ಕಲಬುರಗಿ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬವು ಒಟ್ಟಿಗೆ ಬಂದಿರುವ ಕಾರಣ ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಶಾಂತಿ ಮತ್ತು ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸೆಪ್ಟೆಂಬರ್ ೨ ರಿಂದ ೧೨ರವರೆಗೆ ಗಣೇಶ ಹಬ್ಬ ಹಾಗೂ ಸೆಪ್ಟೆಂಬರ್ ೧ ರಿಂದ ೧೦ರ ವರಗೆ ಮೋಹರಂ ಹಬ್ಬ ಆಚರಿಸಲಾಗುತ್ತಿದೆ. ಕಲಬುರಗಿ ನಗರದಾದ್ಯಂತ ವಿಶೇಷವಾಗಿ ಗಣೇಶ ಪ್ರತಿಷ್ಠಾಪಿಸುವ ಸ್ಥಳಗಳ ಸುತ್ತಮುತ್ತ ಸೂಕ್ತ ಸ್ವಚ್ಛತೆ ಮತ್ತು ನೈರ್ಮಲ್ಯ, ಕುಡಿಯುವ ನೀರು ಮತ್ತು ಗಣೇಶ ಮಹೋತ್ಸವದ ಅಂಗವಾಗಿ ಪ್ರತಿ ದಿನ ವಿದ್ಯುತ್ ವ್ಯವಸ್ಥೆ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶನ ವಿಗ್ರಹಗಳನ್ನು ಬಳಸಬಾರದೆಂದು ಸಾರ್ವಜನಿಕರಲ್ಲಿ ವಿನಂತಿಸಿದ ಅವರು ಸಾರ್ವಜನಿಕರು ಹಾಗೂ ಗಣೇಶ ಮಹಾಮಂಡಳದವರು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕು. ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪೊಲೀಸ್, ಜೆಸ್ಕಾಂ ಮತ್ತು ಮಹಾನಗರ ಪಾಲಿಕೆಯ ಪರವಾನಿಗೆ ಪತ್ರಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುಕೂಲವಾಗುವಂತೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಏಕಗವಾಕ್ಷಿ ವ್ಯವಸ್ಥೆಯ ವಿಶೇಷ ಕೌಂಟರುಗಳನ್ನು ಮಂಗಳವಾರದಿಂದಲೆ ತೆರೆಯಲಾಗುವುದು. ಇದೇ ರೀತಿಯ ಸಿಂಗಲ್ ವಿಂಡೋ ಸಿಸ್ಟಮ್ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ತೆರೆಯಲಾಗುವುದು. ಗಣೇಶ ಮಹಾಮಂಡಳದವರು ಕೊನೆಯವರಿಗೆ ಕಾಯದೆ ಮುಂಚಿತವಾಗಿ ಪರವಾನಿಗೆ ಪಡೆಯಬೇಕು ಎಂದು ಹೇಳಿದರು.
ಗಣೇಶ ವಿಸರ್ಜನೆಗೆ ತೆರಳುವ ಮಾರ್ಗದಲ್ಲಿನ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಹಾಗೂ ಕೆಳಗಡೆ ಇರುವ ವಿದ್ಯುತ್ ಲೈನ್‌ಗಳನ್ನು ಮೇಲಕ್ಕೆತ್ತುವ ಕೆಲಸ ೨ ದಿನದಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗಣೇಶ ಮಹಾಮಂಡಳದವರು ಮೆರವಣಿಗೆ ಸಂದರ್ಭದಲ್ಲಿ ಧ್ವನಿ ವರ್ಧಕಗಳನ್ನು ಬೇರೆಯವರೆಗೆ ತೊಂದರೆಯಾಗದಂತೆ ಬಳಸಬೇಕೆಂದು ತಿಳಿಸಿದ ಅವರು ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ದಿನದಂದು ಮದ್ಯಮಾರಾಟ ನಿಷೇಧಕ್ಕೆ ಕ್ರಮ ಜರುಗಿಸಲಾಗುವುದು ಎಂದರು.
ಸುಳ್ಳು ಸುದ್ದಿಗೆ ಕಿವಿ ಕೊಡಬೇಡಿ:- ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್ ಮಾತನಾಡಿ ಗಣೇಶೋತ್ಸವ ಮತ್ತು ಮೋಹರಂ ಹಬ್ಬ ಒಟ್ಟಿಗೆ ಬಂದಿರುವುದರಿಂದ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಸಂದೇಶಗಳನ್ನು ಹರಡುವ ಸಾಧ್ಯತೆ ಇರುತ್ತದೆ. ಸುದ್ದಿಯ ಸತ್ಯಾಸತ್ಯತೆ ತಿಳಿಯದೆ ಯಾವುದೇ ಅಹಿತಕರ ಘಟನೆಗೆ ಯಾರು ಅವಕಾಶ ನೀಡಬಾರದು. ಸಾಮರಸ್ಯಕ್ಕೆ ಧಕ್ಕೆ ತರುವಂತಹ ಸಂದೇಶಗಳು ಬಂದಲ್ಲಿ ಕೂಡಲೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಪೊಲೀಸರ ಕೊರತೆ ಇರುವುದರಿಂದ ಗಣೇಶ ಮಹಾಮಂಡಲದವರು ಸ್ವಯಂ ಸೇವಕರನ್ನು ಗಣೇಶ ಪ್ರತಿಷ್ಡಾಪನೆ ಸ್ಥಳದಲ್ಲಿ ನಿಯೋಜಿಸುವುದು ಒಳ್ಳೆಯದು. ಸಾಧ್ಯವಾದಲ್ಲಿ ಸಿಸಿಟಿವಿ ಅಳವಡಿಸಿ ಎಂದು ಸಲಹೆ ನೀಡಿದ ಅವರು ಶಾಂತಿಯುತ ಗಣೇಶ ಹಬ್ಬ ಆಚರಣೆಗೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆಯು ಸರ್ವ ಸನ್ನದ್ಧವಾಗಿದೆ. ಗೃಹ ರಕ್ಷಕ ದಳದವರ ಸೇವೆಯು ಇಲ್ಲಿ ಪಡೆಯಲಾಗುವುದು ಎಂದ ಎಸ್.ಪಿ. ಅವರು ಒತ್ತಾಯಪೂರ್ವಕ ಚಂದಾ ಹಣ ಹಾಗೂ ಸೈಲೆಂಸರ್ ಇಲ್ಲದ ದ್ವಿಚಕ್ರ ಚಾಲನೆ ಮಾಡುವವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿದೆ. ಶಾಂತಿ ಸಮಿತಿಯ ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಶಾಂತಿ ಸಭೆಯಲ್ಲಿ ಭಾಗವಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ, ಗಣೇಶ ಮಹಾಮಂಡಲದ ಅಧ್ಯಕ್ಷ ಬಾಬುರಾವ ಜಹಾಗಿರದಾರ ಸೇರಿದಂತೆ ಬಹುತೇಕ ಸದಸ್ಯರು, ಮುಖಂಡರು ಮಾತನಾಡಿ ಕಲಬುರಗಿ ಜಿಲ್ಲೆಯು ಸೂಫಿ-ಸಂತರ ನಾಡು, ಶಾಂತಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಗಣೇಶ ಮತ್ತು ಮೋಹರಂ ಹಬ್ಬವನ್ನು ಜಾತಿ, ಮತ ಮೀರಿ ಪ್ರೀತಿ, ಸಹೋದರತ್ವ, ಸಹಬಾಳ್ವೆಯಿಂದ ಆಚರಿಸಲಾಗುವುದು. ಗಣೇಶ ಸ್ಥಾಪನೆ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಪರವಾನಿಗೆ ಪತ್ರ ದೊರೆಯಬೇಕು. ನಿರಂತರ ವಿದ್ಯುತ್, ಕುಡಿಯುವ ನೀರು ಪೂರೈಕೆಯಾಗಬೇಕು. ರಾತ್ರಿ ಹೊತ್ತಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಪ್ರತಿಷ್ಠಾಪನೆ ಸ್ಥಳಕ್ಕೆ ಭೆಟಿ ನೀಡುವುದರಿಂದ ಸೂಕ್ತ ಪೊಲೀಸ್, ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಅಂದರಲ್ಲದೆ ಕುಡುಕರ ಹಾವಳಿಗೆ ಕಡಿವಾಣ ಹಾಕಿ ಎಂದು ಅಭಿಪ್ರಾಯವನ್ನು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶರಣಪ್ಪ, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಎ.ಎಸ್.ಪಿ. ಅಕ್ಷಯ ಹಾಕೆ, ಐ.ಎ.ಎಸ್.ಪ್ರೊಬೇಷನರ್ ಡಾ.ಗೋಪಾಲಕಲೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಂತಿ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…