ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ: ಡಾ.ಮಲ್ಲಿಕಾರ್ಜುನ ಖರ್ಗೆ

ಗ್ಯಾರಂಟಿ ಫಲಾನುಭವಿಗಳ ಸಮಾವೇಶ

ಕಲಬುರಗಿ: ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ನಾಡಿನ ಜನರ ಕಲ್ಯಾಣಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು 1,460 ಕೋಟಿ ರೂ. ಬೃಹತ್ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯಲ್ಲಿ 5.25 ಲಕ್ಷ ಜನ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ 2,000 ರೂ. ಪಡೆಯುತ್ತಿದ್ದಾರೆ. 5.28 ಲಕ್ಷ ಮನೆಗಳಲ್ಲಿ ಗೃಹ ಜ್ಯೋತಿಯ ಬೆಳಕು ಕಾಣುತ್ತಿದೆ. 4.91 ಲಕ್ಷ ಪಡಿತರ ಕುಟುಂಬಗಳು ಅನ್ನ ಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ದಿನ 1.57 ಲಕ್ಷ ಜನ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ 1.40 ಲಕ್ಷ ಜನ ಯುವ ನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಇದೆಲ್ಲವು ಬಡವರ ಕಲ್ಯಾಣಕ್ಕೆ ರೂಪಿಸಿರುವ ನಮ್ಮ ಸರ್ಕಾರದ ಜನಪರ ಯೋಜನೆಗಳಾಗಿವೆ ಎಂದರು.

2013ರಲ್ಲಿ ಅಂದಿನ ಯು.ಪಿ.ಎ. ಸರ್ಕಾರ ಈ ಭಾಗಕ್ಕೆ ಸಂವಿದಾನಕ್ಕೆ ತಿದ್ದುಪಡಿ ತಂದು 371ಜೆ ಕಲಂ ಜಾರಿಗೆ ತಂದ ಪರಿಣಾಮ ಇಂದಿಲ್ಲ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. 9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಇಲ್ಲಿನ ರಾಜ್ಯ ಸರ್ಕಾರ 371ಜೆ ಮೀಸಲಾತಿಯಡಿ ಈಗಾಗಲೆ 15 ಸಾವಿರ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಹೀಗಾಗಿ ಪ್ರದೇಶದ ಸರ್ವರ ಕಲ್ಯಾಣಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು.

ತಾವು ರೈಲ್ವೆ ಸಚಿವರಾಗಿದ್ದಾಗ 11 ತಿಂಗಳ ಅಲ್ಪ ಅವಧಿಯಲ್ಲಿಯೆ 27 ರೈಲು ಓಡಿಸಿದೆ. ಕಲಬುರಗಿ-ಹುಬ್ಬಳ್ಳಿ, ಹುಬ್ಬಳ್ಳಿ-ಹೈದ್ರಾಬಾದ, ಹುಬ್ಬಳ್ಳಿ-ಮುಂಬೈ, ಕಲಬುರಗಿ-ಬೀದರ ಹೀಗೆ ಅನೇಕ ರೈಲುಗಳನ್ನು ಆರಂಭಿಸಲಾಯಿತು. ಕಾರ್ಮಿಕ ಸಚಿವನಾಗಿದ್ದಾಗ ಇ.ಎಸ್.ಐ.ಸಿ. ಆಸ್ಪತ್ರೆ ಆರಂಭಿಸಿದೆ. ಸಿ.ಯು.ಕೆ. ಸ್ಥಾಪಿಸಿದ್ದಾಯಿತು. ನನ್ನನ್ನು ಟೀಕಿಸಿದ ವಿರೋಧ ಪಕ್ಷದವರ ಕ್ಷೇತ್ರದಲ್ಲಿಯೂ ಕೆಲಸ ಮಾಡಿರುವೆ. ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮಾಡಿಲ್ಲ. ಜನರ ಕಲ್ಯಾಣವೇ ನಮಗೆ ಮುಖ್ಯ ಎಂದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಯಾವುದೇ ಕೊಡುಗೆ ನೀಡದೆ ಸುಳ್ಳು ಭರವಸೆ ನೀಡುತ್ತಿದೆ. 10 ವರ್ಷವಾದರೂ ವಾಡಿ-ಗದಗ ಲೈನ್ ಮರೀಚಿಕೆಯಾಗಿದೆ. ವರ್ಷದಲ್ಲಿ 2 ಕೋಟಿ ಉದ್ಯೋಗ ಅಂದ್ರು ಯಾರಿಗೂ ಉದ್ಯೋಗ ಸಿಕ್ಕಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ ಎಂದರು.

ತ್ಯಾಗ, ಬಲಿದಾನ ಫಲ ಸಂವಿಧಾನ: ಸ್ವಾತಂತ್ರ್ಯ ನಂತರ ದೇಶಕ್ಕೆ ಉತ್ತಮ ಸಂವಿಧಾನ ಅಗತ್ಯವಿತ್ತು. ತ್ಯಾಗ-ಬಲಿದಾನದ ಫಲವಾಗಿ ನಮಗೆ ಸಂವಿಧಾನ ಲಭಿಸಿದೆ. ಅಷ್ಟೊಂದು ಸಲೀಸಾಗಿ ಅದು ದಕ್ಕಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚಿತ ಸಂವಿಧಾನ ಇಂದು ರಾಜ್ಯದ ಸಂಸದರೊಬ್ಬರು ತಮ್ಮ ಪಕ್ಷದ ಸರ್ಕಾರ ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುವುದು ಎಂದು ಹೇಳುತ್ತಿದ್ದಾರೆ. ರಾಷ್ಟ್ರೀಯತೆ, ಸಮಗ್ರತೆ, ಏಕತೆಯು ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ ಪ್ರಜಾಪ್ರಭುತ್ವ ಉಳಿವಿಗೆ ದೇಶದ ಪ್ರತಿ ಪ್ರಜೆ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಧರ್ಮದಲ್ಲಿ ರಾಜಕಾರಣ ಮಾಡಬಾರದು, ರಾಜಕರಣದಲ್ಲಿ ಧರ್ಮ ಇರಬೇಕು: ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಮಾತನಾಡಿ ಬಸವಣ್ಣನ ಕರ್ಮಭೂಮಿ ಇದು. ಶರಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್ ದರ್ಗಾ, ಬುದ್ದ ವಿಹಾರ ಇರುವ ಸೌಹಾರ್ದ ಸ್ಥಳ ಇದಾಗಿದೆ. ದೇವನೊಬ್ಬ ನಾಮ ಹಲವು. ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಜನರ ಕಲ್ಯಾಣಕ್ಕೆ ಶ್ರಮಿಸಿದ್ದೇವೆ. ಇದು ವಿರೋಧ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಧರ್ಮದಲ್ಲಿ ರಾಜಕಾರಣ ಮಾಡಲು ಹೊರಟಿವೆ. ಧರ್ಮದಲ್ಲಿ ರಾಜಕಾರಣ ಮಾಡಬಾರದು, ರಾಜಕರಣದಲ್ಲಿ ಧರ್ಮ ಇರಬೇಕು ಎಂಬ ನಂಬಿಕೆ ಉಳ್ಳವರು ನಾವು. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ರೀತಿಯಲ್ಲಿ ಸಮಸ್ತ ವರ್ಗವನ್ನು ತೆಗೆದುಕೊಂಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಕೇಂದ್ರ ಸರ್ಕಾರದ ಅಸಹಕಾರದ ನಡುವೆ 2024-25ನೇ ಸಾಲಿಗೆ 52 ಸಾವಿರ ಕೋಟಿ ರೂ. ಹಣ ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಐದು ಬೆರಳಿಗೆ ಸಮ ಎಂದ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಇಡೀ ದೇಶದಲ್ಲಿ ಮಾದರಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಜೆ ಮೀಸಲಾತಿ ಜಾರಿಗೆ ತಂದು ಇಲ್ಲಿನ ಜನರ ಕಲ್ಯಾಣಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದು, ಉಪಕಾರ ಸ್ಮರಣೆ ಮಾಡುವುದು ಇಲ್ಲಿನ ಜನರ ಕರ್ತವ್ಯ ಎಂದರು.

ಶಾಸಕ ಎಂ.ವೈ.ಪಾಟೀಲ ಮತ್ತು ಡಾ.ಅಜಯ್ ಸಿಂಗ್ ಅವರ ಮನವಿಗೆ ಪ್ರತಿಕ್ರಿಯೆಸಿದ ಡಿ.ಸಿ.ಎಂ. ಡಿ.ಕೆ.ಶಿವಕುಮಾರ ಅವರು, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಭೀಮಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ರಾಜ್ಯದೊಂದಿಗೆ ಸತತ ಸಂಪರ್ಕದಲ್ಲಿದ್ದು, ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವೆ ಎಂದರು.

50 ಸಾವಿರ ಹುದ್ದೆ ಭರ್ತಿ: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ನಮ್ಮ ಸರ್ಕಾರದ ಅವಧಿಯಲ್ಲಿಯೇ 371ಜೆ ಮೀಸಲಾತಿಯನ್ವಯ ಕಲ್ಯಾಣ ಕರ್ನಾಟಕ ಭಾಗದವರಿಂದಲೆ 50 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು. ಈಗಾಗಲೆ ವಿವಿಧ ಇಲಾಖೆಯಲ್ಲಿ 15 ಸಾವಿರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಂದಿನ 2-3 ವರ್ಷಗಳಲ್ಲಿ ಎಲ್ಲಾ ಹುದ್ದೆ ಭರ್ತಿ ಮಾಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದರು.

ಕಳೆದ 2022ರ ಡಿಸೆಂಬರ್‍ನಲ್ಲಿ ಇದೇ ಸ್ಥಳದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನ ನಿಡುವುದಾಗಿ ಘೋಷಿಸಿದ್ದರು, ಅದರಂತೆ ನಮ್ಮ ಸರ್ಕಾರ 5 ಸಾವಿರ ಕೋಟಿ ಹಣ ನೀಡಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ, ಟ್ರಾಮಾ ಸೆಂಟರ್ ಆರಂಭಿಸಿದ್ದೇವೆ. ಸುಟ್ಟು ಗಾಯಗಳ ಘಟಕ, ಕ್ರಿಟಿಕಲ್ ಕೇರ್ ಯುನಿಟ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಶಾಖೆ ಸಹ ಮಂಜೂರು ಮಾಡಿದ್ದು, ಒಟ್ಟಾರೆಯಾಗಿ ಕಲಬುರಗಿಯನ್ನು ಮೆಡಿಕಲ್ ಹಬ್ ಆಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದೇವೆ ಎಂದರು.

ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದ ಜನರ ಅಭಿಪ್ರಾಯ ಆಲಿಸಲೆಂದು ಇಂದಿಲ್ಲಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದೆ. ಬಡವರಿಗೆ ಹಣ ನೀಡಿದಕ್ಕೆ ವಿರೋಧ ಪಕ್ಷಗಳಿಗೆ ಹೊಟ್ಟೆ ಕಿಚ್ಚು. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಕಿವಿಗೊಡಬಾರದು ಎಂದರು.

19 ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮಂಡಳಿಯು ಈ ವರ್ಷ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ, ಉದ್ಯೋಗ ಆವಿಷ್ಕಾರ ಯೋಜನೆ ಜಾರಿಗೆ ತಂದಿದ್ದೇವೆ. ಉದ್ಯೋಗ ಆವಿಷ್ಕಾರ ಯೋಜನೆಯಡಿ 25 ಸಾವಿರ ಜನರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೂತನ ತಾಲೂಕಿನಲ್ಲಿ ತಲಾ 15 ಕೋಟಿ ರೂ. ವೆಚ್ಚದಲ್ಲಿ 19 ತಾಲೂಕಿನಲ್ಲಿ ಆಡಳಿತ ಸೌಧ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಒಟ್ಟಾರೆ 135 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.

ಕಲಬುರಗಿ ರೊಟ್ಟಿ” ಲೋಕಾರ್ಪಣೆ: ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯು ಇಲ್ಲಿನ ಬಿಳಿ ಜೋಳದ ರೊಟ್ಟಿಗೆ ಬ್ರ್ಯಾಂಡ್ ನೀಡಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು “ಕಲಬುರಗಿ ರೊಟ್ಟಿ” ಯನ್ನು ಡಾ.ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಗಣ್ಯರು ಲೋಕಾರ್ಪಣೆ ಮಾಡಿದರು. ನಂತರ ಡಾ.ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ಯವರು ವೇದಿಕೆಯಲ್ಲಿಯೆ ಖಡಕ್ ರೊಟ್ಟಿ ಸವಿದ ಗಮನ ಸೆಳೆದರು.

ಖರ್ಗೆ, ಡಿ.ಕೆ. ಶಿವಕುಮಾರ ಅವರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ವಿಶ್ವ ಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಬಸವ ಅಭಿಮಾನಿ ಬಳಗವು ಬಸವಣ್ಣನ ಭಾವಚಿತ್ರ ನೀಡಿ, ಹೂಮಳೆ ಸುರಿಸಿ ಗೌರವದಿಂದ ಸನ್ಮಾನಿಸಿದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಸಲಹೆಗಾರರು ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಶಾಸಕರಾದ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮನೂರ, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಕಾಡಾ ಅಧ್ಯಕ್ಷ ಡಾ. ಎಂ.ಎ.ರಶೀದ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಕರ್ನಾಟಕ ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರ, ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಬಾಬುರಾವ ಚಿಂಚನಸೂರು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನಕುಮಾರ, ಎಸ್.ಪಿ. ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕೆ.ಕೆ.ಆರ್.ಟಿ.ಸಿ. ಎಂ.ಡಿ ಎಂ.ರಾಚಪ್ಪ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಆವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಭಾನುಮತಿ ಮತ್ತು ಧನಂಜಯ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ವಂದಿಸಿದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

2 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

5 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

9 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

10 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

12 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420