ಕಲಬುರಗಿ: ಸಂಪೂರ್ಣ ಸಮರ್ಪಿತರ ರಕ್ಷಣೆಯ ಭಾರ ಪರಮಾತ್ಮನದು. ಸಮರ್ಪಿತರಿಗೆ ಶರೀರ, ಮನಸ್ಸು, ಬುದ್ಧಗಳೆಲ್ಲ ಆಧೀನ. ಅವನಲ್ಲಿ ಅಧ್ಬುತ ಶಕ್ತಿ ಸಮನಿಸುವುದು. ಪ್ರತಿ ಜೀವಿಯು ಪಂಚಕೋಶಗಳಿಂದ ಆವೃತ್ತನಾಗಿದ್ದಾನೆ. ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಮತ್ತು ಆನಂದಮಯ ಕೋಶಗಳೇ ಪಂಚಕೋಶಗಳು. ಈ ಪದರುಗಳ ಒಳಗೊಂದು ದಿವ್ಯರತ್ನ. ಒಂದೊಂದಾಗಿ ಪದರುಗಳನ್ನು ಸರಿಸಿದಾಗ ದಿವ್ಯರತ್ನ ದರ್ಶನ ಎಂದು ಬೀದರ್ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಅವರು ಇಲ್ಲಿ ಹೇಳಿದರು.
ನಗರದ ಖೂಬಾ ಪ್ಲಾಟ್ ಮೈದಾನದಲ್ಲಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥೂಲದೇಹವೆ ಅನ್ನಮಯ ಕೋಶ. ಶರೀರವೇ ತಾನೆಂಬ ಪ್ರಬಲಭಾವ ಸರಿಸಬೇಕು. ತಾನು ಧರಿಸಿದ ಬಟ್ಟೆ, ಒಡವೆ, ಇತ್ಯಾದಿಗಳು ತಾನಲ್ಲ. ಅವು ತನ್ನವು. ಹಾಗೆಯೇ ಈ ಶರೀರವು ತಾನಲ್ಲ. ತಾನು ಧರಿಸಿದ ಬಟ್ಟೆ. ಶರೀರವು ತಾನೆಂದು ಭ್ರಮಿಸಿ ದೇಹ ಸಂಬಂಧಿ ಸುಖ ದುಃಖಾದಿಗಳಿಗೆ ಈಡಾಗುತ್ತಿದೆ ಜೀವ ಎಂದರು.
ಈ ಶರೀರದೊಳಗಣ ಅಂತಃಕರಣ ವೃತ್ತಿಗಳೇ ಪ್ರಾಣಮಯಕೋಶ. ಅದು ಸೂಕ್ಷ್ಮ. ಪ್ರಾಣಮಯಕೋಶವೂ ತಾನಲ್ಲ. ಈ ಕೋಶ ಇನ್ನೂ ಸೂಕ್ಷ್ಮ. ಮನವು ತಾನೆಂದ ಭಾವದ ಪರದೆಯನ್ನು ದೂರ ಸರಿಸಬೇಕು. ಮನೋಮಯ ಕೋಶದೊಳಗಣ ಬುದ್ಧಿ ಶಕ್ತಿಯು ವಿಜ್ಞಾನಮಯಕೋಶ. ಬುದ್ಧಿಯೂ ಒಂದು ಆಭರಣವೇ ಹೊರತು ತಾನಲ್ಲ. ಆ ಬುದ್ಧಿ ವೃತ್ತಿಯನಳಿದು ಬಾಹ್ಯವೇನೂ ತೋರದೆ ಆತ್ಮ ಸುಖ ಉಚ್ಛಳಿಸುವುದೇ ಆನಂದಮಯಕೋಶ! ಮಹಾದೇವಿ ಆನಂದಮಯಕೋಶದಲ್ಲಿ ವಿಹರಿಸುತ್ತಿದ್ದಾಳೆ ಎಂದು ಅವರು ಹೇಳಿದರು.
ತನುತ್ರಯಗಳೆಂದರೆ ಸ್ಥೂಲತನು, ಸೂಕ್ಷ್ಮತನು ಮತ್ತು ಕಾರಣ ತನು. ಎಲ್ಲಾ ಜೀವಿಗಳು ತನುತ್ರಯಗಳಿದ್ದು, ಅವುಗಳಿಗೆ ಜಾಗ್ರ, ಸ್ವಪ್ನ ಮತ್ತು ಸುಷುಪ್ತಿಯೆಂಬ ಮೂರು ಆವಸ್ಥೆಗಳು. ಮತ್ತೆ ಅವುಗಳಿಗೆ ವಿಶ್ವ, ತೇಜಸ್ ಮತ್ತು ಪ್ರಾಜ್ಞವೆಂಬ ಜೀವತ್ರಯಂಗಳಿವೆ. ವಿಶ್ವದ ವ್ಯವಹಾರಗಳಲ್ಲಿ ತೊಡಗಿರುವುದು ವಿಶ್ವ. ಸ್ಥೂಲತನು ಪ್ರಜ್ಞಾರಹಿತವಾಗಿರುವಾಗ ಸ್ವಪ್ನ ಅವಸ್ಥೆಯಲ್ಲಿ ಜಾಗರವಾಗಿರುವುದು ತೇಜಸ್ ಎಂದು ಅವರು ತಿಳಿಸಿದರು.
ಸ್ಥೂಲ ಸೂಕ್ಷ್ಮತನುಗಳೆರಡು ಪ್ರಜ್ಞಾರಹಿತವಾಗಿರುವಾಗ ಜಾಗರವಿರುವುದೇ ಪ್ರಾಜ್ಞಾ. ಗಾಢ ನಿದ್ರೆಯಿಂದೆದ್ದಾಗ ಅದನ್ನು ವಿವರಿಸುತ್ತೇವಲ್ಲ ಅದು ಪ್ರಾಜ್ಞದ ಕಾರಣ. ಇಲ್ಲದಿದ್ದರೆ ನಿದ್ರೆಯ ಅನುಭವ ಹಂಚಿಕೊಳ್ಳಲು ಸಾಧ್ಯವಿಲ್ಲ. ಮೂರೂ ಅವಸ್ಥೆಗಳಲ್ಲಿ ಸಾಕ್ಷಭೂತವಾಗಿರುವುದೇ ಪರವಸ್ಥು. ಜನನ ಮರಣಗಳು ದೇಹಕಲ್ಲದೇ ತನಗಿಲ್ಲ. ಕ್ಷುದೆ ತೃಷೆಗಳು ಮನಸ್ಸಿಗಲ್ಲದೆ ತನಗಲ್ಲ ಎಂಬ ಅರಿವೇ ನಿಜವಾದ ಅರಿವು ಎಂದು ಅವರು ಹೇಳಿದರು.
ಸಾಧನೆಯೆಂದರೆ ಮತ್ತೇನಲ್ಲ. ಕಾರಣ ಶರೀರಕ್ಕೆ ಆವರಿಸಿರುವ ಪದರಗಳನ್ನು ತೆಗೆಯುವುದು. ದೇಹ ಮೋಹ ತ್ಯಜಿಸುವುದು ಮೊದಲ ಹೆಜ್ಜೆ. ಹಸಿವು ತೃಷೆಗಳನ್ನು ತೊರೆಯುವುದು ಎರಡನೇ ಹೆಜ್ಜೆ. ಹಸಿವು ತೃಷೆಗಳನ್ನು ಮರೆತ ಕಾರಣ ಪ್ರಕೃತಿಯತ್ತ ಚಿತ್ತ ಹರಿಸಿ ಮಹಾದೇವಿ ಚಲುವ ಚೆನ್ನಮಲ್ಲಿಕಾರ್ಜುನದೇವನನ್ನು ಕಂಡಳು. ನಿಸರ್ಗದತ್ತ ಮುಖ ಮಾಡಿದರೆ ದೇವಲೀಲೆ ಗೋಚರ. ವಿಶ್ವವಿಸ್ಮಯಗಳ ಸಾಕಾರ ಎಂದು ಅವರು ತಿಳಿಸಿದರು.
’ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ, ಅಂಬರಕ್ಕೆ ಗದ್ದುಗೆ ಬೋದಿಗೆ ಇಲ್ಲದಂತಿರಿಸಿದೆ’. ಇಂತಹ ಕಾರ್ಯ ದೇವನಿಗಲ್ಲದೆ ಮತ್ತಾರಿಗೆ ಸಾಧ್ಯ. ಭೂಮಿಯಲ್ಲಿ ಬಿತ್ತಿದ ಒಣಬೀಜ ಮರುದಿನವೆ ಭೂಮಿ ಸೀಳಿ ಎರಡೆಲೆ ಹೊರಹಾಕಿ ಅಂಕುರಿಸುವುದು ಇಷ್ಟೊಂದು ಶಕ್ತಿ ಎಲ್ಲಿತ್ತು. ಒಂದೇ ನೆಲ, ಒಂದೇ ಜಲ, ಒಂದೇ ಆಕಾಶ. ಆದರೆ ಬೆಳೆದ ಫಲಗಳಲ್ಲಿ ಕೆಲವು ಸಿಹಿ ಕೆಲವು ಹುಳಿ ಮತ್ತೆ ಕೆಲವು ಕಹಿ ಇನ್ನು ಕೆಲವು ಒಗರು ಇದೆಲ್ಲ ಹೇಗೆ ಮತ್ತು ಏಕೆ? ಆಶ್ಚರ್ಯಕರವಲ್ಲವೇ? ಎಂದು ಅವರು ಪ್ರಶ್ನಿಸಿದರು.
ಸಣ್ಣ ಕಣವೊಂದು ಮಗುವಾಗಿ ತಾಯಿ ಗರ್ಭದಿಂದ ಹೊರಬರುವುದಲ್ಲ. ತಲೆ, ಕಣ್ಣು ಮೂಗು, ಬಾಯಿ, ಕೈ-ಕಾಲುಗಳು ಎಲ್ಲಿದ್ದವು? ಹೋಗಲಿ ನಿನ್ನ ಶರೀರವನ್ನೇ ನೋಡಿಕೋ. ಅಲ್ಲಿ ಎಂಥ ವಿಸ್ಮಯಗಳಿವೆ. ಮುಷ್ಟಿಯಷ್ಟು ಹೃದಯ ಪ್ರತಿ ದಿನವೂ ೨೫ ಎಕರೆ ಭೂಮಿಗೆ ನೀರುಣಿಸುವ ಪಂಪ್‌ಸೆಟ್‌ನಷ್ಟು ಕಾರ್ಯನಿರ್ವಹಿಸುವುದು. ಕಣ್ಣು ನೋಡಿ ಏನು ಸುಂದರ. ಅದರ ರಕ್ಷಣೆಗೆ ರೆಪ್ಪೆಗಳು ಬೇರೆ. ಮುಚ್ಚಿದರೂ ಚೆಂದ ತೆರೆದರೂ ಅಂದ. ಮೂಗು ಗಾಳಿಹೊಗಲಷ್ಟೇ ದಾರಿ. ರಕ್ಷಣೆಯ ವ್ಯವಸ್ಥೆ ಬೇರೆ. ನಾಭಿ ಇಡೀ ಶರೀರ ತೋರಿಸುವ ಕೇಂದ್ರ. ಉಂಡದ್ದೆಲ್ಲ ಅರಗಿಸಿ ರಕ್ತ ಮಾಡುವ ಕರುಳು. ಅದೇ ಪದಾರ್ಥಗಳನ್ನು ಮಿಕ್ಸರ್‌ಗೆ ಹಾಕಿ ಪ್ರಯತ್ನಿಸಿ ರಕ್ತ ತಯಾರಿಸ ಬಹುದೇ? ಈ ಶೀರರದ ಮೇಲೆ ಎಷ್ಟೊಂದು ಎಂ.ಡಿ. ಎಂ.ಎಸ್.ಗಳು? ಎಂದು ಅವರು ಹೇಳಿದರು.
ವೈಜ್ಞಾನಿಕ ಜಗತ್ತು ಎಷ್ಟೇ ಮುಂದು ವರೆದರೂ ಸಹ ವಿಜ್ಞಾನವು ಇದೆಲ್ಲ ಹೇಗೆ ಎಂದು ವಿವರಿಸಬಲ್ಲದು. ಏಕೆ ಎಂದು ಉತ್ತರಿಸದು. ಏಕೆ ಎಂಬುದಕ್ಕೆ ಅಧ್ಯಾತ್ಮ ಮಾತ್ರ. ಉತ್ತರಿಸಬಲ್ಲದು. ವಿಜ್ಞಾನ ನಿಂತಲ್ಲಿ ಅಧ್ಯಾತ್ಮ ಶುರು, ಅಂತೆಯೇ ಅಧ್ಯಾತ್ಮವೆಂಬ ಆತ್ಮವಿದ್ಯೆಯೇ ಸರ್ವಶ್ರೇಷ್ಠ ವಿದ್ಯೆ. ಸರ್ವಶ್ರೇಷ್ಠ ಜ್ಞಾನವೆಂಬ ಶರಣರು ಸಾರಿದ್ದಾರೆ. ಪ್ರಕೃತಿಯೇ ಗುರು. ಪ್ರಕೃತಿಯ ಆರಾಧನೆಯಲ್ಲಿ ತೊಡಗಿದರೆ ಸತ್ಯದರಿವು. ಹೂ ಅರಳುವುದನ್ನು ನೋಡಿ. ಸಸಿಗಳನ್ನು ಬೆಳೆಯುವುದನ್ನು ನೋಡಿ. ದುಃಖ ದುಮ್ಮಾನಗಳು ದೂರಾಗುವವು. ಎತ್ತೆತ್ತ ನೋಡಿದತ್ತತ್ತ ದೇವದರ್ಶನವಾಗುವುದು. ಮಾನವನಲ್ಲಿ ಅಹಂಕಾರ ತಲೆದೂರಬಾರದೆಂದರೆ ಪ್ರಕೃತಿಯ ಸಂಗ ಮಾಡಬೇಕು. ಇಂತ ಆತ್ಮ ವಿದ್ಯೆ ಮಹಾದೇವಿಗೆ ಕರಗತವಾಗಿತ್ತು. ಅಂತೆಯೇ ಪ್ರಕೃತಿಯ ಮಡಿಲಲ್ಲಿ ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ ಲಿಂಗಯೋಗದಲ್ಲಿ ಆನಂದಿತಳಾಗಿ ಮೈ ಮರೆತಿರುವಳು ಎಂದು ಅವರು ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…