ಶಿವಯೋಗದ ಮೂಲಕ ಸಾಧನೆಯನ್ನು ಬೋಧಿಸಿದ ಬಸವಾದಿ ಶರಣರು ಲಿಂಗಸಾಧನೆಗೆ “ಮಂತ್ರ” ಬಹಳ ಮುಖ್ಯ ಎಂದು ಹೇಳಿದರು. ಇಷ್ಟಲಿಂಗದ ಜನಕ ಬಸವಣ್ಣನವರು ೧೨-೧೫ ವರ್ಷಗಳ ಕಾಲ ಒಂದೇ ಸ್ಥಳದಲ್ಲಿದ್ದು, ಈ ಸಾಧನೆ ಮಾಡಿದ ಮಂತ್ರ ಪುರುಷ. ಸಾಧನೆ ಮಾಡುವವರು ತನು, ಮನ, ಭಾವ ಶುಚಿಯಾಗಿಟ್ಟುಕೊಳ್ಳಬೇಕು. ತನು-ಕಾಣುವ ವಸ್ತು. ಮನ-ಕ್ರಿಯಾ ವಸ್ತು. ಆದರೆ ಆತ್ಮದಲ್ಲಿ ಇರುವುದನ್ನು ಯಾರೂ ಕಾಣಲಾಗುವುದಿಲ್ಲ. ತ್ರಿಕರಣಶುದ್ಧಿ ಸಾಧನೆಯ ಸಿದ್ಧಿಯಿಂದ ಅದನ್ನು ಅನುಭವಿಸಬಹುದು. ಯಾರಿಗೆ ಆತ್ಮದ ಅರಿವು ಜಾಗೃತ ಆಗಿರುತ್ತದೋ ಅವರಿಗೆ ಜಾತಿಯ ಬೇಧ-ಭಾವ ಕಾಣಿಸುವುದಿಲ್ಲ. ಮನದಲ್ಲಿ ಮಲಿನತೆ ಇರುವುದಿಲ್ಲ. ತನು,ಮನವನ್ನು ಕಂಡರಿಸಬಹುದು. ಆದರೆ ಆತ್ಮವನ್ನು ಕಂಡರಿಸಲಾಗುವುದಿಲ್ಲ. ಇದನ್ನೇ ಜೇಡರ ದಾಸಿಮಯ್ಯನವರು “ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡೂ ಅಲ್ಲ” ಎಂದು ಹೇಳಿದ್ದಾರೆ. ಶರೀರ ಧರ್ಮದ ಜೊತೆಗೆ ಭಾವ ಶರೀರ ವಿಸ್ತರಿಸಿಕೊಂಡರೆ ಶಾಂತಿ, ನೆಮ್ಮದಿಯ ಬದುಕು ಸಾಧ್ಯ.
ಪಂಚಭೂತದಿಂದ ಕೂಡಿದ ಶರೀರದರಲ್ಲಿ ಅತೀ ಮುಖ್ಯವಾದುದೇ ಪ್ರಾಣಶಕ್ತಿಯ ಸಂಚಲನ. ಪ್ರಾಣಶಕ್ತಿಯ ಚಟುವಟಿಕೆ “ಉಸಿರು” ನಿಂತು ಹೋದರೆ ದೇಹ ನಿಷ್ಕ್ರಿಯ ಆಗುತ್ತದೆ. ಅದೇ ರೀತಿ ಶಬ್ದದ ಹಿಂದೊಂದು ಶಬ್ದವಿದೆ. ಅದನ್ನು ನಿಯಂತ್ರಿಸಿ ಕ್ರಮಬದ್ಧಗೊಳಿಸಬೇಕು. ಈ ಶಬ್ದದಲ್ಲಿ “ಓಂ ನಮಃ ಶಿವಾಯ” ಎಂಬ ನಾದವಿದೆ. ಇದರಲ್ಲಿ ಅಡಗಿರುವುದೇ ಮಂತ್ರ. ಈ ಮಂತ್ರವು ಶಿವ ಸ್ವರೂಪಿಯಾಗಿರುತ್ತದೆ. ಅಂತರ್‌ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳುವ ಮೂಲಕ ನಮ್ಮೊಳಗೆ ಅಡಗಿರುವ ಮಂತ್ರಶಕ್ತಿಯನ್ನು ಹೊರ ತೆಗೆಯುವ ಕೆಲಸವೇ ಮಂತ್ರ ಸಾಧನವಾಗಿದೆ. ಪರಮಾತ್ಮನ ನಿಜಾನುಸಂಧಾನ ಮಾಡಿದಾಗ ಅವನೊಡನೆ ಒಂದುಗೂಡುವ ಸಾಮರ್ಥ್ಯ ಪ್ರಾಪ್ತಿಯಾಗಬಲ್ಲದು. ಧರ್ಮ, ದೇವರು, ಅಸ್ತಿತ್ವದ ನಂಬಿಕೆ ಕೂಡ ಒಂದೇ ಆಗಿರುವಂತೆ ಒಂದೇ ರೀತಿಯ ಸಾಧನವನ್ನು ಶರಣ ಸಿದ್ಧಾಂತ ಹೇಳುತ್ತದೆ. ಮನೆ “ಮಹಾಮನೆ” ಆಗಬೇಕು. ಮನ “ಮಹಾದೇವ” ಆಗಬೇಕು.
“ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ” ಎಂದು ಅಲ್ಲಮಪ್ರಭುಗಳು ಹೇಳುವಂತೆ ನಮ್ಮೆಲ್ಲರ ಬದುಕು ಸುಖದ ಬೆನ್ನುಹತ್ತಿ ರಣ,ರಣ ಆಗಿದೆ. ಆದರೂ ಹೊರಗಡೆ ಶೃಂಗಾರ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ. ಲಿಂಗ ಸಾಧನೆಯಿಂದ ಇಷ್ಟಾರ್ಥ ಸಿದ್ಧಿ. ಆರೋಗ್ಯ ವೃದ್ಧಿ. ಮನಸ್ಸಿಗೆ ಉಲ್ಲಾಸ. ಜೀವನದ ಬಯಕೆ ಈಡೇರಲು ಸಾಧ್ಯ. ಅಳಿ ಮನದವನ ಭಕ್ತಿ ಯಾವುದೇ ಫಲ ಕೊಡಲು ಸಾಧ್ಯವಿಲ್ಲ. ಆತ್ಮ ಸಾಧನೆ ಆಗದಿದ್ದರೆ ಹಗೆತನ ಹೆಚ್ಚುತ್ತದೆ. ಲಿಂಗ ಸಾಧನೆಯಿಂದ ಎಲ್ಲರೂ ಸಮಾನರು ಎಂಬದು ತಿಳಿದು ಬರುತ್ತದೆ. ಇಲ್ಲಿ ಯಾರೂ ದೊಡ್ಡವರಲ್ಲ. ಸಣ್ಣವರಲ್ಲ ಎಂಬ ವಾಸ್ತವ ಸತ್ಯದ ಜೊತೆಗೆ “ನಿಮ್ಮ ಮನೆಯ ಮಗ” ಎಂಬ ಭಾವದರ್ಶನವಾಗುತ್ತದೆ.
“ಆಹಾರದಂತೆ ವಿಹಾರ” ಎನ್ನುವ ಮಾತಿನಂತೆ ನಾವು ಸ್ವೀಕರಿಸುವ ಆಹಾರದ ಮೇಲೂ ಈ ಸಾಧನೆಯ ಸಿದ್ಧಿ ಅವಲಂಬಿತವಾಗಿರುತ್ತದೆ. ಮನುಷ್ಯರಾದ ನಾವೆಲ್ಲ ಈವರೆಗೆ ಬಹಿರಂಗವಾಗಿ ಕಾಣದ ದೇವರನ್ನು ನೋಡಿದೇವು. ಕಾಣುವುದಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದೇವೆ. ಆದರೆ ದೇಹಕ್ಕೆ ಕೂಡ ಮಹತ್ವ ಕೊಡಬೇಕು ಎಂದು ಶರಣರು ಹೇಳಿದ್ದಾರೆ. ಸಾಧನೆ ಮಾಡುವವರು ಹಿತಮಿತ ಆಹಾರ ಪದ್ಧತಿ ಅನುಸರಿಸಬೇಕು. ದೇಹಾಲಸ್ಯದಿಂದ ಸಾಧನೆ ಸಾಧ್ಯವಿಲ್ಲ. ನಾವು ಎಲ್ಲ ಸಾಧನೆಗಳತ್ತ ಮುಖ ಮಾಡಬೇಕು. ರೋಗ ಬಂದಾಗ ಮಾತ್ರ ಯೋಗದ ಕಡೆ ಮುಖ ಮಾಡಬಾರದು. ಸದಾ ಯೋಗದ ಕಡೆ ಮುಖ ಮಾಡಿರಬೇಕು. ಯೋಗಾಸನ ವಯಸ್ಸಾದವರಿಗೆ ಅಲ್ಲ. ಮಕ್ಕಳಿಗೆ ಯುವಕರಿಗೆ ಇದನ್ನು ತಿಳಿಸಿಕೊಡಬೇಕು.
“ಶರಣ ನಿದ್ರೆಗೈದಡೆ ಜಪ ಕಾಣಿರೋ” ಎನ್ನುವ ವಚನದ ಉಲ್ಲೇಖವನ್ನು ವಿವರಿಸಿ ಹೇಳುವುದಾದರೆ, ಶರಣ ನಿದ್ರೆ ಮಾಡಿದರೂ ಅಲ್ಲಿ ಶಿವನಾಮ ಸ್ಮರಣೆ ಇರುತ್ತದೆ. ನಿದ್ರೆಯಲ್ಲೂ ಶಿವಚಿಂತೆ, ಶಿವಧ್ಯಾನವಿರುವುದು. ಶರಣ ಎದ್ದು ಕುಳಿತರೆ ಶಿವನ ನೆನಹು ತುಂಬಿರುತ್ತದೆ. ಅದು ಶಿವರಾತ್ರಿಯಾಗುತ್ತದೆ. ಆತನ ನಡೆ ಸತ್ಯದ ಕಡೆ ಇರುವುದರಿಂದ ಆತ ನಡೆದುದೇ ಪಾವನ ಕ್ಷೇತ್ರವಾಗಬಲ್ಲುದು. ನಡೆದಂತೆ ನುಡಿದ ಶರಣನ ನುಡಿ ಶಿವತತ್ವವಾಗಬಲ್ಲದು. ನಡೆ-ನುಡಿ ಎರಡೂ ಪರಿಶುದ್ಧವಾಗಿರುವುದರಿಂದ ಇಂತಹ ಶರಣನನ್ನು ಲಿಂಗ ಮೆಚ್ಚಬಲ್ಲದು. ಆಗ ಕಾಯವೇ ಕೈಲಾಸವಾಗಬಲ್ಲುದು. ಇದಕ್ಕೆ ಮಂತ್ರ ಸಾಧನೆಯ ಅಗತ್ಯವಿದೆ. ಕೇವಲ ಅನುಭವ ಜನ್ಯವಾಗಿರುವ ಶಿವತತ್ವವನ್ನು ಸಾಧನೆಯ ಮೂಲಕ ಸಾಧಿಸಬಹುದು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…