ಅಂಕಣ ಬರಹ

ಬಸವಕಲ್ಯಾಣದಲ್ಲಿರುವ ಬಸವ ಸ್ಮಾರಕಗಳು

“ಶರಣ ಚರಿತೆ”-ವಿಶೇಷ ಉಪನ್ಯಾಸ ಮಾಲೆ-2

ವಚನ ಚಳವಳಿಯ ನೇತಾರ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಆಗ ಸಾವಿರಾರು, ಲಕ್ಷಾಂತರ ಜನರು ಕಲ್ಯಾಣಕ್ಕೆ ಬಂದರು.  ಬಸವಕಲ್ಯಾಣ ಊರಿನ ಜೊತೆಗೆ ಶರಣರದು ಅವಿನಾಭಾವ ಸಂಬಂಧ ಇತ್ತು. ಈ ಊರಿನ ಹತ್ತಿಪ್ಪತ್ತು ಕಿ.ಮೀ. ವ್ಯಾಪ್ತಿಯೊಳಗೆ ಬೆಟ್ಟಬಲಕುಂದ ಗುಡ್ಡ, ತ್ರಿಪುರಾಂತ ಕೆರೆ, ಬಂದವರ ಓಣಿ, ನಾರಾಯಣಪುರ, ಶಿವಪುರ, ಗಂಜಿಕೆರೆ, ಅನುಭವ ಮಂಟಪ, ಜೇಡರ ದಾಸಿಮಯ್ಯ, ಶಂಕರ ದಾಸಿಮಯ್ಯನ ಮಠ, ಅಂಬಿಗರ ಚೌಡಯ್ಯನ ಮಠ, ಗೋಸಾಯಿ ಓಣಿ ಮುಂತಾದೆಡೆ ಶರಣರ ನೆಲೆಗಳನ್ನು ಕಾಣಬಹುದು.

ಬಸವಣ್ಣನವರಿಗೆ ಸಂಬಂಧಿಸಿದಂತೆ ಬಸವಕಲ್ಯಾಣದಲ್ಲಿ ಉಳಿದಿರುವ ಕೆಲವು ಪ್ರಮುಖ ಸ್ಮಾರಕಗಳಲ್ಲಿ ಬಸವಕಲ್ಯಾಣ ಕೋಟೆಯೂ ಒಂದು. ಕೋಟೆಯೊಳಗೆ ಕಚೇರಿ ಭಾಗ, ಪುಷ್ಕರಣಿ, ಶಿವಲಿಂಗ, ಕಂಬಗಳು, ಸಿಂಹಾಸನ, ರಾಜ್ಯಸಭೆ ನಡೆಯುವ ಜಾಗ, ಕೋಟೆಯ ತುದಿಯಲ್ಲಿರುವ ಬಾವಿ ಇವೆಲ್ಲವೂ ಪ್ರಮುಖ ಕುರುಹುಗಳಾಗಿವೆ. ಕೋಟೆಯ ಮುಂಭಾಗದಲ್ಲಿ ಸೊಲ್ಲಾಪುರದ ವಾರದ ಮಲ್ಲಪ್ಪನವರ ಪುತ್ರ ಬಾಬಾಸಾಹೇಬ ವಾರದ ಅವರು 1943 ಮತ್ತು 1948ರಲ್ಲಿ ಎರಡು ಬಾರಿ ಭೇಟಿ ನೀಡಿ ಬಸವೇಶ್ವರ ದೇವಸ್ಥಾನ ಕಟ್ಟಿಸಿ ಅದರೊಳಗೆ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಿದರು. ಮೇಲಾಗಿ ಎಲ್ಲ ಜಾತಿ ಜನಾಂಗದವರು ಒಳಗೊಂಡ ದೇವಸ್ಥಾನದ ಪಂಚ ಕಮಿಟಿ ರಚಿಸಿದರು. ಕಮೀಟಿ ವತಿಯಿಂದ 1948ರಲ್ಲಿ ಮೊದಲ ಬಾರಿಗೆ ಬಸವೇಶ್ವರ ಜಾತ್ರೆ ಪ್ರಾರಂಭಿಸುತ್ತಾರೆ. ಬಸವಣ್ಣನವರ ಕಾಯಕ ಭೂಮಿಯಾಗಿರುವ ಈ ಊರಿಗೆ ಪ್ರವೇಶದ್ವಾರ, ಅಂಚೆ ಕಚೇರಿ, ಬಸ್ ನಿಲ್ದಾಣದಂತಹ ಮೂಲ ಸೌಕರ್ಯಗಳ ಜೊತೆಗೆ ಶರಣರ ವಚನಗಳು ರೆಡಿಯೋ ಮೂಲಕ ಪ್ರಸಾರ ಆಗಬೇಕು, ಅಕ್ಕಮಹಾದೇವಿ ಹೆಸರಿನಲ್ಲಿ ಶಾಲೆ, ವಸತಿ ನಿಲಯ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಕಮೀಟಿ ಮೂಲಕ ಒತ್ತಡ ತಂದರು. ಆಗ ಬಿ.ಡಿ. ಜತ್ತಿ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಶಿವಮೂರ್ತಿ ಶಾಸ್ತ್ರೀಗಳಿಂದ ಅಗತ್ಯ ಸಾಕ್ಷಿ, ಪುರಾವೆಗಳನ್ನು ತರಿಸಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಲ್ಯಾಣ ಎಂಬ ಊರಿಗೆ ಬಸವಕಲ್ಯಾಣ ಎಂದು ಮರು ನಾಮಕರಣ ಮಾಡಲು ಪ್ರಮುಖ ಕಾರಣಿಕರ್ತರಾದರು. 1965ರಲ್ಲಿ ಇದು ತಾಲ್ಲೂಕು ಕೇಂದ್ರವಾಯಿತು.

ಈ ಬಸವೇಶ್ವರ ದೇವಸ್ಥಾನದ ಮುಂದೆ ಪರುಷ ಕಟ್ಟೆ ಇದೆ. ಬಸವಣ್ಣನವರು ತಮ್ಮ ದಿನದ ಕೆಲ ಹೊತ್ತು ಇಲ್ಲಿಯೇ ಕಳೆಯುತ್ತಿದ್ದರಂತೆ. ಸಾರ್ವಜನಿಕರ ಕುಂದು ಕೊರೆತೆಗಳನ್ನು ಕೂಡ ಇಲ್ಲಿಯೇ ವಿಚಾರಿಸುತ್ತಿದ್ದರು. ಪುರಾಣದ ಕಥೆಗಳಲ್ಲಿ ಬರುವ ಪರುಷ ಬಟ್ಟಲು ಇದೀಗ ಅದೇ ಕಟ್ಟೆಯಲ್ಲಿಯೇ ಹಾಕಿ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಈಗಿನ ಪೀರ ಪಾಷಾ ಬಂಗಲೆಯಲ್ಲಿ ಈ ಹಿಂದೆ ಅನುಭವ ಮಂಟಪ ನಡೆಯುತ್ತಿತ್ತು ಎಂಬುದನ್ನು ಅನೇಕ ವಿದ್ವಾಂಸರು ಹೇಳಿದ್ದಾರೆ. ಈ ಸಮಾಚಾರದ ಜಾಡು ಹಿಡಿದು ಒಳ ನಡೆದರೆ ಇದರೊಳಗೆ ನಂದಿ ಮಂಟಪ ಇರುವುದು (ಈಗ ಮುಚ್ಚಲಾಗಿದೆ). ಹಾಳಾಗಿರುವ ಶಾಸನದ ಕಲ್ಲು ಇರುವುದನ್ನು ಗುರುತಿಸಬಹುದು. ಬಸವಕಲ್ಯಾಣದಲ್ಲಿ ಇಷ್ಟೊಂದು ವಿಶಾಲವಾದ ಸ್ಥಳ ಬೇರೆ ಎಲ್ಲೂ ಇಲ್ಲ. ಹಿಂದು-ಮುಸ್ಲಿಂರ ಭಾವೈಕ್ಯಕ್ಕೆ ಧಕ್ಕೆ ಬರುತ್ತದೆ ಎಂದು ಯಾರೂ ಅದರ ತಂಟೆಗೆ ಹೋಗುತ್ತಿಲ್ಲ.

ಬಸವಣ್ಣನವರ ಹಿರಿಯ ಸಮಕಾಲೀನರಾದ ಜೇಡರ ದಾಸಿಮಯ್ಯ ದುಗ್ಗಳೆಯ ಜೊತೆಗೆ ಶಂಕರ ದಾಸಿಮಯ್ಯ ಅವರು ಕಲಬುರಗಿಯಿಂದ ಕಲ್ಯಾಣಕ್ಕೆ ಹಾದು ಹೋದ ಹಲವು ಸ್ಮಾರಕಗಳನ್ನು ಕಾಣಬಹುದು. ಮೂವರೂ ಜೊತೆಯಾಗಿಯೇ ಬಸವ ಕಲ್ಯಾಣಕ್ಕೆ ಬಂದಿರಬಹುದು. “ಬಸವಣ್ಣನಿಂದ ಗುರು ಪ್ರಸಾದಿಯಾದೆನು”, “ಭಕ್ತನಾದಡೆ ಬಸವಣ್ಣನಂತಾಗಬೇಕು” ಎನ್ನುವ ದುಗ್ಗಳೆಯ ಎರಡು ವಚನಗಳು ಜೇಡರ ದಾಸಿಮಯ್ಯ ಮತ್ತು ಬಸವಣ್ಣನವರ ಸಮಕಾಲೀನತೆಯನ್ನು ಸೂಚಿಸುವಂತಿವೆ. ಇದಕ್ಕೆ ಹೊಂದಿಕೊಂಡು ಹುಲಿಕಂಠಿ ಮಠ ಇದೆ. ಇದು ಕೂಡ ದಾಸಿಮಯ್ಯನವರಿಗೆ ಸಂಬಂಧಿಸಿದ್ದು, ಪಕ್ಕದಲ್ಲಿಯೇ ಬಣಗಾರ ಓಣಿಯಲ್ಲಿ ಶಂಕರ ದಾಸಿಮಯ್ಯನ ಮಠ ಕೂಡ ಇದೆ. ಇದರ ಗೋಡೆಯ ಮೇಲೆ ಕತ್ತರಿ ಚಿತ್ರ ಇದೆ. ಶರಣರ ಕುರಿತು ಇದು ಬಹು ದೊಡ್ಡ ಸಾಕ್ಷಿ ಎಂದು ಡಾ. ಎಂ.ಎಂ. ಕಲ್ಬುರ್ಗಿ ಅವರು  ಹೇಳಿದ್ದರು. ಅದರಂತೆ ಉರಿಲಿಂಗ ಪೆದ್ದಿಯ ಮಠ, ಕಂಬಳಿ ನಾಗಿದೇವನ ಮಠ, ಅಂಬಿಗರ ಚೌಡಯ್ಯನ ಮಠ ಇರುವುದನ್ನು ಕಾಣಬಹುದು.

ಬಸವಕಲ್ಯಾಣದ ಗೋಸಾಯಿ ಗಲ್ಲಿಗಳಲ್ಲಿ ದೊಡ್ಡ ದೊಡ್ಡ ಆಕಾರದ ಮನೆಗಳಿವೆ. ಅಲ್ಲೊಂದು ಮಹಾಂತ ಮಠ ಇದೆ. ಎಲ್ಲೆಲ್ಲಿ ಶರಣರ ಸ್ಮಾರಕಗಳಿವೆಯೋ ಅಲ್ಲೆಲ್ಲ ಗೋಸಾಯಿ ಮನೆತನದವರಿದ್ದರು. ವಚನ ಚಳವಳಿಯಲ್ಲಿ ಗೋಸಾಯಿಗಳು ಶರಣರ ಅನುಯಾಯಿಗಳಾಗಿದ್ದರು. ವಚನ ಚಳವಳಿಯಲ್ಲಿ ಗೋಸಾಯಿಯವರ ಪಾತ್ರ ಬಹಳ ಪ್ರಮುಖವಾಗಿದೆ. ಬಸವಣ್ಣನವರ ವಚನಗಳಲ್ಲಿ ಬರುವ ಮಹಾದೇವನ ಭಕ್ತರು ಈ ಗೋಸಾಯಿಗಳು. ಈ ಮಹಾದೇವನ ಗುಡಿಗಳೆಲ್ಲ ಗೋಸಾಯಿಗಳ ಸ್ಮಶಾನಗಳಲ್ಲಿವೆ ಎಂಬುದನ್ನು ನಾವು ಗಮನಿಸಬೇಕು. ಚೆನ್ನಬಸವಣ್ಣನವರು ಹೇಳುವಂತೆ ಆಗ ಮನೆಗಳೆಲ್ಲವೂ ಮಠಗಳಾಗಿದ್ದವು. ಚಿಟಗುಪ್ಪದಲ್ಲಿ 360 ಗೋಸಾಯಿ ಮನೆಗಳಿದ್ದವು ಎಂದು ಹೇಳಲಾಗುತ್ತಿದೆ. ಅವರು ಪ್ರಸಾದ ವಿತರಿಸುವ ಕಾರ್ಯ ನೋಡಿದರೆ ಇವರ ಮೇಲೆ ಬಸವಣ್ಣನವರ ದಾಸೋಹ ಸಿದ್ಧಾಂತ ಬಹಳ ಪ್ರಭಾವ ಬೀರಿರುವುದನ್ನು ಗುರುತಿಸಬಹುದಾಗಿದೆ.

ಇವರು ಶಿವನ ಭಕ್ತರು. ಆದರೆ ದುರಂತವೇನೆಂದರೆ ಈ ಹಿಂದೆ ಯಾರೋ ದಿಲ್ಲಿಯಿಂದ ಒಬ್ಬ ಸಾಧು ಬಂದು ಇವರೆಲ್ಲರನ್ನು  ದತ್ತ ಸಂಪ್ರದಾಯಕ್ಕೆ ಸೆಳೆದಿರುವುದನ್ನು ಕ್ಷೇತ್ರ ಕಾರ್ಯದಿಂದ ಗುರುತಿಸಬಹುದಾಗಿದೆ. ಹಳ್ಳಿಖೇಡದ ಕಿನ್ನರಿ ಬೊಮ್ಮಯ್ಯನ ಸ್ಮಾರಕದಲ್ಲೇ ಗೋಸಾಯಿ ಮಠ ಕೂಡ ಇದೆ. ಹೀಗಾಗಿ ಶರಣರ ಸ್ಮಾರಕಗಳು ಬರೀ ಪೂಜೆ-ಪುನಸ್ಕಾರ ಮಾಡುವ ಸ್ಥಳಗಳಲ್ಲ. ಚರಿತ್ರೆಯನ್ನು ವಿವರಿಸುವ ತಾಣಗಳು. ಈ ನೆಲೆಗಳು ಹೇಳುವ ಐತಿಹಾಸಿಕ ಸತ್ಯವನ್ನು ನಾವು ಗಮನಿಸಬೇಕು.

ಸ್ಥಳ: ಅನುಭವ ಮಂಟಪ, ಜಯನಗರ, ಕಲಬುರಗಿ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago