ಶಹಾಬಾದ: ತಾಲೂಕಿನ ರೈತರು ಹೊಲವನ್ನು ಹದಮಾಡಿಕೊಂಡು ಬಿತ್ತನೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.ಆದರೆ ಮುಂಗಾರು ಮಳೆ ಬಾರದಿರುವುದರಿಂದ ರೈತ ಮುಗಿಲು ನೋಡುತ್ತಾ ಕಾಲಕಳೆಯುತ್ತಿದ್ದಾನೆ.
ಮುಂಗಾರು ಮಳೆ ಬರುತ್ತದೆ ಎಂದು ಹೊಲವನ್ನು ಹದ ಮಾಡಿಕೊಂಡಿದ್ದ ರೈತನಿಗೆ ನಿರಾಸೆಯುಂಟಾಗಿದೆ.ಮಳೆ ಬರುವುದೊಂದೆ ತಡ ಹೆಸರು, ಉದ್ದು, ತೊಗರಿ ಬಿತ್ತನೆ ಮಾಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಹೆಸರು, ತೊಗರಿ , ಜೋಳ ಬೆಳೆಯಲು ಯೋಗ್ಯವಾದ ಭೂಮಿ ಹೊಂದಿದ್ದು, ಈ ಹೋಬಳಿ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು ಹೆಚ್ಚಾಗಿ ಬೆಳೆಯುತ್ತಾರೆ. ಹವಾಮಾನ ಇಲಾಖೆಯ ವರದಿಯಂತೆ ಈ ಬಾರಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎನ್ನುವ ಮಾಹಿತಿ ತಿಳಿಸಿದ್ದಾರೆ.
ಆದರೂ ಎಲ್ಲ ಸಂಕಷ್ಟವನ್ನು ರೈತ ನುಂಗುತ್ತಾ ಮಳೆ ಬರಬಹುದು ಎಂಬ ಆಶಾಭಾವನೆಯಲ್ಲಿ ಮಳೆಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ವರ್ಷ ಹೆಸರು ಬೆಳೆಗೆ ಸಕಾಲದಲ್ಲಿ ಮಳೆಯಾಗದೇ ಇಲ್ಲಿನ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಮಳೆ ಆಗಮನ ಇನ್ನೂ ವಿಳಂಬವಾದರೆ ಅಲ್ಪಾವಧಿ ಬೆಳೆಗಳ ಬೇಸಾಯಕ್ಕೆ ಸ್ವಲ್ಪ ಹಿನ್ನಡೆಯಾಗುತ್ತದೆ.ಈಗಲೂ ಮಳೆಯಾಗುವ ಆಶಾಭಾವನೆಯೊಂದಿಗೆ ಒಟ್ಟಾರೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಬಿತ್ತನೆ ಬೀಜ ಲಭ್ಯ : ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಗರಿ, ಹೆಸರು,ಉದ್ದು ಬೀಜಗಳನ್ನು ಹಾಗೂ ಪೋಷಕಾಂಶದ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ. ಬಿತ್ತನೆ ಬೀಜ ಸೇರಿದಂತೆ ಹಲವು ಬೆಳೆಗಳ ಬೀಜದ ದಾಸ್ತಾನು ಮತ್ತು ಲಘು ಪೋಷಕಾಂಶ ವಿತರಣೆ ಮಾಡಲಾಗುತ್ತಿದೆ. ಶಹಾಬಾದ ಕೃಷಿ ವಲಯದ ಹೊನಗುಂಟಾ, ತೊನಸನಹಳ್ಳಿ(ಎಸ್), ಮರತೂರ, ಭಂಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹಾಗೂ ಅತಿಸಣ್ಣ ರೈತರು ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬೀಜ ಹಾಗೂ ರಸಗೊಬ್ಬರವನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು 18400 ಹೆಕ್ಟರ್ ಪ್ರದೇಶ ಮುಂಗಾರು ಬಿತ್ತನೆಯ ಗುರಿ ಹೊಂದಲಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ನೆಟೆ ರೋಗ ಕಾಣಿಸಿಕೊಂಡಿದ್ದು,ಅದನ್ನು ತಡೆಗಟ್ಟಲು ರೈತರು ಅಣು ಜೀವಿ ಗೊಬ್ಬರವಾದ ಟ್ರೈಕೋಡರ್ಮವನ್ನು ಬಳಸಿ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ನೆಟೆರೋಗ ತಡೆಯಲು ಟಿಎಸ್3ಆರ್ ತಳಿ ಬದಲಿಗೆ ಪರ್ಯಾಯ ತಳಿಯಾಗಿ ಜಿಆರ್‍ಜಿ 811, ಜಿಆರ್‍ಜಿ152 ತಳಿಯ ಬೀಜಗಳನ್ನು ನೀಡಲಾಗುತ್ತಿದೆ.ಅಲ್ಲದೇ ಪ್ರಧಾನಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ರೈತರು ಇ-ಕೆವೈಸಿ ಮಾಡಿಕೊಳ್ಳತಕ್ಕದ್ದು.ಯಾವುದೇ ತೊಂದರೆಯಿದ್ದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಮಾಹಿತಿ ಪಡೆದುಕೊಳ್ಳಬಹುದು. – ಕಾಶಿನಾಥ ದಂಡೋತಿ ಕೃಷಿ ಅಧಿಕಾರಿ ಶಹಾಬಾದ.
ಪ್ರತಿ ಬಾರಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಅಲ್ಪಾವಧಿ ಬೆಳೆಗಳು ಬೆಳೆಯಲಾರದೇ ರೈರು ಸಾಕಷ್ಟು ತೊಂದರೆಗೆ ಈಡಾಗಿದ್ದಾರೆ.ಕಳೆದ ಬಾರಿ ತೊಗರಿಗೆ ನೆಟೆರೋಗ ಬಂದು ಕಷ್ಟ ಅನುಭವಿಸಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಬೀಜ, ಗೊಬ್ಬರ ನೀಡಿದರೆ ಅನುಕೂಲವಾಗುತ್ತದೆ.ಈ ಬಾರಿ ಮುಂಗಾರು ಮಳೆಗಾಗಿ ಒಂದು ವಾರದಿಂದ ಕಾಯುತ್ತ ಕುಳಿತ್ತಿದ್ದು, ಇನ್ನೆರಡು ದಿನಗಳಲ್ಲಿ ಮಳೆಯಾದರೆ ಮಾತ್ರ ಒಂದಿಷ್ಟು ರೈತರ ಮೊಗದಲ್ಲಿ ಸಂತೋಷ,ಉತ್ಸಾಹ ಕಾಣಬಹುದು. – ಲಕ್ಷ್ಮಿಕಾಂತ ಕಂದಗೂಳ ಗ್ರಾಪಂ ಸದಸ್ಯ ಭಂಕೂರ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…