ಬಿಸಿ ಬಿಸಿ ಸುದ್ದಿ

ಶರಣ ಚರಿತೆ: ಶರಣರ ಅನುಭವ ಮಂಟಪದ ಪರಿಕಲ್ಪನೆ

ಬಸವಕಲ್ಯಾಣದ ಸುತ್ತಲಿನ ಪ್ರದೇಶದ ಗವಿಗಳಲ್ಲಿ ವಾಸವಾಗಿದ್ದ ಶರಣರು ಸಂಜೆ ವೇಳೆ ಅನುಭವ ಮಂಟಪದಲ್ಲಿ ಆಗಮಿಸಿ ಅನುಭಾವ ಗೋಷ್ಠಿ ನಡೆಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಮೈಸೂರಿನ ವೀರಭದ್ರ ದೇವಾಲಯ, ಗದಗನಲ್ಲಿ ಅನುಭವ ಮಂಟಪದ ಚಿತ್ರ ಕಾಣುತ್ತೇವೆ. ಅದೇರೀತಿಯಾಗಿ ತೀರಾ ಇತ್ತೀಚಿಗೆ ಕಲಾವಿದ ಜೆ.ಎಸ್. ಖಂಡೇರಾವ ಬರೆದ ಚಿತ್ರಗಳನ್ನು ಕಾಣಬಹುದು.

ಅನುಭವ ಮಂಟಪ ಕುರಿತು ೧೯೩೨ರಲ್ಲಿ ಉತ್ತಂಗಿ ಚನ್ನಪ್ಪನವರು ಆಂಗ್ಲ ಭಾಷೆಯಲ್ಲಿ ಸಣ್ಣ ಪುಸ್ತಕವೊಂದನ್ನು ಪ್ರಕಟಿಸುತ್ತಾರೆ. ಇದನ್ನು ಆಲೂರ ವೆಂಕಟರಾಯರು ಕನ್ನಡಕ್ಕೆ ಅನುವಾದಿಸುತ್ತಾರೆ. ಆದರೆ ೧೯೪೩ರಲ್ಲಿ ಸುರಪುರ ಸಂಸ್ಥಾನದ ಇತಿಹಾಸ ಬರೆದ ಕಪಟರಾಳ ಕೃಷ್ಣರಾಯರು ಹಾಗೂ ಅನುಭವ ಮಂಟಪ ಕುರಿತು ಪುಸ್ತಕ ಬರೆದ ಉತ್ತಂಗಿ ಚೆನ್ನಪ್ಪನವರ ನಡುವೆ ಈ ಬಗ್ಗೆ ಬಹಿರಂಗ ಚರ್ಚೆ ನಡೆಯುತ್ತದೆ. ೧೨ನೇ ಶತಮಾನದಲ್ಲಿ ಅನುಭವ ಮಂಟಪ ಇತ್ತು, ಶೂನ್ಯಪೀಠಕ್ಕೆ ಅಧ್ಯಕ್ಷರಾಗಿರುವುದು ಹಾಗೂ ಶರಣರು ಗೋಷ್ಠಿಗಳಲ್ಲಿ ಭಾಗವಹಿಸಿರುವುದಕ್ಕೆ ನಿಮ್ಮ ಬಳಿ ಯಾವ ಸಾಕ್ಷಿಗಳಿವೆ? ಇವೆಲ್ಲ ಪ್ರೌಢದೇವರಾಯನ ಕಾಲದಲ್ಲಿ ಸೃಷ್ಟಿಯಾದವುಗಳು ಎಂದು ಪಟರಾಳರು ಕೆಣಕುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರವೆಂಬಂತೆ ಉತ್ತಂಗಿ ಚೆನ್ನಪ್ಪನವರು ೧೯೪೪ರಲ್ಲಿ ಮೂರ‍್ನಾಲ್ಕು ಲೇಖನ ಬರೆದು ಪ್ರಿಂಟ್ ಮಾಡುತ್ತಾರೆ. ೧೯೫೧ರಲ್ಲಿ ಆ ಎಲ್ಲ ಲೇಖನಗಳನ್ನು ಸಂಪಾದಿಸಿ “ಅನುಭವ ಮಂಟಪದ ಐತಿಹಾಸಿಕತೆ” ಎಂಬ ಪುಸ್ತಕ ಬರೆಯುತ್ತಾರೆ. ಆದರೆ ನಮ್ಮ ಅನೇಕ ಹಳೆಯ ಗ್ರಂಥ ಹಾಗೂ ವಚನಗಳಿಂದ ಈ ಅನುಭವ ಮಂಟಪದ ಪರಿಕಲ್ಪನೆ ಹೇಗಿತ್ತು ಎಂಬುದನ್ನು ತಿಳಿಯಬಹುದು.

“ಆದಿಯ ಲಿಂಗ ಮೇದಿನಿಗೆ ತಂದು ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯ ಸಂಗನಬಸವಣ್ಣನು ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು ಆ ಮನೆಯ ಹೊಕ್ಕು ನಿಶ್ಚಿಂತ ನಿವಾಸಿಗಳಾದರು ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು ಧನ್ಯನಾದೆನು ಕಾಣಾ ಸಿದ್ಧರಾಮಯ್ಯ” ಎನ್ನುವ ಅಲ್ಲಮನ ವಚನ, “ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ ಮರ್ತ್ಯಲೋಕವೆಲ್ಲವು ಭಕ್ತಿ ಸಾಮ್ರಾಜ್ಯವಾಯಿತು ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರೂ ನಿಜಲಿಂಗ ಫಲವ ಪಡೆದರು” ಎನ್ನುವ ಸಿದ್ಧರಾಮನ ವಚನ, “ಬಸವಣ್ಣ ಮರ್ತ್ಯಲೋಕಕ್ಕೆ ಬಂದು ಮಹಾಮನೆಯ ಕಟ್ಟಿ ಜ್ಞಾನವೆಂಬ ಜ್ಯೋತಿನೆತ್ತಿ ತೋರಲು ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯ ಜಗದೊಳಗೆ ಪ್ರಭುದೇವರ ನಿಜವರಿದು ನಿಶ್ಚಿಂತರಾದರಯ್ಯ ಶಿವಗಣಂಗಳೆಲ್ಲರು” ಎನ್ನುವ ಚೆನ್ನಬಸವಣ್ಣನ ಈ ವಚನಗಳು ಬಸವಣ್ಣನ ಮಹಾಮನೆಯ ಮಹಿಮೆಯನ್ನು ಕಟ್ಟಿಕೊಡುತ್ತವೆ.

ಬಸವಣ್ಣನ ತತ್ವಗಳನ್ನು ಒಪ್ಪಿ ಸಾಮಾನ್ಯ ಮನುಷ್ಯ, ಜ್ಞಾನವಂತನಾಗಿ, ಅನುಭಾವಿಯಾಗಿ ಪರಿವರ್ತನೆ ಹೊಂದಲು ಈ ಅನುಭವ ಮಂಟಪ ನಾಂದಿ ಹಾಡಿತು. ಈ ಕೆಲಸ ಈ ಮಹಾಮನೆಯಲ್ಲಿ ಆರಂಭಗೊಂಡಿತು.
“ಅನುಭವದ ವಿನಿಮಯಕ್ಕೆ ಶಿವಾನುಭವಿಗಳು ಯಾವ ಸ್ಥಳದಲ್ಲಿ ಸಭೆಯಾಗಿ ಕೂಡಿ ಬರುವರೋ ಅದೇ ಅನುಭವ ಮಂಟಪವೆನಿಸುವುದು” ಎಂದು ಉತ್ತಂಗಿ ಚೆನ್ನಪ್ಪನವರು ಹೇಳಿದ್ದಾರೆ. “ಮಹಾಮನೆಯ ಮಂಟಪ” ಎಂದು ಕೋಲಶಾಂತಯ್ಯನವರು ತಮ್ಮ ವಚನದಲ್ಲಿ ಅನುಭವ ಮಂಟಪದ ಸ್ಥಾನವನ್ನು ನಿರ್ದೇಶಿಸುತ್ತಾರೆ. ಬಸವಣ್ಣನ/ವರ ಗೃಹಾಂತಸ್ಥಾನದನುಭವ ಮಂಟಪ ಎಂಬ ಮಾತು ಚೆನ್ನಬಸವ ಪುರಾಣದಲ್ಲಿ ವಿರುಪಾಕ್ಷ ಪಂಡಿತರು ಹೇಳುತ್ತಾರೆ. ಮಹಾಮನೆಯ ಪರಿಕಲ್ಪನೆ ಬರುವ ಮಾತುಗಳು ಹರಿಹರನ ಬಸವರಾಜ ದೇವರ ರಗಳೆ ಹಾಗೂ ಬಸವ ಪುರಾಣದಲ್ಲಿ ಅಲ್ಲಲ್ಲಿ ಬರುತ್ತವೆ. ಶರಣರು ಗೀತಗೋಷ್ಠಿಯ ಜೊತೆಗೆ ವಚನ ರಚನೆಗೆ ತೊಡಗಿದ್ದರು ಎಂಬುದು ಇವುಗಳಿಂದ ತಿಳಿದು ಬರುತ್ತದೆ.

ಮಾನವೀಯ ಗುಣಗಳಾಗಿ ಪರಸ್ಪರ ಭಕ್ತಿ ಗೌರವದಿಂದ ಕಾಣುವುದು, ಧಾರ್ಮಿಕ ವಿಧಿವಿಧಾನಗಳಾಗಿ ಇಷ್ಟಲಿಂಗ ಪೂಜೆ, ಸಾಮಾಜಿಕ ಪೂರೈಕೆಯಾಗಿ ದಾಸೋಹ, ಜ್ಞಾನ ಸಂಪಾದನೆಯಾಗಿ ಅನುಭಾವ ವಿನಿಮಯ ಕಾರ್ಯಕ್ರಮ ಅಲ್ಲಿ ನಡೆಯುತ್ತಿತ್ತು ಎಂಬಂತಹ ಸಂಗತಿಗಳು ಕಂಡು ಬರುತ್ತವೆ. “…ಚೆನ್ನಬಸವಣ್ಣನೆಂಬ ಪ್ರಸಾದಿಯ ಪಡೆದು ಅನುಭವ ಮಂಟಪವನನು ಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಣ್ಣನು, ಅರಿವ ಸಂಪಾದಿಸಿ, ಆಚಾರವನಂಗಂಗೊಳಿಸಿ ಏಳುನೂರೆಪ್ಪತ್ತಮರಗಣಂಗಳ ಅನುಭವ ಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು…” ಎನ್ನುವ ನೀಲಾಂಬಿಕೆಯ ದೀರ್ಘ ವಚನ ಇಡೀ ಅನುಭವ ಮಂಟಪದ ಪರಿಕಲ್ಪನೆಯನ್ನು ಕಟ್ಟಿಕೊಡುತ್ತಾರೆ. ಗೀತಗೋಷ್ಠಿಯಿಂದ ಚರ್ಚೆ ಶುರುವಾಯ್ತು ಎಂಬುದನ್ನು ನಾವು ಸ್ಪಷ್ಟವಾಗಿ ಗುರತಿಸಬಹುದು. ಅಕ್ಕಮ್ಮ ಸದ್ಭಾವಕೂಟ, ಜ್ಞಾನಕೂಟ, ಚರ್ಚೆಗೋಷ್ಠಿ ಎಂದು ಕರೆದರೆ, ಅಕ್ಕಮಹಾದೇವಿಯ ವಚನಗಳಲ್ಲಿ ಶರಣರ ಸದ್ಗೋಷ್ಠಿ ಎಂಬ ಪದ ಪ್ರಯೋಗವಾಗಿರುವುದನ್ನು ಗುರುತಿಸಬಹುದು. ಗೀತಗೋಷ್ಠಿ ಎಂದು ಹೇಳಿದ ಹರಿಹರನೆ ಮುಂದೆ ಸದ್ಗೋಷ್ಠಿ ಎಂಬ ಪದ ಬಳಸುತ್ತಾರೆ. ತತ್ವಾನುಭವಗೋಷ್ಠಿ, ಉದಿತಗೋಷ್ಠಿ, ಅವನುದಿತಗೋಷ್ಠಿ ಎಂದು ಪಾಲ್ಕುರಿಕೆ ಸೋಮನಾಥ ಬಳಸಿದ್ದರೆ, ತತ್ವಾನುಭಾವಗೋಷ್ಠಿ, ತತ್ವಗೋಷ್ಠಿ, ಸಂಗೋಷ್ಠಿ ಪದಗಳು ಬಸವ ಪುರಾಣದಲ್ಲಿ ಬಳಕೆಯಾಗಿವೆ. ಶಿವಗಣಪ್ರಸಾದಿಯ ಮಹಾದೇವ ಶೂನ್ಯ ಸಂಪಾದನೆಯಲ್ಲಿ ಮಹಾನುಭಾವಗೋಷ್ಠಿ ಎಂಬ ಪದಗಳ ಬಳಕೆ ಮಾಡಿದ್ದಾರೆ. ಚಾಮರಸ, ಲಕ್ಕಣ್ಣ ದಂಡೇಶ, ಸಿಂಗಿರಾಜನ ಕಾವ್ಯ ಕೃತಿಗಳಲ್ಲೂ ಇಂಥದೆ ಪದ ಪ್ರಯೋಗಗಳಿವೆ.

ಮೇಲಿನ ಎಲ್ಲ ಬಗೆಯ ಚರ್ಚೆಯ ಮೂಲಕ ನಮಗೆ ತಿಳಿದುಬರುವುದೇನೆಂದರೆ, ಬಸವಣ್ಣನವರು ಅನುಭವ ಮಂಟಪವನ್ನು ಮಹಾಮನೆಯ ಒಂದು ಭಾಗವಾಗಿ ಅಸ್ತಿತ್ವಕ್ಕೆ ತಂದು ಅದನ್ನು ನಿಭಾಯಿಸಿಕೊಂಡು ಬಂದರು. ಅವರಿಗೆ ಸಹಾಯಕರಾಗಿ ಕೆಲಸ ಮಾಡಿದವರು ಚನ್ನಬಸವಣ್ಣನವರು. ನಂತರ ಅಲ್ಲಮಪ್ರಭುವಿಗೆ ಅನುಭವ ಮಂಟಪದ ಜವಾಬ್ದಾರಿ ವಹಿಸಲಾಯಿತು. ಸಂಚಾಲಕರಾಗಿ ಚೆನ್ನಬಸವಣ್ಣನವರು ಕಾರ್ಯ ನಿರ್ವಹಿಸುತ್ತಿದ್ದರು. ಮಹಾಮನೆಯ ಜವಾಬ್ದಾರಿಯನ್ನು ನೀಲಮ್ಮ ಮತ್ತು ಗಂಗಾಂಬಿಕೆಯನನು ವಹಿಸಿದ್ದರು ಎಂಬ ವಿಷಯ ಸ್ಪಷ್ಟವಾಗುತ್ತದೆ. “ಎನ್ನ ಮನದ ಮಲಿನವ ತೊಳೆಯಲೆಂದು ಬಂದು, ಶೂನ್ಯ ಸಿಂಹಾಸನದ ಮೇಲೆ ಮೂರ್ತಿಗೊಂಡು…. ಎನ್ನ ಪಾವನವ ಮಾಡಿ” ಎಂಬ ಬಸವಣ್ಣನವರ ಈ ವಚನ ಅಲ್ಲಮಪ್ರಭುಗಳಿಗೆ ಪಟ್ಟ ಕಟ್ಟಲಾಯಿತು ಎಂಬುದನ್ನು ಸೂಚಿಸುತ್ತಾದೆ. ಅಲ್ಲಮಪ್ರಭುಗಳ ಶೂನ್ಯಪೀಠಾರೋಹಣ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಯಿತು ಎಂಬುದಕ್ಕೆ “…..ಅನಂತ ಪರಿಯ…ನಿಃಕಳಂಕ ಮಲ್ಲಿಕಾರ್ಜುನ ಪ್ರಭುವಿಂಗೆ ಆರತಿನೆತ್ತುತಿರ್ದರಲ್ಲಾ” ಎಂದು ಮೋಳಿಗೆ ಮಾರಯ್ಯನವರ ಈ ವಚನವೇ ಸಾಕ್ಷಿಯಾಗಿದೆ.

ಸ್ಥಳ: ಕಲ್ಬುರ್ಗಿ ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ
emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago