ಕಲಬುರಗಿ: ಮತ ಹಾಕುವವರು ಕೇವಲ ಮೋದಿ ಹೆಸರು ನೋಡಿಕೊಂಡು ಓಟು ಹಾಕುವುದಿಲ್ಲ. ಬದಲಿಗೆ ಅಭ್ಯರ್ಥಿಯ ಸಾಧನೆಯನ್ನು ಅಳತೆ ಮಾಡಿ ಓಟು ಹಾಕುತ್ತಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮೋದಿ ಹೇಸರೇಳಿಕೊಂಡು ಮತಯಾಚಿಸುವವರಿಗೆ ಕುಟುಕಿದರು.
ಅವರು ಇಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವಿ.ಕೆ.ಸಲಗರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾಂಗ್ರೇಸ್ ದೇಶಕ್ಕೆ ಏನು ಮಾಡಿದೆ ಎಂದು ಕೆಲವರು ಕೇಳುತ್ತಾರೆ. ಕಾಂಗ್ರೇಸ್ ಪಕ್ಷ ಏನೂ ಮಾಡದಿದ್ದರೆ ಆಣೆಕಟ್ಟಗಳು, ರಸ್ತೆಗಳು, ಕಾಲೇಜುಗಳು, ಸುಸಜ್ಜಿತ ಆಸ್ಪತ್ರೆಗಳು ಇತ್ಯಾದಿ ಆಗುತ್ತಿದ್ದವೇ? ಎಂದು ಪ್ರಶ್ನಿಸಿದರು.
‘ದೋ ಲಂಗ್ಡೆ ಹೋಕೆ ಏಕ್ ಪೈಲ್ವಾನ್ ನಹೀ ಬನ್ತೆ’ ” ಮೂರ್ನಾಲ್ಕು ಮಂದಿ ಖರ್ಗೆನ ಸೋಲಿಸ್ತೀವಿ ಅಂತರ. ಏನಪ ಸೋಲಸಿಲಕ್ಕೇನು ನಿಮ್ಮ ಗಂಟು ತಿಂದಿದಿನಾ ನಾನು? “ದೋ ಲಂಗ್ಡೆ ಹೋಕೆ ಏಕ್ ಪೈಲ್ವಾನ್ ನಹೀ ಬನ್ತೆ” ಎಂದು ಆಕ್ರೋಶ ವ್ಯಕ್ತಪಡಿಸಿ ಏರ್ಪೋರ್ಟ್ ಮಾಡಿದಕ್ಕೆ, ಇಎಸ್ ಐಸಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಜಯದೇವ ಆಸ್ಪತ್ರೆ ಸ್ಥಾಪಿಸದ್ದಕ್ಕೆ ಸೋಲಿಸ್ತೀರಾ? ಎಂದು ಪ್ರಶ್ನಿಸಿದರು.
2009-10 ರಲ್ಲಿ ಹೆಸರು ಉದ್ದು ಬೆಲೆ ತೊಗರಿಗಿಂತಲೂ ಕಡಿಮೆ ಇತ್ತು. ಹಾಗಾಗಿ ತೊಗರಿ ಬೆಲೆಗೆ ಬೆಂಬಲ ಬೆಲೆ ನಿಗದಿಪಡಿಸಲಾಯಿತು. ಮೋದಿ ಬಂದ ಮೇಲೆ ತೊಗರಿ ಖರೀದಿಯನ್ನೇ ನಿಲ್ಲಿಸಿ ಆಫ್ರೀಕಾದಿಂದ ಖರೀದಿಸಲಾಗುತ್ತಿದೆ ಇದರಿಂದಾಗಿ ನಮ್ಮ ರೈತರು ಬೆಳೆದ ತೊಗರಿ ಬೆಲೆ ಪಾತಾಳಕ್ಕಿಳಿದಿದೆ ಎಂದು ಕೇಂದ್ರದ ರೈತ ನೀತಿಯನ್ನು ವಿವರಿಸಿ ಇಂತವರಿಗೆ ರೈತರು ಓಟು ಕೊಡಬೇಕಾ ? ಎಂದರು.
48,000 ಕೋಟಿ ರೂಪಾಯಿ ಹಣವನ್ನು ಇನ್ಶೂರೆನ್ಸ್ ರೂಪದಲ್ಲಿ ರೈತರಿಂದ ಪಾವತಿಸಿಕೊಂಡು ಅವರಿಗೆ ಕೇವಲ 28000 ಕೋಟಿ ಮಾತ್ರ ಹಿಂದಿರುಗಿಸಿದ ಇನ್ಶೂರೆನ್ಸ್ ಕಂಪನಿಗೆ 20,000 ಕೋಟಿ ಲಾಭ ಮಾಡಿಕೊಟ್ಟರು. ಬಸವಣ್ಣನವರ ಮಾತಿನಂತೆ ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರಕಾರದ ಯೋಜನೆಗಳನ್ನೇ ಕಾಪಿ ಮಾಡಿ ಅದನ್ನೂ ಕೂಡಾ ಸರಿಯಾಗಿ ಜಾರಿಗೆ ತರದ ಮೋದಿಯನ್ನು ಜನಪರ ಎನ್ನಬೇಕೆ? ಆಹಾರ ಭದ್ರತೆ ಕಾಯಿದೆ ಪ್ರಕಾರ ರಾಜ್ಯದಲ್ಲಿ ಪ್ರತಿ ಬಡ ಕುಟುಂಬಗಳಿಗೆ ಪುಕ್ಕಟೆಯಾಗಿ ಅಕ್ಕಿ ವಿತರಿಸಲಾಗುತ್ತಿದೆ ಇದಲ್ಲವೇ ಜನಪರ ಸರಕಾರದ ನೀತಿಗಳು ಎಂದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ 10 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಬದಲಿಗೆ ಮೂರು ಕೋಟಿ ಉದ್ಯೋಗ ಕಡಿತಗೊಳಿಸಲಾಗಿದೆ ಇದನ್ನು ಮತದಾರರು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
Article 371 ( J) ಅನ್ವಯ ಹೈ ಕ ಭಾಗದಲ್ಲಿ ಒಟ್ಟು 32,000 ಜನರು ಸರಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ನಿಮ್ಮ ಆಶೀರ್ವಾದ ಹಾಗೂ ಸೋನಿಯಾಗಾಂಧಿಯವರ ಆಸಕ್ತಿ ಕಾರಣ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರೇವೂ ನಾಯಕ ಬೆಳಮಗಿ, ಬಾಬುರಾವ್ ಚವ್ಜಾಣ್, ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.