ಕಲಬುರಗಿ: ಭಾರತ ಚುನಾವಣಾ ಆಯೋಗವು ಕಲಬುರಗಿ ಜಿಲ್ಲೆಯ ೪೨-ಚಿಂಚೋಳಿ (ಪ.ಜಾ ಮೀಸಲು) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಏಪ್ರಿಲ್ 16ರಂದು ಘೋಷಣೆ ಮಾಡಿದೆ. ಘೋಷಣೆ ಮಾಡಿದ ತಕ್ಷಣದಿಂದಲೆ ಕ್ಷೇತ್ರದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
ಅವರು ಬುಧವಾರ ಇಲ್ಲಿನ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಧಿಸೂಚನೆ ಏಪ್ರಿಲ್ 22ಕ್ಕೆ ಚುನಾವಣಾಧಿಕಾರಿಗಳು ಹೊರಡಿಸಲಿದ್ದಾರೆ. ಏಪ್ರಿಲ್ 29ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಏಪ್ರಿಲ್ 30ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಮೇ 2 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾಗಿರುತ್ತದೆ. ಮೇ 19 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ವೇಳಾಪಟ್ಟಿಯನ್ನು ವಿವರಿಸಿದರು.
ಚಿಂಚೋಳಿ ಕ್ಷೇತ್ರದ ಪರಿಚಯ:
ಕ್ಷೇತ್ರದಲ್ಲಿ 01-01-2019ಕ್ಕೆ ಅರ್ಹರಂತೆ 193789 ಮತದಾರರು ಇದ್ದಾರೆ. ಇದರಲ್ಲಿ 98994 ಪುರುಷರು, 14772 ಮಹಿಳೆಯರು ಹಾಗೂ 16 ಇತರೆ ಮತದಾರರು ಸೇರಿದ್ದಾರೆ. 1853 ವಿಕಲಚೇತನ ಮತದಾರರಿದ್ದು, ಅವರನ್ನು ಮತದಾನ ಕೇಂದ್ರಕ್ಕೆ ಕರೆತರಲು ವಾಹನದ ವ್ಯವಸ್ಥೆ ಮಾಡಲಾಗುವುದಲ್ಲದೆ ಮತಗಟ್ಟೆಗಳಲ್ಲಿ ವ್ಯವಸ್ಥೆ ಸಹ ಮಾಡಲಾಗುವುದು. 79 ಸೇವಾ ಮತದಾರರಿದ್ದು, ಕ್ಷೇತ್ರದಲ್ಲಿ ಈ ಬಾರಿ 3159 ಹೊಸದಾಗಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಮತದಾರರ ನೊಂದಣಿ ನಿರಂತರ ಪ್ರಕ್ರಿಯೆ ನಡೆಯಲಿದ್ದು, ಚಿಂಚೋಳಿ ವಿಧಾಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರು ಹೊಸದಾಗಿ ಪಟ್ಟಿಯಲ್ಲಿ ಸೇರಲು ನಮೂನೆ 6ರಲ್ಲಿ ಏಪ್ರಿಲ್ 19ರ ವರೆಗೆ ಅರ್ಜಿ ಸಲ್ಲಿಸಿದಲ್ಲಿ ಅವರು ಈ ಬಾರಿ ಮತದಾನ ಮಾಡಬಹುದಾಗಿದೆ ಎಂದರು.
ಕ್ಷೇತ್ರದಾದ್ಯಂತ 241 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಹಾಗೂ ಅಕ್ರಮಗಳ ತಡೆಗಟ್ಟಲು 6 ಎಫ್.ಎಸ್.ಟಿ. ತಂಡ., 15 ಎಸ್.ಎಸ್.ಟಿ. ತಂಡ., 2 ವಿ.ಎಸ್.ಟಿ. ತಂಡ.,1 ವಿವಿಟಿ ತಂಡ, 17 ಸೆಕ್ಷನ್ ಆಫಿಸರ್ ನೇಮಕ, 1 ಏಇಓ ನೇಮಕ ಮಾಡಲಾಗುವುದು ಹಾಗೂ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಈಗಾಗಲೆ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅದನ್ನು ಯಥಾವತ್ತಾಗಿ ಚಿಂಚೋಳಿ ಕ್ಷೇತ್ರಕ್ಕೂ ಮುಂದುವರೆಯಲಿದೆ ಎಂದರು.
ದೂರಿಗೆ ಶುಲ್ಕರಹಿತ ಸಹಾಯವಾಣಿ:- ಚುನಾವಣೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು 24X7ತಾಸು ಶುಲ್ಕರಹಿತ 1950 ಸಹಾಯವಾಣಿ ಆರಂಭಿಸಿದೆ. ಸಾರ್ವಜನಿಕರು ಇಲ್ಲಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಸಹಾಯವಾಣಿಯಲ್ಲಿ ಸ್ವೀಕರಿಸಿರುವ ದೂರುಗಳನ್ನು ಆನ್‌ಲೈನ್ ಮುಖಾಂತರ ಅಪಡೇಟ್ ಮಾಡಿ ಶೀಘ್ರಗತಿಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಇದಲ್ಲದೆ ಸಿಟಿಜನ್ ವಿಜಲ್ ಆಪ್ ಸಹ ಅಭಿವೃದ್ಧಿಪಡಿಸಲಾಗಿದ್ದು, ಸಾರ್ವಜನಿಕರು ಪ್ಲೇಸ್ಟೋರ್‌ನಿಂದ ಈ ಆಪ್ ಡೌನಲೋಡ್ ಮಾಡಿಕೊಂಡು ಮೋಬೈಲ್ ಮೂಲಕವು ಸಹ ದೂರು ಸಲ್ಲಿಸಬಹುದಾಗಿದೆ. ಪತ್ರಿಕಾಗೋಷ್ಟಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ ಕುಮಾರ ಇದ್ದರು.