ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಾಳೆ ನಡೆಯಲಿರುವ ಆಳಂದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ಸ್ಥಳವನ್ನು ಕಸಾಪ ಅಧ್ಯಕ್ಷ ಹಣಮಂತ ಶೇರಿ ಸೇರಿದಂತೆ ಅನೇಕರು ಪರಿಶೀಲಿಸಿದರು.
ಶಂಕರಲಿಂಗ ದೇವಸ್ಥಾನದ ಮುಖ್ಯ ಆವರಣದಲ್ಲಿ 70*150 ಅಡಿ ಅಳತೆಯ ಬೃಹತ ವೇದಿಕೆ ನಿರ್ಮಾಣಗೊಳ್ಳುತ್ತಿದ್ದು ವೇದಿಕೆಯ ಮೇಲೆ ಪ್ರತಿ ಗೋಷ್ಠಿಯಲ್ಲಿ 50 ಜನ ಕುಳಿತು ಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಅಲ್ಲದೇ ವೇದಿಕೆಯ ಮುಂಭಾಗದಲ್ಲಿ 800 ಜನರಿಗೆ ಕುಳಿತುಕೊಳ್ಳಲು ಆಸನ, ಮೆರವಣಿಗೆಯ ಆರಂಭದ ಯಳಸಂಗಿ ಕ್ರಾಸನಿಂದ 3 ಸ್ವಾಗತ ಕಮಾನಗಳು, ವೇದಿಕೆಯ ಬೃಹತ ಬ್ಯಾನರ್, ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ 600 ಕನ್ನಡ ಶಾಲುಗಳ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ತಯಾರಿಯ ಮಾಹಿತಿ ನೀಡಿದ್ದಾರೆ.
ಸಮ್ಮೇಳನದ ಮುಖ್ಯ ವೇದಿಕೆಗೆ ಅಳವಡಿಸಿರುವ ಬ್ಯಾನರ್ ಬೆಂಗಳೂರಿನ ಕಲಾವಿದರಿಂದ ಸಿದ್ಧಪಡಿಸಿದ್ದು. ಇದು ದೇವಾಲಯಗಳ ತವರೂರಾಗಿರುವ ಮಾಡಿಯಾಳದ ಪ್ರಮುಖ ದೇವಾಲಯಗಳನ್ನು ಪ್ರತಿಬಿಂಬಿಸಲಿದೆ. ಜನಾನುರಾಗಿ ದಿ. ಮಲ್ಲೇಶಪ್ಪ ಬಿರಾದಾರ ಅವರ ಹೆಸರನ್ನು ಮುಖ್ಯ ವೇದಿಕೆಗೆ ಇಡಲಾಗಿದೆ. ಸಮ್ಮೇಳನದಲ್ಲಿ ಕನಿಷ್ಟ 5 ಸಾವಿರ ಜನ ಭಾಗವಹಿಸುವ ನಿರೀಕ್ಷ ಇದೆ- ಹಣಮಂತ ಶೇರಿ, ಕಸಾಪ ಅಧ್ಯಕ್ಷರು.