ಹೆಸರು ನೋಂದಣಿಗೆ ಇನ್ನು ಅವಕಾಶ: ಇದೂವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದವರು ನಾಮ ಪತ್ರ ಸಲ್ಲಿಕೆ ಕೊನೆ ದಿನಾಂಕದ 10 ದಿನಗಳ ಮುಂಚೆ ವರೆಗೂ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಬಹುದಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.
ಕಲಬುರಗಿ: ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭೆ ಚುನಾವಣೆ ಘೋಷಣೆ ಮಾಡಿದ್ದು, ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆ ಮೂರನೇ ಹಂತದಲ್ಲಿ ನಡೆಯಲಿದೆ. ಇನ್ನು ಜಿಲ್ಲೆಯಾದ್ಯಂತ ತಕ್ಷಣದಿಂದಲೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಕ್ಷಣದಿಂದಲೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ, ನಿಗಮ-ಮಂಡಳಿ ಅಧ್ಯಕ್ಷರಿಗೆ ನೀಡಲಾದ ಸರ್ಕಾರಿ ವಾಹನ ಹಿಂಪಡೆಯಲಾಗುವುದು. ಸರ್ಕಾರಿ ವಸತಿ ಗೃಹಗಳು ಸಹ ವಶಕ್ಕೆ ಪಡೆಯಲಾಗುತ್ತದೆ ಎಂದರು.
ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 12 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಏಪ್ರಿಲ್ 19ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಏಪ್ರಿಲ್ 20ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಏಪ್ರಿಲ್ 22ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 7ಕ್ಕೆ ಮತದಾನ ಮತ್ತು ಜೂನ್ 4ಕ್ಕೆ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ. ಒಟ್ಟಾರೆಯಾಗಿ ಜೂನ್ 6 ರೊಳಗೆ ಎಲ್ಲಾ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ ಎಂದರು.
ಕಲಬುರಗಿ ಜಿಲ್ಲೆಯಾದ್ಯಂತ 9 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2,378 ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, 11,43,159 ಪುರುಷರು ಮತ್ತು 11,25,463 ಮಹಿಳೆಯರು, ಇತರೆ 322 ಸೇರಿ 22,68,944 ಮತದಾರರು ಮತ್ತು ಚಲಾಯಿಸಲು ಅರ್ಹರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ, ಹಿರಿಯರು ಮತ್ತು ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನುಮ್ ಮಾಹಿತಿ ನೀಡಿದರು.
ಇನ್ನು ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಗುಲಬರ್ಗಾ ದಕ್ಷಿಣ, ಗುಲಬರ್ಗಾ ಉತ್ತರ, ಗುಲಬರ್ಗಾ ಗ್ರಾಮೀಣ, ಸೇಡಂ ಮತ್ತು ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನ ಕ್ಷೇತ್ರ ಬರಲಿವೆ. ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬೀದರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿವೆ. ಗುಲಬರ್ಗಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2,166 ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, 10,34,005 ಪುರುಷರು ಮತ್ತು 10,30,677 ಮಹಿಳೆಯರು, ಇತರೆ 336 ಸೇರಿ 20,65,018 ಮತದಾರರು ಮತ ಚಲಾಯಿಸಲು ಹಕ್ಕು ಹೊಂದಿದ್ದಾರೆ ಎಂದರು.
ಮಾದರಿ ನೀತಿ ಸಂಹಿತೆ ತಕ್ಷಣದಿಂದಲೆ ಜಾರಿಯಾಗಿರುವುದರಿಂದ ರಾಜಕೀಯ ಸಭೆ, ಸಮಾರಂಭಕ್ಕೆ ಪರವಾನಿಗೆ ಕಡ್ಡಾಯವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಅಥವಾ ತಾಲೂಕಾ ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಥವಾ ಸುವಿಧಾ ಮೂಲಕ ಪರವಾನಿಗೆ ಪಡೆಯಬೇಕು. ಅತಿಥಿಗೃಹಗಳು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಗ್ರಹಣದಲ್ಲಿರುವುದರಿಂದ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಪ್ರವಾಸಿ ಮಂದಿರ ನಿಷೇಧಿಸಲಾಗಿದೆ. ಮತದಾರರ ಮೇಲೆ ಪ್ರಭಾವ ಭೀರುವ ಸರ್ಕಾರಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು. ಆದರೆ ಕುಡಿಯುವ ನೀರು, ಬರ ಪರಿಹಾರ ಕಾರ್ಯಗಳು ಎಂದಿನಂತೆ ನಡೆಯಲಿವೆ. ಇದಕ್ಕೆ ಎಂ.ಸಿ.ಸಿ. ಅಡ್ಡಿಯಿಲ್ಲ ಎಂದು ಸಪಷ್ಟಪಡಿಸಿದರು.
ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾಸಿಗಾಗಿ ಸುದ್ದಿ ಮೇಲೆ ನಿಗಾ: ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿ, ಪಕ್ಷದ ಪರವಾಗಿ ಮತದಾರರ ಮೇಲೆ ಪ್ರವ ಬೀರುವ ಸುದ್ದಿ ಪ್ರಕಟಣೆ, ಬಿತ್ತರಣೆ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನಿಗಾ ವಹಿಸಲು ಎಂ.ಸಿ.ಎಂ.ಸಿ. ಸಮಿತಿ ರಚಿಸಿಲಾಗಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸೆಲ್ ಸಹ ರಚಿಸಲಾಗಿದೆ ಎಂದು ಡಿ.ಸಿ. ಅವರು ತಿಳಿಸಿದರು.
ಹೋರ್ಡಿಂಗ್ಸ್,ಬಂಟಿಂಗ್ಸ್ ತೆರವಿಗೆ ಸೂಚನೆ: ಚುನಾವಣೆ ಘೋಷಣೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳು ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬಂಟಿಂಗ್ಸ್, ಬ್ಯಾನರ್ಸ್, ಭಿತ್ತಿಪತ್ರ, ಕಟೌಟ್ಸ್‍ಗಳನ್ನು ಕೂಡಲೆ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದೆ ಎಂದರು.
39 ಚೆಕ್ ಪೋಸ್ಟ್ ಸ್ಥಾಪನೆ: ನೆರೆಯ ಮಹಾರಾಷ್ಟ್ರ ಮತ್ತು ತೆಲಾಂಗಾಣಾ ಗಡಿ ಸೇರಿದಂತೆ ಜಿಲ್ಲೆಯಾದ್ಯಂತ 39 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. 40 ಫ್ಲೈಯಿಂಗ್ ಸ್ಕ್ವಾಡ್ ತಂಡ, 9 ವಿ.ಎಸ್.ಟಿ. ತಂಡ, 9 ವಿ.ವಿ.ಟಿ. ತಂಡ, 10 ಖರ್ಚು ವೆಚ್ಚಗಳ ತಂಡ ರಚಿಸಲಾಗಿದೆ. ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರಲು 202 ಜನರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
85+ ಮತ್ತು ವಿಶೇಷಚೇತನರಿಗೆ ಮನೆಯಿಂದಲೆ ಮತದಾನಕ್ಕೆ ಅವಕಾಶ: 85 ವರ್ಷ ಮೇಲ್ಪಟ್ಟ ವಯೋವೃದ್ಧರು, ವಿಶೇಷ ಚೇತನರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ಮತದಾರರ ಮನೆಗೆ 12ಡಿ ನಮೂನೆ ನೀಡಿ ಮನೆಯಿಂದಲೆ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಸಿ-ವಿಜಿಲ್‍ನಲ್ಲಿ ದೂರು ಕೊಡಿ: ಚುನಾವಣಾ ಅಕ್ರಮ, ಎಂ.ಸಿ.ಸಿ. ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಏನೇ ದೂರುಗಳಿದಲ್ಲಿ ಸಿ-ವಿಜಿಲ್ ತಂತ್ರಾಂಶ ಮತ್ತು 1950 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ವಿವಿಧ ತಂಡಗಳು ತಪಾಸಣೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಹಣ, ಇತರೆ ಬೆಲೆ ಬಾಳುವ ವಸ್ತುಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ನೇತೃತ್ವದಲ್ಲಿ ಕ್ಯಾಶ್ ರಿಡ್ರೆಸಲ್ ಸಮಿತಿ ರಚಿಸಲಾಗಿದೆ.
ಆಯುಧ ಒಪ್ಪಿಸಲು ಸೂಚನೆ: ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ ಮತ್ತು ಎಸ್.ಪಿ. ಅಕ್ಷಯ್ ಹಾಕೈ ಅವರು ಮಾತನಾಡಿ ಜಿಲ್ಲೆಯಾದ್ಯಂತ ಮುಕ್ತ, ನ್ಯಾಯಸಮ್ಮತ ಹಾಗೂ ರ್ಭೀತಿಯಿಂದ ಮತ ಚಲಾವಣೆಗೆ ಸೂಕ್ತ ಪೊಲೀಸ್ ಭದ್ರತೆ ನೀಡಲಾಗುತ್ತದೆ. ವಿಶೇಷವಾಗಿ ವಲನರೇಬಲ್, ಕ್ರಿಟಿಕಲ್ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತದೆ. ಸಿ.ಆರ್.ಪಿ.ಎಫ್. ಪ್ಯಾರಾ ಮಿಲಿಟರಿ ಫೋರ್ಸ್ ಬರಲಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರು ಅಕ್ಷೇಪಾರ್ಹ ಅಂಶಗಳ ಬಗ್ಗೆ ಪ್ರಸಾರ ಮಾಡಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಮತದಾನಕ್ಕೆ ಅಡ್ಡಿಪಡಿಸುವ ರೌಡಿ ಶೀಟರಗಳಿಗೆ ಈಗಾಗಲೆ ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತಿದೆ. ಇನ್ನು ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಕೂಡಲೆ ಒಪ್ಪಿಸುವಂತೆ ಆಯುಧ ಸನ್ನದುದಾರರಿಗೆ ತಿಳಿಸಿದರು.
ಸ್ವೀಪ್ ಚಟುವಟಿಕೆ ಚುರುಕು: ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮಾತನಾಡಿ, ಜಿಲ್ಲೆಯಾದ್ಯಂತ ಕಳೆದ 6 ತಿಂಗಳಿನಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಲಾಗಿದೆ. ಇದೀಗ ಚುನಾವಣೆ ಘೋಷಣೆಯಾಗಿದ್ದರಿಂದ ಸ್ವೀಪ್ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸಲಾಗುವುದು. ವಿಶೇಷವಾಗಿ ವಿಧಾನಸಭಾವಾರು ಕ್ಷೇತ್ರದ ಒಟ್ಟಾರೆ ಮತದಾನ ಪ್ರಮಾಣಕ್ಕಿಂತ ಶೇ.10 ರಷ್ಟು ಕಡಿಮೆ ಇರುವ 118, ಶೇ.25ರಷ್ಟು ಕಡಿಮೆ ಇರುವ 31 ಹಾಗೂ ಶೇ.50ರಷ್ಟು ಕಡಿಮೆ ಇರುವ 34 ಮತಗಟ್ಟೆಗಳನ್ನು ಗುರುತಿಸಿದ್ದು, ಇಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.
ಚುನಾವಣಾ ಹಿನ್ನೋಟ ಬಿಡುಗಡೆ: ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದ 1957 ರಿಂದ 2019ರ ವರೆಗೆ ನಡೆದ ಲೋಕಸಭೆ ಚುನಾವಣೆಗಳ ಅಂಕಿ-ಸಂಖ್ಯೆಗಳ ಮಾಹಿತಿ ಒಳಗೊಂಡ “ಚುನಾವಣಾ ಹಿನ್ನೋಟ” ಪುಸ್ತಕವನ್ನು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…