ಚಿಂಚೋಳಿ: ಕ್ಷೇತ್ರದಲ್ಲಿ ಅತಿವೃಷ್ಟಿಯಾಗಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿ ಕ್ಷೇತ್ರದ ಜನತೆ ತತ್ತರಿಸಿ ಹೋಗಿದ್ದಾರೆ ಆದರೆ ಚಿಂಚೋಳಿ ಶಾಸಕರು ಚಿಂಚೋಳಿ ಕ್ಷೇತ್ರಕ್ಕೆ ಬರದೆ ಬೆಂಗಳೂರಿನಲ್ಲಿ ಕುಳಿತು ಕೇವಲ ವರ್ಗಾವಣೆ ಕಡತಗಳ ವಿಲೇವಾರಿಯಲ್ಲಿ ಕಾರ್ಯನಿರತರಾಗಿರುತ್ತಾರೆ ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಶರಣು ಪಾಟೀಲ ಮೋತಕಪಲ್ಲಿ ಆರೋಪಿಸಿದ್ದಾರೆ.
ಕಳೆದ ಎಂಟು ತಿಂಗಳಿಂದ ಚಿಂಚೋಳಿ ಕ್ಷೇತ್ರದಲ್ಲಿ ಚಿಂಚೋಳಿಯ ಡಿವೈಎಸ್ಪಿ, ಚಿಂಚೋಳಿ ಠಾಣೆಯ ಪಿಎಸ್ಐ, ಚಿಂಚೋಳಿಯ ಸಿ ಪಿ ಐ, ಮಿರಿಯಾಣ ಠಾಣೆಯ ಪಿ ಎಸ್ ಐ, ಕುಂಚಾವರಂ ಠಾಣೆಯ ಪಿಎಸ್ಐ, ಪಂಚಾಯತ ರಾಜ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ (ಎ ಇ ಇ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ (ಸಿಡಿಪಿಒ), ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಕಾಳಗಿಯ ತಹಸೀಲ್ದಾರ್ ಹೀಗೆ ತಾಲ್ಲೂಕಾ ಮಟ್ಟದ ಸುಮಾರು ಹದಿನೈದಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯಾಗಿದ್ದು ಇನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪೊಲೀಸ್ ಕಾನ್ಸ್ಟೇಬಲ್, ಕ್ಲಾರ್ಕ್ ಮುಂತಾದ ಹೇಳಹಂತದ ಹುದ್ದೆಗಳ ವರ್ಗಾವಣೆಯಂತೂ ಹೇಳತೀರದು. ಅಧಿಕಾರ ಇನ್ನೂ ಕೆಲವೇ ತಿಂಗಳು ಇರುವ ಪ್ರಯುಕ್ತ ಕ್ಷೇತ್ರಕ್ಕೆ ಯಾವುದೇ ಯೋಜನೆಗಳು ತರದೆ ಕೇವಲ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿರುವ ಶಾಸಕರು ಹಣ ಮಾಡುವ ಕೆಲಸದಲ್ಲಿ ನಿರತಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ದುರಿದ್ದಾರೆ.
ಅತಿಯಾದ ಮಳೆಯಿಂದ ಕ್ಷೇತ್ರದಲ್ಲಿ ಹಲವಾರು ಮನೆಗಳು ಬಿದ್ದುಹೋಗಿದ್ದು, ಹೊಲಗಳಲ್ಲಿ ನೀರು ತುಂಬಿ ಹೋಗಿವೆ, ಖರೀಪ್ ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ, ಸಾರ್ವಜನಿಕರ, ರೈತರ ತೊಂದರೆ ಹೇಳತೀರದು, ಕ್ಷೇತ್ರದ ಜನತೆ ತೊಂದರೆಯಲ್ಲಿ ಇದ್ದರು ಸಹ ಶಾಸಕರು ಒಂದೇ ಒಂದು ದಿನ ಗ್ರಾಮಗಳಿಗೆ ಬಂದು ಜನರ ಕಷ್ಟ ಆಲಿಸಲಿಲ್ಲ. ಅವರ ತಂದೆ ಉಮೇಶ್ ಜಾಧವ ಹಾಗೂ ತಾವು ಸ್ವತಃ ಶಾಸಕರಾದ ಮೇಲೆ ತಾವೇ ತಂದಂತಹ ಇಷ್ಟು ಜನ ತಾಲೂಕ ಮಟ್ಟದ ಅಧಿಕಾರಿಗಳ ವರ್ಗಾವಣೆ ಯಾಕೆ ಅನ್ನುವದು ಶಾಸಕರೇ ಸ್ಪಷ್ಟ ಪಡಿಸಬೇಕು. ಇನ್ನು ಮುಂದಾದರೂ ಉಳಿದ ಅಲ್ಪ ಸಮಯದಲ್ಲಿ ಕ್ಷೇತ್ರದ ಕಾಳಜಿ ವಹಿಸಿ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಶಾಸಕರಲ್ಲಿ ಒತ್ತಾಯಿಸಿದ್ದಾರೆ.