ಕಲಬುರಗಿ: ಸಾರ್ವಜನಿಕರ ಸಮಸ್ಯೆಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳ ಸಮಕ್ಷಮದಲ್ಲಿ ಒಂದೇ ಸ್ಥಳದಲ್ಲಿ ಖುದ್ದಾಗಿ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ “ಸ್ಪಂದನ ಕಲಬುರಗಿ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ರಸ್ತೆ ಅಗಲೀಕರಣ ಮಾಡಬೇಕು, ರಸ್ತೆ ಅಗಲೀಕರಣದಲ್ಲಿ ಹೋದ ಜಮೀನಿಗೆ ಪರಿಹಾರ ಕೊಡಬೇಕು, ಕೃಷಿ ಬೆಳೆ ಸಾಲ ಮನ್ನಾ ಮಾಡಬೇಕು, ಪಾಲಿಕೆಯ ಶೇ.7.5 ಮತ್ತು ಶೇ.5ರಲ್ಲಿ ಗ್ಯಾಸ್ ಒದಗಿಸಬೇಕು. ತಿಚಕ್ರ ವಾಹನ ಕೊಡಿಸಿ, ಮನೆ ಮಂಜೂರು ಮಾಡಿ ಎಂಬಿತ್ಯಾದಿ ತರಹೇವಾರಿ ನೂರಾರು ಸಮಸ್ಯೆಗಳಿಗೆ ಡಿ.ಸಿ. ಯಶವಂತ ವಿ. ಗುರುಕರ್ ಕಿವಿಯಾದರು.
ಪ್ರತಿಯೊಬ್ಬರ ಸಮಸ್ಯೆಯನ್ನ ಶಾಂತಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳು, ಇಂದು ಸಲ್ಲಿಸಿದ ಅರ್ಜಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಬರುವುದಾದರೆ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದರೆ ಸೂಕ್ತ ಕಾರಣ ನೀಡಿ ಹಿಂಬರಹ ನೀಡಲಾಗುತ್ತದೆ. ಒಟ್ಟಾರೆ ಸ್ಪಂದನ ಕಲಬುರಗಿಯಲ್ಲಿ ನೀಡಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು ಎಂದು ದೂರುಗಳನ್ನು ಹೊತ್ತಿ ಬಂದ ಸಾರ್ವಜನಿಕರಿಗೆ ತಿಳಿಸಿದರು.
ಇದಕ್ಕು ಮುನ್ನ ಸರಳವಾಗಿ ಸಸಿಗೆ ನೀರೆರೆಯುವ ಮೂಲಕ ಚೊಚ್ಚಲ “ಸ್ಪಂದನ ಕಲಬುರಗಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ ಅವರು, ಕಲಬುರಗಿ ಜಿಲ್ಲೆಯ ಇತಿಹಾಸದಲ್ಲಿ ಮತ್ತು ಇಡೀ ರಾಜ್ಯಕ್ಕೆ ಮಾದರಿಯಾಗಿ ಜನರ ಸಮಸ್ಯೆ ಆಲಿಸಲು “ಸ್ಪಂದನ ಕಲಬುರಗಿ” ಕಾರ್ಯಕ್ರಮ ಆಯೋಜಿಸಿದ ಡಿ.ಸಿ. ಯಶವಂತ ವಿ. ಗುರುಕರ್ ನೇತೃತ್ವದ ಇಡೀ ಜಿಲ್ಲಾಡಳಿತ ಬಳಗಕ್ಕೆ ಅಭಿನಂದನೆ ಸಲ್ಲಿಸುವೆ ಎಂದ ಅವರು ಪ್ರಧಾನಮಂತ್ರಿ ನರೇಂದ್ರ ಅವರ ಕನಸಿನಂತೆ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಆಶಯದಂತೆ ಜಿಲ್ಲೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಡಿ.ಸಿ. ಅವರು ಸ್ಪಂದಿಸುತ್ತಾ ಚುರುಕಾಗಿ ಆಡಳಿತ ನಡೆಸುತ್ತಿದ್ದಾರೆ. ಇದೇ ರೀತಿಯ ಆಡಳಿತ ಶೈಲಿ ಕೆಳ ಹಂತದ ಅಧಿಕಾರಿ-ಸಿಬ್ಬಂದಿಗಳು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ನಿಮಿತ್ಯ ಹಾಕಲಾಗಿರುವ ವಿವಿಧ ಇಲಾಖೆಗಳ ಮಳಿಗೆಗೆ ಭೇಟಿ ನೀಡಿ ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಂಡೆ. ಈ ಯೋಜನೆಗಳ ಕುರಿತು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಸೇರಿ ಎಲ್ಲಾ ಜನಪ್ರತಿನಿಧಿಗಳಿಗೂ ಸಹ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ದೇಶದ 30 ಕೋಟಿ ಅಸಂಘಟಿತ ಕಾರ್ಮಿಕರು ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್ ಪಡೆದಿದ್ದಾರೆ. ಈ ಕಾರ್ಡ್ ಪಡೆಯುವ ಫಲಾನುಭವಿಗೆ ರಸ್ತೆ ಅಪಘಾತದಲ್ಲಿ ಜೀವ ಕಳೆದಕೊಂಡಲ್ಲಿ ಅವಲಂಬಿತರಿಗೆ 2 ಲಕ್ಷ ರೂ. ಮತ್ತು ಸಾಮಾನ್ಯವಾಗಿ ನಿಧನ ಹೊಂದಿದಲ್ಲಿ 1 ಲಕ್ಷ ರೂ. ಜೀವ ವಿಮೆ ಸೌಲಭ್ಯವಿದೆ. ಅಸಂಘಟಿತ ಕಾರ್ಮಿಕರು ಸಾಮಾಜಿಕ ಪಿಂಚಣಿ ಸೇರಿದಂತೆ ಇಂತಹ ಸೌಲಭ್ಯಗಳು ಪಡೆಯಬೇಕೆಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರ ಸೌಲಭ್ಯ ಒದಗಿಸಬೇಕು, ಯಾರು ವಂಚಿತರಾಗಬಾರದೆಂಬ ಉದ್ದೇಶದಿಂದ ಸ್ಥಳದಲ್ಲಿಯೆ ಪರಿಹಾರ ನೀಡುವ ವಿಶಿಷ್ಠ ಮತ್ತು ಬಡವರ ಹೃದಯಕ್ಕೆ ಮುಟ್ಟುವಂತಹ ಕಾರ್ಯಕ್ರಮ ಇದಾಗಿದೆ. ಡಿ.ಸಿ. ಯಶವಂತ ವಿ. ಗುರುಕರ್ ಅವರು ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯ ಹಳ್ಳಿ-ಗಲ್ಲಿಗೂ ಹೋಗಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ 72 ಗಂಟೆಯಲ್ಲಿ ಸಾಮಾಜಿಕ ಪಿಂಚಣಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯಲ್ಲಿ 48 ಗಂಟೆ ಒಳಗೆ ಪಿಂಚಣಿ ನೀಡುವುದಾಗಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ ಎಂದರು.
ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ ಜಿಲ್ಲಾಧಿಕಾರಿಗಳು ತುಂಬಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಉಳಿದ ಅಧಿಕಾರಿಗಳು ಇದನ್ನು ಪಾಲಿಸಬೇಕು. ಜನಪ್ರತಿನಿಧಿಗಳು ದೂರವಾಣಿ ಕರೆ ಮಾಡಿದರೆ ಸ್ಪಂದಿಸಬೇಕು ಎಂದರು.
ರಿಪೋರ್ಟ್ ಕಾರ್ಡ್ ಕೊಡುವೆ: ಡಿ.ಸಿ. ಯಶವಂತ ವಿ. ಗುರುಕರ್ ಅವರು ಮಾತನಾಡಿ ಸಾರ್ವಜನಿಕರು ವಿವಿಧ ಇಲಾಖೆಗಳ ಸಮಸ್ಯೆಗಳ ಪರಿಹಾರಕ್ಕೆ ನನ್ನಲ್ಲಿಗೆ ಬರುತಿದ್ದು, ಇದಕ್ಕೆ ಅಂತ್ಯ ಹಾಡಬೇಕೆಂದು ಕಲಬುರಗಿ ಜಿಲ್ಲಾಡಳಿತದಿಂದ ಪ್ರಥಮ ಬಾರಿಗೆ “ಸ್ಪಂದನ ಕಲಬುರಗಿ” ಕುಂದುಕೊರತೆಗಳ ವಿಲೇವಾರಿ ಕಾರ್ಯಕ್ರಮ ಇಂದು ಆಯೋಜಿಸಿದೆ. ಇಂದಿಲ್ಲಿ ಸ್ವೀಕರಿಸುವ ಪ್ರತಿ ಅರ್ಜಿಗೂ ಲೆಕ್ಕ ಇಡಲಾಗುವುದು. ಮುಂದಿನ “ಸ್ಪಂದನ ಕಲಬುರಗಿ” ಕಾರ್ಯಕ್ರಮದಲ್ಲಿ ಇಂದು ಸ್ವೀಕೃತ ಅರ್ಜಿಗಳ ವಿಲೇವಾರಿಯ ರಿಪೋರ್ಟ್ ಕಾರ್ಡ್ ನೀಡಲಾಗುವುದು ಎಂದರು.
ಕೃಷಿ, ತೋಟಗಾರಿಕೆ, ಕಂದಾಯ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ಆರೋಗ್ಯ, ಭೂ ದಾಖಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಹೀಗೆ 24 ಪ್ರಮುಖ ಇಲಾಖೆಗಳ ಮಳಿಗೆ ತೆರೆಯಲಾಗಿತ್ತು. ಆಯಾ ಮಳಿಗೆಯಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಹಾಜರಿದ್ದು, ಬಂದ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿಕೊಂಡಿದಲ್ಲದೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿ ವಿವಿಧ ಯೋಜನೆಗಳ ಮಡಿಕೆ ಪತ್ರಗಳನ್ನು ನೀಡಿದರು.
ಸೌಲಭ್ಯ ವಿತರಣೆ: ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ 2021-22ನೇ ಸಾಲಿನ ಕೃಷಿ ಯಂತ್ರೋಪಕರಣ ಯೋಜನೆಯಡಿ ಸರ್ಕಾರದ 8 ಲಕ್ಷ ರೂ. ಸಹಾಯಧನ ಜೊತೆಗೆ ಸಂಸ್ಥೆಯ 2 ಲಕ್ಷ ರೂ. ಸೇರಿ 10 ಲಕ್ಷ ರೂ. ವೆಚ್ಚದ ಟ್ರಾಕ್ಟರ್ ಮತ್ತು ಬಿತ್ತನೆ ಕೂರಿಗೆ ಯಂತ್ರವನ್ನು 7 ಫಲಾನುಭವಿ ಸಂಸ್ಥೆಗಳಾದ ಅಫಜಲಪೂರ ತಾಲೂಕಿನ ಮದರಾ ಮಹಾಂತೇಶ್ವರ ರೈತ ಉತ್ಪಾದಕರ ಕಂಪನಿ ನಿ., ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಎನ್.ಆರ್.ಎಲ್.ಎಂ. ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಬೆಳಕು ಸಂಜೀವಿನಿ ಮಹಿಳಾ ಸಂಘಗಳ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಕಾಳಗಿಯ ಶ್ರೀ ನೀಲಕಂಠ ಕಾಳೇಶ್ವರ ಫಾರ್ಮರ್ ಪ್ರೋಡ್ಯೂಸರ್ ಕಂಪನಿ, ಕಮಲಾಪೂರ ತಾಲೂಕಿನ ಗೊಬ್ಬುರವಾಡಿಯ ಶ್ರೀ ರೇವಣಸಿದ್ದೇಶ್ವರ ಸ್ವ-ಸಹಾಯ ಸಂಘ, ಜೇವರ್ಗಿ ತಾಲೂಕಿನ ಮಂದೇವಾಲ ಶ್ರೀ ಶಂಕರಲಿಂಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಸೇಡಂ ತಾಲೂಕಿನ ಶಿಲಾರಕೋಟ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಂಸದ-ಶಾಸಕರು ವಿತರಿಸಿದರು. ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು ಯೋಜನೆಯ ಬಗ್ಗೆ ವಿವರಿಸಿದರು.
146 ಅರ್ಜಿ ಸಲ್ಲಿಕೆ: ಸ್ಪಂದನ ಕಲಬುರಗಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ 146 ಅರ್ಜಿಗಳು ಸಲ್ಲಿಕೆಯಾಗಿದ್ದು, 2 ಅರ್ಜಿಗಳನ್ನು ಸ್ಥಳದಲ್ಲಿ ವಿಲೇವಾರಿ ಮಾಡಿದೆ. ಇಲಾಖಾವಾರು ನೋಡುವದಾದರೆ ಕಂದಾಯ -72, ಮಹಾನಗರ ಪಾಲಿಕೆ-40, ಆಹಾರ-14, ಡಿ.ಡಿ.ಎಲ್.ಆರ್-5, ಜಿಲ್ಲಾ ಕೈಗಾರಿಕಾ ಕೇಂದ್ರ-4, ಕೃಷಿ-3, ಮಹಿಳಾ ಮತ್ತು ಮಕ್ಕಳ ಕಲ್ಯಾಣ-3, ವಕ್ಫ್ ಕಚೇರಿ-2, ಪ್ರವಾಸೋದ್ಯಮ-1, ಕಾರ್ಮಿಕ-1, ಕೆ.ಐ.ಎ.ಡಿ.ಬಿ.-1 ಅರ್ಜಿಗಳು ಸಲ್ಲಿಕೆಯಾಗಿವೆ.
ಕೃಷಿ ಅಭಿಯಾನಕ್ಕೆ ಚಾಲನೆ: ಸಮಗ್ರ ಕೃಷಿ ಅಭಿಯಾನ ಅಂಗವಾಗಿ ರೈತರಲ್ಲಿ ಅರಿವು ಮೂಡಿಸಲು ಕೃಷಿ ಸಂಜೀವಿನಿ ಸಂಚಾರಿ ವಾಹನಗಳಿಗೆ ಸಂಸದ ಡಾ.ಉಮೇಶ ಜಾಧವ ಅವರು ಚಾಲನೆ ನೀಡಿದರು. ಈ ವಾಹನಗಳು ಜೂನ್ 1 ರಿಂದ 6 ವರೆಗೆ ಜಿಲ್ಲೆಯ 32 ಹೋಬಳಿಗಳಲ್ಲಿ ಸಂಚರಿಸಿ ಅನ್ನದಾತರಲ್ಲಿ ಜಾಗೃತಿ ಮೂಡಿಸಲಿವೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ, ಸಹಾಯಕ ಆಯುಕ್ತೆ ಮೋನಾ ರೋಟ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.