ಅಂಕಣ ಬರಹ

ನೆನಪುಗಳಿಗೆ ಸಾವಿಲ್ಲ 20 ಮುತ್ತು ಪಡೆಯಲಿಲ್ಲ… ಕಟ್ಟಿಸಿ ಕೊಂಡಳು

ಅವಳೇ ಒಂದು ಮಗು. ಅಂಥವಳಿಗೊಂದು ಪುಟ್ಟ ಮಗು. ಆ ಪುಟ್ಟ ಮಗು ಖಂಡಿತಾ ಗೊಂಬೆಯಲ್ಲ. ಅಕ್ಷರಶಃ ಅವಳ ಹೊಟ್ಟೆಯಿಂದ ಹುಟ್ಟಿದ ಮುವತ್ತೆಂಟು ತಾಸು ವಯಸಿನ ಎಳೆಗೂಸು. ಅವಳು ಶಾಲೆಗೆ ಹೋಗುತ್ತಿದ್ದರೇ ಈಗ ಬರೋಬ್ಬರಿ ಎಂಟನೇ ಈಯತ್ತೆಯಲ್ಲಿರುತ್ತಿದ್ದಳು.

ಈ ಬಾಲಕಿ ಈಗ ಬಾಣಂತಿ. ನಾನು ಕುಷ್ಠರೋಗ ಸಮೀಕ್ಷೆ ಮಾಡುವಾಗ ಈಕೆಯನ್ನು ಸರ್ಕಾರಿ ಶಾಲೆಯ ಐದನೇ ಈಯತ್ತೆಯಲ್ಲಿ ನೋಡಿದ ನೆನಪು. ಈ ಪುಟ್ಟಪೋರಿ ತನ್ನ ಹದಿನಾಲ್ಕನೆ ವಯಸ್ಸಿಗೇ ಹೆಣ್ಣಲ್ಲ, ತಾಯಿಯಾಗಿದ್ದಾಳೆ.

ಮರದ ಹಣ್ಣಾದರೂ ಪಕಳೆಯಾಗಿ, ಹೂವಾಗಿ, ಕಾಯಾಗಿ ಕೆಲ ಕಾಲದ ನಂತರ ಮಾಗಿದ ಹಣ್ಣಾಗುತ್ತದೆ. ಇವಳದು ಹಾಗಲ್ಲ. ಕನ್ಯ ಹೋಗಿ ಹೆಣ್ಣಾಗಲಿಲ್ಲ. ಹೆಣ್ಣು ಹೋಗಿ ತಾಯಿಯಾಗದೇ ಕನ್ಯತನದಿಂದ ಸಡನ್ನಾಗಿ ತಾಯ್ತನಕ್ಕೆ ನೇರ ಬಡ್ತಿ ಪಡೆದಿದ್ದಾಳೆ.

ಹಸಿ ನೆತ್ತರು ಸವರಿದ ಅರಿವೆಗಳ ಹಸಿ ಹಸಿ ಬಾಣಂತನದ ವಾಸನೆ ಸೂಸುವ , ಮುರುಕು ಜೋಪಡಿಯಲ್ಲಿ ಈ ಹುಡುಗಿ ತನ್ನ ಬಗಲಲ್ಲಿ ಹಸುಗೂಸನು ಹಾಕಿಕೊಂಡು ತಲೆಗೆ ಕಮಟು ವಾಸನೆ ಸೂಸುವ ಬಟ್ಟೆ ಕಟ್ಟಿಕೊಂಡು ಮೆತ್ತಗೆ ಮಲಗಿದ್ದಳು.

ಗಂಡ-ಬದುಕು-ಮಗು-ಮದುವೆ ಏನನ್ನೂ ಅರಿಯದ ಮುಗುದೆ. ಅದೇ ಊರಿನ ಅವಳ ವಾರಗೆ ಹುಡುಗಿಯರು ಪುಟ್ಟ ಪುಟ್ಟ ಲಂಗ ಉಟ್ಟು ಕುಂಟಲಿಪಿ ಆಡುತ್ತಿದ್ದಾರೆ. ಸಣ್ಸಣ್ಣ ಕಟ್ಟಿಗೆ ಗೊಂಬೆಗಳಿಗೆ ಸೀರೆ, ಧೋತರಗಳೆಂದು ಬಟ್ಟೆ ಸುತ್ತಿ ಲಗ್ನದ ಆಟವಾಡುತ್ತಿದ್ದಾರೆ. ಆದರೆ ಈ ಹುಡುಗಿ ತನ್ನ ಕಂದನಿಗೆ ಮೊಲೆ ಹಾಲು ಕುಡಿಸಲು ಪಡುವ ಸಂಕೋಚ , ಸಂಕಟ ಮಾತಿನಕ್ಷರಗಳಿಗೆ ನಿಲುಕದ ಯಾತನೆ.

ರತ್ನ ( ಹೆಸರು ಬದಲಿಸಿದೆ ) ನಿನ್ನ ಗಂಡನ ಹೇಸರೇನಮ್ಮ? ನನ್ನ ಬಾಯಿಯಿಂದ ಪ್ರಶ್ನೆ ಹೊರ ಬರುವ ಮೊದಲೇ ಅವಳಿಂದ ದಳ ದಳನೇ ಕಣ್ಣೀರು ಹೊರ ಬಂದವು. ಗಂಡ ಒತ್ತಟ್ಟಿಗಿರಲಿ.”ಅಪ್ಪಾ” ಎಂದು ತನ್ನ ಹದಿನಾಲ್ಕು ವರುಷದ ಜೀವಮಾನದಲ್ಲಿ ಅವಳು ಯಾರನ್ನೂ ಕರೆದ ನೆನಪಿಲ್ಲ. ಶಾಲೆಯಲ್ಲಿ ಅಪ್ಪನ ಜಾಗದಲ್ಲಿ ತಾಯಿಯ ಹೆಸರನ್ನು ಅವಳಮ್ಮ ಬರೆಸಿದ್ದಳು. ಅವಳಿಗೆ ಅವಳವ್ವ ಮಾತ್ರ ಗೊತ್ತು.

ಮುವತ್ನಾಲ್ಕು ವರುಷದ ಒಂಟಿಗಣ್ಣಿನ ಅವಳ ತಾಯಿಯದು ಮತ್ತೊಂದು ದುರಂತ ಕಥೆ

ಸಜ್ಜೆಕಾಳಿನ ಬಣ್ಣದ ಈ ಕಪ್ಪು ಸುಂದರಿಗೆ ಅವಳ ತಾಯಿಯಾದವಳು ಅಂದು ಹರಕೆ ಹೊತ್ತು ಹೆತ್ತಳಂತೆ. ಈ ಕೃಷ್ಣ ಚೆಲುವೆ ಮೈ ನೆರೆತು ಮೂರೆಂಟು ದಿನ ತುಂಬಿದ್ದವು. ಅವತ್ತು ಭರತ ಹುಣ್ಣಿಮೆಯಂದು ಅವರಮ್ಮ ಆಗ ಹತ್ತಿರದ ಉಚ್ಚಂಗಿ ದುರ್ಗಕ್ಕೆ ಕರ್ಕೊಂಡು ಹೋಗಿ ಶಾಸ್ತ್ರೋಕ್ತವಾದಂತಹ (ಅವಳೇ ಹೇಳುವಂತೆ) ದೈವದ ಮುತ್ತು ಕಟ್ಟಿಸಿದರು. ಬಾಲ ಬಾಣಂತಿ ಹೇಳಿದ ರತ್ನಳ ತಾಯಿಯ ಕತೆಯಿದು.


ಕುಡಿಯೊಡೆದು ಅರಳಿನಿಂತ ದಾಸವಾಳದ ಎಡೆಯನ್ನು ಪ್ರಥಮ ರಾತ್ರಿ ಉಂಡ ಕೀರ್ತಿ ಹೆಡೆಯೆತ್ತಿ ನಿಂತ ಪೊಲೀಸನೊಬ್ಬನದು. ಕುಡುಕನಾದ ಆತನಿಗೆ ಅವಳ ಕಣ್ಣುಗಳೆಂದರೆ ಪಂಚಪ್ರಾಣ. “ನಿನ್ಕಣ್ಣ ಎಷ್ಟ್ ಚೆನ್ನಾಗವಲ್ಲೇ ನನ್ ಚಿನಾಲಿ” ಎಂದು ಒರಟೊರಟಾಗಿ ಮಾತಾಡುವ ಆತ ಆ ಜವಾರಿ ಚೆಲುವೆಯ ಮೋಹಕ ಕಣ್ಣುಗಳ ಮೇಲೆಯೇ ತನ್ನ ಹದ್ದಿನ ಕಣ್ಣಿಟ್ಟಿದ್ದ. ವಾರಕ್ಕೊಮ್ಮೆ ಬಂದು ಸುಖಪಟ್ಟು ಹೋಗುತ್ತಿದ್ದ ಕುಡುಕ ಪೊಲೀಸ್.

ತಾನು ಬೇರೆ ಊರಲ್ಲಿ ಡ್ಯೂಟಿ ಮಾಡೋವಾಗ ಬೇರೆಯವರು ಈ ಚೆಲುವೆಯನು ಸುಮ್ನೇ ಬಿಡ್ತಾರಾ!? ಪೊಲೀಸನ ಕಾಡಿದ ಕ್ರೂರ ಪ್ರಶ್ನೆ!

ಅಂತೆಯೇ ಅದೊಂದು ಭಾನುವಾರದ ರಾತ್ರಿ ಎಂದಿಗಿಂತಲೂ ಹೆಚ್ಚಿಗೆ ಕುಡಿದ ಬಂದ. ಅವಳಿಗೂ ಕರುಳು ತುಂಬಾ ಕುಡಿಸಿದ. ತನ್ನ ಮೈ ಮನದ ತುಂಬೆಲ್ಲ ಸಾಕು ಸಾಕಾಗುವಷ್ಟು ಸುಖ ಪಟ್ಟುಕೊಂಡ. ಅವಳು(ರತ್ನಳ ತಾಯಿ) ನಿಶೆಯಲ್ಲಿ ನರಳುತ್ತಾ ಮಲಗಿದಳು. ಮತ್ತೆ ಮತ್ತೆ ಪೊಲೀಸನಿಗೆ ಅವಳ ಮೋಹಕ ಕಣ್ಣು, ಜವಾರಿ ಸೌಂದರ್ಯ ಕಾಡತೊಡಗಿತು. ತಡಮಾಡಲಿಲ್ಲ. ಕೈ ಚಾಕುವಿನಿಂದ ಅವಳ ಎಡಗಣ್ಣ ಗುಡ್ಡೆ ಕಿತ್ತು ಕೈಗಿಟ್ಟುಕೊಂಡ. ಆ ಮೂಲಕ ಅವಳ ಮುಖಮಾಟವನ್ನೇ ಕೊಲೆಗೈಯ್ದ ಈ ಕಾಮ ಕಟುಕ. ಹೀಗಾಗಿ ಅವಳಿಗುಳಿದದ್ದು ಒಂಟಿಗಣ್ಣು. ಆ ಪಾಪಿ ಪೊಲೀಸನ ಪಿಂಡವೇ ಈ ಬಾಲ ಬಾಣಂತಿ.

ಹೀಗೆ ನೋವುಂಡ ಒಂಟಿಗಣ್ಣಿನ ತಾಯಿಗಾದರೂ ಮಗಳನ್ನು ಓದಿಸಿ ತನ್ನ ದುರ್ಗತಿ ಬಾರದಿರಲೆಂಬ ಸಂಕಲ್ಪ ಮೂಡಬಹುದಿತ್ತು. ಆದರೆ ಅವಳಿಗೇನು ದುರ್ಬುದ್ದಿ ಕಾಡಿತ್ತೋ ಮಗಳ ಓದು ಬಿಡಿಸಿ ಅವಳಿಗೂ ಮುತ್ತು ಕಟ್ಟಿಸಿ ಹರಕೆ ತೀರಿಸಿ ಕೊಂಡಳು. ಹೀಗಾಗಿ ರತ್ನ ಹದಿನಾಲ್ಕನೇ ವಯಸ್ಸಿಗೆ ತಾಯಿಯಾದಳು. ಇದು ಓರ್ವ ರತ್ನಳ ಕತೆಯೆಂದು ಸೋಜಿಗ ಪಡಬೇಕಿಲ್ಲ. ಆ ಊರಲ್ಲಿ ಇಂತಹ ಹತ್ತಾರು ರತ್ನಗಳಿವೆ.

ಪಾಪದ ಹೂಗಳಂತೆ ಈ ರತ್ನಗಳು ಭೂಮಿಗೆ ಸಂವಾದಿಯಾಗುತ್ತಾರೆ. ತಮ್ಮೆದೆಗಳಿಗೆ ಜೋತಾಡುವ ತೊಗಲು ಪೀಪಿಗಳಿಗೆ ಕಂದಮ್ಮಗಳನ್ನು ಸಿಕ್ಕಿಸಿಕೊಂಡು ಹದಿನೆಂಟಕ್ಕೇ ಎಂಬತ್ತರ ವೃದ್ದೆಯರಂತೆ ಅಡಿಕೆಲೆ ತಂಬಾಕಿನ ಕೆಂಪುಗುಳು ನುಂಗುತ್ತಲೇ ಉಸಿರಾಡಿಕೊಂಡಿರುತ್ತಾರೆ.

ಲೇಖಕರು: ಮಲ್ಲಿಕಾರ್ಜುನ ಕಡಕೋಳ

ಮೊ: 93410 10712

sajidpress

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

6 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

7 hours ago