ಕಲಬುರಗಿ: ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದೆ ಕಲಬುರಗಿಯಲ್ಲಿ ನಿರ್ಮಿಸಲಾದ ಟ್ರಾಮಾ ಸೆಂಟರ್ ಮುಂದಿನ ಎರಡ್ಮೂರು ತಿಂಗಳಲ್ಲಿ ರೋಗಿಗಳಿಗೆ ಸೇವೆ ನೀಡಲು ಕಾರ್ಯರಂಭಗೊಳಿಸಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಶನಿವಾರ ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಸಹಯೋಗದೊಂದಿಗೆ 50 ಜನ ಬಡ ರೋಗಿಗಳಿಗೆ ಉಚಿತ ಇಂಡೋ-ಅಮೆರಿಕನ್ ಆಂಜಿಯೋಪ್ಲಾಸ್ಟಿ ಸ್ಟಂಟ್ ಅವಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಾಳುಗಳಿಗೆ ಗೋಲ್ಡನ್ ಹವರ್‍ನಲ್ಲಿ ಚಿಕಿತ್ಸೆ ದೊರಕಿದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಸ್ಥಾಪಿಸಿ ವೈದ್ಯಕೀಯ ಉಪಕರಣಕ್ಕೆ 20 ಕೋಟಿ ರೂ. ಸಹ ಮೀಸಲಿಡಲಾಗಿತ್ತು. ಆದರೆ ನಂತರ ಬಂದ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಇದೂವರೆಗೆ ಅನುಷ್ಠಾನಕ್ಕೆ ಬಂದಿಲ್ಲ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದ ಸಚಿವರು, ಮುಂದೆ 2-3 ತಿಂಗಳಲ್ಲಿ ಕಲಬುರಗಿ ಟ್ರಾಮಾ ಸೆಂಟರ್ ರೋಗಿಗಳಿಗೆ ಸೇವೆಗೆ ಲಭ್ಯವಾಗಲಿದೆ. ಇದಲ್ಲದೆ 2024ರ ಜನವರಿಯಲ್ಲಿ 183 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಆಸ್ಪತ್ರೆಯ ಸ್ವಂತ ಕಟ್ಟಡ ಸಹ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಇದಲ್ಲದೆ ಪ್ರತಿ ಕಂದಾಯ ವಿಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕಲಬುರಗಿ, ಬೆಳಗಾವಿ ಹಾಗೂ ಮೈಸೂರಲ್ಲಿ ಆಸ್ಪತ್ರೆ ನಿರ್ಮಿಸಲು ಹಿಂದೇ ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಂಜೂರಾತಿ ನೀಡಲಾಗಿತ್ತು, ಮುಂದಿನ 6 ತಿಂಗಳಲ್ಲಿ ಕಲಬುರಗಿ ಆಸ್ಪತ್ರೆ ಆರಂಭಕ್ಕೂ ಚಾಲನೆ ನೀಡಲಾಗುವುದು ಎಂದರು.
ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಸೇವೆ ದೇಶಕ್ಕೆ ಮಾದರಿಯಾಗಿದೆ. ಹಿಂದಿನ ನಾಯಕರ ದೂರದೃಷ್ಟಿ ಪರಿಣಾಮ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಜೊತೆಗೆ ಖಾಸಗಿ ಕಾಲೇಜು, ಆಸ್ಪತ್ರೆಗಳು ಹೆಮ್ಮರವಾಗಿ ಬೆಳದಿದ್ದು, ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿವೆ ಎಂದರು.
ಡಾ.ಸಿ.ಎನ್.ಮಂಜುನಾಥ ನೇತೃತ್ವದಲ್ಲಿ ಕಲಬುರಗಿ ಜಯದೇವ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಭಾಗದ ರೋಗಿಗಳ ಸೇವೆಯಲ್ಲಿ ಸಂಸ್ಥೆ ತೊಡಗಿದೆ. 2016 ರಿಂದ ಇದೂವರೆಗ 9,964 ರೋಗಿಗಳಿಗೆ ಸ್ಟಂಟ್ ಅಳವಡಿಸಿದರೆ, 1,000 ಜನರಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವ ಮೂಲಕ ಅವರ ಜೀವ ಉಳಿಸುವ ಕೆಲಸ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಅಮೆರಿಕಾದಲ್ಲಿ ವಾಸಿರುವ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಸಂಸ್ಥೆಯ ಡಾ.ಗೋವಿಂದರಾಜು ಸುಬ್ರಮಣಿ ಅವರು ತಾಯ್ನಾಡಿಗೆ ಏನಾದರು ನೀಡಬೇಕೆಂಬ ಹಂಬಲದಿಂದ ಬಡ ಹೃದ್ರೋಗಿಗಳಿಗೆ ಸ್ಟಂಟ್ ಅಳವಡಿಕೆಗೆ ಕಲಬುರಗಿ-50 ಸೇರಿದಂತೆ ರಾಜ್ಯದ ಶ್ರೀ ಜಯದೇವ ಹೃದ್ರೋಗ ಸಂಸ್ಥೆಗೆ 250 ಸ್ಟಂಟ್ ಉಚಿತವಾಗಿ ದೇಣಿಗೆ ನೀಡಿದ್ದಕ್ಕಾಗಿ ಅವರ ಸಾಮಾಜಿಕ ಸೇವೆ ಕೊಂಡಾಡಿ, ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ ಮಾತನಾಡಿ, ಕಲಬುರಗಿ ಸಂಸ್ಥೆ 2016ರಲ್ಲಿ ಸ್ಥಾಪನೆಯಾಗಿದ್ದು, ಇಲಿಯವರೆಗೆ 4.50 ಲಕ್ಷ ಹೊರ ರೋಗಿಗಳು ತಪಾಸಣೆಗೆ ಒಳಪಟ್ಟಿದ್ದಾರೆ. 25 ಸಾವಿರ ರೋಗಿಗಳಿಗೆ ಎಂಜಿಯೋಗ್ರಾಂ, 10 ಸಾವಿರ ರೋಗಿಗಳಿಗೆ ಎಂಜಿಯೋಪ್ಲಾಸ್ಟ್ ಮಾಡಲಾಗಿದೆ. 1 ಸಾವಿರ ಜನರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಗತಿ ಚಿತ್ರಣ ವಿವರಿಸಿದರು.
ಹೃದಯ ಕಾಯಿಲೆ ಶ್ರೀಮಂತರ ಕಾಯಿಲೆಯಾಗಿ ಈಗ ಉಳಿದಿಲ್ಲ. ಬಡವರು, ಕೂಲಿ ಕಾರ್ಮಿಕರು ಹೀಗೆ ನಗರದಿಂದ ಗ್ರಾಮೀಣ ಭಾಗಕ್ಕೂ ಕಾಯಿಲೆ ವಿಸ್ತಾರಗೊಂಡಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ತಂದೆ-ತಾಯಿಗಳು ಹದಿಹರೆಯ ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ ಎಂದು ವಿಷಾದದಿಂದ ನುಡಿದ ಅವರು, ಧೂಮಪಾನ, ಸಕ್ಕರೆ ರೋಗ, ಮದ್ಯಪಾನ ಇದುವೇ ಹೃದಯಘಾತಕ್ಕೆ ಪ್ರಮುಖ ಕಾರಣವಾಗಿದ್ದು, ಇದರಿಂದ ದೂರವಿರಿ ಎಂದರು. ಇಂದಿನ ಕಾರ್ಯಾಗಾರದಲ್ಲಿ ಸ್ಟಂಟ್ ಅಳವಡಿಸಿಕೊಳ್ಳುತ್ತಿರುವ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಟಂಟ್ ಹಾಕೊಂಡರೆ ಇನ್ಮುಂದೆ ಏನಾಗಲ್ಲ ಎಂದು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಬಾರದು. ವೈದ್ಯರ ಸಲಹೆಯಂತೆ ಪ್ರತಿನಿತ್ಯ ಮಾತ್ರೆಗಳು ತಪ್ಪದೆ ಪಡೆಯಬೇಕೆಂದು ಸಲಹೆ ನೀಡಿದರು.
45 ತಾಲೂಕಿನಲ್ಲಿ ಹಬ್ ಅಂಡ್ ಸ್ಪೋಕ್ ಯೋಜನೆ ಜಾರಿ: ಹೃದಯಘಾತವಾದಾಗ ಕೂಡಲೆ ವೈದ್ಯಕೀಯ ಚಿಕಿತ್ಸೆ ದೊರೆಯುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಕಲಬುರಗಿ, ಬೆಳಗಾವಿ ಹಾಗೂ ಮೈಸೂರು ಭಾಗದ ಪ್ರತಿ 15 ರಂತೆ 45 ತಾಲೂಕು ಆಸ್ಪತ್ರೆಯಲ್ಲಿ ಖಾಸಗಿ ಟ್ರೈಕಾ ಸಂಸ್ಥೆ ಮೂಲಕ ಹಬ್ ಅಂಡ್ ಸ್ಪೋಕ್ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ಬಡವರ ಮನೆಯ ಬಾಗಿಲಿಗೆ ಹೃದ್ರೋಗ ಸೇವೆ ತಲುಪಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ತಾಲೂಕು ಆಸ್ಪತ್ರೆಯಲ್ಲಿ ಲಭ್ಯ ಇರುವ ವೈದ್ಯರಿಗೆ ಹೃದ್ರೋಗ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ನಮ್ಮಿಂದ ತರಬೇತಿ ನೀಡಲಾಗಿದೆ. ಹೃದಯಘಾತಕ್ಕೊಳಗಾದ ರೋಗಿ ಈ ಆಸ್ಪತ್ರೆಗೆ ಬಂದಲ್ಲಿ ಅಲ್ಲಿನ ವೈದ್ಯರು ಜಯದೇವ ವೈದ್ಯರೊಂದಿಗೆ ಸಂಪರ್ಕಿಸಿ ಇ.ಸಿ.ಜಿ. ಮಾಡಿ ಅಗತ್ಯ ಔಷಧಿ ನೀಡುವ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರಾಗುವ ಪ್ರಯತ್ನ ಮಾಡುವರು. ನಂತರ ಅಗತ್ಯವಿದ್ದಲ್ಲಿ ಅವರಿಗೆ ಉನ್ನತ ಆಸ್ಪತ್ರೆ ಸಾಧ್ಯವಾದಲ್ಲಿ ಜಯದೇವ ಆಸ್ಪತ್ರೆಗೆ ಕರೆತಂದು ಮುಂದಿನ ಚಿಕಿತ್ಸೆ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಹುಬ್ಬಳ್ಳಿ ಮತ್ತು ಮಂಗಳೂರು ಭಾಗದಲ್ಲಿ ತಲಾ 15 ಆಸ್ಪತ್ರೆ ಗುರುತಿಸುವ ಕೆಲಸ ನಡೆದಿದೆ. ವೈದ್ಯರು ದೇವರಲ್ಲ, ರೋಗಿಗಳಿಗೆ ಸೇವೆ ನೀಡುವ ಸಂದರ್ಭದಲ್ಲಿ ಏನಾದರು ಅನಾಹುತವಾದಾಗ ವೈದ್ಯರು, ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದಾಲಿ, ಆಸ್ಪತ್ರೆಯ ಆಸ್ತಿ-ಪಾಸಿ ಹಾನಿ ಮಾಡಬಾರದೆಂದು ಸಾರ್ವಜನಿಕರಲ್ಲಿ ಡಾ.ಸಿ.ಎನ್.ಮಂಜುನಾಥ ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸುಮಾರು 15-16 ಕೋಟಿ ರೂ. ಮೊತ್ತದ ಸ್ಟಂಟ್ ನೀಡಿದ ಡಾ.ರವಿ ಸುಬ್ರಮಣಿ ಅವರನ್ನು ಮತ್ತು ಡಾ.ಸಿ.ಎನ್.ಮಂಜುನಾಥ ಅವರನ್ನು ಈ ಭಾಗದ ರೋಗಿಗಳು ದೇವರ ರೂಪದಲ್ಲಿ ಕಾಣಲಿದ್ದಾರೆ. ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟಿರುವ ಡಿ.ಎಚ್.ಓ. ಕಚೇರಿಗೆ ಸ್ವಂತ ಕಟ್ಟಡ ಇಲ್ಲ. ಕೂಡಲೆ ಸ್ವಂತ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಂಡರು. ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಸಂಸ್ಥೆಯ ಡಾ.ಗೋವಿಂದರಾಜು ಸುಬ್ರಮಣಿ ಅವರು ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಕಲಬುರಗಿ ಸಮನ್ವಯಾಧಿಕಾರಿ ಡಾ.ಬಾಬುರಾವ ಹುಡಗಿಕರ್, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಡಾ.ಶಂಕರ ಶಿರಾ ಸೇರಿದಂತೆ ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…