ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ರಾಜ್ಯಾದ್ಯಂತ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದದ ಪೂರ್ವದ್ವಾರ(ಗ್ರಾಂಡ್‌ಸ್ಟೇಪ್ಸ್)ದ ಬಳಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಶಕ್ತಿ ಯೋಜನೆಗೆ ಚಾಲನೆ ನೀಡಿದರು.ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮಹಿಳಾ ಸಬಲೀಕರಣದತ್ತ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ. ಸಾಮಾಜಿಕ, ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶ ವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸರಕಾರ ಮಾಡಿದೆ.
ವಿನೂತನ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಸರಕಾರದ ಧ್ಯೇಯ; ಶತಶತಮಾನಗಳಿಂದ ಮಹಿಳೆಯರು ಅವಕಾಶವಂಚಿತರಾಗಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರ ಮೂಲಕ ‘ಶಕ್ತಿ’ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದರು.
ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಗಳನ್ನು 3 ತಿಂಗಳೊಳಗೆ ಉಚಿತವಾಗಿ ಒದಗಿಸಲಾಗುವುದು;ಅಲ್ಲಿವರೆಗೆ ಸರಕಾರದ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸಬಹುದಾಗಿದೆ. ಚುನಾವಣೆ ಸಂದರ್ಭದಲ್ಲಿ ನಾವು ಘೋಷಿಸಿದ 5 ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳು ಮಹಿಳೆಯರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದವುಗಳಾಗಿವೆ. ಈ ಒಟ್ಟು 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಒಟ್ಟು 59 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಎಷ್ಟೇ ಕಷ್ಟ ಬರಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಈ ಯೋಜನೆಗಳಲ್ಲಿ ಯಾವ ಮಧ್ಯವರ್ತಿಗಳಿಲ್ಲ ಎಂದರು.
ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ: 2022ರ ವಿಶ್ವಬ್ಯಾಂಕ್‌ನ ಅಂಕಿ ಅಂಶಗಳಂತೆ ಅಮೆರಿಕಾದಲ್ಲಿ ಶೇ.57ರಷ್ಟು,ಚೀನಾದಲ್ಲಿ ಶೇ.54ರಷ್ಟು, ಆಸ್ಟೇಲಿಯಾದಲ್ಲಿ ಶೇ.65,ಇಂಡೋನೇಷಿಯಾದಲ್ಲಿ ಶೇ.53ರಷ್ಟು ಹಾಗೂ ನಮ್ಮ ದೇಶದ ಪಕ್ಕದ ಬಾಂಗ್ಲಾದೇಶದಲ್ಲಿ ಶೇ.38ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿಯಾಗುತ್ತಿದ್ದು, ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಎಷ್ಟು ಹಣ ಖರ್ಚು ಮಾಡುತ್ತಾ ಇದ್ದೀವಿ ಎನ್ನುವುದು ಮುಖ್ಯವಲ್ಲ; ಯಾರಿಗೆ ಕೊಡ್ತಾ ಇದ್ದೇವೆ ಎನ್ನುವುದು ಮುಖ್ಯ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಗೃಹಜ್ಯೋತಿ ಯೋಜನೆ,ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಗೊಳಿಸಲಾಗುತ್ತದೆ. ಗೃಹಲಕ್ಷ್ಮೀ ಯೋಜನೆ ಆಗಸ್ಟ್ 16ರಂದು ಜಾರಿಗೊಳಿಸಲಾಗುತ್ತದೆ ಮತ್ತು ಯುವನಿಧಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದರು.
10 ಕೆ.ಜಿ ಆಹಾರಧಾನ್ಯವನ್ನು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ನೀಡುತ್ತೇವೆ;ಇದಕ್ಕೆ ರಾಜ್ಯದಲ್ಲಿ 10100 ಕೋಟಿ ರೂ. ಖರ್ಚಾಗಲಿದೆ. ಯಾರು ಕೂಡ ಹಸಿವಿನಿಂದ ಬಳಲಬಾರದು;ಹಸಿವು ಮುಕ್ತ ರಾಜ್ಯ ನಮ್ಮದಾಗಬೇಕು ಎಂಬ ಸದಾಶಯ ಇದರ ಹಿಂದಿದೆ ಎಂದರು.
ಗೇಲಿ,ಕುಹಕ ಮಾಡುವವರು ಮಾಡಲಿ;ಡೊಂಟ್ ಕೇರ್: ರೈತರ ಸಾಲಮನ್ನಾ ಮಾಡದೇ ಬಂಡವಾಳಶಾಹಿಗಳ ಸಾಲಮನ್ನಾ ಮಾಡುವವರು ಸರಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೇ ಎಂಬುದರ ಕುರಿತು ಪರಿಜ್ಞಾನವಿಲ್ಲದೇ ತರ್ಕರಹಿತವಾಗಿ ಎಡಬಿಡಂಗಿತನದ ರೂಪದಲ್ಲಿ ವಿರೋಧಪಕ್ಷಗಳು ಮಾತನಾಡುತ್ತಿದ್ದು, ಅವುಗಳಿಗೆ ಸೊಪ್ಪು ಹಾಕದೇ ಮತ್ತು ವಿಚಲಿತರಾಗದೇ ಎಲ್ಲ ಜಾತಿಯಲ್ಲಿರುವ, ಎಲ್ಲ ಧರ್ಮದಲ್ಲಿರುವ ಬಡವರಿಗೆ,ಸಾಮಾಜಿಕವಾಗಿ,ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.
ಯೋಜನೆಯ ಲಾಭ ಪಡೆದುಕೊಳ್ಳಿ: ಹೆಣ್ಮಕ್ಕಳು ಇಂದು ಒಂದುಗಂಟೆಯಿಂದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು.ಎಲ್ಲ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡ್ ಗಳನ್ನು ನೀಡಲಾಗುವುದು. ಈ ಯೋಜನೆ ವಿದ್ಯಾರ್ಥಿನಿಯರಿಗೆ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ಮಧ್ಯವರ್ತಿಗಳಲ್ಲಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ ಎಂದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವ ಧ್ಯೇಯದೊಂದಿಗೆ ಟೀಕೆಗಳಿಗೆ ಯಾವುದೇ ರೀತಿಯ ಉತ್ತರ ನೀಡದೇ ರಾಜ್ಯದ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು.
ಒಂದು ದೇಶ,ರಾಜ್ಯದ ಸ್ಥಿತಿಗತಿ ಹೇಗಿದೆ ಎಂಬುದರ ಅಧ್ಯಯನ ಮಾಡಬೇಕಿದ್ದರೇ ಅಲ್ಲಿನ ಮಹಿಳೆಯರ ಸ್ಥಿತಿಗತಿ ಅರಿತುಕೊಳ್ಳುವುದು ಅವಶ್ಯ ಎಂದು ಹೇಳಿದ ಡಿಸಿಎಂ ಡಿಕೆಶಿ ಅವರು ಈ ಯೋಜನೆಯ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಹಿಳಾ ಪ್ರಯಾಣಿಕರ ಲೆಕ್ಕದ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸಾರಿಗೆ, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಮಾತನಾಡಿದರು.
ಇದೇ ವೇಳೆ ಗುಲಾಬಿ ಬಣ್ಣದ ಸ್ಮಾರ್ಟ್ ಕಾರ್ಡ್, ಶಕ್ತಿ ಯೋಜನೆಯ ಲಾಂಛನವನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸುಮಿತ್ರಾ, ರಾಧಿಕಾ, ಪ್ರೇಮಾ, ಕಲಾವತಿ, ಪವಿತ್ರಾ ಅವರಿಗೆ ಮುಖ್ಯಮಂತ್ರಿಗಳು ಸ್ಮಾರ್ಟ್ ಕಾರ್ಡ್ ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ,ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ , ಶಾಸಕರು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಮತ್ತಿತರರು ಇದ್ದರು.
ನಂತರ ಬಿಎಂಟಿಸಿ ಬಸ್ ಸಂಖ್ಯೆ: ಕೆ.ಎ 57 ಎಫ್ 5324 ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಿಂದ ಹೋಟಲ್ ಕ್ಯಾಪಿಟಲ್, ರಾಜಭವನ ರಸ್ತೆ, ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಜಿ ರೋಡ್ ಮೂಲಕ ಕೆಂಪೇಗೌಡ (ಮೆಜೆಸ್ಟಿಕ್) ಬಸ್‌ನಿಲ್ದಾಣಕ್ಕೆ ತಲುಪಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶೂನ್ಯ ಟಿಕೆಟ್ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…