ಬಿಸಿ ಬಿಸಿ ಸುದ್ದಿ

ಸರ್ಕಾರಿ ನೌಕರರಿಗೆ 7ನೇ ವೇತನ ಅನುಷ್ಠಾನ: ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ

ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ

ಕಲಬುರಗಿ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದ 7ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಔಪಚಾರಿಕವಾಗಿ ಚರ್ಚೆ ನಡೆದಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೋವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ರವಿವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಮತ್ತು ಕಲಬುರಗಿ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಮತ್ತು 2023-24ನೇ ಸಾಲಿನ ಸರ್ವ ಸದ್ಯಸರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೌಕರರಿಗೆ ಸಕಲ ಸವಲತ್ತು ನೀಡಲು ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯ ಸರ್ಕಾರದ ಸೌಲಭ್ಯಗಳು ಕಟ್ಟ ಕಡೆಯ ಮನುಷ್ಯನಿಗೆ ತಲುಪಬೇಕಾದರೆ ಅದು ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ. ನಾವು ಶಾಸಕಾಂಗದಲ್ಲಿ ಕುಳಿತು ನೀತಿ, ನಿಯಮ ರೂಪಿಸಬಹುದು. ಅದನ್ನು ಸಮರ್ಪಕ ಅನುಷ್ಠಾನದ ಜವಾಬ್ದಾರಿ ನೌಕರ ಮೇಲಿದೆ ಎಂದ ಅವರು ಇತ್ತೀಚೆಗೆ ಸರ್ಕಾರಿ ಅಧಿಕಾರಿ-ನೌಕರರನ್ನು ಬ್ಲ್ಯಾಕ್ ಮೇಲ್‌ ಮಾಡುವ ತಂತ್ರ ನಡೆದಿದ್ದು, ಪ್ರಮಾಣಿಕ ನೌಕರರು ಇದಕ್ಕೆಲ್ಲ ಹೆದರಬಾರದು. ಸರ್ಕಾರ ನಿಮ್ಮೊಂದಿಗಿದ್ದು, ಜಿಲ್ಲೆಯಲ್ಲಿ ಪಾರದರ್ಶಕ ಮತ್ತು ಜನಪರ ಆಡಳಿತ ನಮ್ಮ ಸರ್ಕಾರದ ಗುರಿಯಾಗಿದೆ. ಇಂದಿಲ್ಲಿ ಪ್ರತಿಭಾ ಪುರಸ್ಕಾರ ಮಕ್ಕಳನ್ನು ಅಭಿನಂದಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ನಿಮ್ಮ ಈ ಸಾಧನೆ ಮುಂದೆ ಜೆ.ಇ.ಇ., ನೀಟ್, ನಾಗರೀಕ ಸೇವಾ ಪರೀಕ್ಷೆಯಲ್ಲಿಯೂ ಮುಂದುವರೆಯಬೇಕು ಎಂದು ಹುರಿದುಂಬಿಸಿದರು.

ಜುಲೈ 4ಕ್ಕೆ ಸಂಪುಟ ಉಪ ಸಮಿತಿ ಸಭೆ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆಂದೆ ನಮ್ಮ ಸರ್ಕಾರ 371(ಜೆ) ಮೀಸಲಾತಿ ಜಾತಿಗೆ ತಂದಿದ್ದು, ಪರಿಣಾಮ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ವೈದ್ಯಕೀಯ, ಇಂಜಿನೀಯರಿಂಗ್ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪಡೆಯಲು ಇಲ್ಲಿನ ಮಕ್ಕಳಿಗೆ ಸಹಾಯವಾಗಿದೆ. ಅಲ್ಲದೆ ಉದ್ಯೋಗದಲ್ಲಿಯೂ ಮೀಸಲಾತಿ ಕಲ್ಪಿಸಿದ್ದು,‌ ಮುಂಬಡ್ತಿಯಲ್ಲಿನ ಲೋಪದೋಷ ಸರಿಪಡಿಸಲು ಬರುವ ಜುಲೈ 4 ಕ್ಕೆ ಸಚಿವ‌ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ 371ಜೆ ಅನುಷ್ಠಾನ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಇದಲ್ಲದೆ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದಲ್ಲಿರುವ ಖಾಲಿ ಹುದ್ದೆಯನ್ನು ಮುಂದಿನ‌ 5 ವರ್ಷದಲ್ಲಿ ಭರ್ತಿಗೆ ನಾವು ಬದ್ಧರಾಗಿದ್ದೇವೆ ಎಂದರು.

ಅವಕಾಶ ಹೆಚ್ಚಿವೆ,ಸದುಪಯೋಗ ಮಾಡಿಕೊಳ್ಳಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ ಹಿಂದೆಗ್ಗಿಂತ ಅವಕಾಶಗಳು ಇಂದು ಹೆಚ್ಚಿವೆ. ಅಧುನಿಕ ಜೀವನ ಶೈಲಿ ತಂತ್ರಜ್ಞಾನ ಆಧಾರಿತವಾಗಿವೆ. ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕಿದೆ. ತಂದೆ-ತಾಯಿ ಕಷ್ಟಪಟ್ಟು ನಿಮಗೆ ಉತ್ತಮ ಶಿಕ್ಷಣ ಕೊಡಿಸ್ತಾರೆ. ಅವರ ಬೆವರಿನ ಹನಿ ವ್ಯರ್ಥವಾಗದಂತೆ ಉತ್ತಮ ಶಿಕ್ಷಣ ಪಡೆದು ಮುಂದೆ ಉನ್ನತ ಸ್ಥಾನ ಪಡೆದು ನಾಡು, ದೇಶ ಸೇವೆಗೆ ಅಣಿಯಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ನೌಕರರ ಪಾತ್ರ ದೊಡ್ಡದಿದೆ. ನೌಕರರ ಸಂಘವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು.

ಐ.ಎ.ಎಸ್. ಕನಸು ಬಿತ್ತಿದ ಶಿಕ್ಷಕಿಯನ್ನು ನೆನೆದ ಡಾ.ಆಕಾಶ ಎಸ್.: ಶಾಲಾ‌ ಶಿಕ್ಷಣ ಇಲಾಖೆಯ ಅಪರ ಅಯುಕ್ತ ಡಾ.ಆಕಾಶ್ ಎಸ್. ಮಾತನಾಡಿ, ನನ್ನ ತಂದೆ ಕೇಂದ್ರ ಸರ್ಕಾರ ಗ್ರೂಪ್ ‘ಡಿ’ ಉದ್ಯೋಗಿ, ಅಧಿಕಾರಿಗಳ ಕೋಣೆಯ ಬಾಗಿಲು ತೆರೆಯುವ ಕೆಲಸ ಅವರದ್ದು. ಮುಂದೆ ನಾನು ಹೀಗೆ ಬಾಗಿಲು ತೆರೆಯುವ ಕೊಠಡಿಯಲ್ಲಿ ಕೂಡಬೇಕೆಂಬ ಚಿಗುರಿದ ಆಸೆಗೆ 8ನೇ ತರಗತಿಯಲ್ಲಿದ್ದಾಗ ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದ ಗುರುಗಳಾದ ಶಿಕ್ಷಕಿ ಶಾಂಭವಿ ಅವರು ಐ.ಎ.ಎಸ್. ಕನಸಿನ ಬೀಜ ನನ್ನಲ್ಲಿ ಬಿತ್ತಿದ್ದರು.‌ ಪರಿಣಾಮ ಇಂದು ನಿಮ್ಮುಂದೆ ಐ.ಎ.ಎಸ್. ಅಧಿಕಾರಿಯಾಗಿ ನಿಂತಿರುವೆ ಎಂದು ತಮ್ಮ ಐ.ಎ.ಎಸ್. ಸಾಧನೆ ಕಥೆ ಬಿಚ್ಚಿಟ್ಟ ಡಾ.ಆಕಾಶ ಎಸ್. ಅವರು, ತಾವು ಸಹ ಈಗಲೆ ಕನಸು ಕಂಡು ಅದನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಬೇಕು ಎಂದು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

7ನೇ ವೇತನ ಶೀಘ್ರ ಜಾರಿಗೊಳಿಸಿ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ರಾಜ್ಯದಲ್ಲಿ 5.20 ಲಕ್ಷ ನೌಕರರು ಕೆಲಸ‌ ಮಾಡುತ್ತಿದ್ದು, 2 ಲಕ್ಷಕ್ಕೂ ಅಧಿಕ ಹುದ್ದೆಗಳ ಕಾರ್ಯ ಬಾಹುಳ್ಯ ಇವರ ಹೆಗಲ ಮೇಲಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಮತ್ತು ಜನೊರ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಸರಕಾರಿ ನೌಕರರ ಪಾತ್ರ ಅಪಾರವಾಗಿದೆ. ಹೀಗಾಗಿ ನೌಕರರ ಬಹುದಿನ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಮುಂದಿನ ಸ‌ಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಯಥಾವತ್ತಾಗಿ ಅನುಷ್ಟಾನಗೊಳಸಿಬೇಕೆಂದು ವೇದಿಕೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ ಅವರು, 371(ಜೆ) ಕೆಲವರಿಗೆ ಮಾರಕವಾದರೆ, ಇನ್ನೂ ಕೆಲವರಿಗೆ ವರದಾನವಾಗಿದೆ. ಇದರಲ್ಲಿನ ಲೋಪದೋಷ ಸರಿಪಡಿಸಿ ನೌಕರರಿಗೆ ನ್ಯಾಯ ಒದಗಿಸಬೇಕಿದೆ ಎಂದರು.

ಪ್ರತಿ ವರ್ಷ 10-15 ಸಾವಿರ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರತಿಭಾ ಪುರಸ್ಕಾರ ಮೂಲಕ ನೌಕರರ ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ಸಂಘ ಮಾಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಿದ್ದು, ಕಠಿಣ ಪರಿಶ್ರಮ ಅನಿವಾರ್ಯವಾಗಿದೆ. ನೌಕರರ ಕಲ್ಯಾಣಕ್ಕೆ ಸಂಘ ಕಟಿಬದ್ಧವಾಗಿದ್ದು, ವೃತ್ತಿ ಸೆಮಿನಾರ್, ಆರೋಗ್ಯ ಶಿಬಿರ, ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಹೀಗೆ ಅನೇಕ ಕಾರ್ಯಕ್ರಮ ಸಂಘಟಿಸುತ್ತಿದೆ.
ಎನ್.ಪಿ.ಎಸ್ ರದ್ದುಗೊಳಿಸಿ ಒ.ಪಿ.ಎಸ್ ಜಾರಿಗೆ ತರಲು ಸಂಘ ಕಟಿಬದ್ಧವಾಗಿದೆ ಎಂದರು.

ಹೆತ್ತವರಿಗೆ ಹೊರೆಯಾಗಬೇಡಿ: ಕರ್ನಾಟಕ ವಿಧಾನಸಭೆ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮಾತನಾಡಿ ಹಿಂದುಳಿದ ಆಳಂದ ತಾಲೂಕಿನವನಾದ ನಾನು ಇಂದು ನಿಮ್ಮೆಲ್ಲರ ಸಹಕಾರ ಮತ್ತು ಸಿ.ಎಸ್.ಷಡಕ್ಷರಿ ಅವರ ವಿಶೇಷ ಆಶೀರ್ವಾದದಿಂದ ರಾಜ್ಯ ಸಚಿವಾಲಯ‌ ನೌಕರರ ಸಂಘದ ಅಧ್ಯಕ್ಷನಾಗಿ ಕಾರ್ನಿರ್ವಹಿಸುತ್ತಿರುವೆ. ತಂದೆ-ತಾಯಿ ಗಳಿಗೆ ತನ್ನ ಮಕ್ಕಳು ಮುಂದೇ ಏನಾದರು ಸಾಧಿಸದಿದ್ದರು ಪರವಾಗಿಲ್ಲ, ಅವರಿಗೆ ಹೊರೆಯಾಗುವಂತೆ ಚಾರಿತ್ರ್ಯಹೀನರಾಗದಂತಿದ್ದರೆ ಸಾಕು ಎನ್ನುತ್ತಾರೆ. ಉತ್ತಮ ರ‌್ಯಾಂಕ್, ಉದ್ಯೋಗ ಪಡೆದರೆ ಸಾಲದು ಮಾನವೀಯತೆಯ ಗುಣಗಳು ಹೊಂದುವುದು ಅವಶ್ಯಕವಾಗಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್ಚಿನ ಸರಕಾರಿ ನೌಕರರು ಮಧ್ಯಮ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಇದರ ನಡುವೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದು, ಇದನ್ನರಿತು ಜಿಲ್ಲೆಯ ಮಕ್ಕಳು ಮುಂದಿನ ದಿನಗಳಲ್ಲಿ ಹೆಚ್ಚು ನೀಟ್, ಐ.ಪಿ.ಎಸ್, ಐ.ಎ.ಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು ಎಂದರು.

ಪ್ರತಿಭಾ ಪುರಸ್ಕಾರ ಪ್ರದಾನ: ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಕಲಬುರಗಿ ಜಿಲ್ಲೆಯ 89 ಎಸ್.ಎಸ್.ಎಲ್.ಸಿ ಮತ್ತು 122 ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದ ನೌಕರರ ಮಕ್ಕಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಆದಿಯಾಗಿ ಗಣ್ಯರು ತಲಾ 1,000 ರೂ‌ ನಗದು, ಪ್ರಮಾಣ ಪತ್ರ ಹಾಗೂ ಶಾಲು-ಹೂನೊಂದಿಗೆ ಸತ್ಕರಿಸಲಾಯಿತು.

ಶ್ರೀಶೈಲಂನ ಸಾರಂಗಮಠದ ಪೂಜ್ಯ ಶ್ರೀ ಜಗದ್ಗುರು ಡಾ.ಸಾರಂಗಧರೇಶ್ವರ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷರಾದ ಎನ್. ಮಾಲತೇಶ್ ಮತ್ತು ಬಿ.ಡಿ.ದಿನೇಶ, ಖಜಾಂಚಿ ಡಾ.ಎಸ್.ಸಿದ್ದರಾಮಣ್ಣ, ಯಾದಗಿರಿ ಜಿಲ್ಲಾಧ್ಯಕ್ಷ ಮಹಿಪಾಲ ರೆಡ್ಡಿ, ಕ.ರಾ.ಪ್ರೌ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಮಾಜಿ ಜಿಲ್ಲಾಧ್ಯಕ್ಷ ಸೂರ್ಯಕಾಂತ ಕದಂ, ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಗುಡೇದ, ಕಲಬುರಗಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಬ್ದುಲ್ ಅಜೀಮ್, ಕಾರ್ಯಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷರಾದ ಬಾಬು ಮೌರ್ಯ, ಉಮಾದೇವಿ ಜಿ., ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗಯ್ಯ ಮಠಪತಿ, ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಗೊಳಸಾರ, ಖಜಾಂಚಿ ಕೆ.ಸತೀಷ‌ ಸಜ್ಜನ್ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕಾ ಅಧ್ಯಕ್ಷರು ಉಪಸ್ಥಿತರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

24 hours ago