ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಇದೇ ಆ.೧೦ರಿಂದ ಜಯನಗರದ ಅನುಭವ ಮಂಟಪದಲ್ಲಿ ಎರಡು ದಿನ ನಡೆಯಲಿರುವ ಮಹಾದೇವಿಯಕ್ಕಗಳ ಸಮ್ಮೇಳನ-೧೨ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ತಮ್ಮ ತಕ್ಷಣದ ಪ್ರತಿಕ್ರಿಯೆ ಹೇಗಿತ್ತು?
ತಕ್ಷಣಕ್ಕೆ ಖುಷಿಯೇನೋ ಆಯ್ತು. ಅದೇವೇಳಯಲ್ಲಿ ನನಗಿಂತಲೂ ಸಾಕಷ್ಟು ಜನರು ಯೋಗ್ಯರಿರುವಾಗ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಕೊಂಚ ಮುಜುಗರ ಕೂಡ ಆಯಿತು. ಆದರೆ ಗೃಹಿಣಿಯರನ್ನೇ ಮಹಾದೇವಿಯಕ್ಕಗಳ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಮೇಲಾಗಿ ಇದು ಗೃಹಿಣಿಯರ ವೇದಿಕೆಯಾಗಿದೆ ಎಂದು ಕೇಳಿ ಸಮಾಧಾನವಾಯಿತು. ಬಸವ ಸಮಿತಿಯ ಡಾ. ವಿಲಾಸವತಿ ತಾಯಿ ಅವರ ಪ್ರೋತ್ಸಾಹ-ಸ್ಫೂರ್ತಿ, ಶರಣಬಸವೇಶ್ವರ ಸಂಸ್ಥಾನ ಮಠದ ಇಂದಿನ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರ ಆಶೀರ್ವಾದ-ಮಾರ್ಗದರ್ಶನ ಇರುವುದರಿಂದ ಒಪ್ಪಿಕೊಂಡೆ.
ತಮ್ಮ ಓದು-ವಿದ್ಯಾಭ್ಯಾಸ, ಪರಿಸರದ ಕುರಿತು?
ಮಹಾದೇವಿಯಕ್ಕರ ಆಶೀರ್ವಾದ ನನ್ನ ಜೀವನದಲ್ಲಿ ಹಂತ ಹಂತವಾಗಿದೆ. ಮೊದಲಿನಿಂದಲೂ ನನಗೆ ಅಧ್ಯಾತ್ಮದಲ್ಲಿ ಹೆಚ್ಚಿನ ಒಲವು, ಆಸಕ್ತಿ. ಅದು ಹೇಗೆಂದರೆ ನಾನು ಓದಿದ ಮಹಾವಿದ್ಯಾಲಯದ ಹೆಸರು ಬೀದರ್‌ನ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ. ಅಲ್ಲಿ ನಾನು ಬಿ.ಎ. ಓದುತ್ತಿದ್ದಾಗ ಅಕ್ಕಮಹಾದೇವಿಯವರ “ಛದ್ಮವೇಷ” (ಫ್ಯಾನ್ಸಿಡ್ರೆಸ್) ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆಗ ಆ ಮಹಾವಿದ್ಯಾಲಯದ ಅಧ್ಯಕ್ಷರು ವೇದಿಕೆ ಮೇಲೆ ಬಂದು ಸಾಕ್ಷಾತ್ ಅಕ್ಕಮಹಾದೇವಿಯಂತೆ ಕಾಣುತ್ತಿದ್ದಿಯವ್ವ ಎಂದು ನನ್ನ ಪಾದಗಳಿಗೆ ನಮಸ್ಕರಿಸಿದ್ದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಓದುವಾಗ, ಜಾನಪದದ ಜೊತೆಗೆ ವಚನ ಸಾಹಿತ್ಯವನ್ನೂ ಓದಿದ್ದೆ. ಯೋಗ ವಿಷಯದಲ್ಲಿ ಕೂಡ ಡಿಪ್ಲೊಮಾ ಪದವಿ ಪಡೆದಿರುವೆ.
ನಿಮ್ಮ ಬರವಣಿಗೆ ಬಗ್ಗೆ?
ಈ ಮುಂಚೆಯೇ ತಿಳಿಸಿದಂತೆ ನಾನೊಬ್ಬ ಅಪ್ಪಟ ಗೃಹಿಣಿ. ಶರಣಬಸವೇಶ್ವರ ಸಂಸ್ಥೆ ಹಾಗೂ ಸಂಸ್ಥಾನದ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಬರೆಯುವುದು ಆಗಿಲ್ಲ. ಆದರೆ ಡಿಗ್ರಿಯಲ್ಲಿ ಓದುವಾಗ ಹಲವು ಕವಿತೆ ಬರೆಯುವ ಹವ್ಯಾಸವಿತ್ತು. ಆಗ ಆಶುಕವಿತೆಯೊಂದನ್ನು ಬರೆದು ಅಲ್ಲಿಯೇ ಓದುವ ಮೂಲಕ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ಹಾಗೂ ಬಹುಮಾನ ಪಡೆದಿರುವೆ. ಆ ಶರಣನ ಇಚ್ಛೆ, ಡಾ. ಅಪ್ಪ ಅವರ ಮಾರ್ಗದರ್ಶನ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎಂದು ಹೇಳಬಹುದು.
ವಚನ ಸಾಹಿತ್ಯದ ಓದಿನ ಅಗತ್ಯವೇನು?
ಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರ ಕಲ್ಯಾಣ ರಾಜ್ಯದ ಪರಿಕಲ್ಪನೆ ವಿನೂತನವಾದುದು. ಜಾತಿ-ಧರ್ಮಗಳಿಲ್ಲದ, ಮತ-ಮೌಢ್ಯಗಳಿಲ್ಲದ, ಮೇಲು-ಕೀಳಿಲ್ಲದ ಸಮ ಸಮಾಜದ ಕನಸು ಕಂಡಿದ್ದ ಶರಣರ ಅನುಭಾವದ ವಚನ ಸಾಹಿತ್ಯ ಇಂದಿನ ನಮ್ಮ ಏನೆಲ್ಲ ಸಮಸ್ಯೆಗಳಿಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ನೀಡಬಲ್ಲವು. ಜೀವಪರ ಮತ್ತು ಜನಪರವಾಗಿರುವ ವಚನ ಸಾಹಿತ್ಯವನ್ನು ಓದುವುದು, ತಿಳಿದುಕೊಳ್ಳುವುದು ಹಾಗೂ ಅದರಂತೆ ನಡೆಯುವುದು ಇಂದಿನ ಅಗತ್ಯವಾಗಿದೆ.
ಅಕ್ಕನ ಹೆಸರಿನಲ್ಲಿ ಸಮ್ಮೇಳನ ನಡೆಸುವ ಅಗತ್ಯತೆ ಏನು?
ಉಡುತಡಿಯ ಕೂಸಾಗಿ, ಕಲ್ಯಾಣದ ಮಗಳಾಗಿ, ಕದಳಿಯ ಬನದ ಸೊಸೆಯಾದ ಮಹಾದೇವಿ, ಜಗಕ್ಕೆಲ್ಲ ಅಕ್ಕಮಹಾದೇವಿಯಾಗಿ ಬೆಳೆದು ಬೆಳಕಾಗಿರುವುದು ಬಹು ಚೇತೋಹಾರಿ ಸಂಗತಿ. “ಹರ”ನನ್ನೇ “ವರ”ನನ್ನಾಗಿಸಿಕೊಂಡ ಆಕೆಯ ತ್ಯಾಗ-ಯೋಗಮಯ ಜೀವನ ಮಹಿಳಾ ಕುಲಕ್ಕೆ ಬಹು ದೊಡ್ಡ ಸಂದೇಶವಾಗಿದೆ. ಬದುಕಿನ ಏನೆಂಥ ಬಿಕ್ಕಟ್ಟಿನ ಸನ್ನಿವೇಶ, ಸಮಸ್ಯೆ ಹಾಗೂ ಕಷ್ಟದ ಪರಿಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದೆ ಸಮಾಧಾನಿಯಾಗಿರಬೇಕು ಎಂದು ಹೇಳಿದ ಅಕ್ಕನ ವಚನಗಳು ತಲ್ಲಣದ ಇಂದಿನ ಬದುಕಿಗೆ ಜ್ವಲಂತ ಸಾಕ್ಷಿಯಾಗಿವೆ. ಹೀಗಾಗಿ ಅಕ್ಕನ ಹೆಸರಲ್ಲಿ ಸಮ್ಮೇಳನ ನಡೆಸುವುದು ಬಹಳ ಸೂಕ್ತ.
ಸಮ್ಮೇಳನಾಧ್ಯಕ್ಷರಾಗಿ ತಾವು ಕೊಡುವ ಸಂದೇಶ ಏನು?
“ಇಹ”ದಲ್ಲೇ “ಪರ”ವನ್ನು ಕಂಡ ಬಸವಾದಿ ಶರಣರು ಸಾರಿದ ದಯವೇ ಧರ್ಮದ ಮೂಲವಯ್ಯ, ಕಾಯಕವೇ ಕೈಲಾಸ, ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ, ಇವನಾರವ, ಇವನಾರವನೆಂದಿನಿಸದೆ, ಇವನಮ್ಮವ, ಇವನಮ್ಮವ ಎಂದೆನಿಸು ಎಂಬಂತಹ ನುಡಿಮುತ್ತುಗಳಂತಿರುವ ವಚನಕಾರರ ಸಂದೇಶಗಳನ್ನು ಪಾಲಿಸಿದರೆ ಬದುಕು ಸಾರ್ಥಕವಾಗುತ್ತದೆ. ಅಷ್ಟಾವರಣ, ಷಟಸ್ಥಲ, ಪಂಚಾಚಾರ ತತ್ವಗಳ ಪಾಲನೆಯಿಂದ ನಮ್ಮಲ್ಲಿರುವ ಋಣಾತ್ಮಕ ಭಾವ ಕಳೆದು ಧನಾತ್ಮಕ ಭಾವ ಮೂಡುತ್ತದೆ. ಭಕ್ತಿಯೇ ಶಕ್ತಿ. ಭಕ್ತಿಯಿಂದಲೇ ಆತ್ಮೋನ್ನತಿ, ಸದ್ಗತಿ ಕಾಣಬಹುದು.
ದಾಸೋಹ ಭಂಡಾರಿಯಾದ ಶರಣಬಸವೇಶ್ವರರು ಅರಳಗುಂಡಗಿಯಿಂದ ಕಲ್ಯಾಣದತ್ತ ಪ್ರಯಾಣ ಬೆಳೆಸಿದರು. ಕಲ್ಯಾಣದ ಬಸವಣ್ಣನೆಂದರೆ ಅವರಿಗೆ ಬಲು ಗೌರವ ಮತ್ತು ಭಕ್ತಿ. ಆದರೆ ಕಲ್ಯಾಣಕ್ಕೆ ಹೋಗಲಾರದೆ ಕಲಬುರಗಿಯನ್ನೇ ಕಲ್ಯಾಣ ಮಾಡಿದ ಮಹಾನ್ ಕರುಣಾಮಯಿ. ಕಲ್ಯಾಣದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕಲಬುರಗಿಯಲ್ಲಿ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಇಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ಆ ಮೂಲಕ “ಮತ್ತೆ ಕಲ್ಯಾಣ” ಸ್ಥಾಪಿಸುವಂತಾಗಬೇಕು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
View Comments
ತುಂಬಾ ಚೆನ್ನಾಗಿದೆ