ಕಲಬುರಗಿ: ಜಿಲ್ಲೆಯ ಎಲ್ಲ ಕನ್ನಡ-ಜನಪರ ಸಂಘಟನೆಗಳು ಮತ್ತು ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗಿನ ಎಲ್ಲ ಶಿಕ್ಷಕ ಹಾಗೂ ಸರಕಾರಿ ನೌಕರರ ವೃಂದದ ಜ್ಞಾನದ ಸಂಪನ್ಮೂಲವನ್ನು ಬಳಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಸದಾ ಕ್ರಿಯಾಶೀಲಗೊಳಿಸುತ್ತೇನೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ, ಸುಮಾರು ಎರಡು ದಶಕಗಳಿಂದ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ನಾಡು-ನುಡಿ, ಶೈಕ್ಷಣಿಕವಾಗಿ ನಿತ್ಯ-ನೂತನ ನಿರಂತರವಾಗಿ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾವಿರಾರು ಜನ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಿದ್ದಾರೆ ಎಂಬುದು ಜಿಲ್ಲೆಯ ಜನತೆಯ ಅಭಿಮಾನದ ಮಾತಾಗಿದೆ. ಹೀಗಾಗಿ ಇದೇ ೨೧ ರಂದು ನಡೆಯಲಿರುವ ಚುನಾವಣೆಯಲ್ಲಿ ಈ ಬಾರಿ ಅಧ್ಯಕ್ಷರಾಗುವುದು ಶತ ಸಿದ್ಧ ಎಂಬ ವಿಶ್ವಾಸವೂ ತೇಗಲತಿಪ್ಪಿ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುವುದು ಎಂಬ ನಿರೀಕ್ಷೆಯಿಚಿದ ಸಾಹಿತಿಗಳು ಹಾಗೂ ಪರಿಷತ್ ಸದಸ್ಯರು ನನ್ನನ್ನು ಚುನಾವಣಾ ಕಣಕ್ಕೆ ಇಳಿಯುವಂತೆ ಪ್ರೇರೆಪಿಸಿ ಬೆಂಬಲವಾಗಿ ನಿಂತಿದ್ದಾರೆ. ಆಯ್ಕೆಯಾದಲ್ಲಿ ಜಿಲ್ಲೆಯ ಸಾಹಿತ್ಯ ಪರಿಷತ್ತಿಗೆ ಹೊಸ ಆಯಾಮ ಮತ್ತು ವಿನೂತನ ರೀತಿಯ ದಿಕ್ಸೂಚಿ ನೀಡುವುದಾಗಿ ತಿಳಿಸಿದರು.
ಕಲಬುರಗಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸದಸ್ಯರು ನನ್ನ ಈವರೆಗಿನ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ನನ್ನ ಬೆಂಬಲಕ್ಕೆ ನಿಂತಿರುವುದು ನನ್ನಲ್ಲಿನ ಉತ್ಸಾಹ ಇಮ್ಮಡಿಗೊಳಿಸಿದಂತಾಗಿದೆ. ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನಾನು ಈಗಾಗಲೇ ಸಾಹಿತ್ಯ ಕ್ಷೇತ್ರಕ್ಕೆ ೧೨ ಕೃತಿಗಳನ್ನು ಸಮರ್ಪಿಸಿದ್ದು, ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನುಡಿ ಸೇವೆ ಸಲ್ಲಿಸಲು ಒಂದು ಬಾರಿ ಅವಕಾಶ ಕೊಡಿ ಎಂದು ಪರಿಷತ್ತಿನ ಸದಸ್ಯರಲ್ಲಿ ವಿನಮ್ರವಾಗಿ ಮನವಿ ಮಾಡಿಕೊಂಡರು.
ಚುನಾವಣೆ ನಿಮಿತ್ತ ಜಿಲ್ಲೆಯಾದ್ಯಂತ ಅನೇಕ ಮತದಾರರನ್ನು ಭೇಟಿಯಾಗಿ ತಮಗೆ ಆಶೀರ್ವದಿಸುವಂತೆ ಕೋರಲಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಸದಾ ಕ್ರಿಯಾಶೀಲವಾಗಿರಲು ತಮಗೆ ಬೆಂಬಲಿಸಲು ತೇಗಲತಿಪ್ಪಿ ಮನವಿ ಮಾಡಿಕೊಂಡರು. ಈ ನೆಲದ ಇತಿಹಾಸವನ್ನು ಪ್ರತಿಬಿಂಬಿಸುವ ಆಲೋಚನಾಪೂರ್ಣ ಮತ್ತು ಆರೋಗ್ಯಪೂರ್ಣ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯದ ಚಿಂತನಾ ನೆಲೆಗಟ್ಟಿನಲ್ಲಿ ನಡೆಸಿಕೊಂಡು ಬಂದಿರುತ್ತೇನೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಎಲ್ಲರ ಆಶೀರ್ವಾದದ ಫಲದಿಂದ ಆಯ್ಕೆಗೊಂಡರೆ ಕನ್ನಡ ಭವನದಲ್ಲಿ ಸರ್ಕಾರದ ಸಹಾಯದಿಂದ ಸುಸಜ್ಜಿತವಾದ ಗ್ರಂಥಾಲಯವನ್ನು ಪುನರ್ ನಿರ್ಮಿಸುವುದು. ಸಾಹಿತ್ಯ ಸಮ್ಮೇಳನಗಳು ಸಾಮಾಜಿಕ ಜಾತ್ರೆಯನ್ನಾಗಿಸದೇ ಅನುಭವ ಮಂಟಪದ ರೀತಿಯಲ್ಲಿ ನಡೆಸಲಾಗುವುದು. ಸಾಹಿತಿ ಹಾಗೂ ಸಹೃದಯನ ನಡುವೆ ಸೇತುವೆಯಾಗಿ ಸಾಹಿತ್ಯದ ಸುಮ ಅರಳಲು ಆ ಮೂಲಕ ಉದಯೋನ್ಮುಖ ಕವಿಗಳಿಗೆ ವೇದಿಕೆಗಳನ್ನು ನೀಡಲಾಗುವುದು. ಹಿರಿಯ ಸಾಹಿತಿ, ಕವಿ-ಕಲಾವಿದರನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅಯೋಜಿಸಲಾಗುವುದು. ನಾಡು-ನುಡಿ. ನೆಲ-ಜಲಕ್ಕೆ ಸಂಬಂಧಿಸಿದಂತೆ ತಕ್ಷಣ ಪ್ರತಿಕ್ರಿಯಿಸುವುದು.
ನಾಡಿನ ಶ್ರೇಷ್ಠ ಸಾಹಿತಿಗಳನ್ನು ಆಹ್ವಾನಿಸಿ ಸಾಹಿತ್ಯ ಕಮ್ಮಟ ಏರ್ಪಡಿಸಿ ಸಾಹಿತ್ಯಿಕ ತರಬೇತಿ ನೀಡಲಾಗುವುದು. ಜಿಲ್ಲೆಯ ಪ್ರತಿಭಾವಂತರ ಕಡೆಗೆ ಇಡೀ ಕನ್ನಡ ನಾಡು ದೃಷ್ಠಿ ಹರಿಸುವಂತೆ ಅವಕಾಶಗಳನ್ನು ಸೃಷ್ಠಿಸಲಾಗುವುದು. ಸಾಹಿತ್ಯದ ಸೌಗಂಧವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಕೊಂಡೊಯ್ಯಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸರ್ಕಾರಿ ಹಾಗೂ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಶ್ರಮಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಕವನ ಸಂಕಲನ, ಕಥಾ ಸಂಕಲನ, ವೈಚಾರಿಕ ಲೇಖನಗಳ ಸಂಗ್ರಹದಂತಹ ಹಲವು ಕೃತಿಗಳನ್ನು ಪ್ರಕಟಿಸುವ ಗುರಿ ಹೊಂದಲಾಗಿದೆ.
ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಕನ್ನಡ ಭವನದ ನಿರ್ಮಾಣ ಹಾಗೂ ಭವನಕ್ಕೆ ಬೇಕಾದ ನಿವೇಶನ ವ್ಯವಸ್ಥೆಗೆ ಶ್ರಮಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರಿಗೆ ಪ್ರತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ಟು ಪಾಲ್ಗೊಳ್ಳುವಂತೆ ಮಾಡಲಾಗುವುದು. ಪತ್ರಕರ್ತರು ಹಾಗೂ ಸಾಹಿತಿಗಳಿಗಾಗಿ ವಿಶೇಷ ಚಿಂತನಾ ಸಮಾವೇಶಗಳು ಆಯೋಜಿಸುವುದು. ವಿವಿಧ ಇಲಾಖೆಗಳಲ್ಲಿ ಸೇವೆಗೈಯ್ಯುತ್ತಿರುವ ಸಾಹಿತ್ಯದ ಅಭಿರುಚಿಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು. ವಿವಿಧ ಕ್ಷೇತ್ರದ ಪ್ರತಿಭಾವಂತರಿಗೆ ಪ್ರೋತ್ಸಾಹಿಸಲಾಗುವುದು.
ಪರಿಷತ್ತಿನ ನಡಿಗೆ ಹಳ್ಳಿಯ ಕಡೆಗೆ ವಿಶೇಷ ಕಾರ್ಯಕ್ರಮ ಯೋಜನೆ ರೂಪಿಸಲಾಗುವುದು.ಕನ್ನಡ ಭವನದಲ್ಲಿರುವ ದಿ.ಬಾಪುಗೌಡ ದರ್ಶನಾಪುರ ರಂಗಮಂದಿರದ ಕಟ್ಟಡದಲ್ಲಿ ಸುಸಜ್ಜಿತವಾದ ಆಸನಗಳ ವ್ಯವಸ್ಥೆ ಹಾಗೂ ಶಾಶ್ವತವಾಗಿ ಧ್ವನಿವರ್ಧಕ ಅಳವಡಿಸಿ, ಸಾಮಾನ್ಯ ಜನರಿಗೂ ಕೂಡ ಕನ್ನಡ ಕಾರ್ಯಕ್ರಮಗಳ ಆಯೋಜನೆಗೆ ಸಹಕರಿಸಲಾಗುವುದು. ಸಾಹಿತಿಗಳು, ಕಲಾವಿದರಿಗೆ ವಿಶ್ರಾಂತಿ ಮತ್ತು ಶುಚಿತ್ವಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿ ಹಾಗೂ ಯುವ ಸಮೂಹದಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳ ಆಯೋಜನೆಗೆ ಗುರಿ ಹೊಂದಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಗಣಕೀಕೃತಗೊಳಿಸಲಾಗುವುದು. ಕಲಬುರಗಿ ಜಿಲ್ಲಾ ಸಾಹಿತಿಗಳ ಪರಿಚಯಗಳನ್ನೊಳಗೊಂಡ ಪುಸ್ತಕ ಪ್ರಕಟಿಸಲಾಗುವುದು. ಈ ಮುಂತಾದ ಗುರಿಗಳ ಬೆನ್ನಟ್ಟಿ, ಸಾಹಿತ್ಯಿಕ-ಸಾಂಸ್ಕೃತಿಕ ಅಭಿವೃದ್ಧಿಗಾಗಿ ವರ್ಷದ ೩೬೫ ದಿನಗಳ ಅವಿರತ ಶ್ರಮವಹಿಸಲು ಕಂಕಣಬದ್ಧನಾಗಿ ನಿಂತಿರುತ್ತೇನೆ. ನುಡಿ ಸೇವೆಗೈಯ್ಯಲು ಒಂದು ಬಾರಿ ಅವಕಾಶ ಕೊಡಿ ಎಂದು ಪರಿಷತ್ತಿನ ಸದಸ್ಯರಲ್ಲಿ ಮನವಿ ಮಾಡಿದರು.
ಕಲ್ಯಾಣಪ್ಪ ಪಾಟೀಲ ಮಳಖೇಡ, ವಿಠ್ಠಲ ದೊಡ್ಮನಿ, ಸುರೇಶ ಡಿ.ಬಡಿಗೇರ, ರವಿ ಲಾತೂರಕರ್, ಸಂದೇಶ ಕಮಕನೂರ, ಶಕೀಲ್ ಅಹ್ಮದ್ ಮಿಯ್ಯಾ, ಡಾ.ಶರಣರಾಜ್ ಛಪ್ಪರಬಂದಿ, ರವಿಂದ್ರಕುಮಾರ ಭಂಟನಳ್ಳಿ, ಪರಮೇಶ್ವರ ಶಟಕಾರ, ಎಂ.ಎಸ್.ಪಾಟೀಲ ನರಿಬೋಳ, ಶಿವರಾಜ ಅಂಡಗಿ, ಪ್ರೊ.ಯಶವಂತರಾಯ ಅಷ್ಠಗಿ, ದೇವೇಗೌಡ ತೆಲ್ಲೂರ, ಶಿವಾನಂದ ಮಠಪತಿ, ವಿಶ್ವನಾಥ ತೊಟ್ನಳ್ಳಿ, ಹಣಮಂತರಾಯ ಅಟ್ಟೂರ, ಕಲ್ಯಾಣಕುಮಾರ ಶೀಲವಚಿತ, ಡಾ.ಬಾಬುರಾವ ಶೇರಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಭಾಗದ ಸಾವಿರಾರು ಜನರಿಗೆ ವೇದಿಕೆ ನೀಡಿರುವ ಸಂಘಟಕ-ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ನೀಡಬೇಕು. – ಕಲ್ಯಾಣಪ್ಪ ಪಾಟೀಲ ಮಳಖೇಡ, ಉಪಾಧ್ಯಕ್ಷರು, ಜಿಲ್ಲಾ ವೀರಶೈವ ಸಮಾಜ, ಕಲಬುರಗಿ
ಜಿಲ್ಲಾ ಕಸಾಪ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದು, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಅವರಿಗಿದೆ. ತಮ್ಮ ಇಡೀ ಜೀವನವೇ ಸಾಂಸ್ಕೃತಿಕ ಲೋಕಕ್ಕೆ ತ್ಯಾಗ ಮಾಡಿರುವ ಇವರನ್ನು ಗೆಲ್ಲಿಸಲು ಸರ್ವರೂ ಪ್ರಯತ್ನ ಮಾಡಬೇಕಾಗಿದೆ. -ಡಾ.ವಿಠ್ಠಲ ದೊಡ್ಮನಿ, ಹಿರಿಯ ದಲಿತ ಮುಖಂಡರು.
ಹೆಚ್ಚಿನ ಸಂಖ್ಯೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಲು ಮತ್ತು ನುಡಿ ಸೇವೆಗೈಯ್ಯಲು ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸಂಘಟಕ-ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಆಶೀರ್ವದಿಸಲಿದ್ದಾರೆ. ಜಿಲ್ಲೆಯಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. – ಸುರೇಶ ಡಿ. ಬಡಿಗೇರ, ಸದಸ್ಯರು, ಕನ್ನಡ ಅಭಿವೃದ್ದಿ ಪ್ರಾಧಿಕಾರ.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…