ಕಲಬುರಗಿ: ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ (ರಿ) ಕಲಬುರಗಿ ವತಿಯಿಂದ ಕಟ್ಟಡ ಕಾರ್ಮಿಕರ ನ್ಯಾಯಯುತವಾದ ಬೇಡಿಕೆಗಳಿಗೆ ಒತ್ತಾಯಿಸಿ ಬರುವ ಡಿಸೆಂಬರ್ 9 ರಂದು ಮುಂಜಾನೆ 11 ಗಂಟೆಯಿಂದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಭೀಮರಾಯ ಕಂದಳ್ಳಿ ರವರು ತಿಳಿಸಿದ್ದಾರೆ.
ಸರಕಾರದ ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗಾಗಿ ಅನೇಕ ಫಲಪ್ರದ ಯೋಜನೆಗಳು ಜಾರಿಗೆ ತಂದಿದ್ದರೂ ಸಹ ಜಿಲ್ಲಾ ಕಾರ್ಮಿಕ ಇಲಾಖೆಯ ವತಿಯಿಂದ ಇದರ ಪ್ರಯೋಜನ ನಿಜವಾದ ಕಟ್ಟಡ ಕಾರ್ಮಿಕರಿಗೆ ಕಾಲಮಿತಿಯಲ್ಲಿ ಸಿಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ. ನಿಜವಾದ ಕಟ್ಟಡ ಕಾರ್ಮಿಕರಿಗೆ ಗುರುತಿಸಿ ನಿಯಮಾನುಸಾರ ಸಿಗಬೇಕಾದ ಸೌಲಭ್ಯಗಳು ನಿಗದಿತ ಅವಧಿಯಲ್ಲಿ ಸಿಗಬೇಕು, ಭೋಗಸ್ ಗುರುತಿನ ಚೀಟಿ ನೀಡುವುದು ನಿಲ್ಲಿಸಬೇಕು, ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು, ಸೇರಿದಂತೆ ಪ್ರಮುಖ ಬೇಡಿಕೆಗಳ ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮಹಾತ್ಮಾಗಾಂಧಿ ಹಾಗೂ ಡಾ. ಅಂಬೇಡ್ಕರ್ ರವರ ಮಾರ್ಗದಲ್ಲಿ ನಡೆಸುವ ಈ ಸತ್ಯಾಗ್ರಹದಲ್ಲಿ ಜಿಲ್ಲೆಯ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಸ್ವಾಭಿಮಾನದಿಂದ ಹಾಜರಾಗಬೇಕೆಂದು ಕಂದಳ್ಳಿ ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.