ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮಗೆ ಆಗ್ರಹ

ಗ್ರಾಮ ಪಂಚಾಯಿತಿ ನೌಕರರಿಂದ ಖರ್ಗೆ ಮನೆ ಚಲೋ ಬೃಹತ್ ಚಳುವಳಿ

ಕಲಬುರಗಿ: ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆ ಚಲೋ ಚಳುವಳಿ ನಡೆಸಿ ಬೃಹತ್ ಪ್ರತಿಭಟನೆ ಮಾಡಿದ್ದರು.

ಮಂಗಳವಾರ ಕಲಬುರಗಿ ನಗರಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷರಾದ ಎಂ.ಬಿ. ನಾಡಗೌಡ ಅವರ ನೇತೃತ್ವದ ಹೋರಾಟದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎಂ.ಬಿ. ಸಜ್ಜನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಶರಣಬಸಪ್ಪ ಮಮಶೆಟ್ಟಿ, ನಾಗರಾಜ್ ಜಿ. ಭಂಗೂರ್, ಜೈಭೀಮ್ ಜಿ. ಹೊಸಮನಿ, ಸಿದ್ದುಗೌಡ, ಬಂದಿಗಸಾಬ್ ಯಡ್ರಾಮಿ, ಮಾರುತಿ ಎಸ್. ಸುಗ್ಗಾ, ಭೀಮರಾವ್ ಅಂಬಲಗಿ, ಭೋಜರಾಜ್ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.

ಖರ್ಗೆಯವರ ಮನೆ ಚಲೋ ಚಳುವಳಿ ಮುನ್ನ ಬಹಿರಂಗ ಸಭೆಯಲ್ಲಿ ನಡೆಸಿ ಮುಖಂಡರು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ್, ಸ್ವಚ್ಛತಾಗಾರರಿಗೆ ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸುವಂತೆ, ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ 31000ರೂ.ಗಳನ್ನು ನಿಗದಿಗೊಳಿಸುವಂತೆ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ 6000ರೂ.ಗಳ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತಾರ್ಹ. ಆದರೆ ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್ಗಳನ್ನು ನೇಮಕ ಮಾಡಿಕೊಂಡು ಮುಂದುವರೆಸುವಂತೆ ಆಗ್ರಹಿಸಿದ ಅವರು, ಅಲ್ಲದೇ ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಟರ್ಮೆನ್, ಜವಾನ್, ಸ್ವೀಪರ್ಗಳಲ್ಲಿ ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ಕೊಡುವಂತೆ, ನೀರುಗಂಟಿಗಳಿಗೆ ಮಲ್ಪಿಪರ್ಪಸ್ ಎಂದಿರುವುದನ್ನು ಕೈಬಿಟ್ಟು ನಿರ್ದಿಷ್ಟವಾದ (ಜಾಬ್ ಕಾರ್ಡ್) ಕೆಲಸಗಳನ್ನು ನಿಗದಿಪಡಿಸುವಂತೆ, ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸುವಂತೆ, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸುವಂತೆ ಅವರು ಆಗ್ರಹಿಸಿದರು.

ಗ್ರೇಡ್ ಒನ್ ಕಾರ್ಯದರ್ಶಿ ಹುದ್ದೆಗಳಿಗೆ ಶೇಕಡಾ 100ರಷ್ಟು ಸ್ಥಾನಗಳನ್ನು ಗ್ರೇಡ್-2 ಕಾರ್ಯದರ್ಶಿಗಳಿಗೆ ಶೇಕಡಾ 50ರಷ್ಟು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇಕಡಾ 50ರಷ್ಟು ಸ್ಥಾನಗಳನ್ನು ಬಡ್ತಿ ನೀಡುವಂತೆ, ಅನ್ಯ ಇಲಾಖೆಗೆ ಬಡ್ತಿ ನೀಡದಿರುವಂತೆ, ಗ್ರೇಡ್-1 ಪಂಚಾಯಿತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸುವಂತೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇಕಡಾ 60ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡುವಂತೆ, ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಚತಾಗಾರರನ್ನು ನೇಮಿಸುವಂತೆ ಅವರು ಒತ್ತಾಯಿಸಿದರು.

ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಿಸುವಂತೆ, ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸುವಂತೆ, ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಓ ಹುದ್ದೆಗೆ ರಾಜ್ಯ ಮಟ್ಟದಲ್ಲಿ ಕೊಡಮಾಡುವ ಮುಂಬಡ್ತಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ಕೊಡುವಂತೆ, ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್ಆರ್ 325 ನಿಯಮಾನುಸಾರ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಅವರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ- ಹಾಜರಾತಿ ಲೋಪದೋಷಗಳನ್ನು ಪಂಚಾಯಿತಿ ತಂತ್ರಾಂಶದಲ್ಲಿ ಸರಿಪಡಿಸುವ ಕುರಿತು ಸಿಬ್ಬಂದಿಗಳಿಗೆ ಪೂರ್ಣ ವೇತನ ಪಾವತಿಸುವಂತೆ, ರಾಜ್ಯದಲ್ಲಿ ಮೊದಲನೇ ಡಾಟಾ ಎಂಟ್ರಿ ಆಪರೇಟರುಗಳಿಗೆ ಕ್ಲರ್ಕ್ ಹುದ್ದೆ ತೆರವಾದ ನಂತರ ಅನುಮೋದನೆ ನೀಡಬೇಕೆಂಬ ಶರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ಕೊಡುವಂತೆ, ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಎಲ್ಲ ವಿಭಾಗದ ಹುದ್ದೆಗಳನ್ನು ತುಂಬುವಂತೆ, ಸಂಖ್ಯೆ: ಕೆಸಿಆರ್ಸಿ-ಜಿಪಿಎ- 134/2024 2024ರ ಜೂನ್ 26ರ ಆದೇಶವನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ನೌಕರರ 19 ಬೇಡಿಕೆಗಳನ್ನು ಪರಿಹರಿಸಲು ಒತ್ತಾಯಿಸಿ ಕಳೆದ ಜುಲೈ 23 ಮತ್ತು 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟ ಧರಣಿ ಹಮ್ಮಿಕೊಂಡಿದ್ದಾಗ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮತ್ತು ಆಯುಕ್ತರು ಬಂದು ಮನವಿ ಸ್ವೀಕರಿಸಿದಾಗ ಸಚಿವರು ಬರುವವರೆಗೂ ಧರಣಿ ಮುಂದುವರೆಸುವುದಾಗಿ ತಿಳಿಸಲಾಗಿತ್ತು. ಜುಲೈ 24ರಂದು ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ, ಸಚಿವ ಸಂಪುಟದ ಸದಸ್ಯರು ಇಲ್ಲೇ ಇರಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಮೇಲೆ ವಿಶ್ವಾಸ ಇಡಿ ನಿಮ್ಮ ಬೇಡಿಕೆಗಳನ್ನು ಒಂದು ವಾರದಲ್ಲಿ ಬಗೆಹರಿಸುತ್ತೇನೆ. ಧರಣಿ ನಿಲ್ಲಿಸಿ ಎಂದು ದೂರವಾಣಿ ಮೂಲಕ ಸಚಿವರು ತಿಳಿಸಿದ್ದರಿಂದ ಧರಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೆವು ಎಂದರು.

ನಂತರ ಎರಡು ಬಾರಿ ಸಚಿವರನ್ನು ಭೇಟಿ ಮಾಡಲಾಯಿತು. ಸಚಿವರು ಕಾರ್ಮಿಕ ಸಚಿವರೊಂದಿಗೆ ಮಾತನಾಡಿ ಸೆಪ್ಟೆಂಬರ್ 9ರಂದು ಸಂಘದ ಮುಖಂಡರೊಂದಿಗೆ ಚರ್ಚೆ ಮಾಡಿ ವೇತನ ಹೆಚ್ಚಳದ ಪತ್ರವನ್ನು ಕಾರ್ಮಿಕ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ರವಾನಿಸಲಾಗಿದೆ. ಮತ್ತೊಮ್ಮೆ ಸಚಿವರೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ಮಾಡಿ ಆರ್ಥಿಕ ಇಲಾಖೆಯಲ್ಲಿರುವ ಪಿಂಚಣಿ ಕುರಿತು, ವೇತನ ಹೆಚ್ಚಳ, ಸೇವಾ ಹಿರಿತನದ ಭತ್ಯೆ ಹೆಚ್ಚಳದ ಕುರಿತು, ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸುವುದರ ಕುರಿತು ಚರ್ಚಿಸಿ ಅಂತಿಮಗೊಳಿಸುವ ಚರ್ಚೆಯಾಯಿತು ಎಂದು ಅವರು ವಿವರಿಸಿದರು.

ಎಲ್ಲ ಬೇಡಿಕೆಗಳ ನಡುವೆಯೂ ಸಚಿವರು ನೀಡಿದ ಒಂದು ವಾರದ ಗಡುವು ಮುಗಿದು ಮೂರು ತಿಂಗಳಾದರೂ ನೌಕರರ ಒಂದೇ ಒಂದು ಬೇಡಿಕೆಯೂ ಇತ್ಯರ್ಥವಾಗದ ಕಾರಣ ಸಚಿವರ ಮೇಲೆ ಯಾವುದೇ ವೈಯಕ್ತಿಕ ದ್ವೇಷ, ಅಸೂಯೆ ಇಲ್ಲ. ನೌಕರರ ಹಕ್ಕುಗಳ ರಕ್ಷಣೆಗಾಗಿ ಮತ್ತು ಬೇಡಿಕೆಗಳ ಇತ್ಯರ್ಥಕ್ಕಾಗಿ ನಾವು ಹೋರಾಟ ಹಮ್ಮಿಕೊಂಡಿದ್ದೇವೆ. ತಕ್ಷಣವೇ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

emedialine

Recent Posts

ಕೋಚಿಂಗ್ ಗುರು* ಫೆಬ್ರವರಿ 1 ಮತ್ತು 2 ರಂದು ನ್ಯೂಸ್​​ಫಸ್ಟ್​​ನಿಂದ ಮೆಗಾ ಕೋಚಿಂಗ್ ಎಕ್ಸ್​​​ಪೋ

ಬೆಂಗಳೂರು:  ನ್ಯೂಸ್​​ಫಸ್ಟ್ ರಾಜ್ಯದ ಅತ್ಯಂತ ಜನಪ್ರಿಯ ಸುದ್ದಿವಾಹಿನಿಯಾಗಿದ್ದು, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸೈಬರ್ ಕ್ರೈಂ ಸೇರಿದಂತೆ ನಾಡಿನ ಜನರಿಗೆ…

2 days ago

ಶರಣರು-ದಾರ್ಶನಿಕರ ತೌಲನಿಕ ಅಧ್ಯಯನ ಅಗತ್ಯ: ಡಾ. ಮೀನಾಕ್ಷಿ ಬಾಳಿ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ವಚನಗಳ ಅಧ್ಯಯನ ಬಹಳ ವಿಸ್ತೃತವಾಗಿ ನಡೆಯುತ್ತಿದ್ದು, ವಚನಗಳ ಸಾರ, ಸತ್ವ, ವಿಶ್ಯಾದ್ಯಾಂತ ತಲುಪಿಸುವುದರ ಜೊತೆಗೆ…

4 days ago

5ನೇ ಮಾಸಿಕ ಶರಣ ಸಂಗಮ ನಾಳೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಡೆಯಲಿರುವ 5ನೇ ಮಾಸಿಕ ಶರಣ…

6 days ago

5ನೇ ಮಾಸಿಕ ಶರಣ ಸಂಗಮ ನಾಳೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಡೆಯಲಿರುವ 5ನೇ ಮಾಸಿಕ ಶರಣ…

6 days ago

ಸಿದ್ದಲಿಂಗೇಶ್ವರ ಬುಕ್ ಡಿಪೋ 48ನೇ ವಾರ್ಷಿಕೋತ್ಸವ: ಜ.26ರಂದು 131 ಕೃತಿಗಳು ಲೋಕಾರ್ಪಣೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ನಗರದ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಬಸವ ಪ್ರಕಾಶನ ಹಾಗೂ ಸಿದ್ದಲಿಂಗೇಶ್ವರ ಪ್ರಕಾಶನದ…

7 days ago

ಸಿದ್ದಲಿಂಗೇಶ್ವರ ಬುಕ್ ಡಿಪೋ 48ನೇ ವಾರ್ಷಿಕೋತ್ಸವ: ಜ.26ರಂದು 131 ಕೃತಿಗಳು ಲೋಕಾರ್ಪಣೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ನಗರದ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಬಸವ ಪ್ರಕಾಶನ ಹಾಗೂ ಸಿದ್ದಲಿಂಗೇಶ್ವರ ಪ್ರಕಾಶನದ…

7 days ago