ಈ ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ತೀರಾ ಹತ್ತಿರದವರಾಗಿದ್ದರಿಂದ ಅವರ ಕುರಿತು ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿದ್ದ ಡಾ. ವೀರಣ್ಣ ದಂಡೆ ಅವರ ಮಾರ್ಗದರ್ಶನದಲ್ಲಿ “ಡಾ. ಪಾಟೀಲ ಪುಟ್ಟಪ್ಪ ಮತ್ತು ಕನ್ನಡ” ವಿಷಯ ಕುರಿತು ಎಂ.ಫಿಲ್. ಅಧ್ಯಯನ ಕೈಗೊಂಡೆ. ಅದುವರೆಗೆ ಆಗಾಗ ಮಾತ್ರ ಪಾಪು ಅವರನ್ನು ಹತ್ತಿರದಿಂದ ಕಂಡ ನನಗೆ ಒಂದು ವಾರ ಕಾಲ ಹುಬ್ಬಳ್ಳಿಯಲ್ಲಿರುವುದು ಅನಿವಾರ್ಯವಾಯಿತು. ಆ ವೇಳೆಯಲ್ಲಿ ದಿನಾಲು ಅವರ ಮನೆಯ ಮೇಲ್ಮಹಡಿಯ ಗ್ರಂಥಾಲಯದಲ್ಲಿ ಕುಳಿತು ಅವರ ಬಗೆಗಿನ ಪುಸ್ತಕ, ಪ್ರಪಂಚ, ವಿಶಾಲ ವಿಶ್ವ, ವಿಶ್ವವಾಣಿ ಮತ್ತು ಫೋಟೋಗಳನ್ನು ತಡಕಾಡುತ್ತಿದ್ದೆ. ದಿನಾಲು ಅವರ ಮನೆಯಲ್ಲಿ ನನಗೆ ಪಾಪು ಅವರ ಜೊತೆಗೆ ಕುಳಿತು ಉಪಹಾರ ಸೇವಿಸುವ ಅವಕಾಶ ಸಿಕ್ಕಿತ್ತು. ಈ ವೇಳೆಯಲ್ಲಿ ಅವರು ನನಗೆ ಹೇಳಿದ ವಿಷಯಗಳು ಅನೇಕ. ಆದರೆ ಅವೆಲ್ಲವೂ ನನಗೀಗ ನೆನಪಿಲ್ಲ. ಆದರೆ ಅವರು ಮಾತ್ರ ಚೆನ್ನಾಗಿ ನೆನಪಿಟ್ಟುಕೊಂಡಿದ್ದರು.
*****
ಅವರ ಕುರಿತಾಗಿ ಅಧ್ಯಯನ ಕೈಗೊಂಡಿರುವಾಗ ಅವರಿರುವ ವಿಶ್ವೇಶ್ವರಯ್ಯ ನಗರದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿಯೇ ಇರುವ ಅವರ ಪ್ರಪಂಚ ಕಚೇರಿಗೆ ಬರುತ್ತಿದ್ದೇವು. ನಮ್ಮನ್ನು ಕರೆದುಕೊಂಡು ಬಂದ ಆಟೋ ಡ್ರೈವರ್‌ಗೆ ಎಷ್ಟೋ ಹಣ ನೀಡಿದರು. ಆಗ ಡ್ರೈವರ್ ಎರಡು ರೂಪಾಯಿ ಚಿಲ್ಲರೆ ಕೊಡುವುದಿತ್ತು. ಆತ ನಮ್ಮನ್ನು ಅಲ್ಲಿ ಬಿಟ್ಟು ಹಾಗೆಯೇ ಹೊರಡುವುದಕ್ಕಾಗಿ ಆಟೋ ಸ್ಟ್ರಾಟ್ ಮಾಡಿದ. ಆದರೆ ಪಾಪು ಬಿಡಬೇಕಲ್ಲ! ಆ ಎರಡು ರೂಪಾಯಿ ವಾಪಸ್ ಕೊಡು ಎಂದು ಅಟೋ ಡ್ರೈವರ್‌ನೊಂದಿಗೆ ತಕರಾರು ಶುರು ಮಾಡಿದರು. ಪಕ್ಕದಲ್ಲಿದ್ದ ನಾನು ಇರಲಿ ಬಿಡಿ ಸರ್ ಎಂದೆ! ಏನೋ ನಿನಗೂ ರೊಕ್ಕ ಹೆಚ್ಚಾಗೇವೇನು? ಎಂದು ನನ್ನನ್ನೇ ಗದರಿಸಿದರು.
*****
ಪಾಪು ಬದುಕು ಬರಹ ಕುರಿತಾಗಿ ಪಿಎಚ್.ಡಿ. ಮಾಡಲು ನನ್ನ ಮಾರ್ಗದರ್ಶಕರಾದ ಡಾ. ವೀರಣ್ಣ ದಂಡೆಯವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಾಪು ಅವರ ಒಪ್ಪಿಗೆ ಪತ್ರ ಬೇಕಾಗಿತ್ತು. ಹೆಸರು ನೋಂದಾಯಿಸುವುದಕ್ಕೆ ಒಂದೇ ದಿನ ಬಾಕಿಯಿದ್ದಾಗ, ಪಾಪು ಅವರಿಗೆ ಫೋನ್ ಮಾಡಿದೆ. ಅದೇ ವೇಳೆಯೇ ಹುಬ್ಬಳ್ಳಿಯ ಪ್ರಪಂಚ ಪತ್ರಿಕಾ ಕಚೇರಿಯಲ್ಲಿ ಕುಳಿತು ಒಪ್ಪಿಗೆ ಪತ್ರ ಬರೆದು ಸ್ವತಃ ತಾವೇ ಬಸ್ ನಿಲ್ದಾಣಕ್ಕೆ ಬಂದು ಬಸ್ ಚಾಲಕನ ಕೈಯಲ್ಲಿ ಪತ್ರವನ್ನು ಕೊಟ್ಟು, ನನಗೆ ಫೋನ್ ಮಾಡಿ ತಿಳಿಸಿದ್ದು ನನಗಿನ್ನೂ ನೆನಪಿದೆ. ಆದರೆ ನನ್ನ ಮೈಗಳ್ಳತನದಿಂದಾಗಿ ಅದಾಗಲಿಲ್ಲ.
*****
ಆಗ ಮಾಜಿ ಸಚಿವ ವೈಜನಾಥ ಪಾಟೀಲರ ನೇತೃತ್ವದಲ್ಲಿ ಹೈಕ ಮಲತಾಯಿ ಧೋರಣೆ ಬಗ್ಗೆ ಹೋರಾಟ ನಡೆದ ಕಾಲ. ಪ್ರತಿ ನವೆಂಬರ್ ೧ರಂದು ಅವರು ಮತ್ತು ಮಾಜಿ ಸವಿವ ವಿಶ್ವನಾಥರೆಡ್ಡಿ ಮುದ್ನಾಳ, ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಮುಂತಾದವರು ಸೇರಿಕೊಂಡು ಕಪ್ಪು ಬಟ್ಟೆ ಧರಿಸಿ ಧ್ವಜಾರೋಹಣ, ಪ್ರತ್ಯೇಕ ಧ್ವಜಾರೋಹಣ ಮಾಡುತ್ತಿದ್ದ ಕಾಲವದು. ಸರ್ಕಾರ ಇವರ ಹೋರಾಟಕ್ಕೆ ಮಣಿಯದಿದ್ದಾಗ ವೈಜನಾಥ ಪಾಟೀಲರು ಪ್ರತ್ಯೇಕ ರಾಜ್ಯದ ಮಾತಾಡಿದ್ದರು. ಆಗ ನಾನು ಪ್ರಜಾವಾಣಿಯಲ್ಲೊಂದು ಲೇಖನ ಬರೆದು ಮೂಗು ಹಿಡಿದರೆ ಬಾಯಿ ತನ್ನಿಂದ ತಾನೇ ತೆರೆಯಬಲ್ಲದು ಎಂದು ಪಾಟೀಲರನ್ನು ಬೆಂಬಲಿಸಿ ಅವರ ಹೋರಾಟವನ್ನು ಸಮರ್ಥಿಸಿಕೊಂಡಿದ್ದೆ.
ಆಗ ಅದನ್ನು ಯಾರೋ ಪಾಪು ಅವರ ಗಮನಕ್ಕೆ ತಂದಿದ್ದರೆಂದು ಕಾಣುತ್ತದೆ. ಕೂಡಲೇ ನನಗೆ ಫೋನಾಯಿಸಿ, ಆ ವೈಜನಾಥ ಪಾಟೀಲರಿಗೆ ತಲೆ ಕೆಟ್ಟಿದೆ ಎಂದರೆ ನಿನಗೂ ಕೆಟ್ಟಿತೇ? ನಿಮಗೆಲ್ಲ ಏನೂ ಗೊತ್ತು ಕರ್ನಾಟಕದ ಏಕೀಕರಣದ ಹೋರಾಟ ಎಂದು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು ನನಗೆ.
*****
ಅದು ೨೦೦೯ನೇ ಇಸ್ವಿ. ಪ್ರೊ.ಬಿ.ಜಿ. ಮೂಲಿಮನಿ ಗುಲ್ಬರ್ಗ ವಿವಿ ಕುಲಪತಿಗಳಾಗಿದ್ದರು. ಅದೇ ಆಗ ತಾನೆ ವಿವಿಯಲ್ಲಿ ಜರ‍್ನಲಿಸಂ ವಿಭಾಗ ಆರಂಭಗೊಂಡಿತ್ತು. ಆ ಸಮಯದಲ್ಲಿ ಗುಲ್ಬರ್ಗ ವಿವಿಗೆ ಬರುವುದಕ್ಕಿಂತ ಮುಂಚೆ ಪಾಪು ಅವರ ಕಾರ್ ಡ್ರೈವರ್ ಸೈಯದ್ ಫೋನ್ ಮಾಡಿ ಸಾಹೇಬ್ರು ಇಂತಹ ದಿನ ಗುಲ್ಬರ್ಗಕ್ಕೆ ಬರಲಿದ್ದಾರೆ. ನಿಮಗೆ ಇರಲು ಹೇಳಿದ್ದಾರೆ ಎಂದು ತಿಳಿಸಿದರು. ಕಲಬುರಗಿಗೆ ಬಂದ ಕೂಡಲೇ ನನ್ನನ್ನು ಎಲ್ಲಿಯೂ ಬಿಡದೆ ಕೈ ಹಿಡಿದುಕೊಂಡೇ ಎಲ್ಲ ಕಡೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
*****
ಅದು ೨೦೧೨ ಜುಲೈ ೨೫ರ ಬೆಳಗ್ಗೆ ಅಪ್ಪ ಲಿಂಗಣ್ಣ ಸತ್ಯಂಪೇಟೆ ನಿಗೂಢವಾಗಿ ಕಣ್ಮರೆಯಾಗಿದ್ದರಿಂದ ಕಂಗಾಲಾಗಿದ್ದ ನಾವು ಕೂಡಲೇ ಪಾಪು ಅವರಿಗೆ ಫೋನಾಯಿಸಿದಾಗ “ನೀವೇನೂ ಚಿಂತೆ ಮಾಡಬೇಡಿ, ನಾನು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಈ ವಿಷಯ ತಿಳಿಸುತ್ತೇನೆ. ಅವರೊಬ್ಬ ಸಾಹಿತಿ, ಪತ್ರಕರ್ತರಾಗಿದ್ದರಿಂದ ಈಗಲೇ ಕೇಸ್ ಕೊಡಬೇಡಿ. ಅಲ್ಲೇ ಎಲ್ಲಾದರೂ ಸ್ವಲ್ಪ ಹುಡುಕಿ ನೋಡಿ ಎಂದು ನಮ್ಮ ಕುಟುಂಬಕ್ಕೆ ಸಮಾಧಾನ ಹೇಳಿದ್ದರು.
*****
ಅದು ೨೦೧೨ನೇ ಇಸ್ವಿ. ಅಪ್ಪ ಲಿಂಗಣ್ಣ ಸತ್ಯಂಪೇಟೆಯವರ ನಿಗೂಢ ಸಾವಾಗಿ ಏಳೆಂಟು ತಿಂಗಳಾಗಿತ್ತು. ಕಲಬುರಗಿಯ “ಪ್ರಜಾವಾಣಿ”ಯಲ್ಲಿ ಹಿರಿಯ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದ ನನಗೆ ಹುಬ್ಬಳ್ಳಿಗೆ ವರ್ಗವಾಗಿತ್ತು. ಅಲ್ಲಿಗೆ ತೆರಳಿ ಎಂಟತ್ತು ದಿನಗಳಾದ ಮೇಲೆ ಅವರ ಮನೆಗೆ ತೆರಳಿದಾಗ, ಛೊಲೋ ಆಯ್ತು ಬಿಡು ನೀನು ಇಲ್ಲಿಗೆ ಬಂದದ್ದು ಎಂದು ಹೇಳಿ, ಇಡೀ ಪತ್ರಿಕೋದ್ಯಮದ ಇತಿಹಾಸವನ್ನೇ ನನ್ನ ಕಣ್ಣೆದುರಿಗೆ ತಂದು ನಿಲ್ಲಿಸಿ ಇದೀಗ ಅದು ಬಹು ದೊಡ್ಡ ಉದ್ದಿಮೆಯಾಗಿ ಬೆಳೆದಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.
*******
ಅದು ೨೦೧೭ನೇ ಇಸ್ವಿ. ಕಲಬುರಗಿಯಲ್ಲಿ ಸ್ಥಾಪಿಸಲಾಗಿದ್ದ ಕರ್ನಾಟಕ ಕೇಂದ್ರೀಯ ವಿವಿಗೆ ಪ್ರೊ.ಎಚ್.ಎಂ. ಮಹೇಶ್ವರಯ್ಯ ಕುಲಪತಿಗಳಾಗಿ ನೇಮಕಗೊಂಡು ಅನೇಕ ದಿನಗಳಾಗಿದ್ದವು. ಪಾಪು ಅವರನ್ನು ವಿಶೇಷ ಉಪನ್ಯಾಸಕ್ಕಾಗಿ ತಮ್ಮ ವಿವಿಗೆ ಅವರು ಆಮಂತ್ರಿಸಿದ್ದರು. ಆಗಲೂ ಪಾಪು ಅವರನ್ನು ಆರೈಕೆ ಮಾಡುವ ಸೈಯದ್ ಅವರು ಮತ್ತೆ ಫೋನಾಯಿಸಿದರು. ಅಂದಂತೆ ಕಲಬುರಗಿಯ ಐವಾನ್ ಏ-ಶಾಹಿ ವಸಹಾತು ಗೃಹಕ್ಕೆ ಬಂದಿಳಿದಿದ್ದರು. ನಾನು ಹೋದ ಕೂಡಲೇ ಹೈ.ಕ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಬಸವರಾಜ ಭೀಮಳ್ಳಿ ಅವರನ್ನು ನೆನಪಿಸಿದರು. ನಾನು ಅವರಿಗೆ ಫೋನ್ ಮಾಡಿದೆ. ಪಾಪು ನಿರ್ದೇಶನದಂತೆ ಮಾಜಿ ಸಚಿವ ಡಾ. ಎ.ಬಿ ಮಲಕರೆಡ್ಡಿ ಅವರಿಗೂ ಕೂಡ ಫೋನಾಯಿಸಿದೆ ಆಗ ಅವರು ಮನೆಯಿಂದ ಎಲ್ಲರಿಗೂ ಉಪಹಾರ ತಂದಿದ್ದರು.
*****
ಹೀಗೆ ಇನ್ನೂ ಹಲವಾರು ಘನೆಗಳು ನನ್ನ ನೆನಪಿನಾಳದಲ್ಲಿ ಉಳಿದಿವೆ. ಮೊನ್ನೆ ಫೆ.೨೫ರಂದು ಅವರು ನಿಧನರಾಗಿದ್ದಾರೆ ಎಂದು ಅದಾರೋ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಾಕಿದ್ದರು. ಇದನ್ನು ಕಂಡ ನಾನು ತಕ್ಷಣಕ್ಕೆ ಅವರ ಕಾರ್ ಡ್ರೈವರ್ ಸೈಯದ್ ಅವರಿಗೆ ಫೋನಾಯಿಸಿದಾಗ, ಹೌದು ಸರ್, ಅದಾವುದೋ ಟಿವಿಯೊಳಗೆ ಹಾಕಿದ್ದರಂತೆ! ಆದರೆ ಅವರು ಅರಾಮಾಗಿದ್ದಾರೆ. ಮೊನ್ನೆ ಒಂದರೆಡು ದಿವಸ ಬೆಂಗಳೂರಿಗೆ ಹೋಗಿದ್ದೇವು. ಅಲ್ಲಿ ನೀರು ಚೇಂಜ್ ಆಗಿ ಶ್ವಾಸಕೋಶ ಉಸಿರಾಟದ ತೊಂದರೆಯಾಗಿದೆ ಎಂದು ಹೇಳಿ, ಹಂಗೇನಾದ್ರೂ ನಿಮಗೆ ಹೇಗೆ ಹೇಳುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅದೇ ಸೈಯದ್ ಅವರು ಹೇಳುವ ಸ್ಥಿತಿಯಲ್ಲಿ ಇಲ್ಲ. ಅವರಲ್ಲಿ ದುಖಃ ಮಡುಗಟ್ಟಿದೆ. ಅದರಂತೆ ನನಗೂ ಕೂಡ!
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…