ಹೈದರಾಬಾದ್: ರಾಜಕೀಯವಾಗಿ ಎಲ್ಲರ ಗಮನ ಸೆಳೆದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಡುವಿನ ಭೇಟಿ ಹೈದರಾಬಾದ್ʼನಲ್ಲಿಂದು ಸರಿಸುಮಾರು ಮೂರು ಗಂಟೆಗಳ ಕಾಲ ನಡೆಯಿತು.
ಈ ಭೇಟಿಯ ಫಲಶ್ರುತಿಯಾಗಿ ದಸರಾ-ವಿಜಯದಶಮಿಗೆಲ್ಲ ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾದ ರಾಜಕೀಯ ಶಕ್ತಿಯೊಂದು ಹೊರಹೊಮ್ಮಲಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ತಮ್ಮ ಜತೆಯಲ್ಲೇ ಇರಬೇಕು ಎಂದು ಕೆ.ಚಂದ್ರಶೇಖರ್ ರಾವ್ ಅವರು ಮನವಿ ಮಾಡಿದ್ದಾರೆ.
ಇಂದು ಮಧ್ಯಾಹ್ನ ಒಂದು ಗಂಟೆಗೆ ತೆಲಂಗಾಣ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ʼಪ್ರಗತಿ ಭವನʼಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೆ.ಚಂದ್ರಶೇಖರ್ ರಾವ್ ಅವರು, ಮತ್ತವರ ಸಂಪುಟ ಸದಸ್ಯರು ಅತ್ಯಂತ ಆದರಪೂರ್ವಕವಾಗಿ ಬರಮಾಡಿಕೊಂಡರು. ಬಳಿಕ ಇಬ್ಬರೂ ನಾಯಕರು ಮಧ್ಯಾಹ್ನದ ಭೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಸತ್ಕರಿಸಿದ ಕೆಸಿಆರ್ ಅವರು, ಬೆಳ್ಳಿಯ ಶ್ರೀ ಸರಸ್ವತಿ ವೀಣೆಯನ್ನು ನೀಡಿ ಗೌರವಿಸಿದರು.
ಸುದೀರ್ಘ ಸಮಾಲೋಚನೆ: ಕರ್ನಾಟಕ-ತೆಲಂಗಾಣ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಇಬ್ಬರೂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆ.ಚಂದ್ರಶೇಖರ್ ರಾವ್ ಅವರು ಮೂರು ತಾಸಿಗೂ ಹೆಚ್ಚು ಕಾಲ ಮಹತ್ವದ ಮಾತುಕತೆ ನಡೆಸಿದರು.
ಮುಖ್ಯವಾಗಿ ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ವಹಿಸಬೇಕಾದ ಗುರುತರ ಪಾತ್ರದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದರು.
ಅಲ್ಲದೆ, ರಾಷ್ಟ್ರ ಮಟ್ಟದಲ್ಲಿ ಹೊರಹೊಮ್ಮಲಿರುವ ಪರ್ಯಾಯ ರಾಜಕೀಯ ಕೂಟದ ಬಗ್ಗೆಯೂ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ ಕೆಸಿಆರ್ ಅವರು, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಕೋರಿದರು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ರೂಪುಗೊಳ್ಳಲಿರುವ ರಾಜಕೀಯ ವ್ಯವಸ್ಥೆ ಹೇಗಿರುತ್ತದೆ? ಅದರ ಧ್ಯೇಯೋದ್ದೇಶಗಳೇನು? ಯಾವ ದಿಕ್ಕಿನಲ್ಲಿ ಕೆಲಸ ಮಾಡಬೇಕು? ಎಂಬ ಮಾಹಿತಿಯನ್ನು ಕೆಸಿಆರ್ ಅವರು ನೀಡಿದರು.
ದೇಶದಲ್ಲಿರುವ ಆರು ಪ್ರಮುಖ ನಗರಗಳಲ್ಲಿ ಮೂಲಸೌಕರ್ಯ ಕೊರತೆಯಿಂದ ಇಡೀ ದೇಶಕ್ಕೆ ಹಿನ್ನಡೆ ಉಂಟಾಗಿದೆ. ದಿನೇದಿನೆ ನಿರುದ್ಯೋಗ ಹೆಚ್ಚಾಗುತ್ತಿದೆ. ಕೃಷಿ, ಕೈಗಾರಿಕೆಗೆ ಮಾರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಇದೆಲ್ಲವನ್ನು ಸರಿ ಮಾಡುವುದರ ಜತೆಗೆ, ದೇಶದ ಉದ್ದಗಲಕ್ಕೂ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿಯೂ ಹೊಸ ರಾಜಕೀಯ ನಿರ್ಣಾಯಕ ಪಾತ್ರ ವಹಿಸುವ ಬಗ್ಗೆಯೂ ಇಬ್ಬರೂ ನಾಯಕರು ಚರ್ಚೆ ಮಾಡಿದರು.
ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ತೋರಿಸುವುದು ಹಾಗೂ ಪ್ರಾದೇಶಿಕ ಪಕ್ಷಗಳಿಂದಲೇ ಬೆಳೆದ ಬಿಜೆಪಿ ಇಂದು ಅದೇ ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಿರುವ ಕುಟಿಲ ರಾಜಕಾರಣದ ಬಗ್ಗೆಯೂ ಇಬ್ಬರೂ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದರು. ಇದಲ್ಲದೆ, ಕುಮಾರಸ್ವಾಮಿ ಮತ್ತು ಕೆಸಿಆರ್ ಇಬ್ಬರೇ ಕೆಲವೊತ್ತು ಮಾತುಕತೆ ನಡೆಸಿದರು.
ಬಿಜೆಪಿ ಆಡಳಿತ ಬಗ್ಗೆ ಚರ್ಚೆ: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉಂಟಾಗಿರುವ ಪರಿಸ್ಥಿತಿಗಳು ಹಾಗೂ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಬಿಜೆಪಿ ಪಕ್ಷದ ಅಪಾಯಕಾರಿ ರಾಜಕಾರಣದ ಬಗ್ಗೆಯೂ ಅವರು ವಿವರವಾಗಿ ಮಾತನಾಡಿಕೊಂಡರು.
ಶನಿವಾರ ರಾತ್ರಿಯೇ ಹೈದ್ರಾಬಾದ್ ತಲುಪಿದ ಮಾಜಿ ಮುಖ್ಯಮಂತ್ರಿಗಳಿಗೆ, ತೆಲಂಗಾಣದ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ರಾಜ್ಯದ ಅಧಿಕೃತ ಅತಿಥಿಯ (State Guest) ಗೌರವ ಕೊಟ್ಟು ಬರಮಾಡಿಕೊಂಡರು. ಆ ಭೇಟಿಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ.
ಸಚಿವರಾದ ಪ್ರಶಾಂತ ರೆಡ್ಡಿ, ಪಲ್ಲಾ ರಾಜೇಶ್ವರ ರೆಡ್ಡಿ, ಮಧುಸೂಧನಾಚಾರಿ ಸೇರಿದಂತೆ ಟಿಆರ್ ಎಸ್ ಪಕ್ಷದ ಅತ್ಯಂತ ಪ್ರಮುಖ ನಾಯಕರು ಇದ್ದರು.
ಕೆಟಿಆರ್ ಅವರೊಂದಿಗೂ ಚರ್ಚೆ: ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಮಾತುಕತೆಗೆ ಮುನ್ನ ಇಂದು ಬೆಳಗ್ಗೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೆಲಂಗಾಣದ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಕೆ.ಟಿ.ರಾಮಾರಾವ್ (ಕೆಟಿಆರ್) ಅವರೊಂದಿಗೆ ಮಾತುಕತೆ ನಡೆಸಿದರು. ಇವರು ಕೆಆಸಿಆರ್ ಅವರ ಪುತ್ರರೂ ಹೌದು.
ಬೆಳಗ್ಗೆ ಇಬ್ಬರೂ ನಾಯಕರು ಉಪಾಹಾರ ಸೇವಿಸಿದ ನಂತರ ತೆಲಂಗಾಣ, ಕರ್ನಾಟಕ ಸೇರಿದಂತೆ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚನೆ ನಡೆಸಿದರು. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಮಾತುಕತೆ ನಡೆಸುವುದಕ್ಕೆ ಮುನ್ನ ಕುಮಾರಸ್ವಾಮಿ ಅವರು ಸಚಿವರು ಮತ್ತು ಚಂದ್ರಶೇಖರ್ ರಾವ್ ಅವರ ಪುತ್ರರೂ ಆಗಿರುವ ಕೆಟಿಆರ್ ಅವರೊಂದಿಗೆ ಚರ್ಚೆ ನಡೆಸಿದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…