ಕಲಬುರಗಿ: ಅರ್ಜುಣಗಿ ಗ್ರಾಮದಲ್ಲಿ ಸಾರಿಗೆ ಸಂಪರ್ಕಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿನ ಗ್ರಾಮದಲ್ಲಿನ ರೈಲ್ವೆ ಹಳಿಯ ಮೇಲೆ ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದರು.
ಶನಿವಾರ ಅಪಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಅಹವಾಲು ಆಲಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಭೂಮಿ ಮಂಜೂರು ಮಾಡುವುದಾಗಿ ಘೋಷಿಸಿದರು. ಇನ್ನು ಗ್ರಾಮದಲ್ಲಿನ ರಸ್ತೆ, ಕುಡಿಯುವ ನೀರು ಕೆಲಸಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದಾಗಿ ತಿಳಿಸಿದ ಅವರು ಗ್ರಾಮದಲ್ಲಿನ 32 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿರುವುದನ್ನು ಪರಿಶೀಲಿಸಲಾಗುವುದು ಎಂದರು.
ಸರ್ವರಿಗೂ ಅರೋಗ್ಯ ಎಂಬ ಪರಿಕಲ್ಪನೆಯಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿದ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ಮತ್ತು ಎ.ಪಿ.ಎಲ್. ಕುಟಂಬಕ್ಕೆ 1.50 ಲಕ್ಷ ರೂ. ವರೆಗಿನ ಉಚಿತವಾಗಿ ಚಿಕಿತ್ಸೆ ಒದಗಿಸುವ ಆಯುμÁ್ಮನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಕೇವಲ ಶೇ.10 ರಷ್ಟು ಜನ ಮಾತ್ರ ಇದರ ಪ್ರಯೋಜನ ಪಡೆದಿದ್ದಾರೆ. ಬಡದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇವಲ 300 ಕುಟುಂಬ ಮಾತ್ರ ಆರೋಗ್ಯ ಕಾರ್ಡ್ ಮಾಡಿಕೊಂಡಿದ್ದಾರೆ. ಮಾರಣಾಂತಿಕ ಕಾಯಿಲೆ, ರಸ್ತೆ ಅಪಘಾತ ಸಂದರ್ಭದಲ್ಲಿ ಇದು ಬಹಳ ಉಪಯೋಗಕ್ಕೆ ಬರಲಿದೆ. ಜನರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು, 72 ಗಂಟೆಯಲ್ಲಿ ಸಾಮಾಜಿಕ ಪಿಂಚಣಿ ಒದಗಿಸುವ ಯೋಜನೆ ಜಾರಿಯಾಗಿದ್ದು, ವೃದ್ಧರು ಸರ್ಕಾರಿ ಕಚೇರಿಗೆ ಅಲಿಯದೆ ಟೋಲ್ ಪ್ರೀ ಸಂಖ್ಯೆ 155245 ಕರೆ ಮಾಡಿ ಯೋಜನೆಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ರೈತಾಪಿ ವರ್ಗಕ್ಕೆ ವಾರ್ಷಿಕ 5 ಲಕ್ಷ ರೂ. ಉಚಿತ ಚಿಕಿತ್ಸೆ ನೀಡುವ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಿದ್ದು, ಅನ್ನದಾತ ಇದರ ಸೌಲಭ್ಯ ಪಡೆಯಬೇಕು. ಜಿಲ್ಲೆಯಲ್ಲಿ ತಾಂಡಾದಲ್ಲಿ ವಾಸಿಸುವ 30 ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ನೀಡಲು ಸಿದ್ದತೆ ನಡೆದಿದೆ. ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಬೆಳೆ ಹಾನಿಯಾದವರ ಪೈಕಿ 4 ಕಂತಿನಲ್ಲಿ ಜಿಲ್ಲೆಯ 2.40 ಲಕ್ಷ ರೈತರಿಗೆ 230 ಕೋಟಿ ರೂ. ಬೆಳೆ ಪರಿಹಾರ ಒಂದು ತಿಂಗಳಿನಲ್ಲಿಯೇ ನೀಡಲಾಗಿದೆ. ಇನ್ನೆರಡು ಕಂತು ಬಾಕಿಯಿದ್ದು, ಅದರಲ್ಲಿ ಅಫಜಲಪೂರ ತಾಲೂಕಿನ ರೈತರು ಸೇರಿದ್ದಾರೆ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ವೈ.ಪಾಟೀಲ ಅವರು, ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗಡಿ ಗ್ರಾಮವಾದ ಅರ್ಜುಣಗಿ ಸಾರಿಗೆ ಸಂಪರ್ಕದಿಂದ ವಂಚಿತಗೊಂಡಿದೆ. ಗ್ರಾಮದಲ್ಲಿ ರೈಲ್ವೆ ಹಳಿ ಹಾದು ಹೋಗಿದ್ದರಿಂದ, ರೈಲ್ವೆ ಇಲಾಖೆಯಿಂದ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. 1 ಕೋಟಿ ರೂ.ವೆಚ್ಚ ಮಾಡಿ ಬಾವಿ ತೋಡಿದ್ದು, ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹ ರೈಲ್ವೆ ಇಲಾಖೆ ಖ್ಯಾತೆ ತೆಗೆಯುತ್ತಿದೆ. ರೈಲ್ವೆ ಇಲಾಖೆಗೆ ಸಂಪರ್ಕಿಸಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಜೊತೆಗೆ ಗ್ರಾಮದಲ್ಲಿ ರೈಲ್ವೆ ಕೆಳಸೇತುವೆ ಇದ್ದು, ಕಬ್ಬು ತುಂಬಿಕೊಂಡ ಲಾರಿಗಳು ಹೋಗಲು ತೊಂದರೆಯಾಗುತ್ತಿದೆ. ಕೂಡಲೆ ಇಲ್ಲಿ ರೈಲ್ವೆ ರಸ್ತೆ ಮೇಲ್ಸೇತುವೆ (ಆರ್.ಓ.ಬಿ) ಆಗಬೇಕು ಎಂದರು.
ಅರ್ಜುಣಗಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಲ್ ಜೀವನ್ ಮಿಷನ್ ಯೋಜನೆಯಡಿ 90 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಹಂತದಲ್ಲಿದೆ. ಅಂಗನವಾಡಿ ಕಟ್ಟಡಕ್ಕೆ 12 ಲಕ್ಷ ರೂ., ತಾಂಡಾದಲ್ಲಿನ ಸಿ.ಸಿ.ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ. ಮಂಜೂರು ಮಾಡಿದ್ದೇನೆ. ಅರ್ಜುಣಗಿ-ಕುಲಾಲಿ ರಸ್ತೆ ನಿರ್ಮಾಣಕ್ಕಾಗಿ 90 ಲಕ್ಷ ರೂ. ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಲಾಗಿದೆ ಎಂದ ಅವರು ಎರಡನೇ ಬಾರಿಗೆ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದಿರುವ ದಕ್ಷ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದಿಸುವೆ ಎಂದರು.
ಸಾಂಪ್ರದಾಯಿಕ ಸ್ವಾಗತ: ಗ್ರಾಮಸ್ಥರ ಅಹವಾಲು ಆಲಿಸಲು ಗ್ರಾಮಕ್ಕೆ ಆಗಮಿಸಿದ ಡಿ.ಸಿ. ಯಶವಂತ ವಿ. ಗುರುಕರ್ ಮತ್ತು ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಅವರಿಗೆ ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಡಿ.ಸಿ. ಯಶವಂತ ವಿ. ಗುರುಕರ್ ಅವರು ಮೊದಲು ಗ್ರಾಮದೇವತೆ ಚೌಡೇಶ್ವರಿಯ ದರ್ಶನ ಪಡೆದರು.
ನಂತರ ಗ್ರಾಮಸ್ಥರು ಡಿ.ಸಿ. ಯಶವಂತ ವಿ.ಗುರುಕರ್ ಮತ್ತು ತಹಶೀಲ್ದಾರ ಸಂಜೀವಕುಮಾರ ದಾಸರ್ ಅವರನ್ನು ಎತ್ತಿನ ಚಕಡಿಯಲ್ಲಿ ಕೂರಿಸಿ ಡೊಳ್ಳು, ಹಲಗೆ ವಾದನ, ಶಾಲಾ ಮಕ್ಕಳ ಲೇಜಿಮ್ ನೃತ್ಯ, ಕೋಲಾಟದ ಕಲರವದೊಂದಿಗೆ ಕಾರ್ಯಕ್ರಮದ ವೇದಿಕೆ ಸ್ಥಳವಾದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಕರೆತಂದರು.
ಕೆರೆ ಒತ್ತುವರಿ ತೆರವುಗೊಳಿಸಿ, ಸಾರಿಗೆ ಸಂಪರ್ಕ ಕಲ್ಪಿಸಿ:ಗ್ರಾಮಸ್ಥರ ಹಲವು ಅಹವಾಲುಗಳನ್ನು ಡಿ.ಸಿ ಆಲಿಸಿದರು. ಗ್ರಾಮದಲ್ಲಿ 32 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಬೇಕು. ಅರ್ಜುಣಗಿಯಿಂದ ಕುಲಾಲಿ, ನಿಂಬಾಳ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಮಾಡಬೇಕು. ಗ್ರಾಮದಲ್ಲಿ ಸಿ.ಸಿ.ರಸ್ತೆ, ಶೌಚಾಲಯ ನಿರ್ಮಿಸಬೇಕು. ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಆರ್.ಓ.ಬಿ ನಿರ್ಮಿಸಬೇಕು ಪ್ರತಿ ನಿತ್ಯ ಬಸ್ ಓಡಿಸಬೇಕು ಎಂಬಿತ್ಯಾದಿ ಮನವಿಗಳು ಸಾರ್ವಜನಿಕರು, ಸ್ಥಳೀಯ ಜನಪ್ರತಿನಿಧಿಗಳು ಡಿ.ಸಿ. ಗಮನಕ್ಕೆ ತಂದರು.
ಸೌಲಭ್ಯಗಳ ವಿತರಣೆ:ಇದೇ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್, ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ, ಕೃಷಿ ಇಲಾಖೆಯಿಂದ ಹಿಂಗಾರು ಬೆಳೆ ಜೋಳ ಬಿತ್ತನೆಗೆ ಜೋಳದ ಬೀಜ ವಿತರಣೆ, ಸ್ವಾಮಿತ್ವ ಯೋಜನೆಯಡಿ ಡ್ರಾಪ್ಟ್ ಪ್ರಾಪರ್ಟಿ ಕಾರ್ಡ್, ಇ-ಶ್ರಮ ಕಾರ್ಡ್, ವೃದ್ಧರಿಗೆ ಸಾಮಾಜಿಕ ಪಿಂಚಣಿ ಆದೇಶ ಪತ್ರ ವಿತರಣೆ ಮಾಡಲಾಯಿತು. ಯುವ ಮತದಾರರಿಗೆ ವೋಟರ್ ಐ.ಡಿ. ಸಹ ನೀಡಲಾಯಿತು.ಜಾನುವಾರಗಳ ರೋಗ ನಿವಾರಣೆಯ ಮಾಹಿತಿ ಒಳಗೊಂಡ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಗರ್ಭಿಣಿ ಬಾಣಂತಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಸಹ ಜರುಗಿತು.
ಸಾಂಸ್ಕøತಿಕ ಕಾರ್ಯಕ್ರಮ:ಗ್ರಾಮ ವಾಸ್ತವ್ಯ ಭಾಗವಾಗಿ ಶಾಲಾ ಮಕ್ಕಳಿಂದ ಭರತನಾಟ್ಯ, ಸಾಮೂಹಿಕ ನೃತ್ಯ, ಜಾನಪದ ನೃತ್ಯ ನಡೆಯಿತು.
ಬಡದಾಳ ತೇರಿನಮಠದ ಪೂಜ್ಯ ಡಾ.ಚೆನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಡದಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಮೃತ ಮಾತಾರಿ, ಸದಸ್ಯ ಕಮಲಪ್ಪ ವಾಡೇಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಡಿ.ಡಿ.ಎಲ್.ಆರ್. ಶಂಕರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹೆಮೂದ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿ.ಹೆಚ್.ಓ. ಡಾ.ರಾಜಶೇಖರ ಮಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಗಿರಿಜಾ, ಗ್ರೇಡ್ -2 ತಹಶೀಲ್ದಾರ ಪೃಥ್ವಿರಾಜ್, ತಾಲೂಕ ಪಂಚಾಯತ್ ಇ.ಓ. ರಮೇಶ ಸುಲ್ಫಿ, ಸಿ.ಪಿ.ಐ. ರಾಜಶೇಖರ ಬಡದೆಸರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು. ತಹಶೀಲ್ದಾರ ಸಂಜೀವ ಕುಮಾರ ದಾಸರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ವಾಸ್ತವ್ಯ ಅಂಗವಾಗಿ ಅರೋಗ್ಯ ಶಿಬಿರ, ಆಧಾರ ನೊಂದಣಿ, ಕುಂದುಕೊರತೆ ಸ್ವೀಕಾರ ಕೇಂದ್ರ, ಪಡಿತರ ವಿತರಣಾ ಕೇಂದ್ರ, ಇ-ಶ್ರಮ್ ನೋಂದಣಿ ಕೇಂದ್ರ, ಕೃಷಿ ಇಲಾಖೆ ಮಳಿಗೆ ತೆರೆಯಲಾಗಿತ್ತು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…