ಜೈ- ಜವಾನ್-ಜೈ ಕಿಸಾನ್ ಅರವತ್ತರ ದಶಕದಲ್ಲಿ ಅತ್ಯಂತ ಜನಮನ್ನಣೆಯ ಘೋಷಣೆಯಾಗಿತ್ತು. ಆಗ ಭಾರತದ ಪ್ರಧಾನಮಂತ್ರಿ ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಇಂಥ ಘೋಷಣೆ ಮೂಲಕ ರಾಷ್ಟ್ರದ ಗಡಿ ಕಾಯುವ ಸೈನಿಕರು, ಅನ್ನ ನೀಡುವ ರೈತರನ್ನು ಹುರಿದುಂಬಿಸಿದ್ದರು.
ದುರಂತ ಎಂದರೆ ಗಡಿ ಕಾಯುವ ಯೋಧರು ಶತ್ರುಗಳ ಜೊತೆಗೆ ಹೋರಾಟ ನಡೆಸುತ್ತಲೇ ವೀರ ಮರಣವನ್ನಪ್ಪುತ್ತಿದ್ದರೆ, ಅನ್ನದಾತ ಅನಾವೃಷ್ಟಿ ಮತ್ತು ಅತಿವೃಷ್ಟಿಯಲ್ಲಿ ಒಂದು ರೀತಿಯ ಸಂಕಟಕ್ಕೆ ಸಿಲುಕಿ, ಅನಾವೃಷ್ಟಿಯಲ್ಲಿ ಇನ್ನೊಂದು ರೀತಿಯ ಸಂಕಷ್ಟದ ಸುಳಿಗೆ ಸಿಲುಕಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದ್ದಾನೆ.
ಸಮೃದ್ಧ ಬೆಳೆಯಾದ ಸಂದರ್ಭದಲ್ಲಿ ರೈತ ಬೆಳೆದ ಬೆಳೆಗೆ ನ್ಯಾಯಬೆಲೆ ದೊರೆಯುವುದಿಲ್ಲ. ಬರಗಾಲ ಬಂದಾಗಲಂತೂ ರೈತನ ಬದುಕು ನಾಯಿಪಾಡೇ ಸರಿ.
ಇಂತಹ ಎರಡೂ ಸಂದರ್ಭಗಳಲ್ಲೂ ರೈತನನ್ನು ಶೋಷಣೆಗೆ ಗುರಿ ಮಾಡುವವರು ಲೇವಾದೇವಿಗಾರರು ಹಾಗೂ ಕೃಷಿ ಮಾರುಕಟ್ಟೆಗಳ ದಲ್ಲಾಳಿಗಳು. ಇವರಿಂದ ರೈತರಿಗೆ ವಿಮೋಚನೆ ಅನ್ನುವುದೇ ಇಲ್ಲ. ಕಾಲದಿಂದ ಕಾಲಕ್ಕೆ ಅಧಿಕಾರಕ್ಕೆ ಬಂದ ಸರಕಾರಗಳು ರೈತರ ಸಾಲ ಮನ್ನಾ ಮಾಡುತ್ತಲೇ ಇರುತ್ತವೆ.
ಆದರೆ ರೈತರು ಮತ್ತೆ ಸಾಲ ಮಾಡುತ್ತಾರೆ. ಆತ್ಮಹತ್ಯೆಯ ಸರಣಿ ಮುಂದುವರಿಯುತ್ತದೆ. ಕೆಲವು ವರ್ಷಗಳ ನಂತರ ಮತ್ತೆ ಸಾಲ ಮನ್ನಾ ಬೇಡಿಕೆ ಪ್ರಸ್ತಾಪ ಆಗುತ್ತದೆ. ಆದರೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದೇ ಇಲ್ಲ. ಈ ದಿಸೆಯಲ್ಲಿ ರೈತರನ್ನು ಕಾಡುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಇಲ್ಲವೆ.!?
ಭಾರತದ ಉದ್ದಗಲಕ್ಕೂ 2016 ರ ಮಾರ್ಚ್ ತಿಂಗಳವರೆಗೆ, ವಿವಿಧ ರಾಜ್ಯಗಳ ಸಹಕಾರ ಬ್ಯಾಂಕ್‌ಗಳಲ್ಲಿ 77 ದಶಲಕ್ಷ ಕೃಷಿ ಸಾಲ ಖಾತೆಗಳಿವೆ. ಇವುಗಳ ಸರಾಸರಿ ಸಾಲ ಪ್ರಮಾಣ 1.16 ಲಕ್ಷ ರೂಪಾಯಿಗಳು. ಇನ್ನು ಒಂದು ಲಕ್ಷ ದವರೆಗಿನ ಸಾಲದಿಂದ ಆರಂಭಗೊಂಡು ಎರಡು ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಸಾಲ ಪಡೆದಿರುವ ರೈತರ ಬೆಳೆಸಾಲ ರೂ. 6,04,233 ಕೋಟಿ ರೂಪಾಯಿ, ಇದರ ಜೊತೆಗೆ ರೈತರ ಹೂಡಿಕೆ ಸಾಲ ರೂಪಾಯಿ 2,37,620 ಕೋಟಿಗಳಷ್ಟಿದೆ.
ಅಂದರೆ ಬೆಳೆ ಸಾಲ ಮತ್ತು ರೈತರ ಹೂಡಿಕೆ ಸಾಲ ಎರಡನ್ನೂ ಒಟ್ಟಿಗೆ ಸೇರಿಸಿದಾಗ ವಿವಿಧ ರಾಜ್ಯಗಳ ಸಹಕಾರ ಬ್ಯಾಂಕ್‌ಗಳಿಂದ ರೈತರು ಪಡೆದಿರುವ ಒಟ್ಟು ಸಾಲ 8,94,459 ಕೋಟಿ ರೂಪಾಯಿಗಳು. ಇದರಲ್ಲಿ ಮಧ್ಯಮ ಮತ್ತು ಸಣ್ಣ ಹಿಡುವಳಿದಾರರು ಪಡೆದಿರುವ ಒಟ್ಟು ಸಾಲ ರೂಪಾಯಿ 3,57,788 ಕೋಟಿ ರೂಪಾಯಿಗಳು.
ಭಾರತೀಯ ರಿಸರ್ವ್ ಬ್ಯಾಂಕ್ ರೈತರ ಸಾಲ ಮನ್ನಾಗೆ ಸಂಬಂಧಿಸಿದ ಹಾಗೆಯೇ ಎಷ್ಟೆಷ್ಟು ಪ್ರಮಾಣದಲ್ಲಿ ಸಾಲ ಮನ್ನಾ ಮಾಡಬಹುದು ಎನ್ನುವ ಸಂಬಂಧ ನಾಲ್ಕು ಸಾಧ್ಯತೆಗಳನ್ನು ಗುರುತಿಸಿದೆ. ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡುವುದು ಮೊದಲ ಸಾಧ್ಯತೆಯಾಗಿದೆ. ಈ ಸಾಧ್ಯತೆಯಲ್ಲಿ ಅವರು ಸಾಲ ಪಡೆದಿರುವುದು ಯಾವ ಯಾವ ಉದ್ದೇಶಕ್ಕೆ..? ಸಾಲದ ಪ್ರಮಾಣ ಎಷ್ಟು..? ಮತ್ತು ಅವರ ಭೂಹಿಡುವಳಿ ಎಷ್ಟು..? ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳುವುದೇಯಿಲ್ಲ.
ಇದರಂತೆ ಮನ್ನಾ ಮಾಡಬೇಕಾದ ಸಾಲದ ಪ್ರಮಾಣ ರೂ.4,33,000 ಕೋಟಿ ರೂಪಾಯಿಗಳು. ಇನ್ನು ಸಾಧ್ಯತೆ ಎರಡರನ್ವಯ ಹೂಡಿಕೆ ಸಾಲವನ್ನು ಹೊರತುಪಡಿಸಿ ಕೇವಲ ಬೆಳೆ ಸಾಲ ಮನ್ನಾ ಮಾಡಿದರೆ, ಆಗ ಮನ್ನಾ ಮಾಡಬೇಕಾದ ಸಾಲದ ಪ್ರಮಾಣ ರೂ. 3,27,000 ಕೋಟಿ ರೂಪಾಯಿಗಳು ಆಗುತ್ತಿದೆ. ಇದಕ್ಕೆ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ, ಮತ್ತು ಉತ್ತರ ಪ್ರದೇಶ ಮನ್ನಾ ಮಾಡಿರುವ ಬೆಳೆ ಸಾಲವನ್ನು ಗಣನೆಗೆ ತೆಗೆದುಕೊಂಡರೆ ಸಾಲ ಮನ್ನಾದ ಪ್ರಮಾಣ ರೂಪಾಯಿ 3,34,000 ಕೋಟಿಗಳಷ್ಟಾಗುತ್ತದೆ.
ಸಾಧ್ಯತೆ ಮೂರರನ್ವಯ ಕೇವಲ ಮಧ್ಯಮ ಮತ್ತು ಸಣ್ಣ ಹಿಡುವಳಿದಾರರು ಪಡೆದಿರುವ ಸಾಲವನ್ನು ಮಾತ್ರ ಮನ್ನಾ ಮಾಡಿದರೆ, ಆಗ ಮನ್ನಾ ಮಾಡಬೇಕಾದ ಸಾಲದ ಪ್ರಮಾಣ ರೂಪಾಯಿ 2,20,000 ಕೋಟಿ ಆಗುತ್ತಿದೆ. ಈಗಾಗಲೇ ನಾಲ್ಕು ರಾಜ್ಯಗಳು ಮಾಡಿರುವ ಸಾಲ ಮನ್ನಾ ಲೆಕ್ಕಕ್ಕೆ ತೆಗೆದುಕೊಂಡರೆ ಸಾಲ ಮನ್ನಾದ ಪ್ರಮಾಣ ರೂಪಾಯಿ 2,56,000 ಕೋಟಿಗಳಷ್ಟಾಗುತ್ತದೆ.
ಅಂತಿಮವಾಗಿ ಸಾಧ್ಯತೆ ನಾಲ್ಕರನ್ವಯ ಮಧ್ಯಮ ಮತ್ತು ಸಣ್ಣ ಹಿಡುವಳಿದಾರರು ತೆಗೆದುಕೊಂಡಿರುವ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡಿದರೆ, ಮನ್ನಾ ಮಾಡಬೇಕಾದ ಸಾಲದ ಒಟ್ಟು ಪ್ರಮಾಣ ರೂಪಾಯಿ 1,73,000 ಕೋಟಿ. ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಮನ್ನಾ ಮಾಡಿರುವ ಸಾಲದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ ರೂಪಾಯಿ 2,18,000 ಕೋಟಿಯಷ್ಟಾಗುತ್ತದೆ.
ನರೇಂದ್ರ ಮೋದಿಯವರ ಸರಕಾರ ಉದ್ಯಮಪತಿಗಳ ರೂಪಾಯಿ 1,40,000 ಕೋಟಿ ರೂಪಾಯಿಗಳು ಸಾಲ ಮನ್ನಾ ಮಾಡುವುದಾದರೆ, ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಲು ಏಕೆ ಸಾಧ್ಯವಾಗುವುದಿಲ್ಲ ಎನ್ನುವುದೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಶ್ನೆಯಾಗಿದೆ.
ದುರಂತವೆಂದರೆ ರೈತರ ಸಾಲ ಮನ್ನಾ ವಿಷಯದಲ್ಲಿ ಪ್ರತಿಯೊಬ್ಬ ಜನನಾಯಕ ತನಗೆ ಹಾಗೂ ತಾನು ಪ್ರತಿನಿಧಿಸುವ ರಾಜಕೀಯ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ‘ಬೆಂದ ಮನೆಯಲ್ಲಿ ಗಳ ಹಿರಿದಷ್ಟೇ’ ಲಾಭ ಎನ್ನುವಂತಿರುತ್ತದೆ ಅವರ ಚಿಂತನಾ ಸರಣಿ.
ಪ್ರಪ್ರಥಮ ಬಾರಿಗೆ 1990 ರಲ್ಲಿ ವಿಶ್ವನಾಥ ಪ್ರತಾಪ್ ಸಿಂಗ್ ನೇತೃತ್ವದ ಸರಕಾರ ರೈತರ ಹತ್ತು ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿತ್ತು. 2009ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ 72 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿತ್ತು. ಇದರ ಜೊತೆ ಜೊತೆಗೇ ಭಾರತದ ಉದ್ದಗಲಕ್ಕೂ ವಿವಿಧ ರಾಜ್ಯ ಸರಕಾರಗಳು ಮನ್ನಾ ಮಾಡಿರುವ ರೈತರ ಸಾಲ ಒಂದು ಲಕ್ಷ ಕೋಟಿ ರೂಪಾಯಿಯನ್ನು ದಾಟುತ್ತದೆ. ಇಷ್ಟೊಂದು ಸಾಲ ಮನ್ನಾ ಮಾಡಿದ್ದರೂ ರೈತರ ಬದುಕಿನಲ್ಲಿ ಯಾವುದೇ ಗುಣಾತ್ಮಕ ಬದಲಾವಣೆ ಆಗಿಲ್ಲ..!
ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಷ್ಟೊಂದು ಸಾಲ ಮನ್ನಾ ಮಾಡುತ್ತಿದ್ದರೂ, ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಕೇಂದ್ರ ಸರಕಾರ ಸುಪ್ರೀಂ ಕೋರ್ಚ್‌ಗೆ ಸಲ್ಲಿಸಿರುವ ಅಂಕಿ-ಅಂಶಗಳ ಪ್ರಕಾರ, 2013ರಿಂದ ಇಲ್ಲಿಯವರೆಗೆ ಭಾರತದ ಉದ್ದಗಲಕ್ಕೂ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ 12,602ರಷ್ಟಿದೆ.
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಅತಿ ಕಡಿಮೆ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವುದು ತಮಿಳುನಾಡಿನಲ್ಲಿ. ಕರ್ನಾಟಕದಲ್ಲಿ 2013ರ ನವಂಬರ್ ತಿಂಗಳಿನಿಂದ 2018ರ ಮಾರ್ಚ್ ತಿಂಗಳವರೆಗೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ 3816ಯ ಗಡಿ ದಾಟುತ್ತದೆ..!
ಇಂತಹ ಪರಿಸ್ಥಿತಿಯಲ್ಲಿ ಬೇರುಮಟ್ಟದಲ್ಲಿ ರೈತರನ್ನು ಕಾಡುತ್ತಿರುವ ಸಮಸ್ಯೆಗಳ ಅಧ್ಯಯನ ಮಾಡಿ ಅದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಕ್ರಿಯಾ ಯೋಜನೆಯನ್ನು ಸರಕಾರ ರೂಪಿಸಬಹುದು. ಆದರೆ ಸರ್ಕಾರಗಳು ಹಾಗೆ ಮಾಡುತ್ತಲೇ ಇಲ್ಲ.
ನೋಡಿ ಎಪ್ಪತ್ತರ ದಶಕದಲ್ಲಿ ‘ಉಳುವವನೇ ನೆಲದೊಡೆಯ’ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಗೇಣಿದಾರರಿಗೆ ಭೂಮಿ ದೊರಕಿಸಿಕೊಡಲು ‘ಭೂ ನ್ಯಾಯಮಂಡಳಿ’ಗಳನ್ನು ಸ್ಥಾಪಿಸಿದ್ದರು. ಅದೇ ಮಾದರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಾಲ್ಲೂಕು ಮಟ್ಟದಲ್ಲಿ ‘ರೈತ ನ್ಯಾಯಮಂಡಳಿ’ಗಳನ್ನು ಸ್ಥಾಪಿಸಬೇಕು.
ತಹಸೀಲ್ದಾರ್ ನೇತೃತ್ವದ ‘ರೈತ ನ್ಯಾಯಮಂಡಳಿ’ಯಲ್ಲಿ ತಾಲೂಕಿನ ಕೃಷಿ ಅಧಿಕಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಸದಸ್ಯರಾಗಿರಬೇಕು. ಇವರ ಜೊತೆಗೆ ರೈತರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿರುವ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಲಿ ‘ರೈತ ನ್ಯಾಯಮಂಡಳಿ’ಯ ಸದಸ್ಯರಾಗಿರಬೇಕು.
ಈ ಸಮಿತಿ ಸಮರೋಪಾದಿಯಲ್ಲಿ ತಮ್ಮ ತಮ್ಮ ತಾಲ್ಲೂಕು ಮಟ್ಟದಲ್ಲಿ ಸಂಕಷ್ಟದಲ್ಲಿರುವ ರೈತರ ಪಟ್ಟಿ ಮಾಡಬೇಕು. ಒಂದು ವೇಳೆ ಅಧಿಕಾರಿಗಳು ಸಿದ್ಧಪಡಿಸಿದ ಪಟ್ಟಿಯಿಂದ ಸಂಕಷ್ಟದಲ್ಲಿರುವ ಯಾವುದೇ ರೈತನ ಹೆಸರು ಬಿಟ್ಟು ಹೋಗಿದ್ದರೆ, ಅಂಥ ರೈತ ತನ್ನ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು. ಸರಕಾರ ಸಿದ್ಧಪಡಿಸಿದ ಈ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳದ ರೈತರಿಗೆ ಸರಕಾರ ಯಾವುದೇ ರಕ್ಷಣೆ ನೀಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು.
ಆ ಪಟ್ಟಿ ಸಿದ್ಧಗೊಂಡ ತಕ್ಷಣ ಸರಕಾರ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದಕ್ಕೆ ಪೂರಕ ಪ್ಯಾಕೇಜಯನ್ನು ಪ್ರಕಟಿಸಬೇಕು. ಸಂಕಷ್ಟಕ್ಕೊಳಗಾದ ರೈತನ ದೈನಂದಿನ ಜೀವನ ನಿರ್ವಹಣೆಯಿಂದ ಆರಂಭಗೊಂಡು ಮಕ್ಕಳ ಶಿಕ್ಷಣ, ಲೇವಾದೇವಿಗಾರರ ಕಾಟ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್ ಸಾಲಗಳಿಂದ ತಾತ್ಕಾಲಿಕ ರಕ್ಷಣೆ ನೀಡಬೇಕು. ರೈತನ ಆತ್ಮವಿಶ್ವಾಸ ಮೂಡಿಸುವುದಕ್ಕೆ ಪೂರಕ ತರಬೇತಿಗಳನ್ನು ರೂಪಿಸಬೇಕು.
ಇಂಥದೊಂದು ಕ್ರಿಯಾ ಯೋಜನೆಯನ್ನು ರೂಪಿಸಿದಾಗ ಸಂಕಷ್ಟದಲ್ಲಿರುವ ರೈತರು ಮಾತ್ರ ಸರಕಾರದ ರಕ್ಷಣೆಯ ವ್ಯಾಪ್ತಿಗೆ ಬರುತ್ತಾರೆ. ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇರುವ ರೈತರು ಸಾಲ ಹಿಂದಿರುಗಿಸಲೇಬೇಕಾಗುತ್ತದೆ. ನಿಜ ಅರ್ಥದಲ್ಲಿ ‘ರೈತ ನ್ಯಾಯಮಂಡಳಿ’ ಮೂಲಕ ಸಂಕಷ್ಟದಲ್ಲಿರುವ ರೈತರನ್ನು ಸರಕಾರ ದತ್ತು ತೆಗೆದುಕೊಂಡು ಒಂದರೆಡು ವರ್ಷಗಳ ಕಾಲ ಅವನ ಜವಾಬ್ದಾರಿ ಹೋರಬೇಕು..!
ಒಂದು ವೇಳೆ ಸರಕಾರ ಇಂಥದೊಂದು ‘ರೈತ ನ್ಯಾಯಮಂಡಳಿ’ ಎನ್ನುವ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದರೆ, ದಿನಬೆಳಗಾದರೆ ಕೇಳಿಬರುತ್ತಿರುವ ರೈತರ ಆತ್ಮಹತ್ಯೆ ಆತಂಕಕಾರಿ ದುರ್ಘಟನೆಗಳಿಗೆ ಕಡಿವಾಣ ಬೀಳುತ್ತದೆ. ಬೇರೆ ಬೇರೇ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡು ‘ರೈತ ಆತ್ಮಹತ್ಯೆ’ ನೆಪದಲ್ಲಿ ಪರಿಹಾರ ಕೇಳುವ ಪ್ರಯತ್ನಗಳು ನಾಪತ್ತೆಯಾಗುತ್ತವೆ. ಪ್ರಸಕ್ತ ಹಿನ್ನೆಲೆಯಲ್ಲಿ ಸರಕಾರ ಪ್ರತಿ ತಾಲ್ಲೂಕು ಮಟ್ಟದಲ್ಲಿ ‘ರೈತ ನ್ಯಾಯಮಂಡಳಿ’ ಸ್ಥಾಪಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು.
ಇದರಿಂದ ತಮ್ಮ ಅಹವಾಲು ಹೇಳಿಕೊಳ್ಳಲು ಕಾನೂನುಬದ್ಧ ಅಧಿಕಾರವಿರುವ ಸಂಸ್ಥೆ ತಮ್ಮ ಜೊತೆಗಿದೆ ಎನ್ನುವ ವಿಶ್ವಾಸ ರೈತರಲ್ಲಿ ಮೂಡುತ್ತದೆ. ಇಂಥದೊಂದು ರಾಜಕೀಯ ಇಚ್ಛಾಶಕ್ತಿಯನ್ನು ಮುಖ್ಯಮಂತ್ರಿ ಈಗ ಬಸವರಾಜ ಬೊಮ್ಮಾಯಿ ಪ್ರಕಟಿಸುವರೆ.!?
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…