೧೨ನೇ ಶತಮಾನದ ಶಿವಶರಣರಿಗಿಂತ ಮುಂಚಿತವಾಗಿ ಸಮಾಜದ ಎಲ್ಲ ವ್ಯವಸ್ಥೆಗಳಿಂದ ವಂಚಿತರಾಗಿದ್ದ ಬಹುಪಾಲು ಜನರಿಗೆ ಶಿಕ್ಷಣ ಎಂಬುದು ಗಗನಕುಸುಮವಾಗಿತ್ತು. ಶಿಕ್ಷಣ ಎನ್ನುವುದು ಕೆಲವರ ಸೊತ್ತಾಗಿದ್ದ ಕಾಲವದು. ಇಂತಹ ಸಂದರ್ಭದಲ್ಲಿ ಉದಯಿಸಿದ ವಚನಕಾರರು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದರು. ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಸ್ವಾತಂತ್ರ್ಯವನ್ನು ಸಹ ಒದಗಿಸಿದರು.
ವೇದಾಗಮಗಳ ಹೆಸರು ಹೇಳಿಕೊಂಡು ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಬದುಕು ನಡೆಸುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳ ಬೆನ್ನು ಮೂಳೆ ಮುರಿದ ಶರಣರು, ವೇದಾಗಮಗಳಲ್ಲಿರುವ ಪೊಳ್ಳುತನವನ್ನು ಬಯಲಿಗೆಳೆದರು. ಜನರ ಬದುಕಿಗೆ ಪೂರಕವಾಗಬಲ್ಲ ಶಿಕ್ಷಣವನ್ನು ನೀಡಿದರು. ಗಿಳಿಪಾಠದಂತಿದ್ದ ಅದುವರೆಗಿನ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿ ಅನುಭವ ಜನ್ಯವಾದ, ಅನುಭಾವದ ಹೊಸ ಶಿಕ್ಷಣನೀತಿಯನ್ನು ಕಲಿಸಿದರು.
ಕೇವಲ ಶಬ್ದ ಸಂಭ್ರಮದಲ್ಲಿ ಮುಳುಗಿರುವ ಈ ಮೂರು ಲೋಕಕ್ಕೆ ಹಿಂದೇನಿತ್ತು? ಮುಂದೇನಿದೆ? ಎಂದು ತಿಳಿದಿಲ್ಲ. ಏಕೆಂದರೆ ಅವರಿಗೆ ತಾವು ಯಾರು? ಎಂಬುದೇ ತಿಳಿದಿಲ್ಲ. ಕೇವಲ ಬೂಟಾಟಿಕೆಯ ನುಡಿಗಳಲ್ಲೇ ಕಳೆದು ಹೋಗಿದ್ದಾನೆ. ದೊಡ್ಡ ದೊಡ್ಡ ಮಾತುಗಳನ್ನಾಡುತ್ತ, ಮಾತಿನ ಮೋಡಿಯಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತ, ಎಲ್ಲವನ್ನು ಗೆದ್ದೆವೆಂದು ಭಾವಿಸುವ ವ್ಯಕ್ತಿಗಳನ್ನು ಈ ವಚನದಲ್ಲಿ ಟೀಕಿಸಲಾಗಿದೆ ಎಂದು ಮೇಲ್ನೋಟಕ್ಕೆ ಹೇಳಬಹುದಾಗಿದ್ದರೂ ಇದರ ಇನ್ನೊಂದು ಮತ್ತೊಂದು, ಮಗದೊಂದು ಮಗ್ಗಲು ನಮಗೆ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಲ್ಲಮಪ್ರಭುಗಳ ಈ ವಚನ ವ್ಯಾಖ್ಯಾನಕ್ಕೆ ನಿಲುಕಲಾರದ್ದಾಗಿದೆ.
ಅಲ್ಲಮಪ್ರಭುಗಳ ಪ್ರಕಾರ ಪದದಲ್ಲಿ ಅರ್ಥವಿಲ್ಲ. ಅದೊಂದು ನೆಪ ಅಷ್ಟೇ! ಅರ್ಥವಿರುವುದು ಸಂದರ್ಭದಲ್ಲಿ, ಕಾಲದಲ್ಲಿ. ಅಂತೆಯೇ ಶರಣರು ವರ್ತಮಾನ ಮುಖ್ಯ ಎಂದು ಹೇಳುತ್ತಾರೆ. ನಾವೆಲ್ಲ ಅನ್ನ-ಆಹಾರವನ್ನು ಮಾತ್ರ ಅರ್ಪಿಸಬಹುದು. ಆದರೆ ಪ್ರಸಾದವನ್ನು ಅರ್ಪಿಸಲು ಬಾರದು. ಆದರೆ ಶರಣರಿಗೆ ಮಾತ್ರ ಇದೆಲ್ಲದರ ಅರಿವು ಇತ್ತು. ಅಂತೆಯೇ ಅವರು ಶಬ್ದಾಡಂಬರದಲ್ಲಿ ಮುಳುಗದೆ ಸರಳ ಸಹಜ ಬದುಕು ಬದುಕಿದರು. ಆನು ಒಲಿದಂತೆ ಹಾಡಿದರು. ದಂದಣ ದತ್ತಣ ಎಂದರು. ಅದರಲ್ಲಿಯೇ ಅವರು ಯಶಸ್ಸು ಕಂಡರು ಎಂಬುದನ್ನು ವಿವರಿಸಬಲ್ಲ ಶಕ್ತಿ, ಸಾಮರ್ಥ್ಯ ಅಲ್ಲಮರ ಈ ವಚನದಲ್ಲಿ ಇದೆ ಎಂದು ಅರ್ಥೈಸಬಹುದಾಗಿದೆ.
ಪದದಲ್ಲಿ ಅರ್ಥವಿಲ್ಲ ಎಂಬುದಕ್ಕೆ ವರಕವಿ ದ.ರಾ. ಬೇಂದ್ರೆಯವರ “ನೀ ಹೀಂಗ ನೋಡಬ್ಯಾಡ ನನ್ನ, ನೀ ಹೀಂಗ ನೋಡಿದರೆ ನನ್ನ” ಎನ್ನುವ ಕವಿತೆಯನ್ನು ಉದಾಹರಣೆಯಾಗಿ ಹೇಳುವುದಾದರೆ, ಬೇಂದ್ರೆಯವರು ತಮ್ಮ ಮಗನ ಸಾವಿನ ಸಂದರ್ಭದಲ್ಲಿ ತನ್ನ ಮಡದಿಯ ಮುಖ ನೋಡಿ ಬರೆದ ಈ ಕವಿತೆಯನ್ನು ಈಗ ಅದನ್ನು ಒಂದು ಪ್ರೇಮಗೀತೆಯನ್ನಾಗಿ ಬಳಸಲಾಗುತ್ತದೆ ಎಂಬುದನ್ನು ಗಮನಿಸಿದರೆ ಪದದಲ್ಲಿ ಅರ್ಥವಿಲ್ಲ. ಅರ್ಥವಿರುವುದು ಕಾಲದಲ್ಲಿ ಸಂದರ್ಭದಲ್ಲಿ ಎಂಬುದು ಅರ್ಥವಾಗುತ್ತದೆ.
ವಚನ ಓದು ಎನ್ನುವುದು ಓದುತ್ತ ಹೋದಂತೆ ಹೊಸ ಹೊಸ ವಿಚಾರ, ಆಲೋಚನೆಗಳನ್ನು ಮೂಡಿಸುವಂತಿದೆ. ಮೊದಲ ಓದಿಗೆ ನಮಗೆ ಒಂದು ಅರ್ಥ ದಕ್ಕಿದರೆ, ಇನ್ನೊಂದು ಓದಿಗೆ ಹೊಳೆಯುವ ಅರ್ಥವೇ ಬೇರೆಯಾಗಿರುತ್ತದೆ. ನಮ್ಮ ಬದುಕಿನ ನಿಜವಾದ ಗುರಿ ಯಾವುದು? ಎಂಬುದನ್ನು ಮುಖ್ಯವಾಗಿಟ್ಟುಕೊಂಡಿದ್ದ ವಚನಕಾರರಿಗೆ ಪ್ರೀತಿ, ದಯೆ, ಕರುಣೆ, ಸಹಜೀವನವೇ ಮೂಲದ್ರವ್ಯವಾಗಿತ್ತು. ಪರಂಪರೆಯನ್ನು ಕುರಿತು, ಇತಿಹಾಸವನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು ತಮ್ಮ ಸುತ್ತಲ ಸಾಮಾಜಿಕ ವಾತಾವರಣ ಕುರಿತು ಸ್ಪಷ್ಟವಾದ ಕಲ್ಪನೆಯನ್ನು ಅವರು ಹೊಂದಿದ್ದರು. ಇದೆಲ್ಲದಕ್ಕೂ ಮಿಗಿಲಾಗಿ ತಮ್ಮನ್ನು ತಾವು ವಿಮರ್ಶೆಗೆ ಒಡ್ಡಿಕೊಳ್ಳುವ ಆ ಮೂಲಕ ಇತರರಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುವ ಜೀವಕಾರುಣ್ಯ ಅವರಲ್ಲಿತ್ತು.
ಸಂಸ್ಕೃತ ಭಾಷೆ ಬಿಟ್ಟು ಅನ್ಯ ಭಾಷೆ ಗೊತ್ತಿಲ್ಲದೆ ಇರುವ ದೇವರುಗಳಿಗೆ ಕನ್ನಡ ಕಲಿಸಿದ ಶರಣರು ಅಚ್ಚ ಕನ್ನಡದ ಬೇಸಾಯಗಾರರು. ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿದ ಅವರ ಶಿಕ್ಷಣಕ್ಕೆ ಮೂಲ ಅರ್ಥವಿದೆ. ಆದರೆ ಈ ಸಾಧ್ಯತೆ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಕಂಡು ಬರುವುದಿಲ್ಲ. ಯಾವ ಭಾಷೆಯಲ್ಲಿ ಸಂಸ್ಕೃತಿ ಇರುವುದಿಲ್ಲವೋ ಆ ಇತರ ಭಾಷೆಗಳೊಂದಿಗೆ ಸಂವಹನ ಆಗುವುದಿಲ್ಲ.
ಇಂದಿನ ಎಲ್ಲ ಸಮಸ್ಯೆಗಳಿಗೆ ಶರಣರು ಅಂದೇ ಪರಿಹಾರ ಸೂಚಿಸಿದ್ದಾರೆ ಎನ್ನುವಂತಿವೆ ಅವರ ವಚನಗಳು. ವಚನಗಳ ಒಂದೊಂದು ಪದ, ಸಾಲುಗಳು ಕೂಡ ಬಹಳ ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿವೆ. ಯಾವುದನ್ನೂ ತೆಗೆದು ಹಾಕುವಂತಿಲ್ಲ. ಸರ್ವ ಶಿಕ್ಷಣ ಅಭಿಯಾನ, ರಾತ್ರಿ ಶಾಲೆ, ಕಡ್ಡಾಯ ಶಿಕ್ಷಣ, ಬೇಟಿ ಪಡಾವೋ ಬೇಟಿ ಬಚಾವೋ ನಿಟ್ಟಿನಲ್ಲಿ ಸರ್ಕಾರ ಮತ್ತು ನಾವು ಈಗ ಯೋಚಿಸುತ್ತಿರುವಾಗ, ಅಂದೇ ಇವೆಲ್ಲವುಗಳ ಕುರಿತಾಗಿ ಮಾತನಾಡಿರುವುದು ಮಾತ್ರವಲ್ಲ ಅವುಗಳನ್ನು ಜಾರಿಗೆ ತಂದ ಕೀರ್ತಿ ಶರಣರಿಗೆ ಸಲ್ಲುತ್ತದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…