ಕಲಬುರಗಿ: ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ದಲಿತ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಸುರೇಶ ಬಡಿಗೇರ ಅವರು ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಯನ್ನು ಬೆಳೆಸಿಕೊಂಡು ಬಂದಿದ್ದು, ಇಂತಹ ಯುವಕನಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿರುವುದು ತುಂಬ ಸಂತೋಷವಾಗಿದೆ ಎಂದು ಶ್ರೀಶೈಲಂ-ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಸಹೃದಯಿ ಸ್ನೇಹ ಬಳಗದ ವತಿಯಿಂದ ನಗರದ ಸಂಗಮೇಶ್ವರ ಮಹಿಳಾ ಮಂಡಲದಲ್ಲಿ ಇಂದು ಸಂಜೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ಸುರೇಶ ಬಡಿಗೇರ ಅವರಿಗೆ ಹಮ್ಮಿಕೊಂಡಿದ್ದ ಸ್ನೇಹ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕನ್ನಡ ಕಟ್ಟುವ ರಚನಾತ್ಮಕ ಕೆಲಸ ಮಾಡಿದ ಸುರೇಶ ಬಡಿಗೇರ ಅವರು ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಮಾತನಾಡಿ, ಬಡಿಗೇರ ಅವರು ತಮಗೆ ಕೊಟ್ಟ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇವರ ಕಾಲಾವಧಿಯಲ್ಲಿ ಉತ್ತಮ ಕೆಲಸಗಳಾಗಬೇಕು. ಒತ್ತಡದ ಜೀವನದಲ್ಲೂ ಕಲೆ, ಸಾಹಿತ್ಯ, ಸಂಸ್ಕೃತಿಯ ಕೆಲಸಗಳಲ್ಲಿ ಕಾರ್ಯತತ್ಪರಾಗಿ
ಈ ಭಾಗದ ಕನ್ನಡದ ಕೊರತೆ ತುಂಬುವ ಜವಾಬ್ದಾರಿ ಬಡಿಗೇರ ನಿಭಾಯಿಸಬೇಕಿದೆ ಎಂದರು.
ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಸುರೇಶ ಅವರು, ತಾವು ಈ ಹಿಂದೆ ಹಮ್ಮಿಕೊಂಡಿದ್ದ ಕನ್ನಡಪರ ಕಾರ್ಯಗಳನ್ನು ಸ್ಮರಿಸಿಕೊಂಡರು.
ಮುಖ್ಯ ಅತಿಥಿಯಾಗಿದ್ದ ಕೃಷಿ ಇಲಾಖೆಯ ತಾಲ್ಲೂಕು ಉಪನಿರ್ದೇಶಕ ಚಂದ್ರಕಾಂತ ಜೀವಣಗಿ ಮಾತನಾಡಿ, ತಮ್ಮ ಸ್ನೇಹ ಜೀವನವನ್ನು ನೆನಪಿಸಿಕೊಂಡರು. ಪ್ರಾಸ್ತಾವಿಕ ಮಾತನಾಡಿದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸ್ನೇಹಿತರ ಬಳಗದ ಸಹೃದಯಿ, ಸ್ನೇಹಜೀವಿ ಸುರೇಶ ಬಡಿಗೇರ ಅವರು ತಮ್ಮ ಕಾಲಾವಧಿಯಲ್ಲಿ ಒಳ್ಳೆಯ ಕಾರ್ಯಗಳಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಲಬುರಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಚೆನ್ನಮ್ಮ ಎಸ್. ಸಾಹು ಅತಿಥಿಯಾಗಿದ್ದರು. ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ವೈಶಾಲಿ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಛಾಯಾಗ್ರಾಹಕ ರಾಜಕುಮಾರ ಉದನೂರ ನಿರೂಪಿಸಿದರು. ಶ್ರವಣಕುಮಾರ ಮಠ ಪ್ರಾರ್ಥನೆಗೀತೆ ಹಾಡಿದರು. ಶಹಾಪುರಕರ್ ಸ್ವಾಗತಿಸಿದರು. ಹಣಂತರಾಯ ಅಟ್ಟೂರ ವಂದಿಸಿದರು.
ಹಿರಿಯ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಸ್ನೇಹ ಬಳಗದ, ನಾಗಲಿಂಗಯ್ಯ ಮಠಪತಿ, ಗುಂಡಣ್ಣ ಡಿಗ್ಗಿ, ಶಂಕರ ಬಿರಾದಾರ, ಎನ್.ಎಸ್. ಹಿರೇಮಠ, ರಮೇಶ ಹಣಕುಣಿ, ರಾಘವೇಂದ್ರ ಮರತೂರಕರ್, ಸವಿತಾ ನಾಶಿ ಸೇರಿದಂತೆ ಇತರರು ಇದ್ದರು.