿದರು ಅನಿಸುತ್ತದೆ. ಸರಿಯಾದ ಪದ ಮತ್ತು ಪ್ರೇರಣೆ ನೀಡುವಂತಹ ಸಂಕೇತಗಳನ್ನು ಬಳಸುವುದರಲ್ಲಿ ನಿಷ್ಣಾತರಾಗಿದ್ದ ಗಾಂಧಿ ಕೇವಲ ‘ಸೇವೆ’ಗಿಂತ ‘ನಿರ್ಮೂಲನೆ’ ಎಂಬ ಪದ ಹೆಚ್ಚು ಸಮರ್ಥ ಅರ್ಥ ಕೊಡುತ್ತದೆ ಎಂಬುದನ್ನು ಕಂಡುಕೊಳ್ಳಲಿಲ್ಲ.
ಶೋಷಿತ ವರ್ಗ (ಸಪ್ರೆಸ್ಡ್ ಕ್ಲಾಸ್) ಮತ್ತು ಆ್ಯಂಟಿ ಅನ್‌ಟಚಬಿಲಿಟಿ ಲೀಗ್ ಎಂಬ ಹೆಸರುಗಳ ಅರ್ಥ ಧ್ವನಿಸುವ ಭಾರತೀಯ ಭಾಷೆಗಳ ಹೆಸರುಗಳು ದೊರೆಯಬಹುದಾಗಿತ್ತು. ಆದರೆ ಗಾಂಧಿ ಆಯ್ಕೆ ಮಾಡಿದ ಹೆಸರು ಅವರು ಉದ್ದೇಶಿಸಿದ್ದ ಕೆಲಸಕ್ಕೆ ಸಮರ್ಪಕ ಆಗಿರಲಿಲ್ಲ. ಅಷ್ಟೇ ಅಲ್ಲದೆ, ಅಸ್ಪೃಶ್ಯರು ಅನುಭವಿಸುತ್ತಿದ್ದ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸುವುದಕ್ಕಿಂತ ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಹರಿಜನ ಸೇವಕ ಸಂಘದಲ್ಲಿದ್ದ ಸಮಾಜ ಸೇವಕರು ಹೆಚ್ಚು ಒತ್ತು ನೀಡಿದ್ದರು.
ಒಳ್ಳೆಯ ಉದ್ದೇಶದಿಂದಲೇ ರೂಪಿಸಲಾದ ‘ಹರಿಜನ’ ಎಂಬ ಪದ ಆರಂಭದಿಂದಲೇ ಸಮಸ್ಯೆಗಳನ್ನು ಹೊಂದಿತ್ತು. ಒಂದು ಕಾಲದಲ್ಲಿ ಇದು ಹೊಂದಿದ್ದ ಬಳಕೆ ಮತ್ತು ಧ್ವನಿಶಕ್ತಿಗಳೆರಡನ್ನೂ ಕಳೆದುಕೊಂಡು ಬಹಳ ಕಾಲವಾಯಿತು..!
ಹೀಗೆಯೇ ಹರಿಜನರು ಈಗಲೂ ಕೂಡ ಈ ಪದ ಬಳಕೆಯಿಂದ ಹಿಂದೆ ಸರಿದಿಲ್ಲ. ಮತ್ತೂ ಬದಲಾಗಿಲ್ಲ, ಅಷ್ಟೇ ಅಲ್ಲದೇ ಈ ಸವರ್ಣೀಯ ಸಮಾಜವೂ ಕೂಡ ಹರಿಜನರು ಬದಲಾಗಲು ಬಿಡುತ್ತಿಲ್ಲ..!
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…