ಕಲಬುರಗಿ: ಬಸವಣ್ಣ ಮೃದು ಹೃದಯಿಯಾಗಿದ್ದಂತೆ; ಕಾಠಿಣ್ಯವನ್ನೂ ಹೊಂದಿದ್ದರು. ‘ಲಾಂಛನಕ್ಕೆ ಶರಣೆಂಬೆ ಲಾಂಛನಕ್ಕೆ ತಪ್ಪಿ ನಡೆದಡೆ ಛೀ ಎಂಬೆ’ ಎನ್ನುವ ಅವರ ಗಟ್ಟಿ ನಿಲುವು ನಮಗೂ ಬೇಕು. ಬಸವಣ್ಣನ ಆಲೋಚನೆಗಳನ್ನು ಎದೆಯೊಳಗಿಟ್ಟುಕೊಂಡು ಬದುಕಿನಲ್ಲಿ ಜಾರಿಗೆ ತರಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದರು.
ಅವರು ಇಲ್ಲಿನ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ’ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಮಾತನಾಡಿ, ಬಸವಣ್ಣ ‘ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರನಾನಲ್ಲ’ ಎನ್ನುವರು. ಇಂದು ನಾವೆಲ್ಲ ಲಾಂಚನಕ್ಕೆ ಗಂಟು ಬಿದ್ದು ಆಚರಣೆಯನ್ನು ಮರೆತಿದ್ದೇವೆ. ಲಾಂಛನಕ್ಕಿಂತ ಆಚರಣೆ ಪ್ರಧಾನವಾಗಬೇಕು. ಆಚರಣೆ ಪ್ರಧಾನವಗಲು ಶರಣರು ಪಂಚಾಚಾರ, ಷಟ್‌ಸ್ಥಲ, ಅಷ್ಟಾವರಣಗಳೆನ್ನುವ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು. ಅವುಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಈಗ ನಾವು ಮಾಡಬೇಕು. ಲಿಂಗಾಯತ ಧರ್ಮದ ಈ ತತ್ವ ಸಿದ್ಧಾಂತಗಳನ್ನು ವೈಯುಕ್ತಿಕವಾಗಿ ಅನುಷ್ಠಾನಕ್ಕೆ ತಂದರೆ ಸರಕಾರದ ಮಾನ್ಯತೆ ಸಿಗಲಿ ಬಿಡಲಿ ಅದು ಸ್ವಂತತ್ರ ಧರ್ಮವಾಗುತ್ತದೆ ಎಂದು ಹೇಳಿದರು.
ಇಂದು ಪ್ರತಿ ಮನೆಯ ದೇವರ ಗುಡಿಗಳಲ್ಲಿ ನೂರಾರು ದೇವರ ವಿಗ್ರಹಗಳಿವೆ. ಇಷ್ಟಲಿಂಗವಲ್ಲದೆ ಬೇರೆ ಏನನ್ನೂ ಪೂಜೆ ಮಾಡದ ಪ್ರತಿಜ್ಞೆ ಲಿಂಗಾಯತರು ಮಾಡಬೇಕು. ಲಿಂಗಾಯತರಾದವರು ಜಾತಿ ಭೇದಮಾಡಬಾರದು. ಕಾಯಕ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಅನ್ಯಾಯವನ್ನು ಪ್ರತಿಭಟಿಸುವ ಎದೆಗಾರಿಕೆ ಬೆಳಸಿಕೊಳ್ಳಬೇಕು. ಬಸವಣ್ಣನಂತಹ ಬಂಡಾಯ ಸಾಹಿತಿ ಮತ್ತೊಬ್ಬರಿಲ್ಲ. ಬಸವಣ್ಣ ನುಡಿದಂತೆ ನಡೆದವರು, ನಡೆದಂತೆ ನುಡಿದವರು. ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಬಾಳಿದವರು. ಆ ಗಟ್ಟಿತನ ನಮಗೆ ಬೇಕು. ಅಹಂಕಾರವನ್ನು ತ್ಯಜಿಸಿ, ವಿನಯವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಬಸವಣ್ಣ ‘ನಂಟು ಭಕ್ತಿ ನಾಯಕ ನರಕ’ ಎಂದರು. ಈ ಮಾತು ನಮ್ಮಂಥಹ ಸ್ವಾಮಿಗಳಿಗೆ, ರಾಜಕಾರಣಿಗೆ ಹೆಚ್ಚು ಅನ್ವಯಿಸುವಂಥದ್ದು. ಸ್ವಾಮಿಗಳಿಗೆ ಭಕ್ತ, ರಾಜಕಾರಣಿಗೆ ಮತದಾರ ಶ್ರೇಷ್ಠನಾಗಬೇಕೇ ಹೊರತು ಸಂಬಂಧಿಕರಲ್ಲ. ಅಧಿಕಾರವಲ್ಲ; ಆದರ್ಶ ಮುಖ್ಯವಾಗಬೇಕು. ಅಧಿಕಾರಕ್ಕಾಗಿ ಆದರ್ಶಗಳನ್ನು ಬಿಡುವ ರಾಜಕಾರಣಿಗಳನ್ನು ಜನ ಗುರುತಿಸಬೇಕು. ಹುಟ್ಟಿನ ಕುಲ-ಗೋತ್ರಗಳು ಶ್ರೇಷ್ಠವಲ್ಲ; ವ್ಯಕ್ತಿತ್ವವೇ ಶ್ರೇಷ್ಠ. ಇಂದು ಎಲ್ಲದಕ್ಕೂ ರಾಜಿ ಮಾಡಿಕೊಳ್ಳುವ ಗುಣದಿಂದಾಗಿ ಯಾವ ಸತ್ಕಾರ್ಯಗಳೂ ಗುರಿಯನ್ನು ಮುಟ್ಟುತ್ತಿಲ್ಲ. ಕೆಲವರು ಅಭಿಪ್ರಾಯಪಟ್ಟಂತೆ ‘ಮತ್ತೆ ಕಲ್ಯಾಣ’ ಲಿಂಗಾಯತ ಧರ್ಮದ ಮುಂದುವರಿದ ಭಾಗವಲ್ಲ. ವೀರಶೈವದ ವಿರೋಧವೂ ಅಲ್ಲ. ಮತ್ತೆ ಕಲ್ಯಾಣದ ಉದ್ದೇಶ ನೈಜ ಶರಣ ತತ್ವವನ್ನು ಜನತೆಗೆ ಮುಟ್ಟಿಸುವುದು. ಇದರಲ್ಲಿ ಯಾವ ಮುಖವಾಡವೂ ಇಲ್ಲ. ನಿಜ ಧರ್ಮದ ಬಗೆಗೆ ಜನರಲ್ಲಿರುವ ಅಜ್ಞಾನವನು ಹೋಗಲಾಡಿಸಿ ಸುಜ್ಞಾನವನ್ನು ನೀಡಿ ಜಾಗೃತಿ ಮೂಡಿಸುವ ಉದ್ದೇಶ ಮಾತ್ರವಿದೆ. ಇದೊಂದು ಮಾರ್ಗಸೂಚಿ. ಈ ಆಶಯಗಳನ್ನು ಆಯಾ ಜಿಲ್ಲಾ ಸಹಮತ ವೇದಿಕೆಗಳು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕಸ ಹೊರಗಷ್ಟೇ ಅಲ್ಲ; ಒಳಗೂ ಇದೆ. ಮೊದಲು ತಲೆಯೊಳಗಿನ ಕಸವನ್ನು ತೆಗೆಯುವ ಕೆಲಸವನ್ನು ಶರಣರು ಮಾಡಿದರು. ಅಂದೂ ವೈದಿಕ ಪರಂಪರೆ, ಪೂಜಾರಿ ಪುರೋಹಿತರು ನಮ್ಮ ಮೆದುಳಿಗೇ ಕೈ ಹಾಕಿದ್ದರು ಇಂದೂ ಹಾಕಿದ್ದಾರೆ. ವಚನ ಸಾಹಿತ್ಯದ ಅಧ್ಯಯನ, ಅನುಷ್ಠಾನದಿಂದ ಈ ಜಾಲದಿಂದ ಹೊರಬರಬೇಕು, ವ್ಯಕ್ತಿಗತವಾದ ಬದಲಾವಣೆಯೇ ಸಮಾಜದ ಬದಲಾವಣೆ. ಯಾವುದೇ ಕೆಲಸವನ್ನು ನಿಗದಿಪಡಿಸಿದ ಸಮಯಕ್ಕೆ ಆರಂಭಿಸಿ, ನಿಗದಿಪಡಿಸಿದ ಸಮಯಕ್ಕೆ ಮುಕ್ತಾಯಗೊಳಿಸಬೇಕು. ಕಾರ್ಯಕರ್ತರಲ್ಲಿ ತ್ಯಾಗ ಮನೋಭಾವ ಬೇಕು. ಆಗ ಮಾತ್ರ ಯಾವುದಾದರೂ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಇದೊಂದು ಸಮಾರಂಭವಲ್ಲ; ಹೋರಾಟವಾಗಬೇಕು ಎಂದಿದ್ದಾರೆ.
‘ಶರಣರ ಪ್ರತಿಭಟನೆಯ ಮಾರ್ಗ’ ಕುರಿತು ಡಾ. ಮೀನಾಕ್ಷಿ ಬಾಳಿ ಮಾತನಾಡಿ ಇಂದಿನ ಪ್ರಜಾಸತ್ತಾತ್ಮಾಕ ನೆಲೆಯ ಶಬ್ದಗಳಾದ ಪ್ರತಿಭಟನೆ, ಪ್ರಜಾಪ್ರಭುತ್ವ, ಹೋರಾಟ, ಚಳುವಳಿ ಮುಂತಾದ ಶಬ್ದಗಳು ಶರಣರ ವಚನಗಳಲ್ಲಿ ಇಲ್ಲ. ಅದರೆ ಈ ಶಬ್ದಗಳ ಅರ್ಥ ಪರಂಪರೆಯ ಹಿಂದಿನ ಬದುಕು ಪುರಾತನವಾದುದು. ಈ ಎಲ್ಲ ಶಬ್ದಗಳ ಭಾವ ವಚನ ಸಾಹಿತ್ಯದಲ್ಲಿ ಓತಪ್ರೋತವಾಗಿದೆ. ಎಂದೂ ಮಾತನಾಡದ ಸಮುದಾಯಗಳಿಗೆ ಮಾತನ್ನು ಕಲಿಸಿದ್ದು ಶರಣರ ತಾತ್ವಿಕ ದಿಗ್ವಿಜಯ. ಮಾತು ಬಾರದ ತಳ ಸಮುದಾಯಗಳೇ ಸೇರಿಕೊಂಡು ಕಟ್ಟಿಕೊಂಡ ಧರ್ಮ ಲಿಂಗಾಯತ ಧರ್ಮ. ಇದು ಜಾತಿ ಲಿಂಗಾಯತರ ಕಲ್ಯಾಣವಲ್ಲ; ಜಾತಿ ಸಮುದಾಯಗಳ ಕಲ್ಯಾಣ. ಶರಣರು ಮಾತಾಡುವುದಷ್ಟನ್ನೇ ಅಲ್ಲ; ಏನು ಮಾತನಾಡಬೇಕು ಎನ್ನುವುದನ್ನೂ ಕಲಿಸಿದರು ಎಂದು ತಿಳಿಸಿದರು.
ಇಂದು ಮಾತುಗಾರರ ಪ್ರಪಂಚ. ಮಾತಿನ ಮೂಲಕ ಮೋಡಿ ಮಾಡುವ ಕೆಲಸ ಹವ್ಯಾಹತವಾಗಿ ನಡೆದಿದೆ. ಏಕೆ, ಏನು, ಯಾರ ಪರವಾಗಿ ಮಾತನಾಡಬೇಕು ಎನ್ನುವುದು ಬಹಳ ಮುಖ್ಯ. ಮನಷ್ಯ-ಮನುಷ್ಯರ ನಡುವೆ ಇದ್ದ ಮೇಲು-ಕೀಳು, ಪಾಪ-ಪುಣ್ಯ, ಸ್ವರ್ಗ-ನರಕ, ಗಂಡು-ಹೆಣ್ಣು ಮುಂತಾದ ಅಸಮಾನತೆಗಳನ್ನು ತಾತ್ವಿಕವಾಗಿ ಪ್ರಶ್ನಿಸುವುದನ್ನು ಕಲಿಸಿದರು. ವಚನಕಾರರು ದೇವರ ನಂಬಿಕೆಯನ್ನು ನಿರಾಕರಿಸದೆ ಅಸ್ತಿತ್ವವನ್ನು ನಿರಾಕರಿಸಿದುದು ತತ್ವಶಾಸ್ತ್ರಕ್ಕೆ ಕೊಟ್ಟ ದೊಡ್ಡ ಕೊಡುಗೆ. ಅವರು ಈಗಾಗಲೇ ಸ್ಥಾಪಿತವಾದ ಮೌಲ್ಯಗಳನ್ನು ನಿರಾಕರಿಸಿದರು. ದೇವಸ್ಥಾನಗಳು ಶೋಷಣೆಯ ಕೇಂದ್ರಗಳಾಗಿದ್ದವು. ಅವುಗಳನ್ನು ನಿರಾಕರಿಸಿ ಪರ್ಯಾಯವಾಗಿ ಇಷ್ಟಲಿಂಗ ನೀಡಿದರು. ಸ್ಥಾವರ ದೇವರಿಗಿಂತ ಲಿಂಗವೇ ಶ್ರೇಷ್ಠವೆಂದರು. ಎಲ್ಲಕ್ಕಿಂತ ದೊಡ್ಡ ದೇವರು ಅನ್ನ. ದಾನಕ್ಕೆ ಬದಲಾಗಿ ದಾಸೋಹ ಸಂಸ್ಕೃತಿಯನ್ನು ಆರಂಭಿಸಿದುದು ವಚನ ಸಂಸ್ಕೃತಿ. ವೇದವನ್ನು ಪ್ರಶ್ನಾತೀತವಾಗಿ ನಂಬಿಕೊಂಡು ಬಂದ ಕಾಲದಲ್ಲಿ ವಚನಕಾರರು ಅವುಗಳ ಬಗ್ಗೆ ಮಾತನಾಡಿದರು, ಪ್ರಶ್ನಿಸಿದರು, ಪ್ರತಿಭಟಿಸಿದರು. ‘ವೇದ ಗಡಗಡ ನಡುಗಿತ್ತು’ ಎಂದರು.
ಇಂದು ಮಿನಿಸ್ಟರ್ ಸೀಟು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ‘ಸತ್ಯಾಗ್ರಹ, ಹೋರಾಟ’ ಶಬ್ದಗಳನ್ನು ಬಳಸಿ ಅಪವಿತ್ರಗೊಳಿಸುತ್ತಿದ್ದೇವೆ. ಸಕಲಜೀವಾತ್ಮರಿಗೆ ಲೇಸ ಬಯಸಿದವರು ಶರಣರು. ದೇವರ ಇರುವನ್ನು ಪ್ರಶ್ನಿಸುತ್ತ ‘ನಾ ದೇವನಲ್ಲದೆ; ನೀ ದೇವನೇ’ ಎಂದು ಪ್ರಶ್ನಿಸುವರು. ಲಿಂಗ, ಜಾತಿ, ವರ್ಣ ಭೇದಗಳಂತಹ ನೂರಾರು ಬೇಧಗಳನ್ನು ಪ್ರಶ್ನಿಸಿ ಸಮ ಸಮಾಜ ಕಟ್ಟಿದರು. ಹೆಣ್ಣನ್ನು ತುಚ್ಛೀಕರಿಸಿದ, ಶೃಂಗಾರಿಸಿದ ನಿಲುವುಗಳು ಬೇಕಾದಷ್ಟು ನಮಗೆ ಸಿಗುತ್ತವೆ. ಆದರೆ ೧೨ ನೆಯ ಶತಮಾನದಲ್ಲಿ ಮಾತ್ರ ಸಮಾನತೆಯ ನಿಲುವನ್ನು ನೋಡಲು ಸಾಧ್ಯ. ‘ಗಂಡು ಮೋಹಿಸಿ ಹೆಣ್ಣನ್ನು ಒತ್ತೆ ಹಿಡಿದಡೆ ಅದು ಅವನ ಆಸ್ತಿಯಾದರೆ ಹೆಣ್ಣು ಮೋಹಿಸಿ ಗಂಡ ಹಿಡಿದರೆ ಉತ್ತರವಾವುದೆಂದು’ ಪ್ರಶ್ನಿಸಿದರು. ಸಮಸ್ಯೆ ಇರುವುದು ಮಹಿಳೆಯರು ತೊಡುವ ಡ್ರೆಸ್‌ನಲ್ಲಿ, ನಮ್ಮ ಮೈಯಲ್ಲಿ ಅಲ್ಲ; ತಲೆಯಲ್ಲಿದೆ. ‘ಕೂಟಕ್ಕೆ ಸತಿ-ಪತಿ ನಾಮವಲ್ಲದೆ ಅರಿವಿಂಗೆ ಉಂಟೆ’ ಎನ್ನುವ ವಾದಗಳನ್ನು ಸೃಷ್ಟಿಸಿದರು. ವಾದವೇ ಇಲ್ಲವಾದರೆ ಜಡವಾಗುತ್ತದೆ. ಮೃದು ವಚನವೇ ಸಕಲ ಜಪಂಗಳಯ್ಯ ಎನ್ನುವ ವಚನಕಾರರಿದ್ದಂತೆ ಎಡಪಾದ ರಕ್ಷೆಯಿಂದ ಲಟ ಲಟನೆ ಹೊಡೆಯೆನ್ನುವ ವಚನಕಾರರೂ ಇದ್ದರು. ತಮ್ಮ ತಮ್ಮ ಸ್ತರಗಳಿಗೆ ಅನುಗುಣವಾಗಿ ಪ್ರತಿಭಟಿಸುವ ಬದುಕು-ಬರಹಗಳನ್ನು ರೂಪಿಸಿಕೊಂಡಿದ್ದರು ಎಂದರು.
‘ಶರಣರ ಪ್ರಶ್ನೆ – ಪ್ರತಿಭಟನೆಯ ದಾರಿ, ಪರ್ಯಾಯದ ಗುರಿ’ ಕುರಿತು ಡಾ. ಬಸವರಾಜ ಸಾದರ ಮಾತನಾಡಿ ಸ್ವಾತಂತ್ರತೆ, ಭಾತೃತ್ವ, ಸಮಾನತೆ ಮತ್ತು ಸಮಾನ ನ್ಯಾಯ ಈ ನಾಲ್ಕು ತತ್ವಗಳೇ ಎಲ್ಲ ಕಾಲಕ್ಕೂ ಮೂಲಬೀಜ. ಇದೇ ಅಶಯ ಶರಣರ ಬದುಕು-ಬರಹಗಳಲ್ಲಿ ಕಾಣಬಹುದು. ಆದರೆ ಕೆಲವರು ಇಂದಿನ ಈ ಆಧುನಿಕ ಶಬ್ದಗಳನ್ನು ಅಂದಿನ ವಚನಗಳಲ್ಲಿ ಹುಡುಕುತ್ತ ಇವ್ಯಾವೂ ವಚನಕಾರರಲ್ಲಿ ಇಲ್ಲ ಎನ್ನು ತೀರ್ಮಾನಕ್ಕೆ ಬರುವುದು ದುರದೃಷ್ಟಕರ ಸಂಗತಿ. ಶಬ್ದಗಳು ಇರಲಿಕ್ಕಿಲ್ಲ; ಈ ತತ್ವಗಳನ್ನೇ ಶರಣರು ಆರಾಧಿಸಿದರು. ಆ ತತ್ವಗಳು ಅಂದು ಸಂಪೂರ್ಣ ಯಶಸ್ಸನ್ನು ಪಡೆದಿದ್ದವು. ಬಸವಣ್ಣ ತನ್ನ ಕಡೆಯ ದಿನಗಳಲ್ಲಿ ‘ಕೆಟ್ಟಿತ್ತು ಕಲ್ಯಾಣ’ ಎನ್ನುತ್ತಾರೆ. ಇಲ್ಲಿ ಬಸವಣ್ಣನ ಸೂಕ್ಷ್ಮ ಮನಸ್ಸು ಎಷ್ಟು ನೊಂದಿರಬೇಕು ಎನ್ನುವುದನ್ನು ನಾವು ಗ್ರಹಿಸಬೇಕು. ಒಳ್ಳೆಯದನ್ನು ನಿರಾಕರಿಸುವ ಕೆಟ್ಟ ಮನಸ್ಸುಗಳು ಅಂದಿರುವಂತೆ ಇಂದೂ ಇವೆ. ಹೊಸದನ್ನು ಕಟ್ಟುವುದು ಸುಲಭ; ಕೆಟ್ಟದ್ದನ್ನು ಸುಧಾರಿಸುವುದು ಕಷ್ಟದ ಕೆಲಸ. ಆ ಕೆಲಸವೇ ಈ ಮತ್ತೆ ಕಲ್ಯಾಣ. ಈ ಚಳುವಳಿ ‘ಇಲ್ಲಿ ಮತ್ತು ಈಗ’ ಎನ್ನುವುದು ಬಹಳ ಮುಖ್ಯ. ‘ನೋಯುವ ಹಲ್ಲಿಗೇ ನಾಲಗೆ ಮತ್ತೆ ಮತ್ತೆ ಹೊರಳುವಂತೆ ಜಗತ್ತಿನ ಸಮಸ್ತ ಸಂಕಟಗಳಿಗೆ ಮತ್ತೆ ಮತ್ತೆ ಹೊರಳುವುದು ವಚನ ಸಾಹಿತ್ಯದ ಕಡೆಗೆ’ ಎನ್ನುವ ಗಿರೀಶ್ ಕಾರ್ನಾಡ್‌ರ ಮಾತು ಗಮನಾರ್ಹವಾದುದು. ತಾನು ಹುಟ್ಟುಹಾಕಿದ ಕ್ರಾಂತಿ ಒಂದಲ್ಲ ಒಂದು ದಿನ ನನಸಾಗುವುದು ಎನ್ನುವುದು ಬಸವಣ್ಣನ ಗಟ್ಟಿ ನಂಬಿಕೆಯಾಗಿತ್ತು. ಆ ಕನಸು ಮತ್ತೆ ಕಲ್ಯಾಣದ ಮೂಲಕ ನನಸಾಗುತ್ತಿದೆ. ಅಂದಿನ ಅನುಭವ ಮಂಟಪಕ್ಕೆ ಪಂಡಿತಾರಾಧ್ಯ ಶ್ರೀಗಳು ಜಂಗಮಸ್ವರೂಪ ಕೊಟ್ಟಿದ್ದಾರೆ. ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಮತ್ತು ಪರ್ಯಾಯವನ್ನು ಕಟ್ಟಿಕೊಂಡದ್ದು ಶರಣರ ಶ್ರೇಷ್ಠತೆ. ಪರಂಪರೆಯನ್ನು ಪ್ರಶ್ನಿಸುವ ಹೊಸ ಉಪಕ್ರಮವನ್ನು ಶರಣರು ಕಂಡುಕೊಂಡರು ಎಂದು ತಿಳಿಸಿದರು.
‘ಮುಖವಾಡಗಳು ಕೂಡಲ ಸಂಗನ ರಾಜಬೀದಿಯಲ್ಲಿ ಕಳಚಿಬೀಳಬೇಕು’ ಎನ್ನುವರು ಬಸವಣ್ಣನವರು. ಇಂದು ನಮ್ಮ ದೇಶದಲ್ಲಿ ೩೩ ಕೋಟಿ ದೇವತೆಗಳು ಇವೆ ಎಂದು ಅಂಕಿ-ಅಂಶಗಳಲ್ಲಿ ಹೇಳಲಾಗುತ್ತದೆ. ಇಂಥ ದೇವರ ಸ್ವರೂಪವನ್ನು ಪ್ರಶ್ನಿಸುವುದು, ಪ್ರತಿಭಟಿಸುವುದು, ನಿರಾಕರಿಸುವುದರ ಜೊತೆಗೆ ಪರ್ಯಾಯವನ್ನು ಕಟ್ಟಿಕೊಟ್ಟವರು ಶರಣರು. ಜ್ಞಾನದ ಸೂರ್ಯವನ್ನು ಹುಟ್ಟಿಸಿಕೊಂಡು ಅರಿವನ್ನು ಮೂಡಿಸಿಕೊಳ್ಳಬೇಕು ಎಂದರು. ಕೂಟದಿಂದ ಮಾತ್ರ ಕೂಸು ಹುಟ್ಟುವುದಲ್ಲದೆ ಬ್ರಹ್ಮನಿಂದಲ್ಲ. ಬೆಂಕಿಯನ್ನು ಆರಾಧಿಸುವ ಜನರೇ ತಮ್ಮ ಮನೆಗೆ ಬಿದ್ದ ಬೆಂಕಿಯನ್ನು ಆರಿಸಲು ದಾರಿಯ ಧೂಳು, ಬಚ್ಚಲ ನೀರನ್ನು ಎರೆಯುವುದು ವಿಪರ್ಯಾಸವಲ್ಲದೆ ಮತ್ತೇನು? ಇಂದು ನೆರೆಹಾವಳಿಯಲ್ಲಿ ನಲವತ್ತು ಕೋಟಿ ಕಿರೀಡ ಧರಿಸಿದ ದೇವರು ಬಂದು ಅವರನ್ನು ಕಾಪಾಡಲಿಲ್ಲ; ಬದಲಾಗಿ ಇಂದು ನೀವು ನಿಮ್ಮ ಕೈಲಾದ ಹಣದ ಸಹಾಯವನ್ನು ನೀಡಿದ್ದೀರಲ್ಲ ನೀವೇ ನಿಜವಾದ ದೇವರು. ಇದನ್ನೇ ‘ನಾ ದೇವ ಕಾಣಾ ಗುಹೇಶ್ವರ’ ಎಂದದ್ದು. ಮನುಷ್ಯನಲ್ಲಿರುವ ದೇವತ್ವವನ್ನು ಜಾಗೃತಗೊಳಿಸಿದರು. ಮನು ಮನುಷ್ಯನೇ ಎಂದು ಪ್ರಶ್ನಿಸುವಷ್ಟು ಮನು ಸಿದ್ಧಾಂತಗಳಲ್ಲಿವೆ. ಪಂಚಭೂತಗಳು ಎಲ್ಲರಿಗೂ ಸಮಾನ ಎನ್ನುವುದನ್ನು ಶರಣರು ಸಾಕ್ಷ್ಯಾಧಾರಗಳೊಂದಿಗೆ ಸಾಬೀತು ಪಡಿಸಿದರು. ‘ಮೇಲಾಗಲೊಲ್ಲೆನು ಕೀಳಾಗಲಲ್ಲದೆ. ಕೀಳಿಂಗೆ ಹಯನು ಕರೆಯುವುದು’ ಎನ್ನುವ ಬಸವಣ್ಣನ ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಅದ್ಭುತವಾದದ್ದು. ಇರಲಾರದನ್ನೇ ಅಪೇಕ್ಷಿಸುವಂತೆ ಪೂಜ್ಯರು ಮತ್ತೆ ಕಲ್ಯಾಣ ಆರಂಭಿಸಿದ್ದಾರೆ. ಇದು ನಾಳೆ ಮುಗಿಯುವುದಿಲ್ಲ; ಆರಂಭವಾಗುವುದು. ಬಸವಣ್ಣನ ಕನಸು ನನಸಾಗುವವರೆಗೂ ಈ ಕಲ್ಯಾಣ ಮತ್ತೆ ಮತ್ತೆ ನಡೆಯಬೇಕು. ವಚನ ಸಾಹಿತ್ಯದ ಬೀಜವನ್ನು ಜತನದಿಂದ ಕಾಪಾಡಿಕೊಂಡು ನಾಳಿನ ಪೀಳಿಗೆಗೆ ನೀಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ ಬಿ ಪಾಟೀಲ್ ಮಾತನಾಡಿ ಸಮಯ ಪ್ರಜ್ಞೆಗೆ ಇನ್ನೊಂದು ಹೆಸರೇ ಪಂಡಿತಾರಾಧ್ಯ ಶ್ರೀಗಳು. ಮಠದಲ್ಲಿ ನ್ಯಾಯಪಂಚಾಯತಿ ನಡೆಸುವ ಏಕೈಕ ಮಠ. ಬಸವಣ್ಣ ಹುಟ್ಟಿದ ನಾಡಿನಲ್ಲಿಯೇ ಬಸವಣ್ಣನನ್ನು ಮರೆತಿದ್ದೇವೆ. ಲಿಂಗಾಯತ ಸಮಾವೇಶಗಳಿಂದ ಏನನ್ನೂ ಸಾಧಿಸಲಿಲ್ಲ; ಕಾರಣ ಆ ಹೋರಾಟಕ್ಕೆ ರಾಜಕೀಯ ನಂಟಿತ್ತು. ಸಂವಿಧಾನ ಮಾನ್ಯತೆಗಾಗಿ ಸುಪ್ರಿಮ್ ಕೋರ್ಟ್‌ಗೆ ಹೋಗುತ್ತಿದ್ದೇವೆ. ಧರ್ಮ ಒಡೆಯುವ, ಜಾತಿ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆಪಾದನೆಗಳು ಬಂದವು. ಇದೆಲ್ಲವೂ ಸುಳ್ಳು ಆಪಾದನೆಗಳು ಮಾತ್ರ. ಸಾಣೇಹಳ್ಳಿಯ ಶ್ರೀಗಳು ಹತ್ತು ವರ್ಷಗಳ ಹಿಂದೆಯೇ ತಮ್ಮ ಕೃತಿಂiiಲ್ಲಿ ಲಿಂಗಾಯತ, ವೀರಶೈವ ಬೇರೆ ಬೇರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೆ ಕಲ್ಯಾಣ ನಿತ್ಯ ಕಲ್ಯಾಣವಾಗಲಿ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ರವೀಂದ್ರ ಶಾಬಾದಿ ಸ್ವಾಗತಿಸಿದರೆ, ಶಿವರಂಜನ್ ಸತ್ಯಂಪೇಟೆ ನಿರ್ವಹಿಸಿದರು. ಕಾರ‍್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ’ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ನೆರೆ ಸಂತ್ರಸ್ತರ ನಿಧಿಗೆ ೨೨೭೦೦ ರೂಪಾಯಿಗಳು ಸಂಗ್ರಹವಾಯಿತು.
ಗಂಜ ನಗರೇಶ್ವರ ಶಾಲೆಯಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ಜನಪ್ರತಿನಿಧಿಗಳು, ವಿವಿಧ ಧರ್ಮದ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ಧ ಚಿತ್ರಗಳನ್ನೊಳಗೊಂಡ ವಿಶೆಷ ವಾಹನಗಳೊಂದಿಗೆ ಎಸ್ ಎಂ ಪಂಡಿತ ರಂಗಮಂದಿರಕ್ಕೆ ಬಂದು ತಲುಪಿದರು.
ಕಲಬುರಗಿ; ಇಲ್ಲಿನ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ’ಮತ್ತೆ ಕಲ್ಯಾಣ’ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ‍್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿದ್ಯಾರ್ಥಿಗಳಿಗೆ ನಾಡಿನ ಭವಿಷ್ಯ ಕಟ್ಟುವ ಹೊಣೆಗಾರಿಕೆಯಿದೆ. ಪದವಿ, ಹುದ್ದೆ ಸಿಕ್ಕ ತಕ್ಷಣ ಶಿಕ್ಷಣ ಮುಗಿಯುವುದಿಲ್ಲ. ಅದು ನಿರಂತರ ಪ್ರಕ್ರಿಯೆ. ಬಯಲ ಭಾವನೆಯನ್ನು ಮಕ್ಕಳಿಗೆ ಶಿಕ್ಷಕರು ಕಲಿಸಿಕೊಡಬೇಕು. ನಿಜವಾದ ಶಿಕ್ಷಣ ಪ್ರಾರಂಭವಾಗುವುದು ಅಂತರಂಗ ಮತ್ತು ಬಯಲಿನಲ್ಲಿ. ಮನಸ್ಸಿಗೆ, ಸಂತೋಷಕ್ಕೆ, ವಿಚಾರಕ್ಕೆ ಹಾಕಿಕೊಂಡಿರುವ ಸೀಮಿತ ಚೌಕಟ್ಟುಗಳನ್ನು ತೊಡೆದು ಹಾಕಬೇಕು. ಬುದ್ಧಿವಂತಿಕೆ ಬೇರೆ, ವಿವೇಕ ಬೇರೆ. ಮನುಷ್ಯ ಬರೀ ಬುದ್ಧಿವಂತನಾದರೆ ಸಾಲದು; ವಿವೇಕವಂತನಾಗಬೇಕು. ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಶಿಕ್ಷಣದ ಜೊತೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಶಿಕ್ಷಣವನ್ನೂ ನೀಡಬೇಕು.
ಇಂದಿನ ಶಿಕ್ಷಣ ನಮ್ಮನ್ನು ಸುಜ್ಞಾನಿಗಳನ್ನಾಗಿಸದೇ ಅಜ್ಞಾನಿಗಳನ್ನಾಗಿಸುತ್ತಿರುವುದು ದುರದುಷ್ಟಕರ. ಬುದ್ಧಿಯನ್ನು ಸುಬುದ್ಧಿಯನ್ನಾಗಿ ಮಾಡಿಕೊಳ್ಳಬೇಕಾದರೆ ನೈತಿಕ ನೆಲೆಗಟ್ಟು ಬೇಕು. ಶಿಕ್ಷಕ ದುಶ್ಚಟಗಳ ದಾಸನಾದರೆ ಮಕ್ಕಳು ಆತನಿಂದ ಇನ್ನೆಂಥ ಶಿಕ್ಷಣ ನಿರೀಕ್ಷಿಸಲು ಸಾಧ್ಯ? ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎನ್ನುವ ಗಾದೆ ಮಾತಿಗೆ ಅನುಗುಣವಾಗಿ ಶರಣರು ಬದುಕಿದರು. ವಚನಗಳು ಪಠ್ಯಕ್ಕೆ ಪೂರಕವಾದವು. ಬದುಕಿಗೆ ಬೆಳಕು ನೀಡುವಂಥವು. ಸುಬುದ್ಧಿ ಒಳ್ಳೆಯ ಕಾರ್ಯದಕಡೆಗೆ ನಮ್ಮನ್ನು ಕರೆದುಕೊಂಡು ಹೋದರೆ, ದುರ್ಬುದ್ಧಿ ಕೆಟ್ಟ ಕಾರ್ಯದ ಕಡೆಗೆ ಕರೆದುಕೊಂಡು ಹೋಗುತ್ತದೆ. ಕಾಯಕ ಶ್ರದ್ಧೆಯ ಜೊತೆಗೆ ಅಧ್ಯಾತ್ಮದ ಶ್ರದ್ಧೆಯನ್ನೂ ರೂಢಿಸಿಕೊಳ್ಳಬೇಕು. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಅರುಹುವವನೇ ಗುರು. ಇದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಪ್ರಶ್ನೆಕೇಳುವ ಹಕ್ಕಿದೆ. ಪ್ರಶ್ನೆಯನ್ನು ಕೇಳುವ ಬಸವ ಪಂಥಿಯರಾಗಬೇಕು. ದೇವರ ಸ್ವರೂಪ ಸತ್, ಚಿತ್, ಆನಂದ ಮತ್ತು ನಿತ್ಯಪರಿಪೂರ್ಣವಾದುದು. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವಂತೆ, ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ದೇವರಾಗುತ್ತಾನೆ. ಮನುಷ್ಯ ಒಳ್ಳೆಯ ಕಾರ್ಯ ಮಾಡಿದರೆ ದೇವರಾಗುತ್ತಾನೆ. ಕೆಟ್ಟ ಕೆಲಸ ಮಾಡಿದರೆ ದೆವ್ವನಾಗುತ್ತಾನೆ.
ದೇವರಿಗೆ ನೈವೇದ್ಯ, ಅಭಿಷೇಕಗಳನ್ನು ಮಾಡುವುದರ ಬದಲು ಹಸಿವಿನಿಂದ ಬಳಲುವವರಿಗೆ ಅನ್ನ ಕೊಟ್ಟರೆ ಹಸಿವು ನೀಗುತ್ತದೆ. ಅದೇ ಜಂಗಮಾರಾಧನೆ. ಶರಣರು ಪ್ರತಿಯೊಂದು ಮನೆಗಳೂ ಮಠಗಳಾಗಬೇಕು ಎಂದರು. ಅಂದರೆ ಮಠಗಳಲ್ಲಿ ನಡೆಯುವ ಸತ್ಕಾರ್ಯಗಳು ಮಠಗಳಲ್ಲಿಯೂ ನಡೆಯಬೇಕು ಎಂದು. ವಿದ್ಯಾರ್ಥಿಗಳು ಶ್ರವಣ, ಮನನ ನಿಧಿಧ್ಯಾಸನದ ಮೂಲಕ ಅಧ್ಯಯನದ ಕ್ರಮವನ್ನು ಅಳವಡಿಸಿಕೊಂಡರೆ ಪರೀಕ್ಷೆಯ ಭಯ ದೂರವಾಗುವುದು. ಪರೀಕ್ಷೆಯನ್ನು ಹಬ್ಬವೆಂದು ಸ್ವೀಕಾರ ಮಾಡಬೇಕು. ಜಂಗಮ ಅಂದರೆ ಜಾತಿಯಲ್ಲ; ಅರಿವು ಆಚಾರವುಳ್ಳವ. ಜಂಗಮ ಗಂಡು ಆಗಿರಬಹುದು ಹೆಣ್ಣು ಆಗಿರಬಹುದು. ನಾವು ಯಾವ ಕೇರಿಯಲ್ಲಿ ವಾಸ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ; ಆಚಾರ-ವಿಚಾರಗಳು ಮುಖ್ಯ. ಬಸವಣ್ಣ ಅಂತರಂಗ ಮತ್ತ ಬಹಿರಂಗ ಶುದ್ಧಿಗೆ ಸಪ್ತಸೂತ್ರಗಳ ಅಳವಡಿಸಿಕೊಂಡು ದೇವರನ್ನು ಒಲಿಸಿಕೊಂಡರು. ಅದೇ ನಮ್ಮ ದಾರಿಯೂ ಆಗಬೇಕು.
ಸಂವಾದಕ ಡಾ. ಆರ್ ವೆಂಟಕರೆಡ್ಡಿ ಮಾತನಾಡಿ ಸಹಮತದಲ್ಲಿ ಎಲ್ಲಾ ಜಾತಿ, ಜನಾಂಗ, ಧರ‍್ಮ ಸೇರಿಕೊಂಡು ’ಮತ್ತೆ ಕಲ್ಯಾಣ’ ಅಭಿಯಾನ ನಡೆಯುತ್ತಿರುವುದು ಶ್ಲಾಘನೀಯ. ಪರೀಕ್ಷೆಯಲ್ಲಿ ನಿರೀಕ್ಷೆಗಳೇ ಹೆಚ್ಚು. ಪರೀಕ್ಷೆ ಸಾಧನೆಗೆ ಮಾರ್ಗ ಮಾತ್ರ. ನಿರಂತರವಾಗಿ ಅಭ್ಯಾಸ ಮಾಡಿ ಪರೀಕ್ಷೆಯನ್ನು ಸಂತೋಷದಿಂದಲೇ ಬರೆಯಬೇಕು. ಮಾಟಮಂತ್ರಗಳೆಲ್ಲವೂ ಕಣ್‌ಕಟ್ಟು ಮಾಡಿ ಜನರನ್ನು ದಿಕ್ಕುತಪ್ಪಿಸುವ ವಿದೆಗಳು. ಮಾಟಮಂತ್ರಕ್ಕೆ ವೈಜ್ಞಾನಿಕ ಯುಗದಲ್ಲಿ ಅವಕಾಶವಿಲ್ಲ ಎಂದರು.
ಸಂವಾದಕ ಪ್ರೊ. ಆರ್ ಕೆ ಹುಡುಗಿ ನಾವು ತುಳಿಯುವ ದಾರಿ ಬುದ್ಧ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ದಾರಿ. ನಾವೆಲ್ಲರೂ ಆ ದಾರಿಯಲ್ಲೇ ನಡೆಯೋಣ. ಯಾರು ಅಶಕ್ತರಿದ್ದಾರೋ ಅವರನ್ನು ಬಲಿಪಶುಗಳನ್ನಾಗಿ ಮಾಡುವ ಹುನ್ನಾರ ಪ್ರತಿಯೊಂದು ಹಂತದಲ್ಲಿಯೂ ಇದೆ. ವೈದಿಕ ಪರಂಪರೆ ವಚನ ಸಾಹಿತ್ಯವನ್ನು ನಾಶ ಮಾಡಲು ಪ್ರಯತ್ನಿಸಿತು. ಮನುಷ್ಯತ್ವ ಕಳೆದುಕೊಂಡ ಈ ನಾಡಿನಲ್ಲಿ ಮತ್ತೆ ಮನುಷ್ಯತ್ವದ ದೀಪಹಚ್ಚುವ ಕಾರ್ಯ ‘ಮತ್ತೆ ಕಲ್ಯಾಣ’ದ ಮೂಲಕ ಆಗ್ತಾ ಇರುವುದು ತುಂಬಾ ಸಂತೋಷ. ಶರಣರು ಕಂಡ ಕಲ್ಯಾಣದ ಕನಸನ್ನು ಕಾಣಬೇಕಾದರೆ ಪ್ರಶ್ನೆ ಕೇಳುವ ತಾಕತ್ತು ವಿದ್ಯಾರ್ಥಿಗಳಿಗೆ ಬರಬೇಕು ಎಂದರು.
ಸಂವಾದಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ ಹೆಣ್ಣು-ಗಂಡಿನ ದೇಹರಚನೆಯಲ್ಲಿ ವ್ಯತ್ಯಾಸವಿರಬಹುದು ಆದರೆ ಆತ್ಮ ಒಂದೇ. ಶರಣರು ಯಜ್ಞಯಾಗಾದಿಗಳನ್ನು ವಿರೋಧಿಸಿದರು. ವಚನ ಸಾಹಿತ್ಯದ ಕಾಲದಲ್ಲೂ ಮಠಗಳು, ಸ್ವಾಮಿಗಳೂ ಇದ್ದರು. ಶರಣರಿಗೆ ಅರಿವೇ ಗುರುವಾಗಿತ್ತು. ವೇದ, ಆಗಮ, ಉಪನಿಷತ್ತುಗಳೆಲ್ಲ ಕಟ್ಟುಕತೆಗಳು. ಹೀಗಾಗಿ ಶರಣರು ಅವುಗಳನ್ನು ಖಂಡತುಂಡವಾಗಿ ಖಂಡಿಸಿದರು ಎಂದರು.
ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಆರ್ ಜಿ ಶೆಟಗರ್ ಸ್ವಾಗತಿಸಿದರೆ ಶಿವಲೀಲಾ ಎಸ್ ಕಲಗುರಕಿ ಕಾರ್ಯಕ್ರಮ ನಿರೂಪಿಸಿದರು.
ಹೆಣ್ಣು ಮಾಯೆ, ಗಂಡು ಮಾಯೆ, ಮಣ್ಣು ಮಾಯೆ ಎಂದು ಹೇಳುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ? ಆಧ್ಯಾತ್ಮವನ್ನು ಹೇಗೆ ರೂಢಿಸಿಕೊಳ್ಳಬೇಕು? ಗುರು ಶ್ರೇಷ್ಠನೋ, ಭಕ್ತ ಶ್ರೇಷ್ಠನೋ? ಶರಣರ ದೃಷ್ಟಿಯಲ್ಲಿ ಭಕ್ತಿ ಎಂದರೇನು? ಶರಣರ ದೃಷ್ಟಿಯಲ್ಲಿ ದೇವರು ಎಂದರೆ ಯಾರು? ಮಡಿಮೈಲಿಗೆ ಎನ್ನುವ ಕಲ್ಪನೆ ಸರಿಯೋ ತಪ್ಪೋ? ಸ್ಥಾವರಕ್ಕೂ ಜಂಗಮಕ್ಕೂ ಇರುವ ವ್ಯತ್ಯಾಸವೇನು? ಶರಣರ ದೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠ ದಾನ ಯಾವುದು? ಇಂದು ವಚನ ಸಾಹಿತ್ಯ ಒಂದು ಜಾತಿಯ ಸ್ವತ್ತು ಎನ್ನುವ ಅನುಮಾನ ನಮಗೆ ಉಂಟಾಗುತ್ತಿದೆ. ಇದಕ್ಕೆ ತಮ್ಮ ಅಭಿಪ್ರಾಯವೇನು? ಜಡ ದೇವರಿಗೆ ನೈವೇದ್ಯ, ಅಭಿಷೇಕ ಮಾಡುವುದರ ಬದಲು ಹಸಿವಿನಿಂದ ಬಳಲುವವರಿಗೆ ಕೊಟ್ಟರೆ ಹಸಿವು ನೀಗಿಸಬಹುದಲ್ಲವೇ? ವಚನ ಸಾಹಿತ್ಯದ ಕಾಲದಲ್ಲಿ ಸ್ವಾಮಿಗಳು, ಮಠಗಳೂ ಇದ್ದವೇ ? ಇದ್ದರೆ ಅವರ ಕೆಲಸವೇನಾಗಿತ್ತು? ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಭಯವೇಕೆ? ಲಿಂಗಾಯತ ಎನ್ನುವುದು ಧರ್ಮವೋ ಜಾತಿಯೋ? ಜಂಗಮರಾದವರ ಕಾಯಕವೇನು? ವಚನ ಸಾಹಿತ್ಯದ ಆಶಯಗಳನ್ನು ಮಠದ ಸ್ವಾಮಿಗಳು, ಹಿರಿಯರು ಇನ್ನು ಆಚರಣೆಗೆ ತಂದಿಲ್ಲ. ಅಂಥದ್ದರಲ್ಲಿ ವಿದ್ಯಾರ್ಥಿಗಳು ಆಚರಣೆ ತರಬೇಕು ಎನ್ನುವುದು ಎಷ್ಟರಮಟ್ಟಿಗೆ ಸರಿ? ಶರಣರು ಕಂಡ ಕಲ್ಯಾಣದ ಕನಸು ನನಸಾಗಬೇಕಾದರೆ ನಾವು ಏನು ಮಾಡಬೇಕು? ದೇಹದಲ್ಲೇ ದೇವರಿದ್ದಾನೆ ಎನ್ನುವುದಾದರೆ. ಅದೇ ದೇಹದಲ್ಲಿ ಆನಾರೋಗ್ಯ ಉಂಟಾದರೆ ಚಿಕಿತ್ಸೆ ನೀಡುವುದೇಕೆ? ದೇಹದಲ್ಲಿ ದೆವ್ವ ಬಂದಿದೆ ಎನ್ನುತ್ತಾರಲ್ಲ ಇದು ಎಷ್ಟರಮಟ್ಟಿಗೆ ಸರಿ? ಕೆಳಜಾತಿಯ ಮನೆಯಲ್ಲಿ ಎಷ್ಟು ಸಾರಿ ಪ್ರಸಾದ ಮಾಡಿದ್ದೀರಿ ಸ್ವಾಮೀಜಿಯವರೇ? ವಚನ ಎಂದರೇನು? ಧರ್ಮ ಮತ್ತು ಜಾತಿಯ ನಡುವೆ ಇರುವ ವ್ಯತ್ಯಾಸವೇನು? ಶರಣ ತತ್ವಗಳನ್ನು ಅಳವಡಿಕೊಳ್ಳಬೇಕಾದರೆ ಶಿಕ್ಷಕರ ಪಾತ್ರವೇನು? ಇಷ್ಟಲಿಂಗ ಧರಿಸುವುದರಿಂದ ಆಗುವ ಪ್ರಯೋಜನವೇನು? ಶರಣರ ದೃಷ್ಟಿಯಲ್ಲಿ ಗುರು ಎಂದರೆ ಯಾರು? ಅಂತರಂಗ ಶುದ್ಧಿಯ ಮೌಲ್ಯಗಳು ಯಾವವು? ಬಹಿರಂಗದ ಶುದ್ಧಿಯ ಮೌಲ್ಯಗಳಾವವು?.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…