ಶಹಾಬಾದ: ಸರಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸರಕಾರಿ ನೌಕರರು ಹೋರಾಟಕ್ಕೆ ಇಳಿದಿದ್ದು, ಈ ನಿಟ್ಟಿನಲ್ಲಿ ಚಿತ್ತಾಪೂರದಿಂದ ಹೊರಟ ಒಪಿಎಸ್ ಸಂಕಲ್ಪ ಯಾತ್ರೆಯನ್ನು ಬುಧವಾರ ನಗರದ ಇಎಸ್‍ಐ ಆಸ್ಪತ್ರೆಯ ಮುಂಭಾಗದಲ್ಲಿ ಸ್ವಾಗತಿಸಲಾಯಿತು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಮ ಮಾತನಾಡಿ, ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು ಎಂದು ಆಗ್ರಹಿಸಿ ‘ನಿಶ್ಚಿತ ಪಿಂಚಣಿ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಆರಂಭಿಸಿರುವ ‘ಒಪಿಎಸ್ ಸಂಕಲ್ಪ ಯಾತ್ರೆ’ ಕಲಬುರಗಿ ಜಿಲ್ಲೆಗೆ ತಲುಪಿದೆ.
ನಗರದ ಫ್ರೀಡಂ ಪಾರ್ಕ್‍ನಲ್ಲಿ ಇದೇ 19ರಂದು ‘ಮಾಡು ಇಲ್ಲವೇ ಮಡಿ’ ಎಂದು ಅನಿರ್ದಿಷ್ಟ ಹೋರಾಟ ಆರಂಭಿಸಲು ಸಂಘವು ನಿರ್ಧರಿಸಿದ್ದು, ಅದರ ಪೂರ್ವಭಾವಿಯಾಗಿ ಈ ಯಾತ್ರೆಗೆ ಚಾಲನೆ ನೀಡಲಾಗಿದೆ.
‘ಎನ್‍ಪಿಎಸ್ ಜಾರಿಯಾಗಿ 16 ವರ್ಷ ಕಳೆದಿದೆ. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂಬ ಒತ್ತಾಯ, ಸರ್ಕಾರಿ ನೌಕರರ ಸಂಧ್ಯಾ ಕಾಲದ ಸಾಮಾಜಿಕ, ಆರ್ಥಿಕ ಭದ್ರತೆಯ ಪ್ರಶ್ನೆಯೊಂದಿಗೆ, ಗೌರವ ಮತ್ತು ಘನತೆಯ ಪ್ರಶ್ನೆಯೂ ಆಗಿದೆ. ‘ರಾಜ್ಯದ 2.54 ಲಕ್ಷ ಸರ್ಕಾರಿ ನೌಕರರು ಮತ್ತು ನಿಗಮ ಮಂಡಳಿಗಳು, ಅನುದಾನಿತ ಸಂಸ್ಥೆಗಳಲ್ಲಿರುವ ಅμÉ್ಟೀ ಸಂಖ್ಯೆಯ ನೌಕರರು ಸಂಘದ ಜೊತೆ ಇದ್ದಾರೆ. 2022ರ ರಾಜ್ಯ ಬಜೆಟ್‍ನಲ್ಲಿ ರಾಜಸ್ಥಾನ, ಛತ್ತೀಸಗಡ, ಜಾಖರ್ಂಡ್ ರಾಜ್ಯಗಳು ಎನ್‍ಪಿಎಸ್ ರದ್ದು ಮಾಡಿವೆ. ರಾಜ್ಯ ಸರ್ಕಾರ ಕೂಡಾ ಎನ್‍ಪಿಎಸ್ ರದ್ದುಪಡಿಸಬೇಕು. ಈ ಬೇಡಿಕೆ ಮುಂದಿಟ್ಟು ಈಗಾಗಲೇ ಹಲವು ಪ್ರತಿಭಟನೆ, ಹೋರಾಟಗಳನ್ನು ಸಂಘ ರೂಪಿಸಿದ್ದು, ಇದೀಗ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ತಳವಾರ, ತಾಲೂಕಾ ಅಧ್ಯಕ್ಷ ನಾಗೇಶ, ಪ್ರಾ.ಶಾ.ಶಿ.ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್,ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್, ಅನುದಾನಿತ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಂಘದ ತಾಲೂಕಾಧ್ಯಕ್ಷ ಪ್ರವೀಣ ಹೆರೂರ್, ಸಂತೋಷ ಸಲಗರ, ಶಶಿಕಾಂತ ಭರಣಿ, ಸಂಜಯ ರಾಠೋಡ, ನಾಗೇಶ ಕುಂಬಾರ, ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ, ನಾರಾಯಣ ರೆಡ್ಡಿ, ನಾಗೇಶ ಕುಂಬಾರ, ಸಂದೀಪ, ಅಣವೀರಮ್ಮ, ಅಶ್ವಿನಿ, ವಿಷ್ಣುತೀರ್ಥ ಆಲೂರ,ಶಿವಕುಮಾರ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ, ಗ್ರಾಮ ಲೆಕ್ಕಿಗರಾದ ಶ್ರೀಮಂತ, ಶಿವಾನಂದ ಹೂಗಾರ, ರೇವಣಸಿದ್ದಪ್ಪ ಪಾಟೀಲ ಸೇರಿದಂತೆ ಅನೇಕ ಶಾಲಾ ಶಿಕ್ಷಕರು ಮತ್ತು ಇತರ ಇಲಾಖೆಯ ನೌಕರರು ಇದ್ದರು.