ಅಂಕಣ ಬರಹ

ಎನ್ನ ಚಿತ್ತವು ಹತ್ತಿಯ ಹಣ್ಣು ಹಾಗೆಂದರೇನು?

ಜಗತ್ತಿನ ಕತ್ತಲೆಯನ್ನು ತನ್ನ ಜ್ಞಾನದ ಬಲದಿಂದ ಕಳೆಯಲು ಅಹರ್ನಿಶಿ ಪ್ರಯತ್ನಿಸಿದ ಬಸವಣ್ಣ ಈ ಜಗತ್ತಿನ ಅಪರೂಪದ ವ್ಯಕ್ತಿ. ಅತ್ಯದ್ಭುತ ಶಕ್ತಿ. ಬಸವಣ್ಣನವರ ಹಾಗೂ ವಚನ ಸಾಹಿತ್ಯದ ಕುರಿತು ಈಗ ಪ್ರಕಟಗೊಂಡಿರುವ ಪುಸ್ತಕಗಳು ರಾಶಿ ರಾಶಿ. ಆದರೂ ಬಸವಣ್ಣನವರು ಸೇರಿದಂತೆ ಇತರ ಶಿವಶರಣ-ಶರಣೆಯರ ವಚನಗಳು ಬಹಳಷ್ಟು ಜನರಿಗೆ ಸರಿಯಾಗಿ ಅರ್ಥವೇ ಆಗಿಲ್ಲ.

ಶರಣರಿಗೆ ಚರಿತ್ರೆ ನಿರ್ಮಾಣಕ್ಕಿಂತ ಚಾರಿತ್ರ್ಯ ನಿರ್ಮಾಣವೇ ಮುಖ್ಯವಾಗಿತ್ತು. ವಚನ ಚಳವಳಿಯ ಪ್ರಮುಖ ಆಶಯವೇ ಚಾರಿತ್ರ್ಯ ನಿರ್ಮಿಸುವುದಾಗಿತ್ತು. ಸ್ಪಷ್ಟ ಮತ್ತು ನಿರ್ಧಿಷ್ಟ ಗುರಿ ಹೊಂದಿದ್ದ ಬಸವಾದಿ ಶರಣ ಸಾಹಿತ್ಯವನ್ನು ನಾವಿನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಬಸವಾದಿ ಶರಣರ ಬದುಕು ಹಾಗೂ ಬೋಧನೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ ಆ ಇಡೀ ಶರಣ ಸಾಹಿತ್ಯ ಚರಿತ್ರೆಯ ಬಗ್ಗೆ ಚೆನ್ನಾಗಿ ತಿಳಿದಿರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಏನೋನೋ ಅಪಾರ್ಥಗಳಾಗುವ ಸಾಧ್ಯತೆಗಳಿರುತ್ತವೆ. ಶರಣರ ವಚನಗಳ ವಿಶ್ಲೇಷಣೆ ಮಾಡುವವರು, ವಚನಕಾರರ ವಚನಗಳ ಭಾವಾರ್ಥವನ್ನು ಯಥಾವತ್ತಾಗಿ ಭಟ್ಟಿ ಇಳಿಸುತ್ತಾರೆ. ಇಲ್ಲದಿದ್ದಲ್ಲಿ ತಮಗೆ ಹೊಳೆದ ಆಲೋಚನೆಗಳನ್ನು ಸೇರಿಸಿ ಅರ್ಥಕ್ಕೆ ಅನರ್ಥವಾಗುವಂತೆ ಚಿತ್ರಿಸುತ್ತಾರೆ.

ತಮ್ಮ ತಮ್ಮ ಮೂಗಿನ ನೇರಕ್ಕೆ ವಚನಕಾರರ ಬದುಕು ಹಾಗೂ ಅವರ ವಚನಗಳನ್ನು ವಿಶ್ಲೇಷಿಸುವ, ವಿವರಿಸುವ ವಿದ್ವಾಂಸರು ಅಲ್ಲಿಂದ ಇಲ್ಲಿಯವರೆಗೆ ಕೂದಲು ಸೀಳುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಹೊರಟಿದ್ದಾರೆ. ಸಂಶೋಧನೆಯ ನೆಪದಲ್ಲಿ ಏನೇನೋ ಬರೆದು ಪ್ರಸಿದ್ಧಿ ಪಡೆಯುವ ಗೀಳು ಕೆಲವರು ಬೆಳೆಸಿಕೊಂಡಿದ್ದಾರೆ. ಇನ್ನು ಕೆಲವರು ಬಸವಾದಿ ಶರಣರ ನಿಜ ವಿಚಾರಗಳನ್ನು ಜನರಿಗೆ ತಿಳಿಸಿದರೆ ಅವರು ಜಾಗೃತರಾಗುತ್ತಾರೆ. ತಾವು ಕುತಂತ್ರದಿಂದ ಜೀವನ ಮಾಡುವುದು ಆಗುವುದಿಲ್ಲ ಎಂದರಿತು ವಚನಗಳ ಆಶಯಗಳನ್ನೇ ತಪ್ಪು ತಪ್ಪಾಗಿ ವ್ಯಾಖ್ಯಾನಿಸುತ್ತಾರೆ.

ಎನ್ನ ಚಿತ್ತವು ಹತ್ತಿಯ ಹಣ್ಣು ನೋಡಯ್ಯ
ವಿಚಾರಿಸಿರೇನು ಹುರುಳಿಲ್ಲವಯ್ಯ
ಪ್ರಪಂಚಿನ ಡಂಬಿನಲ್ಲಿ ಎನ್ನದೊಂದು ರೂಹು ಮಾಡಿ
ನೀವಿರಿದಿರಯ್ಯ ಕೂಡಲಸಂಗಮದೇವ.

ಇಂದಿಗೂ ಬಹಳಷ್ಟು ಜನ ಈವಚನವನ್ನು ತಪ್ಪಾಗಿ ಅರ್ಥೈಸುತ್ತಾರೆ ಮಾತ್ರವಲ್ಲ ತಪ್ಪಾಗಿ ತಿಳಿದುಕೊಂಡಿದ್ದಾರೆ. ಬಸವಣ್ಣ ಇಲ್ಲಿ ತನ್ನ ಮನಸ್ಸು ಹತ್ತಿಯ ಹಣ್ಣಿನಂತೆ ಅನೇಕ ಹುಳುಗಳಿಂದ ಕೂಡಿದೆ ಎಂದು ಹೇಳುತ್ತಿದ್ದಾರೆ. ವಿಚಾರಿಸಿ ನೋಡಿದರೆ ಇದರಲ್ಲಿ ಯಾವುದೇ ಹುರುಳಿಲ್ಲ. ಇಂತಹ ಜಂಜಾಟದ ಪ್ರಪಂಚದಲ್ಲಿ ಮನುಷ್ಯ ಎಂಬ ರೂಹು ಮಾಡಿ ನನ್ನನ್ನೇಕೆ ಹುಟ್ಟಿಸಿದೆ? ಎಂದು ದೇವರಲ್ಲಿ ತನ್ನ ತಪ್ಪುಗಳನ್ನು ಕ್ಷಮಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತ ಬರಲಾಗುತ್ತಿದೆ. ಅಂದರೆ ಬಸವಣ್ಣನವರ ಮನಸ್ಸು ಕೂಡ ಸತ್ಯ, ಶುದ್ಧವಾಗಿರದೆ, ಹಲವು ಹುಳುಕುಗಳಿಂದ ಕೂಡಿತ್ತು. ಬೇಕಿದ್ದರೆ ಅವರ ಈ ವಚನವನ್ನೊಮ್ಮೆ ಓದಿ ನೋಡಿ ಎನ್ನುವಂತೆ ಚಿತ್ರಿಸುತ್ತಿದ್ದಾರೆ.

ಹಾಗೆ ನೋಡಿದರೆ ವಾಸ್ತವದಲ್ಲಿ ಈ ವಚನದ ಭಾವಾರ್ಥ ಇದಲ್ಲ! ಇದು ಪಂಡಿತರೆನಿಸಿಕೊಂಡವರ ದೌರ್ಬಲ್ಯವೇ ಹೊರತು ಬಸವಣ್ಣನವರ ದೌರ್ಬಲ್ಯವಲ್ಲ. ಈ ವಚನವನ್ನು ತಿಳಿಯಬೇಕಾದರೆ ವರಕವಿ ಬೇಂದ್ರೆಯವರು ತಮ್ಮ ಔದುಂಬರದತ್ತ ಕವನವನ್ನು ಒಮ್ಮೆ ಓದಿನೋಡಬೇಕು. ಎಲ್ಲ ಬಗೆಯ ಹಣ್ಣುಗಳು ಹೂ, ಕಾಯಿ ನಂತರ ಹಣ್ಣಾದರೆ ಹತ್ತಿ ಹಣ್ಣು ಹೂ, ಕಾಯಿಯಾಗಿ ಹಣ್ಣು ಆಗದೆ ನೇರವಾಗಿ ಹಣ್ಣಾಗುತ್ತದೆ. ಆ ಹಣ್ಣಿನಲ್ಲಿಯೇ ಹೂವಿನ ಮಕರಂಧ, ಕುಸುಮ, ಸತ್ವ ಅಡಗಿರುವ ವಿಶೇಷ ಬಗೆಯ ವಿರಳಾತಿ ವಿರಳ ಹಣ್ಣು. ಇದು ಸೃಷ್ಟಿಯ ವೈಚಿತ್ರ್ಯ ಕೂಡ! ಬಸವಣ್ಣನ ಮನಸ್ಸು ಕೂಡ ಇಂತಹ ಹೂ, ಕಾಯಿ, ಸತ್ವ ಹೊಂದಿದ ಹಣ್ಣಿನಂತೆ ಸಮೃದ್ಧವಾಗಿತ್ತು.

ಆದರೆ ಬಸವಣ್ಣನೆಂಬ ಹತ್ತಿಯ ಹಣ್ಣಿನಲ್ಲಿ ಹುಳು ಹುಡುಕುವವರೇ ಹೆಚ್ಚು ಜನ. ಬಹಳಷ್ಟು ಜನ ತಮ್ಮ ಸಾಧನೆ ಮೂಲಕವೇ ಸಿದ್ಧರಾಗಿರುತ್ತಾರೆ. ಆದರೆ ಅಪ್ಪ ಬಸವಣ್ಣನವರು ಮಾತ್ರ ಸಾಧಕತನವನ್ನು ತನ್ನ ಒಡಲೊಳಗೆ ಆವೀರ್ಭವಿಸಿಕೊಂಡವರು. ಬಹಳಷ್ಟು ಜನ ತಾವು ಸಾಧಕರಾಗಿ ಸಿದ್ಧಗೊಂಡು ಭಕ್ತಿ ಬೆಳೆಸಿದವರಿದ್ದಾರೆ. ಆದರೆ ಬಸವಣ್ಣನವರು ಸಿದ್ಧರಾಗಿ, ಹಣ್ಣಾಗಿ ಭಕ್ತಿಯನ್ನು ಸಾರಿದ ಪ್ರಪಂಚದ ಮಹಾನ್ ಸಮಾಜ ಸುಧಾರಕ. ಶ್ರೇಷ್ಠ ತತ್ವಜ್ಞಾನಿ. ನಡೆ-ನುಡಿ ಒಂದಾಗಿಸಿಕೊಂಡು ಬದುಕುವುದಲ್ಲದೆ ಅದರಂತೆ ಬರೆದ ಬಸವಣ್ಣ ಎಂದಿಗೂ ಈ ರೀತಿ ಆತ್ಮ ನಿರೀಕ್ಷಣೆ ಮಾಡಿಕೊಂಡವರಲ್ಲ. ಅವರದೇನಿದ್ದರೂ ಸಂಕುಚಿತ ವಿಚಾರ ಮಾಡದೆ ಮೇರು ಪರ್ವತದೆತ್ತರದ ನಿಲುವು ಹೊಂದಿದ್ದರು.

ಕೆಲವು ಕುತ್ಸಿತಬುದ್ಧಿಯುಳ್ಳವರು ಇತಿಹಾಸ, ಸಂಶೋಧನೆ ಹೆಸರಿನಲ್ಲಿ ಇಂತಹ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ, ಅಪಚಾರವೆಸಗುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣ ಲೋಕಸೂರ್ಯ. ಸೂರ್ಯನಿಗೆ ಉಗುಳುವ ಸಾಹಸ ಮಾಡುವವರಿಗೆ ತಮ್ಮ ಉಗುಳು ತಮಗೆ ಸಿಡಿಯುತ್ತದೆ ಎಂಬುದರ ಅರಿವಿಲ್ಲದಂತಾಗಿದೆ.

emedialine

View Comments

  • ತುಂಬ ಸುಂದರವಾಗಿ ವಿಶ್ಲೇಸಿದ್ದೀರಿ.‌ಅತ್ತಿ ಹಣ್ಣು ಹೂ ಬಿಡದೇ ಹಣ್ಣಾಗುತ್ತದೆಂಬುದು ತಿಳಿದಿರಲಿಲ್ಲ ಧನ್ಯವಾದಗಳು.
    ಮತ್ತೊಂದು ವಿಷಯ ಒಬ್ಬ ಕವಿ ಅಥವಾ ಸಾಹಿತಿ ತನ್ನನ್ನು ಇತರರಲ್ಲಿ ಕಂಡು,ಅಥವಾ ತನ್ನಕಾಲದ ಸಮಾಜದ ಭಾಗವಾಗಿ ಚಿತ್ರಿಸಿ ಕೊಂಡು ಆರೋಪವನ್ನು ತನ್ನ ಮೇಲೆ ಹಾಕಿಕೊಂಡು ಚಿತ್ರಿಸುವುದು ಉಂಟು. ಉಧಾ ತಾನು ಮಾದಾರ ಚನ್ನಯ್ಯನ ದಾಸಿಯ ಮಗನೆಂದು. ತನ್ನನ್ನು ಹೀನ ಕುಲದಲ್ಲಿಟ್ಟುಕೊಂಡು ನೋಡಿದ್ದೂ ಇದೆ. ಹಾಗೆಯೇ ಸಾಮಾನ್ಯರಲ್ಲಿರುವ ಕಾಮ ಕ್ರೋಧ ಮದ ಮತ್ಸರಗಳು (ಇತರರಲ್ಲಿರುವ )ವಿಷಯಾದಿಗಳು ತನ್ನಲ್ಲಿ ಇವೆ ಎನ್ನುವಂತೆ ಅತ್ತಿಯ ಹಣ್ಣಿಗೆ ತನ್ನನ್ನು ಹೋಲಿಸಿರಲೂ ಬಹುದಲ್ಲವೆ ಇದರರ್ಥ ಬಸವಣ್ಣನ ಹುಳುಕುಗಳಲ್ಲ ಎಂದೇಕೆ ತಿಳಿಯ ಬಾರದು.

  • ಅದ್ಭುತವಾದ ವಿವರಣೆ ಸರ್
    ಬಹಳಷ್ಟು ಜನರು ಇದನ್ನು ತಪ್ಪಾಗಿಯೇ ಅರ್ಥೈಸಿಕೊಂಡಿದ್ದಾರೆ....
    ಶರಣು ಶರಣಾರ್ಥಿಗಳು...

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago