ಸೇಡಂ: ಅಪೌಷ್ಠಿಕತೆ ನಿವಾರಣೆಗಾಗಿ ರಾಜ್ಯ ಸರಕಾರ ಹಲವು ಯೋಜನೆ ರೂಪಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಇರುವ ಪೋಷಣ್ ಅಭಿಯಾನವನ್ನೂ ಸಹ ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಪೋಷಣ್ ಅಭಿಯಾನ ಯಶಸ್ವಿ ನಿರ್ವಹಣೆಗಾಗಿ ಪಾರದರ್ಶಕ ವ್ಯವಸ್ಥೆ ಮತ್ತು ಅಪೌಷ್ಠಿಕತೆಯನ್ನು ಶೀಘ್ರವೇ ನಿವಾರಣೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಲಾಗಿದೆ. ಆದರೆ ಹಲವಾರು ತಿಂಗಳುಗಳಿಂದ ಫೋನಗಳಿಗೆ ರೀಚಾರ್ಜ್ ಮಾಡಿಸದ ಪರಿಣಾಮ ಕಡತಗಳ ವಿಲೇವಾರಿ ಸ್ಥಗಿತಗೊಂಡಿದೆ. ಕೇಂದ್ರಕ್ಕೆ ದೊರೆಯಬೇಕಾದ ಅಪೌಷ್ಠಿಕ ಮಾಹಿತಿ ಸಮಯಕ್ಕೆ ದೊರೆತಿಲ್ಲ ಎಂಬುದು ಈಗ ಬಹಿರಂಗವಾಗಿದೆ.
ಜನರ ಅಭ್ಯುದಯದ ನಾಟಕವಾಡುವ ಸರಕಾರ ಎಲ್ಲಿಂದ ಅಭಿವೃದ್ಧಿ ಮಾಡಬೇಕು. ಹೇಗೆ ಮಾಡಬೇಕು ಎಂಬ ಕಿಂಚಿತ್ತು ಕಾಳಜಿ ಸಹ ಇಲ್ಲ. ಇದು ನಮ್ಮ ರಾಜ್ಯದ ಜನತೆಯ ದುರ್ದೈವವೇ ಸರಿ. ಜನತೆಗೆ ಅನ್ನ ನೀಡಬೇಕಾದ ಸರಕಾರ ಅನ್ನ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ.
ಕೂಡಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಕಲ್ಪಿಸಬೇಕಾದ ಎಲ್ಲಾ ಸೌಲಭ್ಯವನ್ನು ಕಲ್ಪಿಸಬೇಕು. ಇಲ್ಲವಾದರೆ ಬಹಿರಂಗವಾಗಿ ತಮ್ಮಿಂದ ಅಪೌಷ್ಠಿಕತೆ ನಿವಾರಣೆ ಸಾಧ್ಯವಿಲ್ಲ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸೇಡಂ ಕ್ಷೇತ್ರವೂ ಸಹ ಅತಿ ಹೆಚ್ಚು ಅಪೌಷ್ಠಿಕ ಮಕ್ಕಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸರಿಯಾದ ಮಟ್ಟದಲ್ಲಿ ಪೌಷ್ಠಿಕ ಆಹಾರ ದೊರೆಯುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.