ಅಂಕಣ ಬರಹ

ವಚನ ಪ್ರಜ್ಞೆ ಇಲ್ಲದ ಜನ ಸಾಮಾನ್ಯರಿಗೆ ಬಸವಣ್ಣನವರ ಪ್ರತಿಮೆಗಳು ಈಗಲೂ ಬೇಕು

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರ ಹೊನ್ನ ಕಲಶವಯ್ಯಾ, ಕೂಡಲಸಂಗಮದೇವಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ಗರ್ಭಗುಡಿಯಲ್ಲಿ ದೇವರೆಂಬ ಗೊಂಬೆಯನ್ನು ಕೂಡಿಸಿ ಆ ಮೂಲಕ ಜನ ಸಮುದಾಯವನ್ನು ಸುಲಿಗೆ ಮಾಡುತ್ತಿದ್ದ ಪಟ್ಟಭದ್ರರ ಬುಡಕ್ಕೆ ಬಸವಣ್ಣನವರು ಕೊಡಲಿ ಪೆಟ್ಟನ್ನು ನೀಡಿದರು. ನಮಗೆ ದೇವರು ಇಲ್ಲವಲ್ಲ ! ಎಂಬ ಕಳವಳದಲ್ಲಿ ಸಹಸ್ರಾರು ಜನ ದೇವಸ್ಥಾನದ ಪ್ರವೇಶವಿಲ್ಲದೆ ಮನದಲ್ಲಿಯೆ ಮರುಗುತ್ತಿದ್ದರು. ಬಹುಜನ ಸಮುದಾಯದ ನಡುವೆ ನಿಂತುಕೊಂಡ ಬಸವಣ್ಣನವರು ಏಕಕಾಲಕ್ಕೆ ಗುಡಿಯನ್ನೂ ಅದರ ಜೊತೆಗೆ ಅಲ್ಲಿ ವಾಸವಾಗಿರುವವನು ಎಂದು ಹೇಳಲಾದ ದೇವರನ್ನೂ ಜನರ ಮನಸ್ಸಿನಿಂದ ತೆಗೆದು ಹಾಕಿದರು. ಬಸವಣ್ಣನವರು ಗುಡಿಯ , ಅಲ್ಲಿರುವ ದೇವರ ವಿರುದ್ಧ ಒಂದೆ ಒಂದು ಪದವನ್ನು ಹೇಳದೆ ಅವೆರಡರ ಅಸ್ತಿತ್ವವನ್ನು ಅಲ್ಲಗಳೆದು ಬಿಟ್ಟರು. ಗುಡಿಗಳ ಸಮೀಪ ಹೋಗದೆಯೂ ಆ ಗುಡಿಯನ್ನು ಬಸವಣ್ಣನವರು ಗುಡಿಸಿ ಗುಂಡಾಂತರ ಮಾಡಿಬಿಟ್ಟರು. ಗುಡಿಯೇ ಹೋದ ಮೇಲೆ ದೇವರ ಗತಿ ಅಧೋಗತಿಯಾಯಿತು !

ವಾಸ್ತವವಾಗಿ ಒಂದಿಲ್ಲ ಒಂದು ದಿನ ಸ್ಥಾವರಗಳಿಗೆ ಅಳಿವು ಇದ್ದೆ ಇದೆ. ಸದಾ ಹೊಸ ಹುಟ್ಟು ಪಡೆದು ಓಡಾಡುವ ಜಂಗಮಕ್ಕೆ ಎಂದೂ ಅಳಿವಿಲ್ಲ ಎಂಬುದು ಸತ್ಯ. ಇದನ್ನು ಶರಣರು ಸರಿಯಾಗಿ ಗ್ರಹಿಸಿದ್ದರು. ಹನ್ನೆರಡನೆಯ ಶತಮಾನದವರೆಗೆ ಬಹು ಜನರು ದೇಹದ ಬಗೆಗೆ ತಾತ್ಸಾರ ಹೊಂದಿದವರಾಗಿದ್ದರು. ಮನುಷ್ಯ ಜನ್ಮ, ನಾನಾ ಜನನಗಳ ಮೂಲಕ ಹಾದು ಬಂದ ಒಂದು ಜನ್ಮ ಎಂಬ ಪರಿಕಲ್ಪನೆಯನ್ನು ಒಳಗೊಂಡಿತ್ತು. ಈ ದೇಹ ಮುಕ್ತಿಯನ್ನು ಹೊಂದಬೇಕಾದರೆ, ಸ್ವರ್ಗಕ್ಕೆ ಹೋಗಬೇಕಾದರೆ ಗುಡಿಗಳಿಗೆ ಹೋಗುವುದು ಅಲ್ಲಿರುವ ದೇವರಿಗೆ ಕಾಣಿಕೆ ಅರ್ಪಿಸುವುದು ಸಾಮಾನ್ಯವಾಗಿತ್ತು. ಮುಂದೆ ಕಾಣಬಹುದಾದ ಮುಕ್ತಿ , ಸ್ವರ್ಗಗಳನ್ನು ಒಳ್ಳೆಯ ವಿಚಾರ, ಆಚಾರಗಳ ಮೂಲಕ ಇಲ್ಲಿಯೆ ಕಂಡುಕೊಳ್ಳಬಹುದೆಂಬ ಸತ್ಯವನ್ನು ಬಸವಣ್ಣ ‘ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ , ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂದು ಹೇಳುವ ಮೂಲಕ ಭ್ರಾಮಕ ಕನಸುಗಳನ್ನು ಒಡೆದು ಹಾಕಿದರು.

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣದವನು,
ಸಂಬೋಳಿ ಸಂಬೋಳಿ ಎನುತ್ತ ಇಂಬಿನಲ್ಲಿದ್ದೇನೆ
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು

ಗರ್ಭಗುಡಿಯಲ್ಲಿ ದೇವರ ಗುತ್ತಿಗೆ ಹಿಡಿದವರ ವಿರುದ್ಧ ಬಸವಣ್ಣ ಜನ ಸಾಮಾನ್ಯರನ್ನು ಹುರಿಗೊಳಿಸದೆ ಸಾಮಾನ್ಯರೊಂದಿಗೆ ಸಾಮಾನ್ಯನಾಗಿ ನಾನು ಇದ್ದೇನೆ ಎಂದು ತಿಳಿಸಿದರು. ಬಹು ಸೂಕ್ಷ್ಮವಾಗಿ ಅಂಥಹ ಪಟ್ಟಭದ್ರರ ವಿರುದ್ಧ ಸಂಬೋಳಿ ಸಂಬೋಳಿ ಎಂಬ ಪದವನ್ನು ಬಳಸಿ ಪ್ರತಿಭಟಿಸಿದರು. ನಿಮ್ಮನ್ನು ನಿತ್ಯ, ಕ್ಷಣ ಕ್ಷಣವೂ ಕಾಯಕದಲ್ಲಿ ನೆನೆಸಿಯೂ ಅನಾಮಿಕನಾಗಿ ಇದ್ದೇನೆ ಎನ್ನುವ ಮೂಲಕ ಆ ದೇವರಿಗೆ , ದೇವರ ಗುತ್ತಿಗೆ ಹಿಡಿದವರಿಗೆ ತಿಳಿಸಿದರು.

ಒಟ್ಟಿನಲ್ಲಿ ಬಸವಣ್ಣ ಸ್ಥಾವರದ ವಿರೋಧಿಯಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಯಾರದೆ ವಿಚಾರ ಕೂಡ ಸ್ಥಾವರವಾದರೆ ಅವೂ ಸಹ ಕಾಲನ ತೆಕ್ಕೆಯಲ್ಲಿ ಜೀವ ಕಳೆದುಕೊಳ್ಳುತ್ತವೆ. ಆದರೆ ನಾವುಗಳು ಇಂದು ಅದೆ ಬಸವಣ್ಣನವರ ಪ್ರತಿಮೆಗಳನ್ನು ಸ್ಥಾಪಿಸುವುದು ಎಷ್ಟು ಸರಿ ? ಎಂಬ ಜಿಜ್ಞಾಸೆಗೆ ತೊಡಗಿದಾಗ ತತಕ್ಷಣ ಸರಿಯಲ್ಲ ಎಂಬ ಉತ್ತರವೇ ನಮ್ಮೆಲ್ಲರಲ್ಲಿ ಬರುತ್ತದೆ.

ಆದರೆ ಬಸವಣ್ಣನವರ ಪ್ರತಿಮೆಗಳು ಇಲ್ಲದೆ ಹೋಗಿದ್ದರೆ ಶರಣರ ಚಳುವಳಿಯ ವಿಚಾರಗಳನ್ನು ಇಷ್ಟು ತೀವ್ರ ಗತಿಯಲ್ಲಿ ಜನ ಸಾಮಾನ್ಯನಿಗೆ ತಲುಪಿಸಲು ಆಗುತ್ತಿತ್ತೆ ? ಎಂಬ ಸಂಗತಿಗಳತ್ತಲೂ ನಾವು ಗಮನ ಹರಿಸಬೇಕಿದೆ. ತೀರಾ ಇತ್ತೀಚೆಗೆ ಅಫಘಾನಿಸ್ಥಾನದಲ್ಲಿ ಬುದ್ಧನ ಬಹುದೊಡ್ಡ ಪ್ರತಿಮೆಯನ್ನು ಉರುಳಿಸಿದರು. ಲೇನಿನ್ , ಕಾರ್ಲಮಾಕ್ರ್ಸ ಪ್ರತಿಮೆಗಳು ನಮ್ಮ ಕಣ್ಣ ಮುಂದೆಯೇ ಉರುಳಿ ಹೋಗಿವೆ. ಇದೆಲ್ಲ ಸತ್ಯ.

ಬಸವಣ್ಣ ಇತ್ಯಾದಿ ಶರಣರು ಪುರಾಣದ ವಸ್ತುವಾಗಿ ಸಮಾಜದಲ್ಲಿ ಬಿಂಬಿತಗೊಂಡಿದ್ದರು. ಬಸವಣ್ಣ ಹುಟ್ಟಿದ್ದೆ ನಂದಿಯ ವ್ರತಗಳಿಂದ ಎಂಬ ಪೌರಾಣಿಕ ಕಲ್ಪನೆ ಸಮಾಜದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಅಷ್ಟೇಕೆ ? ಬಸವಣ್ಣನೆಂದರೆ ನಾಲ್ಕು ಕಾಲು, ಎರಡು ಕೊಂಬು , ಒಂದು ಬಾಲ ಇರುವ ದನವೇ ಬಸವಣ್ಣ ಎಂದು ಜನ ಸಾಮಾನ್ಯರನ್ನು ನಂಬಿಸಿಕೊಂಡು ಬಂದಿದ್ದರು. ಇಂಥ ಸಂದರ್ಭದಲ್ಲಿ ಬಸವಣ್ಣನವರ ಕಾಲ್ಪನಿಕ ಭಾವಚಿತ್ರ ಬರೆಯಿಸಿ, ಪ್ರಸಾರ ಮಾಡದೆ ಹೋಗಿದ್ದರೆ ನಮ್ಮ ಇಂದಿನ ಸಮಾಜ ಜಾಗ್ರವಾಗಲು ಸಾಧ್ಯವಿತ್ತೆ ? ಎಂಬ ಪ್ರಶ್ನೆಯನ್ನು ನಮ್ಮಷ್ಟಕ್ಕೆ ನಾವೇ ಹಾಕಿಕೊಳ್ಳಬೇಕು !

ಯಾರದೆ ಪ್ರತಿಮೆಗಳು ಗರ್ಭಗುಡಿಯಲ್ಲಿ ಕುಳಿತು ಹೋದರೆ ಅವು ಕೊಳೆತು ಹೋಗುವ ಅಪಾಯ ಇದ್ದೆ ಇದೆ. ಆದರೆ ಪ್ರೇರಣೆಗಾಗಿ ಇತಿಹಾಸದ ನೆನಪಿಗಾಗಿ ನಿರ್ಮಿಸಿದರೆ ತಪ್ಪೇನು ಆಗುವುದಿಲ್ಲ. ಕಾಗೆ ವಿಷ್ಟವಿಸುವ ಹೊನ್ನ ಕಳಸವಾಗಲಾರೆ ಎಂಬ ಬಸವಣ್ಣನವರ ಪ್ರತಿಮೆಯನ್ನೆ ಆ ಮಾತಿಗೆ ಗುರಿಪಡಿಸಲು ಬಯಸುವುದಿಲ್ಲ. ಆದರೆ ಆ ಮೂಲಕ ಜನ ಮಾನಸವನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಪ್ರತಿಮೆ ಒಂದು ರೀತಿಯ ಪ್ರಭಾವ ಬೀರಿದಾಗ ಆನಂತರ ವಚನಗಳ ಮೂಲಕ ನಿಜವಾದ ಬಸವಣ್ಣನವರನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಬಸವಣ್ಣನವರ ಪ್ರತಿಮೆ ಶರಣರ ಸಾಹಿತ್ಯದ ಸಾಗರಕ್ಕೆ ಕೇವಲ ಎಂಟ್ರಿ ಪಾಸ್ ಎಂಬುದನ್ನು ನಾವ್ಯಾರು ಮರೆಯಬಾರದು.

ಎಲ್ಲಾ ದೇವರ ಮೂರ್ತಿಗಳಂತೆ ಬಸವಣ್ಣನವರ ಪ್ರತಿಮೆಗೂ ಕಾಯಿ, ಕರ್ಪೂರ, ನೈವೇದ್ಯ , ಮಂತ್ರ, ತಂತ್ರ ಶುರುವಾದರೆ ಮತ್ತೊಬ್ಬ ಪುರೋಹಿತ ಹುಟ್ಟಿಕೊಳ್ಳುತ್ತಾನೆ. ಬಸವಣ್ಣವರ ಪ್ರತಿಮೆ ನಮ್ಮ ಒಳಗಿನ ಗಂಟೆಯನ್ನು ಬಡಿಯಬೇಕೆ ಹೊರತು, ಹೊರಗಿನ ಗಂಟೆಯನ್ನಲ್ಲ ಎಂಬುದನು ನಾವು ಮರೆಯಬಾರದು. ಬಸವಣ್ಣವರ ಆಶಯಗಳ ಜಾರಿಗೆ ಮೂರ್ತಿ ಪೂಜೆ ಅನಾವಶ್ಯಕ ಎಂಬುದಲ್ಲಿ ಎರಡು ಮಾತಿಲ್ಲ. ಬಸವಣ್ಣನೆಂದರೆ ಮತ್ತೆ ತಿರುಗಿ ಮುರಿಗಿ ಎತ್ತುಗಳನ್ನೆ ತೋರಿಸಿ, ಲೂಟಿ ಖೋರರ ಗ್ಯಾಂಗಿನ ಹುನ್ನಾರಗಳನ್ನು ತಿಳಿಸಲು ಪ್ರತಿಮೆಗಳು ಈಗ ಅನಿವಾರ್ಯವಾಗಿದೆ.

ವಚನ ಪ್ರಜ್ಞೆ ಬಂದವರಿಗೆ ಪ್ರತಿಮೆಗಳು ಅವಶ್ಯಕವಲ್ಲದಿರಬಹುದು, ವಚನ ಸಮೀಪ ಬರದೆ ವಂಚಕ ಗುಂಪಿನಲ್ಲಿರುವವರಿಗೆ ಅದು ಈಗಲೂ ಅವಶ್ಯವಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago