ಕಲಬುರಗಿ; ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ರವಿವಾರ ಜಿಲ್ಲೆಯಾದ್ಯಂತ 113 ಕಿ.ಮೀ. ಉದ್ದದ ಮಾನವ ಸರಪಳಿ ರಚನೆಗೆ ಕಲಬುರಗಿ ಜಿಲ್ಲೆ ಸಾಕ್ಷಿಯಾಯಿತು.
ಬೆಳಿಗ್ಗೆ 9.30 ಗಂಟೆಗೆ ನಿಗದಿತ ರಸ್ತೆಯುದ್ದಕ್ಕೂ ಶಾಲಾ ಮಕ್ಕಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಕೂಲಿ ಕಾರ್ಮಿಕರು, ಸಾರ್ವಜನಿಕರು, ಅಧಿಕಾರಿ-ನೌಕರರು, ಚುನಾಯಿತ ಜನಪ್ರತಿನಿಧಿಗಳು ಪರಸ್ಪರ ಕೈ ಹಿಡಿದು ಮಾನವ ಸರಪಳಿ ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ವಿಶ್ವಕ್ಕೆ ಸಾರಿದರು.
ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿಸಡಕ್ ನಿಂದ ಚಿತ್ತಾಪೂರ ತಾಲೂಕಿನ ಅಲ್ಲಿಪುರ ತಾಂಡಾ ವರೆಗೆ ಏಕಕಾಲದಲ್ಲಿ 113 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲಾಗಿತ್ತು. ಭಾರತದ ಶ್ರೇಷ್ಠ ಸಂವಿಧಾನದ ಮೂಲ ಆಶಯ ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮತ್ತು ಸಂವಿಧಾನ ಪೀಠಿಕೆ ವಾಚನ ಮಾಡುವ ಮೂಲಕ ಗಮನ ಸೆಳೆಯಲಾಯಿತು.
ಸಮಾನತೆಯ ಸಂಕೇತ ಸಂವಿಧಾನ: ಕಲಬುರಗಿ ನಗರದ ರಿಂಗ್ ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ಸಮಾನತೇಯ ಸಂಕೇತವಾಗಿದೆ. ದೇಶದ ಪ್ರತಿ ಪ್ರಜೆಯು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇದುವೇ ತಳಹದಿಯಾಗಿದೆ ಎಂದರು.
ವಿಶ್ವದಲ್ಲಿ ಅನೇಕ ಸ್ವಾತಂತ್ರ್ಯ ಚಳುವಳಿಯನ್ನು ಕಂಡಿದ್ದೇವೆ. ಆದರೆ ಭಾರತದ ಚಳುವಳಿ ಅಹಿಂಸಾತ್ಮಕವಾಗಿತ್ತು ಎಂಬುದನ್ನು ಯಾರು ಮರೆಯುವಂತಿಲ್ಲ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನೆಹರು, ಅಂಬೇಡ್ಕರ್, ಭಗತ್ ಸಿಂಗ್, ಮೌಲಾನಾ ಅಜಾದ್ ಹೀಗೆ ಅಸಂಖ್ಯಾತ ಜನರ ತ್ಯಾಗ ಬಲಿದಾನದ ಫಲವಾಗಿ ಮತ್ತು ಅಹಿಂಸಾತ್ಮಕವಾಗಿ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ಇಂದು ದೇಶ ಇಷ್ಟೊಂದು ಅಭಿವೃದ್ಧಿ ಹೊಂದಬೇಕಾದರೆ ಬಲಿಷ್ಠ ಸಂವಿಧಾನವೇ ಇದಕ್ಕೆ ಮೂಲ ಕಾರಣ ಎಂದರು.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ ನಮ್ಮ ಸಂವಿಧಾನ ನಮಗೆ ಹೆಮ್ಮೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅರಿವು ಮೂಡಿಸಲು ಇಂದು ಜಿಲ್ಲೆಯಾದ್ಯಂತ ರಚಿಸಲಾದ 113 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಸುಮಾರು ಒಂದು ಲಕ್ಷ ಜನ ಭಾಗವಹಿಸಿದ್ದಾರೆ. ನಮ್ಮ ಸಂವಿಧಾನದ ಮೂಲ ಆಶಯದಂತೆ ವೇದಿಕೆ ಮೇಲೆ ಸರ್ವ ಜನಾಂಗದ ನಾಯಕರಿದ್ದಾರೆ. ಜಾತಿ, ಧರ್ಮ ಮೀರಿ ಸಂವಿಧಾನ ನಮ್ಮೆಲ್ಲರ ಶ್ರೇಷ್ಠ ಗ್ರಂಥವಾಗಿದೆ ಎಂದರು.
ಶಾಸಕ ಎಂ.ವೈ.ಪಾಟೀಲ ಮತ್ತು ಅಲ್ಲಮಪ್ರಭು ಪಾಟೀಲ ಅವರು ಸಹ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾನವ ಸರಪಳಿ ಸವಿ ನೆನಪಿನಲ್ಲಿ ಸಸಿಗಳನ್ನು ನೆಡಲಾಯಿತು.
ಸಚಿವ-ಶಾಸಕರು ಭಾಗಿ: ಕಲಬುರಗಿ ನಗರದ ರಿಂಗ್ ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಬಳಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಸಂಸದ ರಾಧಾಕೃಷ್ಣ, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ಬಿ.ಜಿ.ಪಾಟೀಲ, ಕಲಬುರಿಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಸೇರಿದಂತೆ ಹಿರಿಯ ಅಧಿಕಾರಿಗಳು ಮಾನವ ಸರಪಳಿ ರಚನೆಯಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ರಂಗು: ಇನ್ನು ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಾಂಸ್ಕೃತಿಕ ರಂಗು ಕಂಡುಬಂತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಲಾವಿದರು ಡೊಳ್ಳು ಕುಣಿತ, ಖಣಿ ಹಲಗೆ, ಹಲಗಿ ಮಜಲು, ಹೆಜ್ಜೆ ಮೇಳ ಹಾಕಿದರು. ತಲೆ ಮೇಲೆ ಕಳಸ ಹೊಂದಿದ್ದ ಲಂಬಾಣಿ ಮಹಿಳೆಯರ ವರ್ಣರಂಜಿತ ನೃತ್ಯ ಮಾನವ ಸರಪಳಿಗೆ ಮೆರಗು ನೀಡಿತು.
ರಾಜ್ಯದಾದ್ಯಂತ 25 ಲಕ್ಷ ಜನ ಭಾಗಿ: ಕಲಬುರಗಿ ಸೇರಿದಂತೆ ರಾಜ್ಯದಾದ್ಯಂತ 2,500 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಜಿಲ್ಲೆಯಿಂದ ಚಾಮರಾಜನಗರದ ವರೆಗೂ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ವಿಶ್ವದ ಬೃಹತ್ ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…